ತಮಿಳುನಾಡಿನಲ್ಲಿ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳು ಜಾತಿ ಹಿಂಸಾಚಾರದ ಮೂಲವನ್ನು ಎದುರಿಸುವಲ್ಲಿ ವಿಫಲವಾಗಿವೆ. ಜಾತಿ ತಾರತಮ್ಯವು ಈಗ ಗುರುತು, ಹಿರಿಮೆ ಎಂಬ ಭೀಕರ ಸ್ವರೂಪವನ್ನು ಪಡೆದುಕೊಂಡಿದೆ. ಪೊಲೀಸ್ ಮತ್ತು ಸ್ಥಳೀಯ ಆಡಳಿತದೊಳಗಿನ ಪ್ರಬಲ ಜಾತಿಯ ಪ್ರಭಾವ ಹೆಚ್ಚಿರುವುದರಿಂದ, ಜಾತಿ ಆಧಾರಿತ ಸಾಮೂಹಿಕ ಹತ್ಯಾಕಾಂಡಗಳು ನಡೆಯುತ್ತಲೇ ಇವೆ.
ತಮಿಳುನಾಡಿನ ತೂತುಕುಡಿ ಜಿಲ್ಲೆಯ ಅರುಮುಗಮಂಗಲಂನಲ್ಲಿ ಇರುವ ದಲಿತೆ ತಮಿಳ್ಸೆಲ್ವಿ ಅವರ ಮನೆಗೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಇತ್ತೀಚೆಗೆ ಭೇಟಿ ನೀಡಿದ್ದರು. ಆಗ, ಆಕೆ ಯಾವುದೇ ಹಾವ-ಭಾವಗಳಿಲ್ಲದೆ, ಮೌನವಾಗಿ ಕುಳಿತಿದ್ದರು. ಆಕೆ ದಣಿದಿದ್ದರು, ಅಸಹಾಯಕರಾಗಿದ್ದರು, ದಿಕ್ಕುತೋಚದಂತಾಗಿದ್ದರು. ಯಾಕೆಂದರೆ, ಜುಲೈ 27ರಂದು ಆಕೆಯ 27 ವರ್ಷದ ಹಿರಿಯ ಮಗ, ಐಟಿ ಇಂಜಿನಿಯರ್ ಕೆವಿನ್ ಸೆಲ್ವಗಣೇಶ್ ಅವರು ತಿರುನೆಲ್ವೇಲಿಯಲ್ಲಿ ಕ್ರೂರವಾಗಿ ಕೊಲೆಯಾಗಿದ್ದರು. ಅಂದಿನಿಂದ ಆಕೆ ಊಟ ಮಾಡಿರಲಿಲ್ಲ.
ತಿರುನೆಲ್ವೇಲಿಯಲ್ಲಿ ಕೆವಿನ್ ಮೃತದೇಹ ದೊರೆತಾಗ, ಆತನ ಮುಖದ ಮೇಲೆ ಗಂಭೀರ ಗಾಯಗಳಾಗಿದ್ದವು. ಒಂದು ಕಣ್ಣು ಕಿತ್ತು ಹಾಕಲಾಗಿತ್ತು. ಆತನ ಮುಖವು ಗುರುತಿಸಲಾಗದಷ್ಟು ವಿರೂಪಗೊಂಡಿತ್ತು. ಆತನ ಹತ್ಯೆಯು ಜಾತಿ ಪ್ರತಿಷ್ಠೆ ಮತ್ತು ಗೌರವದ ಹೆಸರಿನಲ್ಲಿ ಪದೇ ಪದೇ ನಡೆಯುತ್ತಲೇ ಇರುವ ಭೀಕರ ‘ಮರ್ಯಾದಾಗೇಡು ಹತ್ಯೆʼ.
ಅಂತರ್ಜಾತಿ ಪ್ರೀತಿಯ ಕಾರಣಕ್ಕಾಗಿ ಕೆವಿನ್ ಸೆಲ್ವಗಣೇಶ್ ಅವರನ್ನು ಪ್ರಬಲ ಜಾತಿಯ ದುರುಳರು ಭೀಕರವಾಗಿ ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಮಗನನ್ನು ಕಳೆದುಕೊಂಡ ಕುಟುಂಬ ನ್ಯಾಯದ ನಿರೀಕ್ಷೆಯಲ್ಲಿ ಎದುರು ನೋಡುತ್ತಿದೆ.
“ಸುಭಾಷಿಣಿ (ಕೆವಿನ್ ಪ್ರೇಯಸಿ)- ಆಕೆಯ ಕುಟುಂಬದವರು ಒಪ್ಪದಿದ್ದರೂ, ಆಕೆ ನನ್ನ ಮಗನನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದರು. ಆಕೆಯ ಮಾತು ಕೇಳಿದಾಗಲೇ, ನನ್ನ ಮಗನಿಗೆ ಎದುರಾಗಬಹುದಾದ ಗಂಡಾಂತರವನ್ನು ನಾನು ಊಹಿಸಿದ್ದೆ,” ಎಂದು ತಮಿಳ್ಸೆಲ್ವಿ ಜರ್ಜರಿತರಾಗಿ ಹೇಳಿದ್ದಾಗಿ ಆಕೆಯ ಮನೆಗೆ ಭೇಟಿ ನೀಡಿದ್ದ ‘ದಿ ಪ್ರಿಂಟ್’ ವರದಿಯಾಗಿದೆ.
ಕೆವಿನ್ –ವೆಲ್ಲಾಳರ್ ಎಂಬ ದಲಿತ ಸಮುದಾಯಕ್ಕೆ ಸೇರಿದವರು. ಈ ಸಮುದಾಯವನ್ನು ಪಲ್ಲರ್ ಎಂದೂ ಕರೆಯಲಾಗುತ್ತದೆ. ಕೆವಿನ್ ಮತ್ತು ಪ್ರಬಲ ಜಾತಿ, ‘ಮೋಸ್ಟ್ ಬ್ಯಾಕ್ವರ್ಡ್ ಕಾಸ್ಟ್’ (ಎಂಬಿಸಿ) ಮರವಾರ್/ತೇವರ್ ಸಮುದಾಯದ ಸುಭಾಷಿಣಿ ಪರಸ್ಪರ ಪ್ರೀತಿಸುತ್ತಿದ್ದರು. ಆ ಕಾರಣಕ್ಕಾಗಿಯೇ, ಕೆವಿನ್ನನ್ನು ಸುಭಾಷಿಣಿಯ ಸಹೋದರ ಸೂರ್ಜಿತ್ (23) ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಕೆವಿನ್ನ ಸಾವಿನ ಸಂದರ್ಭಗಳು ಮತ್ತು ಅದು ಹೇಗೆ ಸಂಭವಿಸಿತು ಎಂಬುದು ತಮಿಳುನಾಡಿಗೆ ಸಾಕಷ್ಟು ಪರಿಚಿತವಾದ ಒಂದು ಮಾದರಿಯನ್ನೇ ಅನುಸರಿಸಿದೆ. ಈ ಪ್ರಕರಣದಲ್ಲಿ ರಾಜಕೀಯ ನಿರಾಕರಣೆ, ಪೊಲೀಸ್ ನಿರ್ಲಕ್ಷ್ಯ ಹಾಗೂ ಸಾಮಾಜಿಕ ದಬ್ಬಾಳಿಕೆಯ ಕಾರ್ಯತಂತ್ರ ಮುಂದುವರಿದಿದೆ.

ತಮಿಳುನಾಡು- ಜಾತಿ ಹಿಂಸಾಚಾರ ಮತ್ತು ಮರ್ಯಾದೆ ಹೆಸರಿನ ‘ಮರ್ಯಾದಾಗೇಡು ಕೊಲೆʼಗಳು ಎಗ್ಗಿಲ್ಲದೆ ನಡೆಯುವ ರಾಜ್ಯ. ಅಂತರ್ಜಾತಿ ಪ್ರೀತಿಯ ಕಾರಣಕ್ಕಾಗಿ ತಮ್ಮದೇ ಮಕ್ಕಳನ್ನು ಅಥವಾ ಅವರ ಪ್ರೇಮಿಗಳನ್ನು ಅಮಾನವೀಯವಾಗಿ ಕೊಲ್ಲುವ ಕೃತ್ಯಗಳಿಂದ ಕುಖ್ಯಾತಿ ಪಡೆದಿದೆ. ಅದೇ ರಾಜ್ಯದಲ್ಲಿ ಈಗ, ಎಂಎನ್ಸಿ ಕಂಪನಿಯೊಂದರಲ್ಲಿ ಆರು ಅಂಕಿಗಳ (ಲಕ್ಷ ರೂ.) ವೇತನ ಪಡೆಯುತ್ತಿದ್ದ ಇಂಜಿನಿಯರ್ ಕೆವಿನ್ ಕೂಡ ಕೊಲೆಯಾಗಿದ್ದಾರೆ.
“ಜಾತಿಗ್ರಸ್ತ ಸಮಾಜದಲ್ಲಿ ದಲಿತರ ಮೇಲೆ ಹೇರುವ ರೂಢಿಗಳನ್ನು ಧಿಕ್ಕರಿಸಿದ್ದ. ಜಾತಿ ಮೀರಿ ಬದುಕ ಬಯಸಿದ್ದ. ಈಗ, ಅದೇ ಜಾತಿ ಕಾರಣಕ್ಕೆ ಆತ ಹತ್ಯೆಯಾಗಿದ್ದಾನೆ. ಆತನ ಕೊಲೆಯು ಅಸಮಾನತೆಯನ್ನು ಶ್ರೇಣೀಕರಿಸಲು ಬಯಸುವ ಮನಸ್ಥಿತಿ ಎಸಗಿದ ಕೃತ್ಯ” ಎಂದು ಹಿರಿಯ ಪತ್ರಕರ್ತೆ, ಲೇಖಕಿ ಜಯರಾಣಿ ಹೇಳಿದ್ದಾರೆ.
