ತ್ರಿಕೋನ ಪ್ರೇಮ ವಿಚಾರದಲ್ಲಿ ಕೊಪ್ಪಳದ ಯುವಕ ಗವಿಸಿದ್ದಪ್ಪನ ಹತ್ಯೆಯಾದ ಪ್ರಕರಣಕ್ಕೆ ಇದೀಗ ಕೋಮು ಬಣ್ಣ ಬಳಿಯಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಗರದ ವಾರ್ಡ್-3ರ ಮಸೀದಿ ಮುಂಭಾಗದಲ್ಲಿ ಗವಿಸಿದ್ದಪ್ಪ ಎಂಬಾತನನ್ನು ಸಾದಿಕ್ ಸೇರಿದಂತೆ ನಾಲ್ಕು ಮಂದಿ ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಕೊಲೆ ಮಾಡಿದ ದಿನದಂದೇ ಓರ್ವ ಆರೋಪಿ ಠಾಣೆಗೆ ಶರಣಾಗಿದ್ದ. ಬಳಿಕ ಪೊಲೀಸರು ಮೂವರನ್ನು ಬಂಧಿಸಿದ್ದರು. ಈ ಪ್ರಕರಣ ರಾಜ್ಯಾದ್ಯಂತ ತಲ್ಲಣ ಉಂಟು ಮಾಡುತ್ತಿರುವ ಹೊತ್ತಲ್ಲೇ ಪ್ರಕರಣಕ್ಕೆ ಕೋಮು ತಿರುವು ಕೊಡಲಾಗುತ್ತಿದೆ.
ಏನಿದು ತ್ರಿಕೋನ ಪ್ರೇಮಕಥೆ?
ಅಪ್ರಾಪ್ತ ವಯಸ್ಸಿನ ಬಾಲಕಿ ಹಾಗೂ ದಲಿತ ಯುವಕ ಗವಿಸಿದ್ದಪ್ಪ ನಾಯಕ್‌ನ ಮಧ್ಯೆ 2-3 ವರ್ಷಗಳಿಂದ ಪ್ರೀತಿ ಶುರುವಾಗಿತ್ತು. ಒಂದು ಬಾರಿ ಮನೆಯವರ ವಿರೋಧದ ನಡುವೆಯೂ ಮನೆಯಿಂದ ಹೊರ ಹೋಗಿದ್ದರು. ಎರಡೂ ಕುಟುಂಬಗಳ ಓಲೈಕೆ ಹಾಗೂ ಗೌರವದ ಕಾರಣ ಮರಳಿ ಬಂದಿದ್ದರು. ಪರಸ್ಪರ ಕುಟುಂಬಗಳ ರಾಜಿ-ಪಂಚಾಯತಿಯಿಂದ ಇಬ್ಬರನ್ನೂ ದೂರವಿಡುವ ಪ್ರಯತ್ನ ನಡೆದಿತ್ತು. ಆದರೆ, ಅವರ ಪ್ರೀತಿ ಮುಂದುವರೆದಿತ್ತು.
ಕಥೆಗೆ ತಿರುವು ಬಂದಿದ್ದೇ ಇಲ್ಲಿ. ಕೊಪ್ಪಳದವನೇ ಆದ ಸಾದಿಕ್ ಕೊಲ್ಕಾರ್ ಎಂಬಾತ ಗವಿಸಿದ್ದಪ್ಪ ಪ್ರೀತಿಸುತ್ತಿದ್ದ ಬಾಲಕಿಯನ್ನೇ ಪ್ರೀತಿಸುತ್ತಿದ್ದ. ಆ ಸಂಬಂಧ ಇಬ್ಬರ ನಡುವೆ ಸಂಬಂಧ ಮುರಿದು ಬಿದ್ದಿತ್ತು. ಗವಿಸಿದ್ದಪ್ಪ ಹಾಗೂ ಬಾಲಕಿ ಎರಡೂ ಕುಟುಂಬಗಳ ವಿರೋಧದ ನಡುವೆಯೂ ಪೋನ್ ಸಂಪರ್ಕ ಮೂಲಕ ಮಾತುಕತೆ ನಡೆಯುತ್ತಿದ್ದರು. ಸಾದಿಕ್ ಪ್ರೀತಿಸುತ್ತಿದ್ದ ಹುಡುಗಿಯನ್ನ ಗವಿಸಿದ್ದಪ್ಪ ಪ್ರಿತಿಸುತ್ತಿರುವುದು ತದನಂತರ ಬೆಳಕಿಗೆ ಬರುತ್ತದೆ. ಈ ಕುರಿತು ಇಬ್ಬರೂ ಯುವಕರ ನಡುವೆ ಚಿಕ್ಕಪುಟ್ಟ ಮಾತಿನ ಚಕಮಕಿಯೂ ನಡೆಯುತ್ತದೆ. ಆದರೆ, ಗವಿಸಿದ್ದಪ್ಪ ಆ ಹುಡುಗಿಯ ಜೊತೆ ಸಂಪರ್ಕಿಸಿ ಮಾತಾಡುವುದನ್ನ ಗಮನಿಸಿರುತ್ತಾನೆ.
