ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಆ ಸರ್ಕಲಿನಾಚೆ ಯಾರೂ ಹೋಗಲೊಲ್ಲರು. ಕಟ್ಟಡಗಳ ಅಡೆತಡೆಯಿಲ್ಲದ ವಿಸ್ತಾರ ಭೂಮಿಯ ಮೇಲಿಂದ ಬೀಸುತ್ತಿದ್ದ ಶೀತಲ ಗಾಳಿ ದುರ್ಗಂಧವನ್ನು ತರುತ್ತಿತ್ತು. ಜನ ಗುಜುಗುಜು ಮಾತಾಡುತ್ತಿದ್ದರು. ಅದೆಲ್ಲ ಅಸ್ಪಷ್ಟ ಕಲರವ.
ಸೂರ್ಯ ಮೇಲಕ್ಕೆ ಬಂದಂತೆ ಕಾವೇರತೊಡಗಿತು. ಸರ್ಕಲನ್ನು ಹಾದು ಹೋಗಲೇಬೇಕಾದವರು, ಭೀತಿಯಿಂದೊಮ್ಮೆ ಎಡಕ್ಕೆ ಕಣ್ಣು ಹೊರಳಿಸಿ, ಮತ್ತೆ ತಲೆ ಕೆಳಗೆ ಮಾಡಿ, ಸರಸರನೆ ನಡೆದು ಹೋಗುತ್ತಿದ್ದರು.
ಎಲ್ಲರೂ ಚಲಿಸುತ್ತಲೇ ಇದ್ದರು… ನಿಲ್ಲುವವರು ಯಾರೂ ಇರಲಿಲ್ಲ…
ನಿಧಾನವಾಗಿ ಪೌರಸಭೆಗೆ ವರದಿ ಹೋಯಿತು.
*
ಅದೊಂದು ದಿನ ಬೆಳಿಗ್ಗೆ ಕಾಣಿ ಎದ್ದು ನೋಡುತ್ತಾಳೆ- ರಾತ್ರಿ ಜತೆಯಲ್ಲಿ ಮಲಗಿದ್ದ ಸಂಗಡಿಗನಿಲ್ಲ. ಹದಿನಾರರ ಆ ಹುಡುಗಿ ಹತ್ತು ದಿನಗಳ ಹಿಂದೆ ಅವನ ಬೆಂಬತ್ತಿ ಕರ್ನಾಟಕದ ರಾಜಧಾನಿಗೆ ಓಡಿ ಬಂದಿದ್ದಳು- ತಮಿಳುನಾಡಿನೊಂದು ಊರಿಂದ. ತಿರುಪೆ ಎತ್ತುವ ಗರೀಬ ಆತ, ಒಂದು ಕೈ ಮೊಂಡು. ಆದರೆ ಒಂದು ರಾತ್ರೆ, ಇನ್ನೊಂದು ತೋಳಿನಿಂದ ಆಕೆಯನ್ನು ಆತ ಬಳಸಿ ಬರಸೆಳೆದಿದ್ದ. ಕಂಪಿಸುತ್ತಿದ್ದ ಹೃದಯದಿಂದ ಆಕೆ ಆತನನ್ನು ನೋಡಿದಳು; ಆ ಬಲಿಷ್ಠ ತೋಳನ್ನು ನೋಡಿದಳು. ಎರಡು ಕೈಗಳ ಶಕ್ತಿಯೂ ಇತ್ತದಕ್ಕೆ.
ಅಲ್ಲಿಂದ ಆ ರಾತ್ರಿಯೇ ಅವರು ಓಡಿಹೋದರು.
ಮನೆ ಇತ್ತು ಆಕೆಗೆ- ಚಿಕ್ಕ ಗುಡಿಸಲು. ಹೊಲವಿತ್ತು ಆಕೆಯ ತಾಯ್ತಂದೆಯರಿಗೆ- ಒಕ್ಕಲುತನದ ಒಂದಿಷ್ಟು ಹೊಲ. ಆ ವರ್ಷವೇ ಎಲ್ಲವೂ ಹೊರಟು ಹೋದವು. ದೇಶಪ್ರೇಮಿಯಾದ ಆ ಹಿರಿಯ ಜಮೀನ್ದಾರ ಹೆಚ್ಚು ಗೇಣಿ ಕೇಳಿದ. ಕೊಡದೇಹೋದರೆ ಹೊಸ ಒಕ್ಕಲನ್ನು ಹುಡುಕುವುದಾಗಿ ಹೇಳಿದ. ಹಾಗೆಯೇ ಆಯಿತು. ಕಾಣಿಯ ತಾಯ್ತಂದೆಯರು ಹೊಲ ಕಳೆದುಕೊಂಡರು. ಮಡಿಕೆ ಕುಡಿಕೆಗಳೊಡನೆ ಗುಳೆ ಹೊರಟಿತು ಆ ಸಂಸಾರ. ಹಿರಿಯ ಮಗ ಕೂಲಿಯಾಗುವೆನೆಂದು ಮದರಾಸಿಗೆ ಹೋದ. ಕಿರಿಯವನು ಜಗಳಾಡಿ ದೇಶಾಂತರ ಹೋದ. ತಂದೆ-ತಾಯಿ ಮೂಕಿಯಾದ ಮಗಳನ್ನು ಕಟ್ಟಿಕೊಂಡು ಊರೂರು ಸುತ್ತಿದರು.
ಇದನ್ನು ಓದಿದ್ದೀರಾ?: ತರಾಸು ಅವರ ಕತೆ | ಇನ್ನೊಂದು ಮುಖ
ಎಷ್ಟು ಸುತ್ತಾಡಿದರೂ ಕೆಲಸ ಸಿಗಲಿಲ್ಲ. ಬೇಡಿ ಬೇಡಿ ಸರ್ವಿಸಾದ ಬಳಿಕ ಭಿಕ್ಷೆ ಎತ್ತುವ ಕೆಲಸ ಅವರಿಗೆ ಖಾಯಮಾಯಿತು.
