ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ಕುರಿತು ಆರ್ಥಿಕ ಚಿಂತಕ ಮತ್ತು ಸಾಹಿತಿ ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ ರಚಿಸಿದ್ದ ‘ತಿರುಕಯಾನ’ ನಾಟಕದ ಇಂಗ್ಲಿಷ್ ಆವೃತ್ತಿ (Journey of a Yoga Master) “ಜರ್ನಿ ಆಫ್ ಎ ಯೋಗ ಮಾಸ್ಟರ್” ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದಲ್ಲಿ ನಡೆದ ಶ್ರೀ ರಾಘವೇಂದ್ರ ಸ್ವಾಮೀಜಿ, ಶ್ರೀ ಸೂರ್ ದಾಸ್ ಜಿ ಅವರ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಯಿತು

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಆಂಗ್ಲ ಭಾಷಾ ವಿಭಾಗದ ನಿವೃತ್ತ ಮುಖ್ಯಸ್ಥರಾದ ಪ್ರೊ. ಎಂ. ಹೆಚ್. ರುದ್ರಮುನಿ ಅವರು ಕೃತಿ ಅವಲೋಕನ ಮಾಡುತ್ತಾ ಮಾತನಾಡಿ, “ರಂಗಭೂಮಿ ಎಲ್ಲರಿಗೂ ತಲುಪುವ ಸರಳ ಮತ್ತು ಸುಂದರ ಸಮೂಹ ಮಾಧ್ಯಮ. ಜನರ ಮನಸ್ಸು ಮತ್ತು ಹೃದಯಗಳ ಬೇಗುದಿಗೆ ತಣ್ಣೀರು ಒಯ್ಯುವ ಸಾಧನ. ಒಳ್ಳೆಯ ರಂಗಪ್ರದರ್ಶನಕ್ಕೆ ಒಳ್ಳೆಯ ಸಾಹಿತ್ಯ ಬೇಕು. ಭಾಷೆ ಒಮ್ಮೆ ಕೇಳಿದರೆ ಸಾಕು ನೆನಪಿನಲ್ಲಿ ಉಳಿಯುವಂತಿರಬೇಕು. ಪಠ್ಯ ರೂಪದಲ್ಲಿ ಪ್ರಕಟವಾಗುವ ನಾಟಕ ಕೃತಿಗಳಾದರೂ ಓದಿಸಿಕೊಳ್ಳುವಾಗಲೂ ಓದುಗನ ಮನಸ್ಸನ್ನ ಸೆರೆ ಹಿಡಿಯಬೇಕು. ಇವತ್ತಿನ ವಿದ್ಯುನ್ಮಾನ ಸಾಮಾಜಿಕ ಜಾಲತಾಣಗಳ ಕ್ರಿಯಾಶೀಲತೆಯ ಮಧ್ಯೆಯೂ ಜನರು ಪ್ರೇಕ್ಷಕರಾಗಿ ಬಂದು ಕುಳಿತು ಹೊರಜಗತ್ತನ್ನು ಮರೆಯುವಂತಿರಬೇಕು” ಎಂದು ಅಭಿಪ್ರಾಯಪಟ್ಟರು.
“ಇಂತಹ ಬಹುತೇಕ ಆಶಯ ಮತ್ತು ಸಾಧ್ಯತೆಗಳನ್ನು ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ಅವರು ತಮ್ಮ ‘ತಿರುಕಯಾನ’ ನಾಟಕದಲ್ಲಿ ಅಮೂರ್ತಗೊಳಿಸಿದ್ದಾರೆ. ಶತಾಯುಷಿ ರಾಘವೇಂದ್ರ ಸ್ವಾಮೀಜಿಯವರ ಜೀವನಾರಂಭದಿಂದ ಅಂತ್ಯದವರೆಗಿನ ಘಟನೆಗಳನ್ನು ಆಯ್ದು, ಜೋಡಿಸಿ, ನಾಟಕ ಕೃತಿಯೊಂದು ಬೇಡುವ ಬಹುತೇಕ ಕೌಶಲ್ಯಗಳನ್ನು ಅನ್ವಯಿಸಿ ಗದ್ಯ-ಪದ್ಯ ಸಮ್ಮಿಶ್ರಗಳಿಂದ ನಿರೂಪಿಸಿದ್ದಾರೆ” ಎಂದು ವಿಶ್ಲೇಷಿಸಿದರು.

ಆಶ್ರಮದ ಕಾರ್ಯದರ್ಶಿ ಎಸ್. ಕೆ. ಬಸವರಾಜನ್ ಕೃತಿ ಲೋಕಾರ್ಪಣೆ ಮಾಡಿ “ಮುಂದಿನ ದಿನಗಳಲ್ಲಿ ಪೂಜ್ಯದ್ವಯರುಗಳು ಕಟ್ಟಿರುವ ಈ ಆಶ್ರಮವನ್ನು ಅವರ ಆಶಯದಂತೆ ಹೆಚ್ಚು ಅಭಿವೃದ್ಧಿಪಡಿಸಲು ಎಲ್ಲರ ಸಹಕಾರದೊಂದಿಗೆ ಪ್ರಯತ್ನಿಸಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಿದ್ಯಾರ್ಥಿನಿಯರ ಹಾಸ್ಟೆಲ್ ಆಹಾರದಲ್ಲಿ ಹುಳು ಪತ್ತೆ ವರದಿ; ಹಾಸ್ಟೆಲ್ ಗೆ ಇಡಿ, ಲೋಕಾಯುಕ್ತ ಅಧಿಕಾರಿಗಳ ಭೇಟಿ
ಕಾರ್ಯಕ್ರಮದಲ್ಲಿ ಅನುವಾದಕರಾದ ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ, ಡಾ. ಜಿ.ಏನ್.ಮಲ್ಲಿಕಾರ್ಜುನಪ್ಪ, ಹಿರಿಯ ವ್ಯಂಗ್ಯ ಚಿತ್ರಕಾರ ಹೆಚ್. ಬಿ. ಮಂಜುನಾಥ್, ಪ್ರಶಿಕ್ಷಣಾರ್ಥಿ ಕುಮಾರಿ ಮಧುಮತಿ, ಆಡಳಿತಾಧಿಕಾರಿ ಪಾಂಡುರಂಗಮೂರ್ತಿ, ಆಕಾಶವಾಣಿ ಉದ್ಘೋಷಕ ನವೀನ್ ಮಸ್ಕಲ್ , ಪಿಆರ್ ಓ ಸಂತೋಷ್, ಆಶ್ರಮದ ಟ್ರಸ್ಟಿಗಳು ಹಾಗೂ ಶಾಲಾ ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.