ಜುಲೈ 3ರಂದು 7-30 ಗಂಟೆಯ ಸುಮಾರಿಗೆ ಸಾದಿಕ್, ಗವಿಸಿದ್ಧಪ್ಪನನ್ನು ಉಪಾಯದಿಂದ ಕರೆಸಿಕೊಳ್ಳುತ್ತಾನೆ. ಆದರೆ, ಗವಿಸಿದ್ದಪ್ಪನಿಗೆ ಸಾದಿಕ್‌ನ ಒಳ ಸಂಚು ಗೊತ್ತಿರುವುದಿಲ್ಲ. ಗಣಪತಿ ಪಟ್ಟಿ ಎತ್ತಿದ್ದ ಯುವಕ ಅನಾಮಧೇಯ ಕರೆ ಬಂದಿದ್ದರಿಂದ ಸ್ನೇಹಿತರಿಗೆ ‘ನೀವು ಪಟ್ಟಿ ಎತ್ತಿ ನಾನು ಇಲ್ಲೆ ಸ್ವಲ್ಪ ಹೋಗಿ ಬರುವೆ’ ಎಂದು ಹೇಳಿ ಬೈಕ್‌ನಲ್ಲಿ ಹೊರಡುತ್ತಾನೆ. ಸುಮಾರು 8.30ರೊಳಗೆ ಸಾದಿಕ್ ತನ್ನ ಸ್ನೇಹಿತರ ಸಹಕಾರದಿಂದ ಗವಿಸಿದ್ದಪ್ಪನ ಕುತ್ತಿಗೆಗೆ ಮಚ್ಚಿನಿಂದ ಬೀಸಿ ಬರ್ಬರವಾಗಿ ಹತ್ಯೆ ಮಾಡುತ್ತಾನೆ.

ಗವಿಸಿದ್ದಪ್ಪ ಕೊಲೆಯಾಗುವ ಹಿಂದಿನ ದಿನ ಸಾದಿಕ್ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಎನ್ನುವ ಆರೋಪವೂ ಕೇಳಿಬಂದಿತ್ತು. ಇದಾದ ಬಳಿಕವೂ ಪೊಲೀಸರು ಕ್ರಮ ಕೈಗೊಳ್ಳದೆ ಸುಮ್ಮನಿದ್ದರು. ಇದು ಯಾಕೆ ಎಂದು ನಗರದ ಜನತೆ ಪೊಲೀಸ್ ಅಧೀಕ್ಷಕರ ಮೇಲೆ ಅರೋಪ ಮಾಡುತ್ತಿದ್ದಾರೆ.
ಹತ್ಯೆ ಆರೋಪಿ ಗಾಂಜಾ ವ್ಯಸನಿ!