ತಾಯ್ತಂದೆಯರನ್ನು ಬಿಟ್ಟು ಬಂದಾಗ ಆ ಮೂಕಿಗೆ ಸ್ವಲ್ಪ ದುಃಖವಾಗಿತ್ತು ಎಂಬುದನ್ನು ಒತ್ತಿ ಹೇಳುವುದು ವಾಸಿ. ಯಾಕೆಂದರೆ ಯಾವುದೋ ಮನೆಯ ಮಾಡಿನ ಕೆಳಗೆ ಬೀದಿಯ ಬಳಿ ಆ ರಾತ್ರೆ ತನ್ನೊಡನೆ ಹೊರಳಾಡಿದ ಮೊಂಡುಕೈಯ ಯುವಕ ಭಿಕ್ಷುಕ, ಆಕೆಗೊಂದು ಆಧಾರವಾಗಿದ್ದ.
ನಿಮಿಷ ನಿಮಿಷಕ್ಕೂ ಕುಸಿದು ಬೀಳುವ ಆಧಾರ ಅದು.
ಓಡಿಬಂದ ಮೇಲೆ ಆ ದೊಡ್ಡ ನಗರದಲ್ಲಿ ಕಳೆದುದು ಹತ್ತೇದಿನ. ಹನ್ನೊಂದನೆಯ ಬೆಳಗು ಮುಂಜಾನೆ ಆಕೆ ಒಬ್ಬಳೇ, ಆಶ್ರಯಕ್ಕೆ ಹುಲ್ಲು ಕಡ್ಡಿಯೂ ಇಲ್ಲದ ಮಹಾ ಆಳದಲ್ಲಿ ಕೈಕಾಲು ಬಡಿಯುತ್ತಿದ್ದಳು.
ಆ ದಿನವೆಲ್ಲ ಆ ಮೂಕಿಯ ಕಣ್ಣುಗಳಿಂದ ಬಳಬಳ ಕಣ್ಣೀರು ಸುರಿಯುತ್ತಲೇ ಇತ್ತು. ಆಕೆ ಹೊಟ್ಟೆ ಹಿಸುಕಿಕೊಂಡು, ಕೂತಲ್ಲೇ ಗೋಡೆಗೆ ಹಣೆ ಚಚ್ಚಿಕೊಂಡು, ಗೊಳೋ ಎಂದು ರೋದಿಸಿದಳು. ಅಲ್ಲಿ ಇಲ್ಲಿ ಸುತ್ತಾಡಿದಳು, ಆತ ಸಿಗಲಿಲ್ಲ. ಯಾವ ಗಾಡಿ ಹತ್ತಿ ಯಾವ ಊರಿಗೆ ಟಿಕೆಟಿಲ್ಲದ ಪ್ರವಾಸವನ್ನು ಕೈಗೊಂಡಿದ್ದನೋ ಆ ಮಹಾರಾಯ!
ರೈಲು ನಿಲ್ದಾಣದ ಹಿಂದಿದ್ದ ಕೆರೆಗೆ ಕಾಣಿ ಹೋದಳು. ನೀರಲ್ಲಿ ಕಾಲುಗಳನ್ನು ಇಳಿಬಿಟ್ಟು ಕುಳಿತಳು. ರವಕೆಗೆ ಸಿಕ್ಕಿಸಿದ್ದ ಬಾಚಣಿಗೆಯನ್ನು ತೆಗೆದು, ತಲೆಗೆ ಕೈಯಿಂದ ನೀರು ಹನಿಸಿ, ಬಾಚಿದಳು. ಅದೇ ಕೆರೆಯ ನೀರನ್ನು ಸ್ವಲ್ಪ ಕುಡಿದಳು. ಹಾಗೆಯೇ ಉದ್ದಕ್ಕೂ ಆ ಕಾಲು ಹಾದಿಯಲ್ಲಿ ನಡೆದುಹೋದಳು.
ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ
ಆಕೆ ರೂಪವತಿಯಲ್ಲ, ತೆಳ್ಳನೆಯ ಜೀವ. ಆದರೆ ವಯಸ್ಸಿಗೆ ಮೀರಿ ಮೈ ತುಂಬಿತ್ತು. ಬರಿಯ ದೇಹ ಮಾಂಸಕ್ಕಾಗಿ ಹಂಬಲಿಸುವವರಿಗೆ ಆಕೆ ಮನದಣಿಯುವ ಊಟವಾಗಿದ್ದಳು.
ನಡೆದು ಹೋಗುತ್ತ ಹೋಗುತ್ತ ಆಕೆಯೊಮ್ಮೆ ತಿರುಗಿ ನೋಡಿದಳು. ಯಾವನೋ ಒಬ್ಬ ಸಿಗರೇಟು ಕುಡಿದುಕೊಂಡು ಹಿಂಬಾಲಿಸಿ ಬರುತ್ತಿದ್ದ. ಬೀದಿಯ ದೀಪಗಳು ಹತ್ತಿಕೊಂಡವು. ಯಾವುದೋ ಹೊಸ ಪ್ರಪಂಚದ ಬಾಗಿಲು ತನ್ನ ಪಾಲಿಗೆ ತೆರೆದ ಹಾಗೆ ಕಾಣಿ ಆ ದೀಪಗಳತ್ತ ಪಿಳಿ ಪಿಳಿ ನೋಡಿದಳು. ಒಂದು ಸೈಕಲ್ ಎದುರು ಭಾಗದಿಂದ ಹರಿದುಹೋಯಿತು. ಪೊಲೀಸನ ಸಿಳ್ಳೊಂದು ಎಲ್ಲಿಂದಲೋ ಸದ್ದು ಮಾಡಿತು… ಆಕೆ ಮತ್ತೊಮ್ಮೆ ಹಿಂತಿರುಗಿ ನೋಡಿದಳು. ಆತ ಬರುತ್ತಲೇ ಇದ್ದ.
ಫುಟ್‌ಪಾತಿನ ಮೇಲೆಯೇ ಒಂದು ದೇವದಾರು ಮರದ ಬಳಿ ಆಕೆ ನಿಂತಳು. ಆತನೂ ಸಮೀಪ ಬಂದ, ತಿಂಡಿಯ ಪೊಟ್ಟಣವನ್ನು ಆತ ಮುಂದಕ್ಕೆ ನೀಡಿದ. ‘ಅ ಆ’ ಎಂದು ಆಕೆಯ ಗಂಟಲಿಂದ ಸ್ವರ ಹೊರಟಿತು. ಪೊಟ್ಟಣವನ್ನಾಕೆ ಬಿಚ್ಚಿ ಆ ಚೌಚೌವನ್ನು ಗಬಗಬನೆ ತಿಂದಳು. ಆತ ಇನ್ನೊಂದು ಸಿಗರೇಟು ಹಚ್ಚಿದ.