“2023ರಲ್ಲಿ ಚೆನ್ನೈನಲ್ಲಿದ್ದ ಕೆವಿನ್ ಅನಾರೋಗ್ಯಕ್ಕೆ ತುತ್ತಾಗಿ, ಊರಿಗೆ ಬಂದಿದ್ದ. ಆಗ, ಆತನನ್ನು ಭೇಟಿ ಮಾಡಲು ಸುಭಾಷಿಣಿ ನಮ್ಮ ತೂತುಕುಡಿಯಲ್ಲಿರುವ ಮನೆಗೆ ಬಂದಿದ್ದರು. ಆನಂತರ, ಆಕೆಯ ಪೋಷಕರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರಿಂದ, ಆಕೆ ಜೊತೆಗಿನ ಪ್ರೇಮ ಸಂಬಂಧವನ್ನು ತೊರೆಯುವಂತೆ ಕೆವಿನ್ಗೆ ಹೇಳಿದ್ದೆ” ಎಂದು ಕವಿನ್ ತಾಯಿ ತಮಿಳ್ಸೆಲ್ವಿ ಹೇಳುತ್ತಾರೆ.
“ಕೆವಿನ್ ನಮ್ಮ ನೆಚ್ಚಿನ ಸ್ನೇಹಿತ. ಆತ ಎಲ್ಲರನ್ನೂ ನಗಿಸುತ್ತಿದ್ದ. ಸುಭಾಷಿಣಿ ಮತ್ತು ಕೆವಿನ್ ಶಾಲಾ ದಿನಗಳಿಂದಲೂ ಆತ್ಮೀಯರಾಗಿದ್ದರು. ಅವನು ತಮ್ಮ ಸಂಬಂಧದ ಬಗ್ಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೂ, ಅವರ ಪ್ರೀತಿ ನಮಗೆ ಗೊತ್ತಿತ್ತು. ಆತ ಯಾವ ಕಷ್ಟದ ಹಾದಿಯಲ್ಲಿ ಹೋಗುತ್ತಿದ್ದಾನೆ ಎಂಬುದು ಮಾತ್ರ ನಮಗೆ ತಿಳಿಯದೇ ಹೋಯಿತು” ಎಂದು ಕೆವಿನ್ ಸ್ನೇಹಿತರೊಬ್ಬರು ಹೇಳಿದ್ದಾರೆ.
ಕೆವಿನ್ ಹತ್ಯೆಯ ದಿನ ಏನಾಯಿತು?
ಜುಲೈ 27ರಂದು ಅನಾರೋಗ್ಯಕ್ಕೆ ತುತ್ತಾಗಿದ್ದ ಅಜ್ಜನನ್ನು ಚಿಕಿತ್ಸೆಗಾಗಿ ತನ್ನ ಕ್ಲಿನಿಕ್ಗೆ ಕರೆದುಕೊಂಡು ಬರುವಂತೆ ಕೆವಿನ್ಗೆ ಸುಭಾಷಿಣಿ ಕರೆ ಮಾಡಿದ್ದರು ಎಂದು ತಮಿಳ್ಸೆಲ್ವಿ ಅವರು ಕರೆ ವಿವರಗಳನ್ನು ತೋರಿಸಿದ್ದಾರೆ.
“ಆ ವೇಳೆಗೆ, ತಮ್ಮ ಮನೆ ಬಳಿ ಬಂದ ಸೂರ್ಜಿತ್, ಸುಭಾಷಿಣಿಯ ಕ್ಲಿನಿಕ್ನಲ್ಲಿ ಆಕೆಯ ಪೋಷಕರು (ಇಬ್ಬರು ಪೊಲೀಸ್ ಅಧಿಕಾರಿಗಳು) ಕೆವಿನ್ ಜೊತೆ ಮಾತನಾಡಲು ಕಾಯುತ್ತಿದ್ದಾರೆ ಎಂದು ಹೇಳಿ, ತನ್ನೊಂದಿಗೆ ಬರುವಂತೆ ಕೆವಿನ್ನನ್ನು ಒತ್ತಾಯಿಸಿದ. ಸುಭಾಷಿಣಿಯೇ ಸೂರ್ಜಿತ್ನನ್ನು ಕಳಿಸಿರಬಹುದೆಂದು ನಾವು ಭಾವಿಸಿದ್ದೆವು. ಹೀಗಾಗಿ, ಸೂರ್ಜಿತ್ ಜೊತೆ ಕೆವಿನ್ ಹೊರಟ. ಬಳಿಕ, ನಾವು ಸುಭಾಷಿಣಿಗೆ ಕರೆ ಮಾಡಿ, ಮಾತನಾಡಿದೆವು” ಎಂದು ತಮಿಳ್ ಸೆಲ್ವಿ ವಿವರಿಸಿದ್ದಾರೆ.
ಬಳಿಕ, ತಮಿಳ್ ಸೆಲ್ವಿ ಅವರು, ಕೆವಿನ್ಗೆ ಕರೆ ಮಾಡಿದೆ. ಆದರೆ, ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಸುಭಾಷಿಣಿಯೂ ಕೆವಿನ್ಗೆ ಕರೆ ಮಾಡಲು ಪ್ರಯತ್ನಿಸಿದರು. ಆಕೆಯ ಸಂಪರ್ಕಕ್ಕೂ ಆತ ಸಿಗಲಿಲ್ಲ.
ತನ್ನ ಸಂಪರ್ಕಕ್ಕೆ ಸಿಗದ ಕೆವಿನ್ನನ್ನು ಹುಡುಕಲು ತನ್ನ ಸಂಬಂಧಿಕರು ಮತ್ತು ಕೆವಿನ್ನ ಸ್ನೇಹಿತರನ್ನು ಸಂಪರ್ಕಿಸಲು ಸೆಲ್ವಿ ತೀವ್ರವಾಗಿ ಪ್ರಯತ್ನಿಸಿದರು. ಕೆವಿನ್ ಮನೆಯಿಂದ ಹೊರಟ ಸುಮಾರು ಒಂದು ಗಂಟೆಯ ನಂತರ, ಒಬ್ಬ ಪೊಲೀಸ್ ಅಧಿಕಾರಿ ಸೆಲ್ವಿ ಅವರಿಗೆ ಕರೆ ಮಾಡಿ, ಕೆವಿನ್ ಸಾವಿನ ಸುದ್ದಿಯನ್ನು ತಿಳಿಸಿದರು.

ಕೆವಿನ್ನ ಮೃತದೇಹವನ್ನು ಸೂರ್ಜಿತ್ನ ತಂದೆ, ಸಬ್-ಇನ್ಸ್ಪೆಕ್ಟರ್ ಸರವಣನ್ ಮೊದಲು ಗುರುತಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
“ಕೆವಿನ್ನನ್ನು ಕೊಲೆ ಮಾಡಿದ್ದ ಸೂರ್ಜಿತ್, ಕೃತ್ಯ ನಡೆದ ಸ್ಥಳದಿಂದ ಓಡಿಹೋಗಿ, ಕೆಲವು ಬೀದಿಗಳ ದೂರದಲ್ಲಿ ತನ್ನ ತಂದೆಗೆ ಕರೆ ಮಾಡಿದ. ಸ್ಥಳಕ್ಕೆ ಸರವಣನ್ ಬರುವುದಕ್ಕೂ ಮುನ್ನವೇ ಪೊಲೀಸರು ಸ್ಥಳದಲ್ಲಿದ್ದರು. ಸ್ಥಳಕ್ಕೆ ಬಂದ ಸರವಣನ್– ಆ ಮೃತದೇಹವು ಕೆವಿನ್ನದ್ದು ಎಂದು ಗುರುತಿಸಿದರು. ನಂತರ, ತನ್ನ ಮಗ ಸೂರ್ಜಿತ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದರು. ಆರೋಪಿ ಸೂರ್ಜಿತ್ ಕೊಲೆಗೆ ಬಳಸಿದ್ದನೆಂದು ಹೇಳಲಾದ ಆಯುಧದೊಂದಿಗೆ ಪೊಲೀಸ್ ಠಾಣೆಯಲ್ಲಿ ಶರಣಾದ” ಎಂದು ಪೊಲೀಸ್ ಅಧಿಕಾರಿ ಹೇಳಿರುವುದಾಗಿ ʼದಿ ಪ್ರಿಂಟ್ʼ ವರದಿ ಮಾಡಿದೆ.
ನಂತರದ ಘಟನೆಗಳು ಮತ್ತು ವಿರೋಧಾತ್ಮಕ ಕಟ್ಟುಕಥೆಗಳು
ಕೆವಿನ್ನ ಹತ್ಯೆಯಾದ ಎರಡು ದಿನಗಳ ನಂತರ, ಸುಭಾಷಿಣಿಯ ಪೋಷಕರನ್ನು ಬಂಧಿಸದಿದ್ದರೆ ತನ್ನ ಮಗನ ಮೃತದೇಹವನ್ನು ಸ್ವೀಕರಿಸುವುದಿಲ್ಲ ಎಂದು ತಮಿಳ್ಸೆಲ್ವಿ ಪಟ್ಟುಹಿಡಿದರು. ತನ್ನ ಮಗನನ್ನು ಸೂರ್ಜಿತ್ ಕೊಲೆ ಮಾಡಿದ್ದರೂ, ಈ ಕೃತ್ಯಕ್ಕೆ ಸುಭಾಷಿಣಿಯ ಪೋಷಕರು ಪ್ರಚೋದನೆ ನೀಡಿದ್ದಾರೆ ಎಂದು ಆಕೆ ಆರೋಪಿಸಿದರು.