ಈ ಬಗ್ಗೆ ಕೊಪ್ಪಳದ ಪರಿಸರ ಪ್ರೇಮಿಗಳು ಹಾಗೂ ಪ್ರಜ್ಞಾವಂತ ನಾಗರಿಕರು “ಕೊಪ್ಪಳದಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ. ಗಾಂಜಾ ಸೇವನೆಯಿಂದ ಕಾಲೇಜು ವಿದ್ಯಾರ್ಥಿಗಳು ಹದಿಹರೆಯದ ಯುವಕರು ಇದಕ್ಕೆ ದಾಸರಾಗಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೊಲೆ ಆರೋಪಿ ಸಾದಿಕ್ ಕೂಡ ನಿತ್ಯವೂ ಗಾಂಜಾ ಸೇವಿಸುತ್ತಿದ್ದ. ಇದರ ಅಪಾಯದ ಬಗ್ಗೆ ಬಹಳಷ್ಟು ತಿಳಿವಳಿಕೆ ಹೇಳಿದರೂ ಸಾದಿಕ್ ಸರಿ ದಾರಿಗೆ ಬಂದಿರಲಿಲ್ಲ” ಎನ್ನುತ್ತಾರೆ.
ಹತ್ಯೆಯಾದ ಗವಿಸಿದ್ದಪ್ಪನಿಂದ ಬಾಲಕಿಗೆ ಕಿರುಕುಳ?
ʼಕೊಲೆಯಾದ ಗವಿಸಿದ್ದಪ್ಪ ಪದೇಪದೇ ಬಾಲಕಿಗೆ ಫೋನ್ ಮೂಲಕ ಮಾನಸಿಕ ಕಿರುಕುಳ ಕೊಡುತ್ತಿದ್ದ. ಆದ್ದರಿಂದಲೇ ಸಾದಿಕ್ ಕೊಲೆ ಮಾಡಿದ್ದಾನೆʼ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ಅಧಿಕ್ಷಕರು ಹೇಳುತ್ತಾರೆ. ಆದರೆ, ಕೊಲೆಯಾದ ಯುವಕನ ತಂದೆ ನಿಂಗಜ್ಜ ಟಣಕನಲ್ ʼನನ್ನ ಮಗನಿಗೆ ಅವಳೇ ಫೋನ್ ಮಾಡಿ ಕಿರುಕುಳ ಕೊಡ್ತಿದ್ದಳು. ಎಸ್‌ಪಿ ಅವರು ಹೇಳುವುದು ಸುಳ್ಳು’ ಎಂದು ಹೇಳುತ್ತಾರೆ.
ನಗರದ ಕೆಲವರನ್ನ ಈದಿನ.ಕಾಮ್ ಮಾತಾನಾಡಿಸಿದಾಗ, ʼಕೊಲೆಯಾದ ಯುವಕ ಬಾಲಕಿಯೊಂದಿಗೆ ಇರುವ ವೈಯಕ್ತಿಕ ವಿಡಿಯೊ ಹಾಗೂ ಫೋಟೋಗಳು ಇಟ್ಟುಕೊಂಡು ಬೆದರಿಕೆ ಹಾಕುತಿದ್ದ. ಹಾಗಾಗಿ ಬಾಲಕಿ ಆ ವಿಡಿಯೋ ಮತ್ತು ಫೋಟೋಗಳನ್ನ ಡಿಲೀಟ್ ಮಾಡಲು ಕರೆ ಮಾಡಿ ವಿಂತಿಸಿಕೊಳ್ಳುತ್ತಿದ್ದಳು’ ಎಂದರು. ಆದರೆ, ಯಾವುದು ಸತ್ಯ, ಯಾವುದು ಸುಳ್ಳು ಪೊಲೀಸ್ ತನಿಖೆಯಿಂದ ಬೆಳಿಕೆಗೆ ಬರಬೇಕಿದೆ.
ಗವಿಸಿದ್ದಪ್ಪ ನಾಯಕ್‌ನ ಸಾವು ಕೋಮು ತಿರುವು ಪಡೆದಿದ್ದೇಗೆ?