‘ಬೆಳಿಗ್ಗಿನಿಂದಲೇ ನಿನ್ನ ನೋಡ್ತಾ ಇದ್ದೆ’ ಎಂದನಾತ.
ಆಕೆ ಆತನ ತುಟಿಯಲುಗುತ್ತಿದ್ದುದರಿಂದಲೇ ಎಷ್ಟನ್ನೋ ಅರ್ಥ ಮಾಡಿಕೊಂಡಳು. ಕಿವಿಯ ಭೇರಿಯ ಮೇಲೆ ಸದ್ದೇನೋ ಆಗುತ್ತಿತ್ತು; ಆದರೆ ಅರ್ಥವಾಗುತ್ತಿರಲಿಲ್ಲ.
ಆಕೆ ‘ಕಕಾಕ ಅ ಆ ಅ’ ಎಂದೇನೋ ಹೇಳಿದಳು. ಕಣ್ಣೀರು ಚಿಮ್ಮತೊಡಗಿತು.
‘ಚು ಚು ಚ್’ ಎಂದು ಆತ ಸಂತಾಪ ಸೂಚಿಸಿದ. ಬಾ, ಎಂದು ಕೈ ಸನ್ನೆ ಮಾಡಿದ. ಆಕೆ ತಲೆಬಾಗಿಸಿಕೊಂಡು ಆತನನ್ನೆ ಹಿಂಬಾಲಿಸಿದಳು- ನಾಯಿ ವಿನಮ್ರವಾಗಿ ಹಿಂದಿನಿಂದ ಹೋಗುವಂತೆ ಸಾಗಿದಳು.
ಯಾವುದೋ ಆಶ್ರಯದಲ್ಲಿ ಹಾಗೆ ಆ ರಾತ್ರೆ ಬೆಳಗಾಯಿತು.
*
ಆ ರೀತಿ ನಾಲ್ಕು ದಿನ ಕಳೆದುವು. ಆಕೆಯನ್ನು ಅವನು ಸಿಂಗರಿಸಿದ.
ಅರ್ಧಮಾತಿನಿಂದ ಅರ್ಧ ಕೈಸನ್ನೆಯಿಂದ ವಿವರಿಸಿ ಹೇಳಿದ:
‘ನಾನು ಹೊಸಬರನ್ನು ಕರಕೊಂಡು ಬರ್ತೀನಿ. ನೀನು ಸುಮ್ಮಗಿರಬೇಕು. ಬಾಯಿ ಬಿಚ್ಚಬಾರದು. ಮೂಕಿ ಅಂತ ತೋರಿಸಬಾರದು.’
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
ಆಕೆ ಕುಂಯ್ ಕುಂಯ್ ಎನ್ನುತ್ತಿದ್ದಳು. ತನ್ನನ್ನು ಮೂಕಿ ಎಂದು ಸಂಬೋಧಿಸಿದ ಆತ ಹಾವ ಭಾವ ಮಾಡಿದಾಗ ಆಕೆಗೆ ತುಂಬ ಸಿಟ್ಟು ಬರುತ್ತಿತ್ತು. ಆದರೆ ಕುಂಯ್ ಕುಂಯ್ ಶಬ್ದದಲ್ಲೇ ಆ ಸಿಟ್ಟು ಮುಕ್ತಾಯವಾಗುತ್ತಿತ್ತು.
ಆತ ಯಾರನ್ನೋ ಕರೆದು ತಂದ. ಸಂಭಾವಿತರಂತೆ ಕಾಣುತ್ತಿದ್ದರವರು. ಅವರೆದುರು ಆತ ಹಾಗೆ ಹಲ್ಲು ಕಿರಿಯುತ್ತಿದ್ದ. ತಿಂಡಿಯ ತುಣಕಿನ ಮೇಲೆ ನಾಯಿಯ ಕಣ್ಣಿದ್ದ ಹಾಗೆ! ಅವನ ದೃಷ್ಟಿ ಅವರ ಜೇಬುಗಳ ಮೇಲಿತ್ತು.
ಬಂದವರಲ್ಲೊಬ್ಬ ಶುದ್ಧ ಪಶು. ಆಕೆಯ ಅಂಗಾಂಗಗಳನ್ನೆಲ್ಲಾ ಹಿಡಿದು ನೋಯಿಸ ತೊಡಗಿದ.
ಆಕೆ ನೋವು ತಡೆಯಲಾರದೆ ‘ವೆ ವೆ ವೆ ವೆ’ ಎಂದು ಪ್ರತಿಭಟಿಸಿದಳು. ಎರಡೂ ಕೈಯಿಂದ ದಬ್ಬಿ ಅವನನ್ನು ಕೆಳಕ್ಕೆ ಬೀಳಿಸಿದಳು. ರಂಪವಾಯಿತು. ಆಕೆಯ ಯಜಮಾನನು ಬಡ ನಾಯಿಗೆ ಹೊಡೆದ ಹಾಗೆ ಆಕೆಗೆ ಬಡೆದ. ಆಕೆ ಮುದುಡಿಕೊಂಡು ಮೂಲೆಯಲ್ಲಿ ಬಿದ್ದಳು. ಬಂದವರು ಮುಖ ಸಿಂಡರಿಸಿಕೊಂಡು ಹೊರಟು ಹೋದರು.
ನಡುರಾತ್ರೆ ಆತ, ಬಿದ್ದಿದ್ದ ಜಾಗದಿಂದ ಆಕೆಯನ್ನೆತ್ತಿ ಚಾಪೆಯ ಮೇಲೆ ಇರಿಸಿದ. ‘ನೋವಾಯಿತೆ? ನೋವಾಯಿತೆ?’ ಎಂದ. ಆಕೆ ಏನನ್ನೂ ಹೇಳಲಿಲ್ಲ. ಕಣ್ಣುಗಳಲ್ಲಿ ಮಾತ್ರ ಏನೇನೋ ವಿವಿಧ ವಿಕಾರಗಳಾಗುತ್ತಿದ್ದವು. ಆದರೆ ಆ ಅಲ್ಪಮಾನವನಿಗೆ ಅದರ ಅರ್ಥವಾಗಲಿಲ್ಲ.
