ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮನರೇಗಾ) ಅಡಿಯಲ್ಲಿ ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತಿರುವ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಗ್ರಾಮೀಣ ಕೂಲಿಕಾರರ ಸಂಘಟನೆ ಕಾರ್ಯಕರ್ತರು ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ತಾಲೂಕಿನ ಹಲುವಾಗಲು ಗ್ರಾಮ ಪಂಚಾಯಿತಿ ಎಂದು ಪ್ರತಿಭಟನೆ ನಡೆಸಿ, ಪಿಡಿಒ ಅವರಿಗೆ ಮನವಿ ಸಲ್ಲಿಸಿದ್ದಾರೆ.
“ಅಧಿಕಾರಿಗಳು ಕೂಲಿ ಕಾರ್ಮಿಕರಿಂದ ಒಂದು ವಾರ ಕೆಲಸ ಮಾಡಿಸಿದ್ದು, ಈಗ ಕೂಲಿ ಹಣವಿಲ್ಲವೆಂದು ಹೇಳುತ್ತಿದ್ದಾರೆ. ಶ್ರಮಪಟ್ಟು ದುಡಿದ ಕೆಲವು ಕಾರ್ಮಿಕರಿಗೆ ಉದ್ದೇಶ ಪೂರ್ವಕವಾಗಿ ಕಡಿಮೆ ಕೂಲಿ ನೀಡಿ ಕಾರ್ಮಿಕರಿಗೆ ಮರೆಮಾಚುತ್ತಿದ್ದಾರೆ” ಎಂದು ಆರೋಪಿಸಿದರು.
ತಾಲೂಕು ಗ್ರಾಕೂಸ ಕಾರ್ಯಕರ್ತೆ ಭಾಗ್ಯ ಈ ದಿನ.ಕಾಮ್ ಜೊತೆ ಮಾತನಾಡಿ, “ಮನರೇಗಾ ಸಮಸ್ಯೆ ಕೇಳಲು ಹೋದವರಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರುದ್ರಪ್ಪ ಹಾಗೂ ಕೆಲವು ಸದಸ್ಯರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ʼಹಣ ಎಲ್ಲಿಂದ ತರಬೇಕು ನೀವು ಕೇಳೋಕೆ ಯಾರು. ನೀವು ಕೇಳಿದ ಕೂಡಲೇ ನಿಮಗೆ ಕೂಲಿ ಕೊಡಬೇಕಾʼ ಎಂದು ಮಾತನಾಡಿದಾಗ ಕೂಲಿ ಕಾರ್ಮಿಕ ಹಾಗೂ ಅಧ್ಯಕ್ಷರ ಜೊತೆ ಮಾತಿನ ಚಕಮಕಿ ನಡೆಯಿತು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕುಸುನೂರ ಗ್ರಾಮ ಪಂಚಾಯತಿ ಅವ್ಯವಸ್ಥೆ; ಕಾರ್ಮಿಕರಿಗೆ ದೊರೆಯದ ಜಾಬ್ ಕಾರ್ಡ್
ನಾವು ಗ್ರಾಮ ಪಂಚಾಯಿತಿ ಅಧಿಕಾರಿಗೆ ಮನವಿ ಸಲ್ಲಿಸಲು ಹೋದಾಗ ಇವರು ಮಧ್ಯೆ ಪ್ರವೇಶ ಮಾಡಿದ್ದಾರೆ. ಮನರೇಗಾ ಅನುದಾನ ದುರ್ಬಳಕೆಯಾಗುತ್ತಿದ್ದು, ಇದರಲ್ಲಿ ಅಧ್ಯಕ್ಷರು ಮತ್ತು ಸದಸ್ಯರ ಕೈವಾಡವಿದೆ” ಎಂದು ಆರೋಪಿಸಿದರು.
“ಪಂಚಾಯಿತಿ ಅಕ್ರಮಗಳನ್ನು ಕೇಳಲು ಹೋದವರಿಗೆ 20 ವರ್ಷಗಳಿಂದಲೂ ಇದೇ ಗತಿಯಾಗಿದೆ. ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಾರೆ” ಎಂದು ಆರೋಪಿಸಿದರು.ನಂತರ ಪಿಡಿಒ ಅವರಿಗೆ ಹಕ್ಕೊತ್ತಾಯ ಸಲ್ಲಿಸಿದರು.
ಗ್ರಾಮೀಣ ಕೂಲಿ ಕಾರ್ಮಿಕರುಗಳಾದ ನೇತ್ರಾ, ವೀರಮ್ಮ, ಪುಟ್ಟಮ್ಮ, ಸೇರಿದಂತೆ ಇತರರು ಇದ್ದರು.