ಕೆವಿನ್ನ ಅಂತ್ಯಸಂಸ್ಕಾರ ಆಗುವುದಕ್ಕೂ ಮುನ್ನವೇ ನಾನಾ ರೀತಿಯ ಕಟ್ಟುಕಥೆಗಳನ್ನು ಹೆಣೆಯಲಾಗಿತ್ತು. ಕೆಲವು ಮಾಧ್ಯಮಗಳು, “ಸುಭಾಷಿಣಿ ಅವರು ಕೆವಿನ್ ಜೊತೆಗಿನ ಪ್ರೇಮ ಸಂಬಂಧವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ” ಎಂದು ವರದಿ ಮಾಡಿದವು. ಆದರೆ, ಕೆವಿನ್ ಮತ್ತು ಸುಭಾಷಿಣಿ ಜೊತೆಗಿರುವ ಫೋಟೋಗಳು, ಸೂರ್ಜಿತ್ನ ಹಳೆಯ ಚಿತ್ರಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದವು.
ಆದಾಗ್ಯೂ, ಕೆಲವು ವಾಟ್ಸ್ಆ್ಯಪ್ ಗುಂಪುಗಳಲ್ಲಿ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ, ಕೆವಿನ್ ಮತ್ತು ಸುಭಾಷಿಣಿಯ ಪ್ರೀತಿಯನ್ನು ‘ಒಂದು ಬದಿಯ ಪ್ರೀತಿ’ (ಒನ್ ಸೈಡೆಡ್ ಲವ್) ಎಂದು ಬಿಂಬಿಸುವ ಸಂದೇಶಗಳು ಹರಿದಾಡಿದವು. ಈ ಸಂದೇಶಗಳನ್ನು ಉದ್ದೇಶಪೂರ್ವಕವಾಗಿ ತೇವರ್ ಸಮುದಾಯದ ಕೆಲವು ಪತ್ರಕರ್ತರು ಹರಿಬಿಟ್ಟಿದ್ದರು ಎಂಬುದು ನಂತರ ಬೆಳಕಿಗೆ ಬಂದಿತು.
ಹತ್ಯೆಯಾದ ಮೂರನೇ ದಿನ, ಆಕೆಯ ತಂದೆ, ಪೊಲೀಸ್ ಅಧಿಕಾರಿ ಸರವಣನ್ ಅವರನ್ನು ಪೊಲೀಸರು ಬಂಧಿಸಿದರು. ನಾಲ್ಕನೇ ದಿನಕ್ಕೆ, ಸುಭಾಷಿಣಿ ವಿಡಿಯೋವೊಂದನ್ನು ಹಂಚಿಕೊಂಡರು. ಅದರಲ್ಲಿ, “ತಾನು ಕೆವಿನ್ನನ್ನು ಪ್ರೀತಿಸುತ್ತಿದ್ದೆʼʼ ಎಂಬುದನ್ನು ದೃಢೀಕರಿಸಿದರು. ಆದಾಗ್ಯೂ, “ಕೆವಿನ್ನ ಕೊಲೆಯಲ್ಲಿ ನನ್ನ ಪೋಷಕರ ಪಾತ್ರವಿಲ್ಲ. ಮೇ ತಿಂಗಳಲ್ಲಿ ಕೆವಿನ್ನೊಂದಿಗೆ ಸೂರ್ಜಿತ್ ಮದುವೆಯ ಬಗ್ಗೆ ಮಾತನಾಡಿದ್ದ. ನನ್ನ ತಂದೆಗೂ ಮಾಹಿತಿ ನೀಡಿದ್ದ. ಆಗ, ನನ್ನನ್ನು ನನ್ನ ತಂದೆ ಪ್ರಶ್ನಿಸಿದರು, ಭಯದಿಂದ, ಪ್ರೇಮ ಸಂಬಂಧವನ್ನು ನಿರಾಕರಿಸಿದ್ದೆ. ಅಲ್ಲದೆ, ಮದುವೆಗೆ ಕೆವಿನ್ ಆರು ತಿಂಗಳ ಕಾಲಾವಕಾಶ ಕೇಳಿದ್ದರು” ಎಂದು ಸುಭಾಷಿಣಿ ಹೇಳಿಕೊಂಡಿದ್ದಾರೆ.

ಪ್ರಾದೇಶಿಕ ಮಾಧ್ಯಮಗಳು ಈ ವಿಡಿಯೋವನ್ನು ಪ್ರಸಾರ ಮಾಡಿದವು. ಈ ವಿಡಿಯೋ, ಸೂಕ್ಷ್ಮ ಪ್ರಕರಣವನ್ನು ಮತ್ತಷ್ಟು ಸಂಕೀರ್ಣಗೊಳಿಸಿತು. ಪ್ರತಿಭಟನೆಗಳು ಭುಗಿಲೆದ್ದವು. ಮೃತದೇಹ ಸ್ವೀಕರಿಸದೆ ಪ್ರತಿಭಟನೆ ನಡೆಸುತ್ತಿದ್ದ ತಮಿಳ್ ಸೆಲ್ವಿಯನ್ನು ಭೇಟಿ ಮಾಡಿದ ಶಾಸಕರು ಮತ್ತು ಸಂಸದರು ಸೇರಿದಂತೆ ರಾಜಕೀಯ ನಾಯಕರು, ಮೃತದೇಹವನ್ನು ಸ್ವೀಕರಿಸುವಂತೆ ಒತ್ತಾಯಿಸಿದರು. ಅಂತಿಮವಾಗಿ, ತಮಿಳ್ಸೆಲ್ವಿಯ ಕುಟುಂಬವು ಜುಲೈ 30ರಂದು ಕೆವಿನ್ ಮೃತದೇಹದ ಅಂತ್ಯಕ್ರಿಯೆ ನಡೆಸಲು ಒಪ್ಪಿಕೊಂಡಿತು.
ಆಗಸ್ಟ್ 1 ರ ಬೆಳಿಗ್ಗೆ, ಕೆವಿನ್ನ ಮೃತದೇಹವನ್ನು ಆತನ ಅಜ್ಜಿಯ ಮನೆ ಇರುವ ಅರುಮುಗಮಂಗಲಂಗೆ ತರಲಾಯಿತು.
ಸಾಮಾಜಿಕ ವೇದಿಕೆಗಳಲ್ಲಿ ಜಾತಿ ಹಿಂಸಾಚಾರ
ಕೆವಿನ್ ಸೆಲ್ವಗಣೇಶ್ನ ಹತ್ಯೆಯ ಕ್ರೌರ್ಯವು ಅನೇಕರನ್ನು ದಿಗ್ಭ್ರಮೆಗೊಳಿಸಿತ್ತು. ಆದರೂ, ಸಾಮಾಜಿಕ ಮಾಧ್ಯಮದಲ್ಲಿನ ಹರಿದಾಡಿದ ಪ್ರತಿಕ್ರಿಯೆಗಳು ತಮಿಳುನಾಡಿನ ಜಾತಿ ಮನಸ್ಥಿತಿಯನ್ನು ಇನ್ನಷ್ಟು ಬಯಲಿಗೆಳೆಯಿತು. ಇತ್ತೀಚಿನ ವರ್ಷಗಳಲ್ಲಿ, ಜಾತಿ ಕಾರಣಕ್ಕಾಗಿ ಕೊಲೆಯ ಸುದ್ದಿಯಾದಾಗಲೆಲ್ಲಾ, ಸಾಮಾಜಿಕ ಜಾಲತಾಣದಲ್ಲಿ ಒಂದು ಹೊಸ ರೀತಿಯ ಹಿಂಸಾಚಾರ ವ್ಯಗ್ರಗೊಳ್ಳುತ್ತದೆ. ಇದು ಅಪರಾಧಿಗಳನ್ನು ಸಮರ್ಥಿಸುತ್ತದೆ ಮತ್ತು ಗೌರವಿಸುತ್ತದೆ. ಜಾತಿ ಆಧಾರಿತ ಕೊಲೆ ಮಾಡಿದವರನ್ನು ಅಭಿನಂದಿಸುವ ಸಂದೇಶಗಳನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುವ ಕೆಟ್ಟ ಪ್ರವೃತ್ತಿ ಬೆಳೆದುನಿಂತಿದೆ.
ಕೆವಿನ್ನನ್ನು ಹತ್ಯೆಗೈದ ಸೂರ್ಜಿತ್ನ ಕೃತ್ಯವನ್ನು ಪ್ರಶಂಸಿಸುವ ಹಲವಾರು ಪೋಸ್ಟ್ಗಳು ಮತ್ತು ರೀಲ್ಸ್ಗಳು ಸಾಮಾಜಿಕ ಜಾಲತಾಣವನ್ನು ತುಂಬಿಕೊಂಡಿವೆ. ಕೆಲವರ ಪೋಸ್ಟ್ಗಳು ಆರೋಪಿ ಸೂರ್ಜಿತ್ನನ್ನು ‘ತೇವರ್ ವೀರ’ ಎಂದು ಬಣ್ಣಿಸಿವೆ. ತನ್ನ ಸಹೋದರಿ ಮತ್ತು ಸಮುದಾಯದ ಗೌರವವನ್ನು ರಕ್ಷಿಸಿದನೆಂದು ಅಭಿನಂದಿಸಿವೆ. ಬಂಧನಕ್ಕೊಳಗಾಗಿರುವ ಸೂರ್ಜಿತ್ ನಿಜವಾದ ಸಂತ್ರಸ್ತನೆಂದು ಚಿತ್ರಿಸಿವೆ.