ಅಂದಿನಿಂದ ಕಾಣಿ ಬಲು ಮೆದುವಾದಳು.
ಆತನನ್ನು ಆಕೆ ಪ್ರೀತಿಸಲಿಲ್ಲ. ಮೊದಲಸಾರೆ ಮೊಂಡು ಕೈಯವನನ್ನು ಪ್ರೀತಿಸಿದ ಹಾಗೆ ಯಾರನ್ನೂ ಆಕೆ ಪ್ರೀತಿಸಲಿಲ್ಲ.
ದುಡ್ಡಿನ ಬೆಲೆ ಕಾಣಿಗೆ ತಿಳಿಯದು. ಎಷ್ಟು ಬರುತ್ತಿತ್ತೋ ಏನೋ. ಎರಡು ಸೀರೆ-ರವಕೆ, ಜಂಪರ್, ರಾತ್ರೆ ಹೊರಹೋಗುವಾಗ ಹಾಕಿಕೊಳ್ಳಲು ತೂತಾಗಿದ್ದ, ಆದರೆ ಉಣ್ಣೆಯ, ಸ್ತ್ರೀ ಕೋಟು; ಮುಡಿಯಲು ಹೂ; ಮೂಗಿಗೆ ಹೊಡೆಯುವ ಎಣ್ಣೆ- ಕೂದಲಿಗೆ; ಹೊಟ್ಟೆ ತುಂಬ ಊಟ-ತಿಂಡಿ …ಹಾಗೆಯೇ ದಿನ ಕಳೆಯಿತು.
ಸದ್ಯ ಆಕೆ ಬಸುರಿಯಾಗಲಿಲ್ಲ!
ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು
ಇಷ್ಟಿದ್ದರೂ ಒಂದು ದಿನ ಆಕೆಗೆ ಎದೆ ನೋವಾಯಿತು. ಹೊರಳಾಡಿದಳು, ವಿಲಿವಿಲಿ ಒದ್ದಾಡಿದಳು. ತನ್ನ ಹಳ್ಳಿಯ, ತಾನು ಹುಟ್ಟಿದ ಗುಡಿಸಲಿನ ತನ್ನ ಭಾಷೆಯಾಡುವ ಜನರ, ಮೊಂಡುಕೈಯ ಮೊದಲ ಜತೆಗಾರನ ನೆನಪಾಯಿತು. ಓಹೋ ಓ ಓ ಎಂದೆಲ್ಲ ಸ್ವರವೆತ್ತಿದಳು. ಎರಡು ದಿನವೂ ರಾತ್ರೆಯೂ ಹೀಗೆ ಆಯಿತು. ಗಿರಾಕಿಗಳು ಬರುವುದಾಗಲೇ ಇಲ್ಲ.
ಮೂರನೆಯ ಬೆಳಗು ಮುಂಜಾನೆ, ಅಲ್ಲಿದ್ದ ತಿಂಡಿಯನ್ನೆಲ್ಲ ಬಟ್ಟೆ ಬರೆಯನ್ನೆಲ್ಲ ಕಟ್ಟಿಕೊಂಡು ಆಕೆ ಓಡಿಹೋದಳು. ನಗರದ ಇನ್ನೊಂದು ಅಂಚನ್ನು ತಲುಪಿ ಅದನ್ನೂ ದಾಟಿದಳು.
*
ದಾಟಿ ಮುಂದೆ ನಡೆದುದೊಂದು ಹಳ್ಳಿಗೆ. ಹೊಲ ಉಳುತ್ತಿದ್ದ ಒಂದು ಜತೆ ಎತ್ತು, ರೈತರು… ಎಲ್ಲವನ್ನೂ ಆಕೆ ಮೌನದಿಂದ ನೋಡಿದಳು. ಕೆದರಿದ ತಲೆ ಕೂದಲನ್ನು ಬಾಚುವುದೂ ನೆನಪಾಗಲಿಲ್ಲ ಆಕೆಗೆ. ಒಂದಾಣೆಯ ಪುಟ್ಟ ಕನ್ನಡಿಯಲ್ಲಿ ತನ್ನ ಪ್ರತಿರೂಪವನ್ನು ನೋಡುವ ಬಯಕೆಯೂ ಆಗಲಿಲ್ಲ. ತಿಂಡಿ ತಿನ್ನುವುದೂ ಬೇಕೆನಿಸಲಿಲ್ಲ.
ಮಳೆ ಹನಿ ಬಿದ್ದು ಸುತ್ತಲಿನ ನೆಲವೆಲ್ಲ ಹಸುರಾಗಿತ್ತು. ಚಿಗುರುಹುಲ್ಲಿನ ಮೇಲೆ ಕಾಣಿ ಒಂದೆಡೆ ಕುಳಿತಳು.
ತನ್ನ ಬಾಲ್ಯದ ನೂರೊಂದು ನೆನಪುಗಳು ಬಂದವು. ಮುಖ ಸಣ್ಣದಾಯಿತು. ನಿಧಾನವಾಗಿ ಜೊಂಪು ಹತ್ತಿ ಅಲ್ಲೆ ಒರಗಿ ನಿದ್ದೆ ಹೋದಳು.
ಸಂಜೆ, ‘ಶ್ ಶ್ ಏಯ್ ಏಯ್’ ಎಂದು ಕೆಲವು ರೈತ ಹೆಂಗಸರು ಎಬ್ಬಿಸಿದಾಗಲೇ ಆಕೆ ಕಣ್ಣುತೆರೆದದ್ದು.
ಕತ್ತಲಾದಂತೆ ಆ ಹಳ್ಳಿಯಲ್ಲಿ ಆಕೆಗೆ ಹೆದರಿಕೆಯಾಯಿತು. ಧಾವಿಸುತ್ತ ಧಾವಿಸುತ್ತ ಕಾಣಿ ನಗರ ಸೇರಿದಳು.