ಕೊಲೆಯಾದವನು ಹಿಂದೂ ಸಮುದಾಯದ ಯುವಕ, ಕೊಲೆ ಆರೋಪಿ ಒಬ್ಬ ಮುಸ್ಲಿಂ ಯುವಕ. ಇದನ್ನೇ ದಾಳವಾಗಿಟ್ಟುಕೊಂಡ ಕೆಲ ಹಿಂದೂ ಪರ ಸಂಘಟನೆಗಳು ಹಾಗೂ ಬಿಜೆಪಿ ಪಕ್ಷ ಗವಿಸಿದ್ದಪ್ಪನ ಸಾವನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದೆಯೇ? ಎಂಬ ಅನುಮಾನ ಹಾಗೂ ಗೊಂದಲ ನಗರದ ಜನರ ಬಾಯಿಂದ ಬಾಯಿಗೆ ಹರಿದಾಡುತ್ತಿದೆ. ಕೊಪ್ಪಳದಲ್ಲಿ ಕೋಮು ಸಂಘರ್ಷ, ದ್ವೇಷ ಯಾವತ್ತೂ ನಡೆದಿಲ್ಲ. ಕೋಮು ಸಾಮರಸ್ಯ, ಭ್ರಾತೃತ್ವ ಹಾಗೂ ಸಮಾನತೆಗೆ ಸಾಕ್ಷಿಯಾಗಿದೆ. ಇಂತ ನಗರದಲ್ಲಿ ಗವಿಸಿದ್ದಪ್ಪನ ಸಾವು ಅನಿರೀಕ್ಷಿತ. ಆದರೆ ಸಾವನ್ನೂ ಧರ್ಮ ರಾಜಕಾರಣಕ್ಕೆ, ಧರ್ಮಗಳ ನಡುವೆ ದ್ವೇಷ ಹರಡುವುದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದು ಸಂಪೂರ್ಣವಾಗಿ ತನಿಖೆಯಾಗಬೇಕು. ಧರ್ಮದ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳುವವರ ಮುಖವಾಡ ಬಯಲಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎನ್ನುವುದು ನಾಗರಿಕ ಸಮಾಜದ ಕೂಗು.

ಉರಿಯುವ ಬೆಂಕಿಗೆ ತುಪ್ಪ ಸುರಿದರೆ ಶ್ರೀರಾಮುಲು?
ಮಾಜಿ ಸಚಿವ ಬಿ.ಶ್ರೀರಾಮುಲು ಗವಿಸಿದ್ದಪ್ಪ ನಾಯಕ್ ಮನೆಗೆ ಭೇಟಿಕೊಟ್ಟಿದ್ದರು. ದುಃಖಿತ ತಾಯಿ-ತಂದೆ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳುವ ನೆಪದಲ್ಲಿ ಧಾರ್ಮಿಕ ವಿಷ ಬೀಜ ಬಿತ್ತಿದ್ದಾರೆಯೇ? ಎನ್ನುವ ಗುಮಾನಿ ಹರಿದಾಡುತ್ತಿದೆ. ಗವಿಸಿದ್ದಪ್ಪನ ಕೊಲೆಯ ಹಿಂದೆ ಪಿಎಫ್‌ಐ ಕೈವಾಡವಿರುವ ಸಂಶಯ ವ್ಯಕ್ತಪಡಿಸಿರುವ ಅವರು, ಮುಸ್ಲಿಂ ಯುವಕರಿಂದ ನಿರಂತರವಾಗಿ ಹಿಂದೂ ಯುವಕರ ಕೊಲೆಯಾಗುತ್ತಿದೆ ಎಂದು ಹೇಳುವ ಮೂಲಕ ತ್ರಿಕೋನ ಪ್ರೇಮದ ವಿಚಾರಕ್ಕೆ ನಡೆದ ಕೊಲೆಗೆ ಕೋಮು ಬಣ್ಣ ಹಚ್ಚಿದ್ದಾರೆ ಎಂದು ನಗರದ ಜಾತ್ಯತೀತರು ಮಾತನಾಡುತ್ತಿದ್ದಾರೆ.
ವೈಯಕ್ತಿಕ ಕೃತ್ಯಕ್ಕೆ ಕೋಮು ಬಣ್ಣ ಹಚ್ಚಬೇಡಿ!