ಇದೇ ಸಂದರ್ಭದಲ್ಲಿ ಮೃತ ಕೆವಿನ್ನ ಚಾರಿತ್ರ್ಯಹರಣವೂ ನಡೆಯಿತು. ಕೆವಿನ್ ತನ್ನ ಸಹೋದ್ಯೋಗಿಗಳ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡು, ಆತನನ್ನು ‘ಸ್ತ್ರೀಲೋಲ’ ಎಂದು ಬಿಂಬಿಸಲಾಗಿದೆ.

ಈ ಹಿಂದೆ, 1957ರ ಮುದುಕುಲತೂರ್ನಲ್ಲಿ ನಡೆದಿದ್ದ ಜಾತಿ ಗಲಭೆಯಲ್ಲಿ ದಲಿತ ರಾಜಕೀಯ ನಾಯಕ ಇಮ್ಮಾನುಯೆಲ್ ಸೇಕರನ್ ಅವರನ್ನು ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ತೇವರ್ ಸಮುದಾಯದ ಮುತ್ತುರಾಮಲಿಂಗ ಎಂಬಾತನನ್ನು ಬಂಧಿಸಲಾಗಿತ್ತು. ಬಳಿಕ, ಬಿಡುಗಡೆ ಮಾಡಲಾಯಿತು. ಮುತ್ತುರಾಮಲಿಂಗನನ್ನು ತೇವರ್ ಸಮುದಾಯವು ಗುರು ಎಂಬಂತೆ ಪ್ರತಿ ವರ್ಷವೂ ಪೂಜಿಸುತ್ತದೆ. ಪೂಜೆಗೂ ಮುಂಚಿನ ದಿನಗಳಲ್ಲಿ ದಲಿತರ ಮೇಲೆ ತೇವರ್ ಸಮುದಾಯವು ದಾಳಿಗಳನ್ನು ನಡೆಸುವುದು ಸಾಮಾನ್ಯವಾಗಿಬಿಟ್ಟಿದೆ ಎಂದು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಕಾರ್ತಿಕೇಯನ್ ದಾಮೋದರನ್ ತಿಳಿಸಿದ್ದಾರೆ.
“ಇಂತಹ ಘಟನೆಗಳು ನಿರಂತರ ಒಡೆದು ಆಳುವ ರಾಜಕೀಯದ ಕೇಂದ್ರವಾಗಿವೆ. ಜನರನ್ನು ಜಾತಿ ಆಧಾರದಲ್ಲಿ ಧ್ರುವೀಕರಿಸಲಾಗಿದೆ. ಶಾಲೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೂ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತದೆ. ದಲಿತ ಅಥವಾ ಪ್ರಗತಿಪರ ಶಿಕ್ಷಕರು ಇಂತಹ ಆಚರಣೆಗಳಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಿದಾಗ ಅವರ ಮೇಲೆ ದಾಳಿಗಳು ನಡೆದಿವೆ. ಅಂತಹ ಸಮಯದಲ್ಲಿ, ಪ್ರಬಲ ಜಾತಿಯ ವಿದ್ಯಾರ್ಥಿಗಳು ತಮ್ಮ ಜಾತಿಯ ಗುರುತನ್ನು ತಮ್ಮ ಅಸ್ತಿತ್ವದ ಸಂಕೇತವಾಗಿ ಮಾಡಿಕೊಳ್ಳುತ್ತಾರೆ” ಎಂದು ಪತ್ರಕರ್ತೆ ಜಯರಾಣಿ ವಿವರಿಸಿದ್ದಾರೆ.
ಆನ್ಲೈನ್ನಲ್ಲಿ ದ್ವೇಷ ಬಿತ್ತುವ ಜಾಲ
ತಮಿಳುನಾಡಿನ ಅನೇಕ ಜಿಲ್ಲೆಗಳಲ್ಲಿ ಜಾತಿ ಆಧಾರಿತ ಗುಂಪುಗಳು ಮತ್ತು ಸಂಘಟನೆಗಳು ಯುವಜನರಿಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಜಾತಿಯನ್ನು ಗುರುತಿನ ಹೆಮ್ಮೆಯಾಗಿ ಬಳಸಿಕೊಳ್ಳುವಂತೆ ಪ್ರೇರೇಪಿಸುತ್ತವೆ. ಮಾತ್ರವಲ್ಲದೆ, ಜಾತಿ ಆಧಾರಿತ ಪೇಜ್ಗಳು ಮತ್ತು ಗುಂಪುಗಳನ್ನು ರಚಿಸುತ್ತವೆ. ಅವುಗಳಲ್ಲಿ ಜಾತಿ ಮೇಲಿನ ಅಭಿಮಾನವನ್ನು ಪ್ರಚೋದಿಸುವ ಕಂಟೆಂಟ್ಗಳನ್ನು ಪ್ರಸಾರ/ಪ್ರಚಾರ ಮಾಡುತ್ತವೆ ಎಂದು ಜಾತಿ ದೌರ್ಜನ್ಯವನ್ನು ಗಮನಿಸುತ್ತಿರುವ ಕಾರ್ಯಕರ್ತರು ಮತ್ತು ಪತ್ರಕರ್ತರು ವಿವರಿಸಿದ್ದಾರೆ.
ಅಂತಹ ಒಂದು ಜಾತಿ ಆಧಾರಿತ ಗುಂಪು ‘ಪುಲಿತೇವರ್ ಮಕ್ಕಳ್ ಮುನ್ನೇತರ ಕಝಗಂ’ನಲ್ಲಿ ಕೆವಿನ್ ಕುರಿತು ತುಚ್ಛವಾಗಿ ಪೋಸ್ಟ್ ಹಾಕಿದೆ. ಜೊತೆಗೆ, ಸೂರ್ಜಿತ್ನನ್ನು ಪ್ರಶಂಸಿಸಿದೆ.
ಆ ಗುಂಪಿನ ಸದಸ್ಯ ಎ ವೇಲ್ಮುರುಗನ್ ಎಂಬಾತ, “ನಾವು ಯಾವುದೇ ಕೊಲೆಗಳನ್ನು ಖಂಡಿಸುತ್ತೇವೆ. ಆದರೆ ಸೂರ್ಜಿತ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಇಂತಹ ಸಂದರ್ಭಗಳು ಎದುರಾದಾಗ, ಎಂತಹ ಸಭ್ಯ ವ್ಯಕ್ತಿಯೂ ಇಂತಹ ಕೃತ್ಯವನ್ನು ಮಾಡಲು ಒತ್ತಾಯಕ್ಕೊಳಗಾಗಬಹುದು. ಆತನ ಸಹೋದರಿ ಯಾವುದೋ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಮುಳುಗುವುದನ್ನು ಸಹಿಸಲು ಆತನಿಗೆ ಸಾಧ್ಯವಾಗುವುದಿಲ್ಲ” ಎಂದು ಹೇಳಿದ್ದಾನೆ.
ಕೆವಿನ್ ಮತ್ತು ಸುಭಾಷಿಣಿಯ ಪ್ರೀತಿಗೆ ‘ನಾಟಕೀಯ ಪ್ರೀತಿ’ (ನಾಡಗ ಕಾತಲ್) ಎಂದು ವನ್ನಿಯಾರ್ಗಳನ್ನು ಪ್ರತಿನಿಧಿಸುವ ಪಕ್ಷವಾದ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಕರೆದಿದೆ. ಪರಿಶಿಷ್ಟ ಜಾತಿಯ ಯುವಕರು ಪ್ರಬಲ ಜಾತಿಯ ಯುವತಿಯರನ್ನು ಪ್ರೀತಿಯ ಹೆಸರಿನಲ್ಲಿ ಸಿಕ್ಕಿಸಿ, ಜಾತಿಗೆ ಅಪಮಾನ ಮಾಡುತ್ತಾರೆ ಎಂಬ ಕಾಲ್ಪನಿಕ ಸಿದ್ಧಾಂತವನ್ನು ಪಿಎಂಕೆ ಮತ್ತು ಅದರ ಬೆಂಬಲಿಗರು ಸೃಷ್ಟಿಸಿದ್ದಾರೆ. ಇದಕ್ಕೆ, ‘ನಾಡಗ ಕಾತಲ್’ ಎಂಬ ಹೆಸರನ್ನೂ ಇಟ್ಟಿದ್ದಾರೆ. ಇವರು ಅಂತರ್ಜಾತಿ ಪ್ರಿತಿಯನ್ನು ತೀವ್ರವಾಗಿ ವಿರೋಧಿಸುತ್ತಾರೆ.
