ಗುಬ್ಬಿ ತಾಲ್ಲೂಕು ದಂಡಾಧಿಕಾರಿಗಳ ವಸತಿ ಗೃಹದಲ್ಲಿ ಸೊಗಸಾಗಿ ಬೆಳೆದಿದ್ದ ಗಂಧದ ಮರಗಳಿಗೆ ಕೊಡಲಿ ಇಟ್ಟ ಖದೀಮರು ಗಂಧದ ಮರ ಕಡಿದು ದುಷ್ಕೃತ್ಯ ಮೆರೆದಿರುವ ಘಟನೆ ಗುರುವಾರ ನಸುಕಿನಲ್ಲಿ ನಡೆದಿದೆ.
ಗುಬ್ಬಿ ಪಟ್ಟಣದ ತಾಲ್ಲೂಕು ಕಚೇರಿ ಸಮೀಪದ ಕೂಗಳತೆ ದೂರದಲ್ಲಿರುವ ಎಂ.ಜಿ.ರೋಡ್ ರಸ್ತೆಯ ತಹಶೀಲ್ದಾರ್ ವಸತಿಗೃಹದ ಆವರಣದಲ್ಲಿದ್ದ ಸುಮಾರು ಆರು ಗಂಧದ ಮರಗಳ ಪೈಕಿ ಎರಡು ಮರಗಳನ್ನು ಮಧ್ಯ ಭಾಗದವರೆಗೆ ಕುಯ್ದು ಒಂದು ಮರವನ್ನು ಬುಡಸಹಿತ ಕಡಿದು ಹಾಕಲಾಗಿದೆ.
ನಂತರ ಪಟ್ಟಣದ ಹಳೇ ಏಕೆ ಕಾಲೋನಿ ಬಳಿಯ ಸರ್ಕಾರಿ ಶಾಲೆಯ ಮುಂಭಾಗ ಇದ್ದ ಒಂದು ಗಂಧದ ಮರವನ್ನು ಬುಡಕ್ಕೆ ಕೊಡಲಿ ಪೆಟ್ಟು ನೀಡಿ ಧರೆಗುರುಳಿಸಿದ್ದಾರೆ. ಇತ್ತೀಚಿಗೆ ಗುಬ್ಬಿ ಪಟ್ಟಣದಲ್ಲಿ ಹಾಡಾಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಜೊತೆಗೆ ಒಡವೆ ಕದ್ದು ಕಳ್ಳರು ಕೈ ಚಳಕ ತೋರಿರುವ ಘಟನೆ ಜೊತೆಗೆ ವೈಯಕ್ತಿಕ ದ್ವೇಷಕ್ಕೆ ರೈತರ ಅಡಿಕೆ ಮರ ಕಡಿದು ದುಷ್ಕೃತ್ಯ ಮೆರೆಯುತ್ತಿರುವ ಘಟನೆ ಹೀಗೆ ಅನೇಕ ಅಪರಾಧ ಕೃತ್ಯಗಳು ಕಂಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ತಹಶೀಲ್ದಾರ್ ಮನೆಯಲ್ಲೇ ಗಂಧದ ಮರಗಳನ್ನು ಕಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಗುಬ್ಬಿ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಮಟ್ಟ ಹಾಕಬೇಕಿದೆ.