ಒಂದು ಕೊನೆಯಲ್ಲಿ ಆ ಶಾಲೆ ಇತ್ತು. ರಾತ್ರಿ ಅಲ್ಲಿ ಯಾರೂ ಇರುತ್ತಿರಲಿಲ್ಲ. ಅಲ್ಲಿಯೇ ಜಗಲಿಯ ಒಂದು ಮೂಲೆಯಲ್ಲಿ ಆಕೆ ಮಲಗಿದಳು.
*
ಬೆಳಗಾದೊಡನೆಯೇ ಎದ್ದುಹೋದಳಾಕೆ. ಹೋಗುತ್ತ ಮೈಮೇಲಿನ ಬಟ್ಟೆ ಸರಿಪಡಿಸಿಕೊಂಡಳು; ಕೊಂಚಮಟ್ಟಿಗೆ ಸಿಂಗರಿಸಿಕೊಂಡಳು.
ಹಾಗೆಯೇ ಸುತ್ತಾಡಿದಾಗ ಆ ಜಾಗದ ಪರಿಚಯವಾಯಿತು. ವಿಸ್ತಾರ ಭೂಮಿ- ಸುತ್ತಲೂ ಹಸುರು ಹುಲ್ಲು. ಅಲ್ಲೆ ಆ ಸರ್ಕಲ್- ಅದರ ನಡುವಿನಲ್ಲಿ ಕಾರಂಜಿ. ಯಾರದೋ ಒಂದು ಪ್ರತಿಮೆ. ದೂರದಲ್ಲಿ ಒಂದೇ ಒಂದಾದ ಯಾವುದೋ ದೊಡ್ಡ ಕಟ್ಟಡ.
ಮೂಲೆಯಲ್ಲಿ ಕಡಲೆಕಾಯಿ ಮಾರುತ್ತ ಕುಳಿತಿದ್ದವನೊಬ್ಬನಿಗೆ ಇದ್ದ ಪುಡಿಕಾಸು ಸುರಿದು, ಕಾಸಿನ ಬೆಲೆ ಏನೆಂಬುದನ್ನು ಆ ಮೂಕಿ ಕಲಿತಳು.
ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ
ಹಸಿವು ಇಂಗಲಿಲ್ಲ.
ಕತ್ತಲಾದಾಗ ಆ ಸರ್ಕಲಿನ ಬಳಿ ಹೋಗಿ ಒಂದು ಮೂಲೆಯಲ್ಲಿ ಕುಳಿತಳು. ಕೇಂದ್ರದ ಒಂದೇ ಒಂದು ದೀಪದಿಂದ ಮಂದಪ್ರಕಾಶವಷ್ಟೇ ಬೀಳುತ್ತಿತ್ತು. ಹಾದು ಹೋಗುತ್ತಿದ್ದವರು ಆಕೆಯನ್ನು ನೋಡಿ ಹೋಗುತ್ತಿದ್ದರು. ನೋಡಿದ ಒಬ್ಬಿಬ್ಬರು ಮುಂದೆ ಹೋದ ಬಳಿಕ ತಿರುಗಿ ನೋಡುತ್ತಿದ್ದರು.
ಗಂಭೀರನಾಗಿ ಕಾಣುತ್ತಿದ್ದ ಮನುಷ್ಯನೊಬ್ಬ ಕನ್ನಡಕವನ್ನು ಸರಿಪಡಿಸುತ್ತ ಆ ಹಾದಿಯಲ್ಲಿ ಎರಡು ಬಾರಿ ಸುಳಿದ, ಕಾಣಿ ಎದ್ದು ನಿಂತು ಸರ್ಕಲಿನಿಂದ ಹೊರಕ್ಕೆ ಬಯಲಿನತ್ತ ನಡೆದಳು- ಎಲ್ಲೋ ಮರದತ್ತ. ಯಾವುದೋ ಪೊದೆಯ ಬಳಿಗೆ. ಆ ಮನುಷ್ಯ ಹಿಂದೆ ಮುಂದೆ ನೋಡುತ್ತಾ ಆಕೆಯನ್ನು ಹಿಂಬಾಲಿಸಿದ.
…ಮರುದಿನ ಕಾಗದದ ಚೂರನ್ನು ಕೊಟ್ಟರೆ ತಿಂಡಿಯೂ ಬರುವುದು, ಊಟವೂ ಬರುವುದು, ಚಿಲ್ಲರೆ ಕಾಸೂ ವಾಪಸು ಬರುವುದು, ಎಂದು ಕಾಣಿ ಕಲಿತಳು. ಎಷ್ಟು ವಾಪಸು ಬರುತ್ತಿತ್ತೊ ಏನು ಕತೆಯೋ- ಅಷ್ಟೆಲ್ಲ ಜ್ಞಾನವಿರಲಿಲ್ಲ ಆಕೆಗೆ.
ಅಂದಿನಿಂದ ಹಗಲು ಅಲೆದಾಟ, ಸಂಜೆ ಸರ್ಕಲಿನಲ್ಲಿ ಒಂದೋ ಎರಡೋ ಪರಿಚಯ; ಸಮೀಪದ ಹುಲ್ಲುಗಾವಲಿನ ಹಾಸಿಗೆಯಲ್ಲಿ ಆಕೆಯೇ ಒಂದು ಸಾರಿಯೋ ಎರಡು ಮೂರು ಸಾರಿಯೋ ಸಾಯುವುದು- ಸತ್ತು ಜೀವಿಸುವುದು.
ಜೀವಿಸಿ ಮತ್ತೆ ಮಾರನೆದಿನ ರಾತ್ರಿ ಸಾಯುವುದು.