ಈ ‘ನಾಡಗ ಕಾತಲ್’ ಗೀಳನ್ನು ಪ್ರಚೋದಿಸಿದ ಆರಂಭಿಕ ಪ್ರಕರಣಗಳಲ್ಲಿ; ವನ್ನಿಯಾರ್ ಯುವತಿ ಕನ್ನಗಿ ಮತ್ತು ದಲಿತ ಯುವಕ ಮುರುಗೇಸನ್ನ ಕೊಲೆಯೂ ಒಂದು. ಈ ದಂಪತಿಗಳು ತಮ್ಮ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಲು ನಿರ್ಧರಿಸಿದ್ದರು. ಅವರಿಗೆ ಕನ್ನಗಿಯ ಕುಟುಂಬವು ವಿಷ ಹಾಕಿ ಕೊಂದಿತು. ಮತ್ತೊಂದು ಪ್ರಕರಣದಲ್ಲಿ, ತೇವರ್ ಯುವತಿ ಸತುರಾ, ದಲಿತ ಕ್ರಿಶ್ಚಿಯನ್ ಡೇನಿಯಲ್ನನ್ನು ಮದುವೆಯಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ಆಕೆ ರಹಸ್ಯವಾಗಿ ಸಾವನ್ನಪ್ಪಿದರು. ಡೇನಿಯಲ್ ಪ್ರಕಾರ, ಆಕೆಯ ಕುಟುಂಬವು ಆಕೆಯ ಕಿವಿಗಳಿಗೆ ವಿಷವನ್ನು ಸುರಿದು ಕೊಂದು, ಆತ್ಮಹತ್ಯೆ ಎಂದು ಬಿಂಬಿಸಿತು.

‘ಪೀಪಲ್ಸ್ ವಾಚ್ ಅಂಡ್ ಎವಿಡೆನ್ಸ್’ ರೀತಿಯ ಸಿವಿಲ್ ಸೊಸೈಟಿ ಸಂಸ್ಥೆಗಳು ಆಗ್ಗಾಗೆ ಸಮೀಕ್ಷಾ ಮತ್ತು ಕಾನೂನು ಮಧ್ಯಸ್ಥಿಕೆ ಆಧಾರಿತ ವರದಿಗಳನ್ನು ಬಿಡುಗಡೆ ಮಾಡುತ್ತದೆ. ಆ ವರದಿಗಳು; ಪ್ರಬಲ ಜಾತಿಯ ಕುಟುಂಬಗಳು ಅಂತರ್ಜಾತಿ ಪ್ರೀತಿಯನ್ನು ಒಪ್ಪದಿದ್ದಾಗ, ಪ್ರೇಮಿಗಳನ್ನು ಬಲವಂತವಾಗಿ ಬೇರ್ಪಡಿಸಲಾಗುತ್ತದೆ ಅಥವಾ ಕೊಲೆ ಮಾಡಲಾಗುತ್ತದೆ ಎಂಬ ಹಲವಾರು ಪ್ರಕರಣಗಳನ್ನು ಎತ್ತಿ ತೋರಿಸಿವೆ. ಇಂತಹ ಹಲವಾರು ಕೊಲೆಗಳನ್ನು ಆತ್ಮಹತ್ಯೆಗಳು ಅಥವಾ ಅಪಘಾತಗಳೆಂದು ಬಿಂಬಿಸಲಾಗಿದೆ.
ಇಂತಹ ಘಟನೆಗಳನ್ನು ಬಳಸಿಕೊಂಡು ಪಿಎಂಕೆ ನಾಯಕ ರಾಮ್ದಾಸ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಪ್ರಬಲ ಜಾತಿಯ ಹೆಣ್ಣು ಮಕ್ಕಳಲ್ಲಿ ಭಯವನ್ನು ಪ್ರಚೋದಿಸಿವೆ. ಇದರಿಂದಾಗಿ ವನ್ನಿಯಾರ್ಗಳು, ಗೌಂಡರ್ಗಳು ಮತ್ತು ತೇವರ್ಗಳು ರಾಜಕೀಯ ಮೈತ್ರಿಗಳನ್ನು ರಚಿಸಿ, ತಮ್ಮ ಸಮುದಾಯದ ಯುವತಿಯರು ಜಾತಿಯ ಒಳಗೆ ವಿವಾಹವಾಗಬೇಕು ಎಂಬ ನಿಯಮವನ್ನು ಮೀರಿ, ಅಂತರ್ಜಾತಿ ಪ್ರೀತಿಗೆ ಮುಂದಾಗದಂತೆ ತಡೆಯಲು ಗಮನ ಇಡುತ್ತವೆ.
ಅಂತರ್ಜಾತಿ ಪ್ರೀತಿ ತಪ್ಪು ಎಂಬ ಕಥನವನ್ನು ಮುಖ್ಯವಾಹಿನಿಗೆ ತರಲು ಪ್ರಬಲ ಜಾತಿಯ ಚಲನಚಿತ್ರ ನಿರ್ಮಾಪಕರು ಸಿನಿಮಾವನ್ನು ಮಾಧ್ಯಮವಾಗಿ ಬಳಸಿದ್ದಾರೆ. ಇಂತಹ ಸಿನಿಮಾಗಳ ನಿರ್ಮಾಣಕ್ಕೆ ಪಿಎಂಕೆ ಮತ್ತು ಬಲಪಂಥೀಯ ಗುಂಪುಗಳಿಂದ ಧನಸಹಾಯವನ್ನೂ ಪಡೆದಿದ್ದಾರೆ. ತಮಿಳಿನ ಕೆಲವು ಸಿನಿಮಾಗಳು ‘ಮೇಲ್ಮುಖವಾಗಿ ಸುತ್ತಿದ ಮೀಸೆ, ಕತ್ತಿಗಳು ಹಾಗೂ ಗೂಳಿ’ಗಳನ್ನು ಜಾತಿ ಸಂಕೇತವಾಗಿ ಬಳಸಿವೆ. ಈ ಸಂಕೇತಗಳು ತೇವರ್ಗಳನ್ನು ಪ್ರತಿನಿಧಿಸುವಂತೆ ಕಾಣುತ್ತವೆ. ಕಳೆದ ದಶಕದಲ್ಲಿ, ದಲಿತ ಚಲನಚಿತ್ರ ನಿರ್ಮಾಪಕರು ಜಾತಿ ತಾರತಮ್ಯ ವಿರೋಧಿ ಚಿತ್ರಗಳನ್ನು ನಿರ್ಮಿಸುವ ಮೂಲಕ ಈ ಕಥನಕ್ಕೆ ಪ್ರತಿರೋಧ ಒಡ್ಡಿದ್ದಾರೆ.
ಅಂತರ್ಜಾತಿ ದಂಪತಿಗಳು ಜೀವಿಸುವುದಕ್ಕೂ ಸವಾಲು, ಸಂಕಷ್ಟಗಳನ್ನು ಎದುರಿಸುತ್ತಿದ್ದರೂ, ತಮಿಳುನಾಡಿನ ಸರ್ಕಾರಗಳು ಈ ಸಮಸ್ಯೆಯನ್ನು ಪರಿಹರಿಸಲು, ದಂಪತಿಗಳಿಗೆ ರಕ್ಷಣೆ ಒದಗಿಸುವಲ್ಲಿ ವಿಫಲವಾಗಿವೆ.
ಸಾಂಸ್ಥಿಕ ಜಾತಿ ತಾರತಮ್ಯ—ತಮಿಳುನಾಡಿನ ಸಮಸ್ಯೆ
ಕೆವಿನ್ನ ಕೊಲೆಯು ದಕ್ಷಿಣ ತಮಿಳುನಾಡಿನ ಜಾತಿ ತಾರತಮ್ಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಅಲ್ಲಿ ಜಾತಿ ಸಂಬಂಧಿತ ಕೊಲೆಗಳು ಮಾಧ್ಯಮಗಳಲ್ಲಿ ‘ಹೆಡ್ಲೈನ್’ಗಳಾಗುವುದಿಲ್ಲ. ಸುದ್ದಿವಾಹಿನಿಗಳಲ್ಲಿ ಪ್ರೈಮ್ಟೈಮ್ ಸುದ್ದಿಯಾಗಿ ಚರ್ಚೆಯಾಗುವುದಿಲ್ಲ. ಆದರೆ, ವರದಿಯಾಗುತ್ತವೆ. ಆ ಕಾರಣಕ್ಕೆ, ಇಂತಹ ಅಪರಾಧಗಳು ದಕ್ಷಿಣ ಭಾಗಕ್ಕೆ ಮಾತ್ರವೇ ಸೀಮಿತವಾಗಿವೆ ಎಂದು ಭಾವಿಸುವುದು ತಪ್ಪು ಎಂದು ತಮಿಳುನಾಡು ಅಸ್ಪೃಶ್ಯತೆ ನಿರ್ಮೂಲನ ವೇದಿಕೆಯ (TNUEF) ಪ್ರಧಾನ ಕಾರ್ಯದರ್ಶಿ ಸ್ಯಾಮುಯೆಲ್ ರಾಜ್ ಹೇಳಿದ್ದಾರೆ.
“ದಕ್ಷಿಣ ತಮಿಳುನಾಡಿನಲ್ಲಿ 1990ರ ದಶಕದಿಂದಲೂ ಜಾತಿ ಹಿಂಸಾಚಾರದ ವಿರುದ್ಧದ ಹೋರಾಟಗಳ ಇತಿಹಾಸವಿದೆ. ಆದ್ದರಿಂದ, ಈ ಭಾಗದಲ್ಲಿ ನಡೆಯುವ ಜಾತಿ ದೌರ್ಜನ್ಯಗಳು ಹೆಚ್ಚಾಗಿ ವರದಿಯಾಗುತ್ತವೆ. ಆದರೆ, ತಮಿಳುನಾಡಿನ ಪ್ರತಿಯೊಂದು ಜಿಲ್ಲೆಯಲ್ಲಿಯೂ ಜಾತಿ ದೌರ್ಜನ್ಯಗಳು ನಡೆಯುತ್ತವೆ” ಎಂದು ಅವರು ತಿಳಿಸಿದ್ದಾರೆ.