ಗವಿಸಿದ್ದಪ್ಪ ಹಾಗೂ ಸಾದಿಕ್ ಮಧ್ಯ ಇರುವ ಪ್ರೀತಿ ವಿಚಾರವಾಗಿ ಕೊಲೆಯಾಗಿದೆಯೇ ಹೊರತು ಅದು ಕೋಮು ದ್ವೇಷದಿಂದಲ್ಲ. ಬಿಜೆಪಿ ಹಾಗೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇದನ್ನು ರಾಜಕೀರಣಗೊಳಿಸಿ ನಗರದಲ್ಲಿ ಹಾಗೂ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕದಡಿ ದ್ವೇಷವನ್ನು ಹುಟ್ಟಿಸುವಂತಹ ಕೆಲಸ ಮಾಡಬಾರದು ಮತ್ತು ಪೊಲೀಸ್ ಇಲಾಖೆ ಅದಕ್ಕೆ ಅವಕಾಶ ಮಾಡಿಕೊಡಬಾರದು. ಒಂದು ಕೊಲೆಯ ಹಿಂದೆ ಆ ಬಾಲಕಿಯ ಕೈವಾಡವಿದ್ದರೆ ಪಾರದರ್ಶಕ ತನಿಖೆ ಮಾಡಿ ಕ್ರಮ ಕೈಗೊಳ್ಳಲಿ ಎಂದು ಪ್ರಗತಿಪರರಾದ ಅಲ್ಲಮಪ್ರಭು ಬೆಟ್ಟದೂರು, ಲಡಾಯಿ ಪ್ರಕಾಶಕ ಬಸವರಾಜ್ ಸೂಳಿಬಾವಿ ಹಾಗೂ ಬಸವರಾಜ್ ಶೀಲವಂತ ಅವರು ಒತ್ತಾಯಿಸಿದ್ದಾರೆ.

ಆರೋಪಿ ತಂದೆ ಮೌಲಾ ಹುಸೇನ್ ಅವರನ್ನು ಈದಿನ.ಕಾಮ್ನೊಂದಿಗೆ ಮಾತನಾಡಿ, “ಗವಿಸಿದ್ದಪ್ಪ ನನ್ನ ಮಗನಂತೆ ಆ ಕುಟುಂಬಕ್ಕೆ ಆದ ನೋವು ಬೇರೆಯಲ್ಲ, ನನಗಾದ ನೋವು ಬೇರೆಯಲ್ಲ. ಗವಿಸಿದ್ದಪ್ಪನ ಮಧ್ಯ ಹಾಗೂ ನನ್ನ ಮಗನ ಮಧ್ಯೆ ಯಾವ ಜಗಳ ಇರುವುದು ನನಗ ಗೊತ್ತಿಲ್ಲ. ನನ್ನ ಮಗ ಸಾದಿಕ್ ಒಬ್ಬ ಉಡಾಳ, ಅವನ ವರ್ತನೆಗೆ ನಾವು ಬೇಸತ್ತು ಹೋಗಿದ್ದೇವೆ. ಅವನು ಮಾಡಿರುವ ತಪ್ಪಿಗೆ ಕಾನೂನು ಹಾಗೂ ದೇವರು ದೊಡ್ಡ ಶಿಕ್ಷೆ ಕೊಡಲಿ. ಅವನು ನಮ್ಮ ಪಾಲಿಗೆ ಸತ್ತು ಹೋಗ್ಯಾನ ಅಂತ ಮರೆತು ಬಿಟ್ಟೆವಿ” ಎಂದು ಮಗ ಸಾದಿಕ್ ಕೃತ್ಯದ ಬಗ್ಗೆ ಕಣ್ಣೀರಿಟ್ಟರು.