ಹಾಗೆಯೇ ಕಾಲ ಕಳೆಯಿತು…
ಇದನ್ನು ಓದಿದ್ದೀರಾ?: ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ
ಎಂಥೆಂಥವರೆಲ್ಲ ಆಕೆಯ ಬಳಿಗೆ ಬರುತ್ತಿದ್ದರೋ ಆಕೆಗೆ ತಿಳಿಯದು. ಕುಡುಕ ‘ಲಫಂಗ’ರಿರಬಹುದು; ದಿಕ್ಕುಗೆಟ್ಟ ಭ್ರಮರ ಜೀವನದ ವಿಲಾಸಿಗಳಿರಬಹುದು; ಹಗಲೆಲ್ಲ ಸಾಂಪ್ರದಾಯಿಕ ಬುದ್ಧಿಮತ್ತೆಯ ಸೋಗು ಧರಿಸುವ ಕಾಮುಕರಿರಬಹುದು. ಮನೆಯ ಅತೃಪ್ತಿಯನ್ನು ಹೋಗಲಾಡಿಸುವ ದಾಹಿಗಳಿರಬಹುದು… ಆಕೆಗೆ ತಿಳಿಯದು, ಮಾತು ಬರುತ್ತಿದ್ದರೆ, ಏನಾದರೂ ಅರ್ಥವಾಗುತ್ತಿತ್ತೋ ಏನೋ. ಮುಖ ನೋಡಿದರೆ ಅದರ ಹಾವಭಾವದಿಂದ ಸ್ವಲ್ಪವಾದರೂ ತಿಳಿಯುವುದು ಆಕೆಗೆ. ಆದರೆ ಆ ರಾತ್ರೆ ಹೊತ್ತಿನಲ್ಲಿ ಬಂದವರ ಮುಖ ಕಾಣುವುದೇನು ಬಂತು?
ಇದು ಮಾನವೀಯವೆ? ಪಾಶವಿಕವೆ? ಎಂಬುದೂ ಆಕೆಗೆ ತಿಳಿಯದು. ಪ್ರೇಮ-ಕಾಮಗಳ ವಿಚಾರವನ್ನು ಬಲ್ಲವಳಲ್ಲ ಆಕೆ. ಎಳೆ ಮೀಸೆಯವರಿರಲಿ-ಮುದುಕರಿರಲಿ, ಆಕೆಗೆರಡೂ ಸಮವೇ. ದೇಹ ಬಳಲಿದಾಗ ಆಕೆ ನರಳುವಳು. ನೋವಾದಾಗ ಗಂಟಲಿನಿಂದ ಅರ್ಥವಾಗದ ವಿಕೃತ ಸ್ವರ ಹೊರಡಿಸುವಳು…
ತಾನು ಮೂಕಿ, ಮೂಕಿಯಿಂದ ತೃಪ್ತಿ ಬಯಸುವವರ ಮನಸ್ಸಿನಲ್ಲಿ ಏನೇನು ಅನುಭವಗಳಾಗುತ್ತವೆಂಬುದೂ ಗೊತ್ತಿಲ್ಲ ಕಾಣಿಗೆ. ನಡೆಯುವುದೆಲ್ಲ ಯಾಂತ್ರಿಕ ವ್ಯವಹಾರ. ಆಕೆಯೊಂದು ಉಸಿರಾಡುವ ಯಂತ್ರ.
*
ಮಳೆ ಬಲವಾಯಿತು. ಗಿರಾಕಿಗಳು ಬರಲಿಲ್ಲ. ಆಗಾಗ್ಗೆ ಸಂಪಾದನೆ ಕಡಿಮೆಯಾಯಿತು. ಜೀವ ಸಣ್ಣಗಾಯಿತು. ಕಾಣಿ ಬಡಕಲಾದಳು. ತಾನೇ ಎದ್ದು ಜನರಿದ್ದೆಡೆಗೆ ಹೋಗಿ ಅವರ ಸುತ್ತ ಮುತ್ತು ಸುಳಿಯಲಾರಂಭಿಸಿದಳು.
ಕೆನ್ನೆಗಳು ಗುಳಿಬಿದ್ದುವು; ಕಣ್ಣು ಕೆಳಕ್ಕಿಳಿಯಿತು. ಜ್ವರ ಬರತೊಡಗಿತು.
ಮತ್ತಷ್ಟು ಹೆಚ್ಚು ಸಿಂಗಾರ ಮಾಡಿಕೊಂಡಳಾಕೆ.
ಆಕೆ ದೂರದಲ್ಲಿ ಬಳಕುತ್ತ ನಡೆಯುತ್ತಿದ್ದರೆ, ಆ ಉಣ್ಣೆ ಕೋಟನ್ನು ಧರಿಸಿದ್ದರೆ, ತಲೆಗೆ ಹೂ ಮುಡಿದಿದ್ದರೆ, ಸುಮಾರಾಗಿ ಕಾಣಿಸುತ್ತಿದ್ದಳು. ಆದರೆ ಹತ್ತಿರದಲ್ಲಿ ಮುಖವಿಟ್ಟು ನೋಡಿದರೆ, ಎರಡು ಕಣ್ಣುಗಳಲ್ಲಿ ಎರಡು ದೆವ್ವಗಳು ನರ್ತಿಸುತ್ತಿದ್ದಂತೆ ತೋರುತ್ತಿತ್ತು.
ಇದನ್ನು ಓದಿದ್ದೀರಾ?: ದೇವುಡು ಅವರ ಕತೆ | ಮೂರು ಕನಸು
ಕೆಲವು ಪುಂಡರು ಆಕೆ ಮಲಗುತ್ತಿದ್ದ ಶಾಲೆಗೇ ಬರುತ್ತಿದ್ದರು ರಾತ್ರಿ ಹೊತ್ತು. ಆದರೆ ಪುಡಿಕಾಸು ಬಿಚ್ಚುತ್ತಿರಲಿಲ್ಲ. ಆಕೆ ಜಗಳಾಡುತ್ತಿದ್ದಳು. ಆದರೂ ಪೀಡಿಸಿ ಬಲಾತ್ಕರಿಸುತ್ತಿದ್ದರು. ಅವರ ನಗೆಯೋ- ವಿಕಟ ಅಟ್ಟಹಾಸಗಳೋ! ಕಾಣಿ ಪ್ರತಿಭಟನೆ ವಿಫಲವಾದಾಗ ತೇಕುತ್ತ ತೇಕುತ್ತ ಆದದ್ದಾಗಲೆಂದು ತಲೆಬಾಗುತ್ತಿದ್ದಳು.
ಜ್ವರ ಹೆಚ್ಚಿತು. ಕೆರೆಯಲ್ಲಿ ಸ್ನಾನ ಮಾಡಬೇಡವೆಂದು ಆಕೆಯ ಮನಸ್ಸು ಹೇಳಿದಂತಾಯಿತು.
ಚರ್ಮಕ್ಕೇನೋ ರೋಗ ಬಡಿಯಿತು. ಯುವತಿ ಕಾಣಿ ತುಂಬ ನರಳಾಡಿದಳು.