ಹಲವಾರು ವರದಿಗಳು, ಕಳೆದ ದಶಕದಲ್ಲಿ ತಮಿಳುನಾಡಿನಲ್ಲಿ ಒಂದು ಹೊಸ ಪ್ರವೃತ್ತಿ ಬೆಳೆದಿದೆ. ಶಾಲೆಯಿಂದಲೇ ಮಕ್ಕಳು/ಜನರು ಅಕ್ಷರಶಃ ತಮ್ಮ ಜಾತಿಯನ್ನು ತಮ್ಮ ತೋಳಿನ ಮೇಲೆ ಧರಿಸುತ್ತಿದ್ದಾರೆ. ಇದು, ಅಪಾಯಕಾರಿ ಬೆಳವಣಿಗೆಯಾಗಿದೆ.
2023ರ ಡಿಸೆಂಬರ್ನಲ್ಲಿ, ರಾಜ್ಯಾದ್ಯಂತ ಶಾಲೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ದಾಖಲಿಸುವ ವರದಿಯನ್ನು TNUEF ಬಿಡುಗಡೆ ಮಾಡಿತು. ಅದಕ್ಕಾಗಿ, 36 ಜಿಲ್ಲೆಗಳ 441 ಶಾಲೆಗಳಲ್ಲಿ 6 ರಿಂದ 12ನೇ ತರಗತಿಯ 644 ವಿದ್ಯಾರ್ಥಿಗಳನ್ನು ಒಳಗೊಂಡು ಸಮೀಕ್ಷೆ ನಡೆಸಿತು. ಈ ಸಮೀಕ್ಷೆಯಲ್ಲಿ ವಿದ್ಯಾರ್ಥಿಗಳು ಪ್ರೌಢಶಾಲೆಯಿಂದಲೇ ಜಾತಿಯ ಗುರುತಿನ ಗುರುತುಗಳಾದ ಕೈಗಡಿಯಾರಗಳು ಮತ್ತು ಸರಪಳಿಗಳನ್ನು ಬಳಸುತ್ತಿದ್ದಾರೆ ಎಂಬುದು ಕಂಡುಬಂದಿತು. ಶಾಲೆಗಳಲ್ಲಿ ಜಾತಿಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಸಾಲಿನಲ್ಲಿ ನಿಲ್ಲಿಸುವ, ವಿಭಜಿಸಿ ಕೂರಿಸುವ ಆಘಾತಕಾರಿ ಘಟನೆಗಳೂ ನಡೆಯುತ್ತಿವೆ ಎಂಬುದನ್ನು ಬಹಿರಂಗಪಡಿಸಿತು.
2024ರಲ್ಲಿ ಪ್ರಕಟವಾದ ನಿವೃತ್ತ ನ್ಯಾಯಮೂರ್ತಿ ಕೆ ಚಂದ್ರು ಅವರು ನಡೆಸಿದ್ದ ಸಮೀಕ್ಷಾ ವರದಿ ಕೂಡ ಈ ತಾರತಮ್ಯವನ್ನು ಮತ್ತೊಮ್ಮೆ ದೃಢೀಕರಿಸಿತು. ಆ ವರದಿಯಲ್ಲಿ ಕಂಡುಬಂದ ಅತ್ಯಂತ ಆಘಾತಕಾರಿ ಅಂಶವೆಂದರೆ, ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲಾ ವ್ಯಾಪ್ತಿಯ ಶಾಲೆಗಳಲ್ಲಿ ಜಾತಿ ತಾರತಮ್ಯವೇ ಇಲ್ಲವೆಂದು ವಾದಿಸಿದ್ದಾರೆ.
2019ರಲ್ಲಿ, ತರಬೇತಿಯಲ್ಲಿದ್ದ ಐಎಎಸ್ ಅಧಿಕಾರಿಗಳು ಸರ್ಕಾರಿ ಶಾಲೆಗಳಲ್ಲಿ ಜಾತಿಯ ಗುರುತಿನ ಕೈಗಡಿಯಾರಗಳ ಬಳಸಲಾಗುತ್ತಿದೆ ಎಂಬುದನ್ನು ವರದಿ ಮಾಡಿದರು. ಈ ವರದಿ ಬಂದ ನಂತರ, ತಮಿಳುನಾಡು ಶಾಲಾ ಶಿಕ್ಷಣ ನಿರ್ದೇಶನಾಲಯವು ಈ ಆಚರಣೆಯನ್ನು ತಡೆಗಟ್ಟಲು ಅಧಿಕಾರಿಗಳಿಗೆ ಸೂಚನೆ ನೀಡಿ ಸುತ್ತೋಲೆಯೊಂದನ್ನು ಜಾರಿಗೊಳಿಸಿತು. ಕೆಲವೇ ದಿನಗಳಲ್ಲಿ, ಅಂದಿನ ಎಐಎಡಿಎಂಕೆ ಸರ್ಕಾರದ ಶಾಲಾ ಶಿಕ್ಷಣ ಸಚಿವ ಕೆ.ಎ ಸೆಂಗೊಟ್ಟೈಯನ್ ಅವರು ಆ ಸುತ್ತೋಲೆಯನ್ನು ರದ್ದುಗೊಳಿಸಿದರು. ಇಂತಹ ಗುರುತುಗಳೇ ಅಸ್ತಿತ್ವದಲ್ಲಿಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಿದರು.
ಈ ಲೇಖನ ಓದಿದ್ದೀರಾ?: ಮಾಲೆಗಾಂವ್ ಸ್ಫೋಟ | ಪ್ರಮುಖ ಸಾಕ್ಷಿಗಳನ್ನೇ ಕೈಬಿಟ್ಟಿದ್ದ ಪ್ರಾಸಿಕ್ಯೂಷನ್; ಅನುಮಾನಗಳಿದ್ದರೂ ಮುಗಿದು ಹೋದ ಪ್ರಕರಣ
“ಜಾತಿಯ ಭಾವನೆ, ತಾರತಮ್ಯವನ್ನು ಕಿತ್ತುಹಾಕಲು ಸಾಧ್ಯತೆ ಇರುವ ಮುಖ್ಯ ಗುಂಪುಗಳೆಂದರೆ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು. ಆದರೆ, ಈ ಗುಂಪುಗಳಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಲು ಯಾವುದೇ ರಾಜಕೀಯ ಪಕ್ಷವು ಬಯಸುವುದಿಲ್ಲ” ಎಂದು ಪತ್ರಕರ್ತೆ ಜಯರಾಣಿ ಹೇಳಿದ್ದಾರೆ.
ಹಾಲಿ ವಿಧಾನಸಭಾ ಸ್ಪೀಕರ್, ರಾಧಾಪುರಂನ ಡಿಎಂಕೆ ಶಾಸಕ ಅಪ್ಪಾವು ಅವರು ಇತ್ತೀಚೆಗೆ ಸಾರ್ವಜನಿಕವಾಗಿ ನೀಡಿದ ಹೇಳಿಕೆಯಲ್ಲಿ ವಿದ್ಯಾರ್ಥಿಗಳ ನಡುವಿನ ಜಾತಿ ಸಂಬಂಧಿತ ಘರ್ಷಣೆಗಳನ್ನು ‘ಸಣ್ಣ ವಿವಾದಗಳು’ ಎಂದು ತಳ್ಳಿಹಾಕಿದರು. ಇಂತಹ ವಿವಾದಗಳನ್ನು ಶಾಲಾ ಅಧಿಕಾರಿಗಳು ನಿರ್ವಹಿಸಬೇಕು ಎಂದು ಹೇಳಿದರು. ಅವರ ಈ ಹೇಳಿಕೆಯನ್ನು ನ್ಯಾಯಮೂರ್ತಿ ಚಂದ್ರು ಟೀಕಿಸಿದರು. “ರಾಜ್ಯಾದ್ಯಂತ ಶಾಲಾ ಶಿಕ್ಷಕರು ಮತ್ತು ಪ್ರಾಂಶುಪಾಲರಲ್ಲಿ ವ್ಯಾಪಕ ಜಾತಿವಾದಿ ನಡವಳಿಕೆ ಇದೆ. ಶಿಕ್ಷಕರಾಗಲಿ, ವಿದ್ಯಾರ್ಥಿಗಳ ಪೋಷಕರಾಗಲೀ ವಿದ್ಯಾರ್ಥಿಗಳ ಜಾತಿ ಆಧಾರಿತ ಘರ್ಷಣೆಗಳನ್ನು ಖಂಡಿಸಿಲ್ಲ ಎಂಬುದು ನಮ್ಮ ಸಮೀಕ್ಷೆಯಲ್ಲಿ ಕಂಡುಬಂದಿದೆ” ಎಂದು ಅಸಮಧಾನ ವ್ಯಕ್ತಪಡಿಸಿದರು.
