ಚಿಕನ್ ಸೇವಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ಪರಿಶಿಷ್ಟ ಪಂಗಡದ(ಎಸ್‌ಟಿ) ಮೆಟ್ರಿಕ್ ಬಾಲಕಿಯರ ಹಾಸ್ಟೆಲ್‌ನಲ್ಲಿ ನಡೆದಿದೆ.
ಹಾಸ್ಟೆಲ್‌ನಲ್ಲಿ ರಾತ್ರಿ ಊಟದಲ್ಲಿ ಚಿಕನ್ ಊಟ ಸೇವಿಸಿದ ವಿದ್ಯಾರ್ಥಿಗಳಿಗೆ ಮಧ್ಯರಾತ್ರಿಯಲ್ಲಿ ಹೊಟ್ಟೆ ನೋವು, ವಾಂತಿ ಮತ್ತು ಅತಿಸಾರದ ಲಕ್ಷಣಗಳು ಕಾಣಿಸಿಕೊಂಡಿವೆ. ಬಳಿಕ ವಿದ್ಯಾರ್ಥಿಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
28 ವಿದ್ಯಾರ್ಥಿಗಳನ್ನು ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಬೆಳಿಗ್ಗೆ ನಾಲ್ವರು ವಿದ್ಯಾರ್ಥಿಗಳು ಇದೇ ರೀತಿ ಅಸ್ವಸ್ಥರಾಗಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈವರೆಗೆ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸ್‌ಟಿ ಹಾಸ್ಟೆಲ್‌ನಲ್ಲಿ 148 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ 131 ವಿದ್ಯಾರ್ಥಿಗಳು ಮಾಂಸಾಹಾರ ಸೇವಿಸಿದರೆ, 17 ವಿದ್ಯಾರ್ಥಿಗಳು ಸಸ್ಯಾಹಾರಿ ಆಹಾರವನ್ನು ಸೇವಿಸಿದ್ದಾರೆ. ಸಸ್ಯಾಹಾರ ಸೇವಿಸಿದ್ದ ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ಈ ಸಂಬಂಧ ತನಿಖೆ ಕೈಗೆತ್ತಿಕೊಳ್ಳಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ತಜ್ಞ ವೈದ್ಯರ ನೇಮಿಸುವಂತೆ ಡಿವೈಎಫ್‌ಐ ಒತ್ತಾಯ
ವಿದ್ಯಾರ್ಥಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಲು ಅಧಿಕಾರಿಗಳು ನಿರ್ದೇಶಿಸಿದ್ದಾರೆ. ವಿಜಯನಗರ ಜಿಲ್ಲಾಧಿಕಾರಿ ದಿವಾಕರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಆಸ್ಪತ್ರೆಗೆ ಭೇಟಿ ನೀಡಿ, ವಿದ್ಯಾರ್ಥಿನಿಯರ ಯೋಗಕ್ಷೇಮ ವಿಚಾರಿಸಿದರು. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದಿವಾಕರ್ ತಿಳಿಸಿದ್ದಾರೆ.