ಗವಿಸಿದ್ದಪ್ಪನ ತಂದೆ ನಿಂಗಜ್ಜ ಮಾತನಾಡಿ, “ನನ್ನ ಮಗ ಮುಸ್ಲಿಂ ಹುಡುಗಿಯನ್ನು ಪ್ರೀತಿಸುತ್ತಿದ್ದ. ಅದೇ ಹುಡುಗಿಯನ್ನ ಸಾದಿಕ್ ಕೂಡ ಪ್ರೀತಿಸುತ್ತಿದ್ದನಂತೆ. ಈ ವಿಷಯವಾಗಿ ನನ್ನ ಮಗನನ್ನು ಕೊಲೆ ಮಾಡಲಾಗಿದೆ. ಇಲ್ಲಿ ಮುಸ್ಲಿಂ ಸಮುದಾಯ ಹಾಗೂ ನಾವೆಲ್ಲ ಅಣ್ಣ ತಮ್ಮಂದಿರಂತೆ ಇದ್ದೇವೆ. ಒಂದು ಸಮುದಾಯಕ್ಕೂ ಈ ಕೊಲೆಗೂ ಸಂಬಂಧವಿಲ್ಲ. ಇದು ಪ್ರೀತಿ, ಪ್ರೇಮದ ವಿಷಯವಾಗಿ ನಡೆದಿರುವ ಕೊಲೆಯಷ್ಟೆ. ಪೊಲೀಸರು ತನಿಖೆ ಮಾಡಿ ಅಪರಾಧಿಯನ್ನು ಶಿಕ್ಷೆಗೊಳಪಡಿಸಬೇಕು. ಎಸ್‌ಪಿ ಸಾಹೇಬರು ನನ್ನ ಮಗನೇ ಹುಡುಗಿಗೆ ಕಿರುಕುಳ ಕೊಡ್ತಿದ್ದ ಎಂದು ಹೇಳುತ್ತಿರುವುದು ಸುಳ್ಳು” ಎಂದು ಹೇಳಿದರು.
“ಜುಲೈ 8ರಂದು ಬಿಜೆಪಿ ಹಾಗೂ ಹಿಂದುತ್ವ ಸಂಘಟನೆಗಳು ಕೊಪ್ಪಳ ಬಂದ್‌ಗೆ ಕರೆ ಕೊಟ್ಟಿದ್ದವು. ಆದರೆ ಇದಕ್ಕೆ ಪೊಲೀಸರು ಅವಕಾಶ ಕೊಟ್ಟಿರುವುದಿಲ್ಲ. ಪಕ್ಷ ಮತ್ತು ಧರ್ಮ ಆಧಾರಿತ ಬಂದ್‌ಗೆ ಬೆಂಬಲ ಕೊಡಲು ಬರುವುದಿಲ್ಲ. ಈ ಬಂಧನದಲ್ಲಿ ನಮ್ಮ ಕುಟುಂಬದ ಯಾವ ಸದಸ್ಯರೂ ಭಾಗಿಯಾಗುವುದಿಲ್ಲ. ಪೊಲೀಸರು ತನಿಖೆ ಮಾಡಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು” ಎಂದು ಗವಿಸಿದ್ದಪ್ಪನ ಚಿಕ್ಕಪ್ಪ ಯಮನೂರಪ್ಪ ನಾಯಕ್ ಪ್ರತಿಕ್ರಿಯಿಸಿದರು.
ಕೊಪ್ಪಳದಲ್ಲಿ ಅನಿರೀಕ್ಷಿತವಾಗಿ ನಡೆದ ಕೊಲೆಗೆ ನಗರದ ಜನತೆ ಬೆಚ್ವಿಬಿದ್ದಿದ್ದಾರೆ. ಒಂದೆಡೆ ಕೊಲೆಯಾದ ಗವಿಸಿದ್ದಪ್ಪ ನಾಯಕ್ ತಂದೆ-ತಾಯಿ ಸಹೋದರಿಯರು ಮಗನನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರೆ; ಅತ್ತ ಮೌಲಾ ಹುಸೇನ್ ಕುಟುಂಬ ಮಗನ ಕೃತ್ಯದಿಂದ ಬೇಸತ್ತು ಕೊಲೆಯಾದ ಗವಿಸಿದ್ದಪ್ಪನ ಕುಟಂಬದ ನೋವು ನೆನೆದು ಕಂಬಿನಿ ಮಿಡಿದಿದೆ. ಪೊಲೀಸರ ಪಾರದರ್ಶಕ ತನಿಖೆಯಿಂದ ಆರೋಪಿಗೆ ಶಿಕ್ಷೆಯಾಗಿ, ಮಗನನ್ನು ಕಳೆದುಕೊಂಡಿರುವ ನೊಂದ ಕುಟುಂಬಕ್ಕೆ ನ್ಯಾಯ ಸಿಗಲಿ ಎಂಬುದು ಕೊಪ್ಪಳ ನಾಗರಿಕರ ಮಾತಾಗಿದೆ.