ಮೈಯಿಂದ ಕೆಟ್ಟ ವಾಸನೆ ಬರತೊಡಗಿತು.
ಕಾಣಿ ಇರುವ ತಾಣ ಬದಲಿಸಿದಳು. ಒಂದು ಫರ್ಲಾಂಗಿನಾಚೆ ಇದ್ದ ಮುರುಕು ಮನೆಯೊಂದರ ಬಳಿಗೆ ಹೋದಳು. ಅಲ್ಲೊಬ್ಬ ನಡುವಯಸ್ಸಿನ ಭಿಕ್ಷುಕ ತನ್ನ ಅರಮನೆ ಕಟ್ಟಿಕೊಂಡಿದ್ದ.
ಆತ ಮೂರುದಿನ ಅವಳಿಗಿಷ್ಟು ಗಂಜಿ ನೀಡಿದ.
ಆಕೆ, ಮುರಿದಿದ್ದ ಮಾಡಿನೆಡೆಯಿಂದ ಆಕಾಶದತ್ತ ಬಿರಬಿರನೆ ನೋಡುತ್ತ ಮಲಗಿದಳು.
ನಾಲ್ಕನೆಯ ದಿನ ಜ್ವರ ಸ್ವಲ್ಪ ವಾಸಿ ಎಂದು ತೋರುತ್ತಿತ್ತು. ಆಕೆ ಎದ್ದು ಕುಳಿತಳು. ಆ ಭಿಕ್ಷುಕ, ಆಶೆಯಿಂದ ಅವಳ ಕಡೆ ನೋಡಿದ. ಆಕೆಯ ಮುಖದ ಮೇಲೆ ಯಾವ ಭಾವನೆಯೂ ಇರಲಿಲ್ಲ. ಇಂಥ ಭಾವನೆಗಳನ್ನು ಅನುಭವಿಸುವ ಸಾಮರ್ಥ್ಯವೆಲ್ಲ ಆಕೆಯಲ್ಲಿ ನಶಿಸಿ ಹೋಗಿತ್ತು. ಆತ ಆ ದಿನ ಭಿಕ್ಷವೆತ್ತುವುದಕ್ಕೂ ಹೋಗದೆ ಅವಳೊಡನೆಯೇ ಇದ್ದು ಬಿಟ್ಟ. ರೋಗಪೀಡಿತವಾಗಿದ್ದ ಆತನ ದೇಹ, ಬಹಳ ದಿನಗಳ ಬಯಕೆಯನ್ನು ಈಡೇರಿಸಹೊರಟಿತ್ತು.
ಸಂಜೆ ಕಾಣಿ, ತನ್ನ ಕರಿಯ ಕೋಟನ್ನು ಹೊದ್ದುಕೊಂಡು, ನಿಧಾನವಾಗಿ ನಡೆಯುತ್ತ ಹುಲ್ಲುಗಾವಲನ್ನು ದಾಟಿ, ಸರ್ಕಲಿನತ್ತ ಹೋಗಿ, ಕತ್ತಲೆ ಇದ್ದ ಆ ಒಂದು ಮೂಲೆಯಲ್ಲಿ ನಿಂತಳು. ಆಕೆಗೆ ಬವಳಿ ಬಂದಹಾಗಾಗುತ್ತಿತ್ತು. ಊರಿನ ಹೊಲ, ತಾಯಿ-ತಂದೆ, ಮೊಂಡು ಕೈಯ ಜತೆಗಾರ- ಇವರೆಲ್ಲ ಕಣ್ಣ ಮುಂದೆ ಬಂದ ಹಾಗಾಯಿತು. ಕೂಲಿಯಾಗಲೆಂದು ಮದರಾಸಿಗೆ ಹೋದ ಅಣ್ಣನೂ, ಜಗಳಾಡಿ ಮನೆ ಬಿಟ್ಟ ತಮ್ಮನೂ ಎದುರಿನಲ್ಲಿ ನಿಂತು ‘ಕಾಣೀ’ ಎಂದು ಕರೆದಹಾಗಾಗುತ್ತಿತ್ತು… ಹೃದಯವೆಲ್ಲ ನೋವಿನಿಂದ ತುಂಬಿತು…
ಇದನ್ನು ಓದಿದ್ದೀರಾ?: ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ
ಬಹಳ ಹೊತ್ತು ನಿಂತಿರಲಾರದೆ ಆಕೆ ಅಲ್ಲಿಯೇ ಮೂಲೆಯಲ್ಲಿ ಕುಸಿದು ಕುಳಿತಳು. ದೂರದಲ್ಲಿ ಕಡಲೆಕಾಯಿ ಮಾರುವಾತನ ಕಾಗದದೊಳಗಿನ ದೀಪ ಬಾ ಎನ್ನುತ್ತಿತ್ತು. ಆದರೆ ಪುಡಿಕಾಸಿರಲಿಲ್ಲ. ಕೈ ಚಾಚಿ ಬಾಚಿ ಕಡಲೆಕಾಯಿ ಒಯ್ದುಬಿಡಬೇಕೆಂದು ತೋರಿತು. ಆದರೆ ಸಾಮರ್ಥ್ಯವಿರಲಿಲ್ಲ.
“ಗಂಟೆ ಒಂದು ಕಳೆಯಿತು- ಒಂದೂವರೆಯಾಯಿತು. ಕಾರಂಜಿಯ ಬಳಿ ಕುಳಿತವರೆಲ್ಲ ಒಬ್ಬೊಬ್ಬರಾಗಿ ಮನೆಯ ಕಡೆ ಹೊರಟರು. ಕಾಣಿ ಒಬ್ಬೊಬ್ಬರನ್ನೇ ಆಸೆಯ ದೃಷ್ಟಿಯಿಂದ ನೋಡಿದಳು.
ಕೊನೆಗೊಬ್ಬ ಬಂದು ದೂರದಲ್ಲಿ ನಿಂತ. ಧಾಂಡಿಗ ದೇಹ, ಪೋಲಿ ಸ್ವರೂಪಿ, ತೋಳು ಬೀಸಿ ಸನ್ನೆ ಮಾಡಿದ. ಆಕೆ ಎದ್ದುನಿಂತು ಪ್ರಯಾಸದಿಂದ ಕಾಲೆಳೆದುಕೊಂಡು ಆತನನ್ನು ಹಿಂಬಾಲಿಸಿದಳು.