ಜಾತಿ ಹಿಂಸೆ – ವ್ಯವಸ್ಥಿತ ವೈಫಲ್ಯ
ಜಾತಿ ಆಧಾರಿತ ಹಿಂಸಾಚಾರವನ್ನು ವಿಶಾಲವಾಗಿ ಅರ್ಥಮಾಡಿಕೊಳ್ಳುವಲ್ಲಿ ವ್ಯವಸ್ಥಿತ ವೈಫಲ್ಯವೂ ಇದೆ. 2024ರಲ್ಲಿ ಇಪಿಡಬ್ಲ್ಯೂನಲ್ಲಿ ಪ್ರಕಟವಾದ ಒಂದು ವಿಮರ್ಶೆಯಲ್ಲಿ; ದಕ್ಷಿಣ ತಮಿಳುನಾಡಿನಲ್ಲಿ ಜಾತಿ ದೌರ್ಜನ್ಯಗಳು ಏಕೆ ನಿರರ್ಗಳವಾಗಿ ಮುಂದುವರಿಯುತ್ತಿವೆ ಎಂಬುದರ ಕುರಿತು ವಿವರಿಸಿರುವ ತಿರುನೆಲ್ವೇಲಿಯ ಇತಿಹಾಸ ಪ್ರಾಧ್ಯಾಪಕ ಮಣಿಕುಮಾರ್ “ರಾಮಮೂರ್ತಿ ಆಯೋಗ ಹಾಗೂ ನ್ಯಾಯಮೂರ್ತಿ ಎಸ್ ಮೋಹನ್ ಆಯೋಗದಂತಹ ನ್ಯಾಯಾಂಗ ಆಯೋಗಗಳು ಜಾತಿ ಸಂಘರ್ಷದ ಸಮಸ್ಯೆಯನ್ನು ಕಾನೂನು ದೃಷ್ಟಿಕೋನದಿಂದ ಪರಾಮರ್ಶಿಸಿವೆ. ಆದ್ದರಿಂದ ಪ್ರತಿಯೊಂದು ಜಾತಿ ಹಿಂಸಾಚಾರದ ಘಟನೆಯನ್ನು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿ ಪರಿಗಣಿಸಿವೆ” ಎಂದು ಎತ್ತಿ ತೋರಿಸಿದ್ದಾರೆ.
1997ರ ಮೇಲವಾಲವು ಸಾಮೂಹಿಕ ಹತ್ಯಾಕಾಂಡದಲ್ಲಿ, ಗ್ರಾಮ ಪಂಚಾಯತಿಯ ದಲಿತ ಅಧ್ಯಕ್ಷನ ಶಿರಚ್ಛೇದ ಮಾಡಲಾಯಿತು. ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳು ಪ್ರಮುಖ ಆರೋಪಿಗಳು ಅಥವಾ ಶಿಕ್ಷೆಗೊಳಗಾದವರನ್ನು ಬೇಗನೆ ಬಿಡುಗಡೆ ಮಾಡುವ ಮೂಲಕ ಅಪರಾಧದ ಗಂಭೀರತೆಯನ್ನು ಕಡಿಮೆ ಮಾಡಿದವು. ಇಂತಹ ಬೆಳವಣಿಗೆಗಳು ದಲಿತ ನಾಯಕರ ವಿರುದ್ಧ ದ್ವೇಷ ಪ್ರಚೋದನೆಗೆ ಪುಷ್ಟಿ ನೀಡಿವೆ.
ಇಂದಿಗೂ, ಪಂಚಾಯತಿಗಳಲ್ಲಿ ದಲಿತ ಅಧ್ಯಕ್ಷರು ತಮ್ಮ ಅಧಿಕಾರವನ್ನು ಚಲಾಯಿಸುವಾಗ ಪ್ರತಿರೋಧವನ್ನು ಎದುರಿಸುತ್ತಾರೆ. ಪಂಚಾಯತಿ ಸಾಮಾನ್ಯ ಸಭೆಗಳ ಸಮಯದಲ್ಲಿ ಅವರಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳಲೂ ಬಿಡುವುದಿಲ್ಲ. ಅಷ್ಟೇ ಯಾಕೆ, ದಲಿತ ಅಧ್ಯಕ್ಷರಿಗೆ ಪಂಚಾಯತಿಗಳಲ್ಲಿ ಕುರ್ಚಿಗಳನ್ನೇ ನೀಡಲಾಗುವುದಿಲ್ಲ. ಆಡಳಿತಾರೂಢ ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿರುವ ವಿಡುತಲೈ ಚಿರುತೈಗಲ್ ಕಚ್ಚಿಯ (ವಿಸಿಕೆ) ಕಾರ್ಯಕರ್ತರಿಗೆ ಪ್ರಬಲ ಜಾತಿಯವರು ವಾಸಿಸುವ ಪ್ರದೇಶಗಳಿಗೆ ಪ್ರವೇಶವನ್ನೇ ನೀಡಲಾಗುತ್ತಿಲ್ಲ. 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ, ಕೆಲವು ಪ್ರಬಲ ಜಾತಿಯವರು ತಮ್ಮ ಪ್ರದೇಶಗಳಲ್ಲಿ ವಿಸಿಕೆ ಧ್ವಜಗಳನ್ನು ಕಟ್ಟಲೂ ಅವಕಾಶ ಕೊಟ್ಟಿಲ್ಲ ಎಂದು ವರದಿಯಾಗಿದೆ.
ಹಲವು ದಶಕಗಳಿಂದ ಇಂದಿನವರೆಗೆ, ತಮಿಳುನಾಡಿನಲ್ಲಿ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳು ಜಾತಿ ಹಿಂಸಾಚಾರದ ಮೂಲವನ್ನು ಎದುರಿಸುವಲ್ಲಿ ವಿಫಲವಾಗಿವೆ. ಜಾತಿ ತಾರತಮ್ಯವು ಈಗ ಗುರುತು, ಹಿರಿಮೆ ಎಂಬ ಭೀಕರ ಸ್ವರೂಪವನ್ನು ಪಡೆದುಕೊಂಡಿದೆ. ಪೊಲೀಸ್ ಮತ್ತು ಸ್ಥಳೀಯ ಆಡಳಿತದೊಳಗಿನ ಪ್ರಬಲ ಜಾತಿಯ ಪ್ರಭಾವ ಹೆಚ್ಚಿರುವುದರಿಂದ, ಜಾತಿ ಆಧಾರಿತ ಸಾಮೂಹಿಕ ಹತ್ಯಾಕಾಂಡಗಳು ನಡೆಯುತ್ತಲೇ ಇವೆ.
ಪ್ರಬಲ ಜಾತಿ ಜೊತೆ ಪೊಲೀಸ್ ನಂಟು – ವ್ಯವಸ್ಥೆಯ ಕುಸಿತ
ದಕ್ಷಿಣ ತಮಿಳುನಾಡಿನಲ್ಲಿ, ಜಾತಿ ಹಿಂಸಾಚಾರವು ಪೊಲೀಸರು ಮತ್ತು ಅಪರಾಧಿಗಳ ನಡುವಿನ ಸಂಬಂಧದ ಇತಿಹಾಸವನ್ನು ಹೊಂದಿದೆ. 1995ರಲ್ಲಿ ಕೊಡಿಯಾಂಕುಲಂನಲ್ಲಿ, ದಲಿತ ಬಸ್ ಚಾಲಕನ ಮೇಲೆ ಮರವಾರ್ಗಳು ನಡೆಸಿದ ದಾಳಿಯು ಎರಡು ಗುಂಪುಗಳ ನಡುವಿನ ಘರ್ಷಣೆಗೆ ಕಾರಣವಾಯಿತು. ಪಿಯುಸಿಎಲ್ ವರದಿಯ ಪ್ರಕಾರ, ಆ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ದಲಿತರು ಹೆಚ್ಚಾಗಿ ವಾಸಿಸುತ್ತಿದ್ದ ಪಲ್ಲರ್ ಗ್ರಾಮದ ಮೇಲೆ ದಾಳಿ ಮಾಡಿದರು, ಮನೆಗಳನ್ನು ಧ್ವಂಸಗೊಳಿಸಿದರು. ಮಾತ್ರವಲ್ಲದೆ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ಸೂಪರಿಂಟೆಂಡೆಂಟ್ ಸೇರಿದಂತೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿಯೇ ದಲಿತರನ್ನು ಥಳಿಸಿದರು. ಆದರೆ, ದಲಿತರ ಮೇಲೆ ಕ್ರೌರ್ಯ ಮೆರೆದ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ.
“ಜಾತಿ ದೌರ್ಜನ್ಯ, ದಬ್ಬಾಳಿಕೆ, ಹಲ್ಲೆ, ಕೊಲೆಗಳ ವಿರುದ್ಧ ಯಾವುದೇ ಕಾನೂನು ಕ್ರಮವನ್ನು ತೆಗೆದುಕೊಳ್ಳದೇ ಇರುವುದು, ಜಾತಿ ಅಪರಾಧಗಳಿಗೆ ಮತ್ತಷ್ಟು ಪ್ರೇರಣೆ ನೀಡುತ್ತಿದೆ” ಎಂದು ಸೋಷಿಯಲ್ ಅವೇರ್ನೆಸ್ ಸೊಸೈಟಿ ಫಾರ್ ಯೂತ್(SASY)ನ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ನಾಥನ್ ಹೇಳಿದ್ದಾರೆ.
ಕೆವಿನ್ ಕೊಲೆಯ ಬಗ್ಗೆ ತಮಿಳ್ ಸೆಲ್ವಿ ಪ್ರತಿಕ್ರಿಯೆ ಆರಂಭವಾಗಿದ್ದೇ, ‘ಅಪರಾಧಿಗಳು ತಪ್ಪಿಸಿಕೊಳ್ಳುತ್ತಾರೆ’ ಎಂಬ ಮಾತಿನೊಂದಿಗೆ. ಕೊಲೆಯ ದಿನದಂದು ಪೊಲೀಸ್ ಠಾಣೆಯಲ್ಲಿ ತನಗಾದ ಅನುಭವವನ್ನು ವಿವರಿಸಿದ ಸೆಲ್ವಿ, “ಆ ಪೊಲೀಸ್ ಠಾಣೆಯ ವಾತಾವರಣವು ನಮ್ಮ ವಿರುದ್ಧ ತುಂಬಾ ಶತ್ರುತ್ವದಿಂದ ಕೂಡಿತ್ತು. ಅದು ನನ್ನಲ್ಲಿ ಮತ್ತಷ್ಟು ಭಯವನ್ನು ಹುಟ್ಟುಹಾಕಿತು. ಹೀಗಾಗಿಯೇ, ನನಗೆ ನ್ಯಾಯ ದೊರೆಯುವ ಭರವಸೆ ಇಲ್ಲವಾಗಿದೆ” ಎಂದು ಹೇಳಿದ್ದಾರೆ.

