“ಸರ್ವೋಚ್ಛ ನ್ಯಾಯಾಲಯದ (ಸುಪ್ರೀಂ ಕೋರ್ಟ್) ನಿರ್ದೇಶನದಂತೆ ಜುಲೈ 1 ರಿಂದ ಅಕ್ಟೋಬರ್ 7ನೇ ತಾರೀಖಿನ ವರೆಗೆ ಚಿತ್ರದುರ್ಗ ಜಿಲ್ಲೆಯ ನ್ಯಾಯಾಲಯಗಳಲ್ಲಿ 90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನ ನಡೆಸಲಾಗುತ್ತಿದೆ. ಇದಕ್ಕಾಗಿ 1015 ಪ್ರಕರಣಗಳನ್ನು ಗುರುತಿಸಲಾಗಿದ್ದು, 51 ನುರಿತ ಮಧ್ಯಸ್ಥಿಕೆದಾರರು ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಪಕ್ಷಗಾರರಿಗೆ ಕಾನೂನಾತ್ಮಕ ಸಹಕಾರ ನೀಡಲಿದ್ದಾರೆ. ಈಗಾಗಲೇ 18 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ” ಎಂದು ಚಿತ್ರದುರ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರೋಣ ವಾಸುದೇವ್ ತಿಳಿಸಿದರು.
ಚಿತ್ರದುರ್ಗ ನಗರದ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ವಿಶೇಷ ಮಧ್ಯಸ್ಥಿಕೆ ಅಭಿಯಾನ ಹಾಗೂ ಮುಂಬರುವ ಸೆಪ್ಟೆಂಬರ್ 13ರಂದು ಜರುಗಲಿರುವ ರಾಷ್ಟ್ರೀಯ ಲೋಕ ಅದಾಲತ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
“ಜಿಲ್ಲಾ ಹಾಗೂ ತಾಲ್ಲೂಕು ಹಂತದ ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿರುವ ಕೌಟುಂಬಿಕ, ವೈವಾಹಿಕ, ಅಪಘಾತ ವಿಮಾ, ಚೆಕ್ ಅಮಾನ್ಯ, ಕಮರ್ಷಿಯಲ್ ಡಿಸ್‍ಪ್ಯೂಟ್, ಗ್ರಾಹಕರ ವ್ಯಾಜ್ಯಗಳು, ಸಾಲ ವಸೂಲಾತಿ, ಆಸ್ತಿ ವಿಭಾಗ, ಭೂಸ್ವಾಧೀನ ಸೇರಿದಂತೆ ಎಲ್ಲಾ ರೀತಿಯ ಸಿವಿಲ್ ಸ್ವರೂಪದ ಪ್ರಕರಣಗಳನ್ನು ಮಧ್ಯಸ್ಥಿಕೆ ಮುಖಾಂತರ ಇತ್ಯರ್ಥ ಪಡಿಸಿಕೊಳ್ಳಲು ಪಕ್ಷಗಾರರಿಗೆ ಸೂಕ್ತ ಮಾರ್ಗದರ್ಶನ ಮತ್ತು ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತಿದೆ. ಮಧ್ಯಸ್ಥಿಕೆದಾರರ ಸಮಕ್ಷಮ ಪಕ್ಷಗಾರರು ಮಾಡಿಕೊಂಡ ರಾಜಿ ಒಡಂಬಡಿಕೆ ಹಾಗೂ ಒಪ್ಪಂದಗಳು ಕಾನೂನಾತ್ಮಕವಾಗಿ ನ್ಯಾಯವಾಗಿವೆಯೇ ಎಂಬುದನ್ನು ಪರಾಮರ್ಶಿಸಿ ನ್ಯಾಯಾಲಯದಿಂದ ಅಧಿಕೃತ ಮೊಹರು ಹಾಕುವ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು” ಎಂದು ತಿಳಿಸಿದರು

“ಹೊಸದಾಗಿ ಮದುವೆಯಾದ ದಂಪತಿಗಳಲ್ಲಿ ಹೊಂದಾಣಿಕೆ ಕೊರತೆ ಹಿರಿಯರ ಮಾರ್ಗದರ್ಶನದ ಕೊರತೆಯಿಂದ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿ ವಿಚ್ಛೇದನದ ಹಂತಕ್ಕೆ ತಲುಪುತ್ತಿದ್ದಾರೆ” ಎಂದು ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ್ ಕಳವಳ ವ್ಯಕ್ತಪಡಿಸಿದರು.