ಆತ ಯಾವನೋ ಹೊಸಬ. ಅಲ್ಲೇ ಪೊದರಿನಾಚೆ ಆಕೆಯನ್ನಾತ ಕೆಡವಿದ. ‘ಗೊರಕ್’ ಎಂದಳು ಕಾಣಿ…
…ಸಿಡಿಮಿಡಿಕೊಂಡು ಆತ ಎದ್ದುನಿಂತು ಮೈ ಕೊಡವಿದ. ‘ಥುತ್’! ಎಂದು ಹೊರಟ.
ಕಾಸು ಕೊಡಲಿಲ್ಲ.
ಕಾಣಿ ಆರ್ತನಾದ ಮಾಡುವಂತೆ ಬಾಯಿ ತೆರೆದಳು; ಆದರೆ ಸ್ವರ ಹೊರಡಲಿಲ್ಲ. ಏಳಬೇಕೆಂದು ಮತ್ತೊಮ್ಮೆ ಪ್ರಯತ್ನಿಸಿದಳು; ಸಾಧ್ಯವಾಗಲೇ ಇಲ್ಲ.
ಆತ ಬೇಗಬೇಗನೆ ಹೆಜ್ಜೆ ಇಡತೊಡಗಿದ.
ಹೆತ್ತ ಎಳೆಗೂಸನ್ನು ಕಸಿದೊಯ್ಯುವ ಪಾಪಿಯ ಬೆನ್ನಟ್ಟುವಂತೆ ಆಕೆ ಓಡಿದಳು.
‘ಲೊಬೊಲೊಬೊ’ ಎಂದಾಕೆ ಬೊಬ್ಬಿಟ್ಟಳು. ‘ಯವವಾ ತಕಕಾ ಅಆ’ ಎಂದು ಚೀರಿದಳಾಕೆ.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಈತ ದುಡ್ಡು ಕೊಡದೆ ಓಡುತ್ತಿದ್ದಾನೆ; ಆಕೆ ತನ್ನ ಭಾಷೆಯಲ್ಲಿ ನ್ಯಾಯ ಮೀರಿ ವರ್ತಿಸಬೇಡವೆಂದು ಕೇಳುತ್ತಿದ್ದಾಳೆ. ನಾಳೆಯ ಒಂದು ತುತ್ತು ಅನ್ನ ಕಸಿಯಬೇಡವೆಂದು ಮೊರೆಯಿಡುತ್ತಿದ್ದಾಳೆ.
ಈತ ಗಾಬರಿಯಾಗಿ ನಿಂತು ನೋಡಿದ. ಜನರಿನ್ನೂ ಇದ್ದರು. ಅವರಿಗೆ ಕೇಳಿಸಬಹುದು. ಯಾರಾದರೂ ತನ್ನ ಬೆನ್ನಟ್ಟಬಹುದು…
ಆ ಆಸಾಮಿ ಥಟಕ್ಕನೆ ಹಿಂತಿರುಗಿದ. ಆಕೆಯ ಗಂಟಲಿಗೆ ಕೈಹಾಕಿ ಹಿಸುಕಿ ನೆಲಕ್ಕುರುಳಿಸಿದ. ‘ಹೊಲಸು ರಂಡೆ!’ ಎಂದು ಶಪಿಸಿದ. ಆಕೆಯ ಹೊಟ್ಟೆಗೆ ಬೂಟುಗಾಲಿನಿಂದ ಒದೆದ.
ಕಾಣಿ ಹಾಗೆಯೇ ಬಿದ್ದುಕೊಂಡಳು… ಗಂಟಲಲ್ಲಿ ಏನೋ ಸ್ವರ ಬರುತ್ತಿತ್ತು. ಆದರೆ ಅದು ಹೊರಗೆ ಕೇಳಿಸುತ್ತಿರಲಿಲ್ಲ.
ಉಸಿರಾಡುತ್ತಿತ್ತು… ಮೆಲ್ಲಮೆಲ್ಲನೆ… ನಿಂತು ನಿಂತು… ನಿಧಾನವಾದ ಉಸಿರು… ಕೊನೆಯ ಒಂದೆರಡು ಉಸಿರಾಟ.
*
ಬೆಳಗಾಯಿತು.
…ಸೂರ್ಯ ಮೇಲಕ್ಕೆ ಬಂದಂತೆ ಕಾವೇರತೊಡಗಿತು. ಸರ್ಕಲನ್ನು ಹಾದು ಹೋಗಲೇಬೇಕಾದವರು, ಭೀತಿಯಿಂದೊಮ್ಮೆ ಎಡಕ್ಕೆ ಕಣ್ಣು ಹೊರಳಿಸಿ, ಮತ್ತೆ ತಲೆ ಕೆಳಗೆ ಮಾಡಿ, ಸರಸರನೆ ನಡೆದುಹೋಗುತ್ತಿದ್ದರು.
ಎಲ್ಲರೂ ಚಲಿಸುತ್ತಲೇ ಇದ್ದರು. ನಿಲ್ಲುವವರು ಯಾರೂ ಇರಲಿಲ್ಲ…
…ಪೌರಸಭೆಯ ವ್ಯಾನು ಬಂದು ಕಳೇಬರವನ್ನು ಒಯ್ಯುವುದೆಂದು ಯಾರೋ ಹೇಳುತ್ತಿದ್ದರು.
ಕಾಣಿಯ ದೇಹದ ಮೇಲೆ ಎತ್ತರದಲ್ಲಿ ಗಿಡುಗವೊಂದು ಸುತ್ತು ಸುತ್ತು ಬರುತ್ತಿತ್ತು.
ಅದನ್ನೇ ನೋಡುತ್ತಿದ್ದ ಹಾಗೆ ಕಣ್ಣರಳಿಸಿ ಕಾಣಿ ಮಲಗಿದ್ದಳು.
ಸುತ್ತು ಬರುತ್ತಲೇ ಇತ್ತು ಗಿಡುಗ, ಕೆಳಗೆ ನೋಡುತ್ತ.
-ಕೊನೆಯ ಗಿರಾಕಿ.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)