ಸೆಲ್ವಿ ಅವರ ಈ ಭಯವು ಆಧಾರರಹಿತವಲ್ಲ. ಕೆವಿನ್ ಹತ್ಯೆ ಪ್ರಕರಣದಲ್ಲಿ, ಪೊಲೀಸ್ ಠಾಣೆಯೊಳಗಿನ ಶತ್ರುತ್ವದ ವಾತಾವರಣವು ಜಾತಿ ಹಿಂಸಾಚಾರದ ಸಂತ್ರಸ್ತರೊಂದಿಗೆ ವ್ಯವಹರಿಸುವಾಗ ಅಧಿಕಾರಿಗಳು ನಿರಾಸಕ್ತಿಯಿಂದ ವರ್ತಿಸುತ್ತಾರೆ. ಅವರ ಕಾರ್ಯವೈಖರಿಯು ನಿರ್ಲಕ್ಷ್ಯದಿಂದ ಕೂಡಿರುತ್ತದೆ. ಮಾತ್ರವಲ್ಲದೆ, ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ರಾಜಕೀಯ ಕಾರ್ಯಕರ್ತರ ಗುಂಪು ಅಲ್ಲಿ ನೆರೆದಿರುತ್ತದೆ.
“ಪೊಲೀಸ್ ಠಾಣೆಯಲ್ಲಿ ನಾನು ದೂರು ನೀಡುವಾಗ, ನಾನೇ ದೂರನ್ನು ಬರೆಯಲು ನನಗೆ ಬಿಡಲಿಲ್ಲ. ತಮಿಳಗ ಮಕ್ಕಳ್ ಮುನ್ನೇತ್ರ ಕಝಗಂ (TMMK) ಸಂಘಟನೆಗೆ ಸಂಬಂಧಿತ ವಕೀಲರು ತನ್ನ ಪರವಾಗಿ ದೂರು ಬರೆದರು. ಹೀಗಾಗಿಯೇ, ಎಫ್ಐಆರ್ನಲ್ಲಿ ಹಲವು ತಪ್ಪುಗಳಾಗಿವೆ” ಎಂದು ತಮಿಳ್ಸೆಲ್ವಿ ಆರೋಪಿಸಿದ್ದಾರೆ.
ನಾಗರಿಕ ಹಕ್ಕುಗಳ ವಕೀಲರ ಪ್ರಕಾರ, “ಎಫ್ಐಆರ್ ರಚಿಸುವಾಗಲೇ ಉಂಟಾಗುವ ಲೋಪಗಳು ನಂತರದ ತನಿಖೆ ಮತ್ತು ವಿಚಾರಣೆಯಲ್ಲಿ ಪ್ರಕರಣಕ್ಕೆ ಗಂಭೀರ ಹಾನಿ ಮಾಡುತ್ತವೆ. ಪ್ರಕರಣದ ಹಾದಿ ತಪ್ಪಿಸುತ್ತವೆ.” ಅಲ್ಲದೆ, ದೂರು ಬರೆದ ವಕೀಲರು ತಮಿಳ್ಸೆಲ್ವಿಯೊಂದಿಗೆ ಮುಕ್ತವಾಗಿ ಮಾತನಾಡದಂತೆ ಅಧಿಕಾರಿಗಳು ನಡೆದಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
“ಮರಣೋತ್ತರ ಪರೀಕ್ಷೆಗೆ ಮುನ್ನ ಕೆವಿನ್ನ ಮೃತದೇಹವನ್ನು ನೋಡಲು ನಮಗೆ ಅವಕಾಶ ನೀಡಲಿಲ್ಲ. ಅಪರಾಧ ನಡೆದ ದಿನ, ನಾವು ಹಲವಾರು ಬಾರಿ ಕೋರಿಕೊಂಡೆವು. ಆದರೆ ಪೊಲೀಸರು ಅನುಮತಿ ನೀಡಲಿಲ್ಲ” ಎಂದು ತಮಿಳ್ಸೆಲ್ವಿ ಅವರ ಸಹೋದರ ಎಸ್ಸಾಕಿ ಮುತ್ತು ಆರೋಪಿಸಿದ್ದಾರೆ.
ಪೊಲೀಸರ ಈ ನಡೆಯು 2020ರಲ್ಲಿ ಮದ್ರಾಸ್ ಹೈಕೋರ್ಟ್ ನೀಡಿದ್ದ ‘ಕುಟುಂಬದವರಿಗೆ ದೇಹವನ್ನು ಪರಿಶೀಲಿಸಲು ಮತ್ತು ದಾಖಲಿಸಲು ಅವಕಾಶ ನೀಡಬೇಕು’ ಎಂಬ ಆದೇಶವನ್ನು ಉಲ್ಲಂಘಿಸಿದೆ. ಅಲ್ಲದೆ, ಯಾವುದೇ ಕುಟುಂಬದ ಸದಸ್ಯರಿಲ್ಲದೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ರಮೇಶ್ ನಾಥನ್ ಹೇಳುವಂತೆ, ವ್ಯವಸ್ಥೆಯ ನಿಜವಾದ ವೈಫಲ್ಯವು ಸಾಂಸ್ಥಿಕ ರಕ್ಷಣೆಗಳ ಕುಸಿತ ಮತ್ತು ಪೊಲೀಸರ ಮೇಲಿನ ವಿಶ್ವಾಸದ ಕೊರತೆಯಲ್ಲಿದೆ. ಆದರೆ, ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ನಿಯಮಗಳು-1995 ರ ಅಡಿಯಲ್ಲಿ ರಚನೆಯಾಗಿರುವ ಜಿಲ್ಲಾ ಜಾಗೃತಿ ಮೇಲ್ವಿಚಾರಣಾ ಸಮಿತಿಯ (ಡಿವಿಎಂಸಿ) ಪಾತ್ರವು ಪ್ರಮುಖವಾಗುತ್ತದೆ.
“ಡಿವಿಎಂಸಿಗಳು ಜಾತಿ ದೌರ್ಜನ್ಯಗಳನ್ನು ಮೇಲ್ವಿಚಾರಣೆ ಮಾಡಬೇಕು. ದೌರ್ಜನ್ಯಗಳು ಏಕೆ ಸಂಭವಿಸುತ್ತವೆ ಎಂಬುದನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಬೇಕು. ದೌರ್ಜನ್ಯಗಳನ್ನು ತಡೆಯಲು ಸಮರ್ಥ ಶಿಕ್ಷಣ ಮತ್ತು ಜಾಗೃತಿ ಮೂಡಿಸಬೇಕು. ಆದರೆ, ಡಿವಿಎಂಸಿಗಳು ಇದಾವುದನ್ನೂ ಸರಿಯಾಗಿ ಮಾಡುತ್ತಿಲ್ಲ ಎಂಬ ಗಂಭೀರ ಲೋಪಗಳು ಎದ್ದು ಕಾಣುತ್ತಿವೆ. ಡಿವಿಎಂಸಿಗಳ ಕೆಲಸದ ಮೇಲ್ವಿಚಾರಣೆ ಮಾಡಲು ಯಾರೂ ಇಲ್ಲದೇ ಇರುವುದು ಪ್ರಮುಖ ಸಮಸ್ಯೆಯಾಗಿದೆ” ಎಂದು ರಮೇಶ್ ಹೇಳಿದ್ದಾರೆ.
ಅರುಮುಗಮಂಗಲಂನಲ್ಲಿ, ಕೆವಿನ್ನ ಅಂತ್ಯಕ್ರಿಯೆ ನಡೆದ ಒಂದು ದಿನದ ಬಳಿಕ, ತಮಿಳ್ಸೆಲ್ವಿ ಅವರು ಸಿಬಿ-ಸಿಐಡಿ ಎದುರು ತಮ್ಮ ಮೊದಲ ಹೇಳಿಕೆ ದಾಖಲಿಸಿದ್ದಾರೆ. “ನನ್ನ ಮಗನಿಗೆ ನ್ಯಾಯ ಸಿಗುವವರೆಗೆ ನಾನು ಹೋರಾಟ ಮಾಡುತ್ತೇನೆ. ಪ್ರಕರಣವು ಅಪರಾಧಿಗಳಿಗೆ ಶಿಕ್ಷೆಯಾಗುವ ಮೂಲಕ ಕೊನೆಗೊಳ್ಳುತ್ತದೆ ಎಂಬುದನ್ನು ನಾನು ಖಚಿತಪಡಿಸಿಕೊಳ್ಳುತ್ತೇನೆ” ಎಂಬ ಅವರ ಹೇಳಿಕೆಗಳು ಮುಂದಿನ ಕಾನೂನು ಹೋರಾಟವನ್ನು ಎದುರಿಸಲು ಅವರು ದೃಢವಾಗಿರುವಂತೆ ತೋರುತ್ತಿವೆ.
ಮೂಲ: ದಿ ಪ್ರಿಂಟ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