“ನ್ಯಾಯಾಲಯಗಳಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ ಜೋಡಿಗಳಲ್ಲಿ ಪ್ರತಿ ಲೋಕ ಅದಾಲತ್‌ನಲ್ಲಿ ಸುಮಾರು 8 ರಿಂದ 10 ಜೋಡಿಗಳನ್ನು ಪುನಃ ಒಂದಾಗಿ ಸೇರಿಸುವಲ್ಲಿ ಯಶಸ್ವಿಯಾಗಲಾಗಿದೆ. ವಿಚ್ಛೇದನ ಪ್ರಕರಣಗಳ ಜೊತೆಗೆ ಜೀವನಾಂಶ, ಕೌಟುಂಬಿಕ ದೌರ್ಜನ್ಯ ಹಾಗೂ ವರದಕ್ಷಿಣಿ ಪ್ರಕರಣಗಳೂ ತಳುಕು ಹಾಕಿಕೊಂಡಿವೆ” ಎಂದು ಅವರು ತಿಳಿಸಿದ್ದಾರೆ.
“ವ್ಯಾಜ್ಯಪೂರ್ವ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದ್ದು, ಬ್ಯಾಂಕ್, ಬಿ.ಎಸ್.ಎನ್.ಎಲ್, ಬೆಸ್ಕಾಂ ಹಾಗೂ ನಗರಸಭೆ ಸಂಬಂಧಿತ ಪ್ರಕರಣಗಳು ಹೆಚ್ಚಿವೆ. ಕೆಲವೊಮ್ಮೆ ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಸಾಲ ಮರುಪಾವತಿ ಹಾಗೂ ಬಿಲ್ ಪಾವತಿಯಲ್ಲಿ ರಿಯಾಯಿತಿ ದೊರೆಯುತ್ತಿದೆ. ಈ ಮೂಲಕ ಸಾರ್ವಜನಿಕರೊಂದಿಗೆ ಸರ್ಕಾರಿ ಸಂಸ್ಥೆಗಳಿಗೆ ಸಹ ಅನುಕೂಲವಾಗುತ್ತಿದೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ನಿರಂತರ ಶ್ರಮಿಸುತ್ತಿದೆ. ಜೋಡಿ ಚಿಕ್ಕೇನಹಳ್ಳಿಗೆ ಬಸ್ ಸೌಲಭ್ಯವಿಲ್ಲದಿರುವ ಬಗ್ಗೆ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರ ಸೂಚನೆಯ ಮೇರೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಆರಂಭಿಸಲಾಗಿದೆ” ಎಂದು ತಿಳಿಸಿದರು.
“ಮುಂಬರುವ ಸೆಪ್ಟೆಂಬರ್ 13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ಮುಂಚಿನ ಲೋಕ ಅದಾಲತ್‌ನಲ್ಲಿ 50,000ಕ್ಕೂ ಅಧಿಕ ನ್ಯಾಯಾಲಯದಲ್ಲಿದ್ದ ಪ್ರಕರಣಗಳಲ್ಲಿ 4,321 ಪ್ರಕರಣಗಳು ಹಾಗೂ 99,272 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು 1,03,593 ಪ್ರಕರಣಗಳು ವಿಲೇವಾರಿಯಾಗಿವೆ. ವಿಚ್ಛೇದನ ಅರ್ಜಿ ಸಲ್ಲಿಸಿದ್ದ 6 ಜೋಡಿಗಳನ್ನು ಒಂದಾಗಿಸಲು ಸಾಧ್ಯವಾಯಿತು. ಪಕ್ಷಗಾರರು ವಿಶೇಷ ಮಧ್ಯಸ್ಥಿಕೆ ಅಭಿಯಾನ ಹಾಗೂ ಲೋಕ ಅದಾಲತ್‌ನ ಸದುಪಯೋಗ ಪಡೆದುಕೊಂಡು ಯಾವುದೇ ಶುಲ್ಕವಿಲ್ಲದೆ ತಮ್ಮ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿಸಿಕೊಳ್ಳಬಹುದಾಗಿದೆ. ಕಕ್ಷಿದಾರರು ನೇರವಾಗಿ ಅಥವಾ ವಕೀಲರ ಮೂಲಕ ಪಾಲ್ಗೊಳ್ಳಬಹುದಾಗಿದೆ” ಎಂದು ನ್ಯಾಯಾಧೀಶರು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಚಿರತೆ ದಾಳಿ, ಆಹಾರಕ್ಕಾಗಿ ಕುರಿಗಳ ಮಾರಣಹೋಮ; 27 ಕುರಿ ಬಲಿ
“ಸಾರ್ವಜನಿಕರು ಲೋಕ ಅದಾಲತ್ ಕುರಿತು ಹೆಚ್ಚಿನ ಪ್ರಶ್ನೆ ಮತ್ತು ಮಾಹಿತಿಗಾಗಿ ಬೇಕಾದಲ್ಲಿ ಇ-ಮೇಲ್ dlsachitradurga3@gmail.com ಹಾಗೂ ಟೋಲ್ ಪ್ರೀ ಸಂಖ್ಯೆ 15100 ಸಂಪರ್ಕಿಸಬೇಕು” ಎಂದು ನ್ಯಾಯಾಧೀಶ ರೋಣ ವಾಸುದೇವ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹಾಜರಿದ್ದರು.