ನವದೆಹಲಿಯ ಸುಷ್ಮಾ ಸ್ವರಾಜ್ ಭವನದ ಭಾಸ್ಕರ್ ಹಾಲ್‌ನಲ್ಲಿ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ನೇಪಾಳ ಸರ್ಕಾರದ ಯುವ ಸಂಸದರ ಜೊತೆಗಿನ ಯುವ ಸಬಲೀಕರಣ ಸಂವಾದದಲ್ಲಿ ಹಾಸನ ಸಂಸದ ಶ್ರೇಯಸ್ ಎಂ.ಪಟೇಲ್ ಭಾಗಿಯಾಗಿದ್ದರು.
ಮುಖ್ಯವಾಗಿ ಭಾರತ ಹಾಗೂ ನೇಪಾಳದ ಯುವ ಶಕ್ತಿಯು ರಾಷ್ಟ್ರ ಅಭಿವೃದ್ಧಿಯಲ್ಲಿ ಯಾವ ರೀತಿ ಪಾತ್ರ ವಹಿಸುತ್ತದೆ. ರಾಜಕಾರಣ, ಶಿಕ್ಷಣ, ತಂತ್ರಜ್ಞಾನ, ಉದ್ಯೋಗ, ಕೃಷಿ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಹೇಗೆ ತೊಡಗಿಸಿಕೊಂಡಿದೆ ಎಂಬುದರ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಇದೇ ವೇಳೆ ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಶ್ ಗೊಯಲ್ ಅವರನ್ನು ಭೇಟಿಯಾದ ಸಂಸದರು, ಕಾಫಿ ಬೆಳೆಯನ್ನು ಸರ್‌ಫೇಸಿ ಕಾಯ್ದೆಯಿಂದ ಹೊರಗಿಡುವಂತೆ ಮನವಿ ಸಲ್ಲಿಸಿದರು.
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸಾವಿರಾರು ಕಾಫಿ ಬೆಳೆಗಾರರಿಗೆ ಕಾಯ್ದೆಯಿಂದ ಅನನುಕೂಲವಾಗುತ್ತಿದೆ. ಬೆಳೆಗಾರರು ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ಇತರ ಕೃಷಿ ಸಾಲ ಯೋಜನೆಗಳ ಅಡಿಯಲ್ಲಿ ಸಾಲ ಪಡೆಯುತ್ತಿದ್ದಾರೆ. ಇಂತಹ ಸಾಲಗಳನ್ನು ಸದಾ ಅಗ್ರಿಕಲ್ಚರ್ ಪ್ರಯಾರಿಟಿ ಸೆಕ್ಟರ್ ಲೆಂಡಿಂಗ್ ಅಡಿಯಲ್ಲಿ ವಿಂಗಡಿಸಲಾಗಿದೆ. ಇತ್ತೀಚಿನ ಕೆಲ ವರ್ಷಗಳಿಂದ ಕೆಲ ಬ್ಯಾಂಕುಗಳು ಈ ಸಾಲಗಳನ್ನು ಸರ್‌ಫೇಸಿ ಕಾಯ್ದೆ ೨೦೦೨ರ ಅಡಿಯಲ್ಲಿ ವಸೂಲಾತಿಗೆ ತೆಗೆದುಕೊಳ್ಳುತ್ತಿವೆ. ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ ಕಾಫಿ ಸಾಲಗಳನ್ನು ಕೃಷಿ ಸಾಲಗಳೆಂದು ಪರಿಗಣಿಸಿ ಸರ್‌ಫೇಸಿ ಕಾಯ್ದೆಯ ಕಾನೂನು ಕ್ರಮದಿಂದ ದೂರವಿಟ್ಟು ಬೆಳೆಗಾರರಿಗೆ ನೆರವಾಗಬೇಕೆಂದು ಕೋರಿದರು.
ಇದನ್ನೂ ಓದಿ: ಹಾಸನ | ಮಹಿಳಾ ಮತ್ತು ಮಕ್ಕಳ ಹಕ್ಕುಗಳಿಗಾಗಿ ಹೋರಾಟ; ಬೃಹತ್ ಸಮಾವೇಶಕ್ಕೆ ಜಾಗೃತಿ ಜಾಥಾ
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ರೈಲ್ವೆ ನಿಲ್ದಾಣ ಹಾಗೂ ಹಳಿ ನಿರ್ಮಾಣ ಕಾಮಗಾರಿಗೆ ವೇಗ ನೀಡಬೇಕೆಂದು ಮನವಿ ಮಾಡಿದ ಶ್ರೇಯಸ್, ಜಿಲ್ಲೆಯ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೆ ಅವಕಾಶ ಮಾಡಿಕೊಡಬೇಕು. ಹೆಚ್ಚುವರಿ ಪ್ಯಾಸೆಂಜರ್ ರೈಲುಗಳ ಓಡಾಟ ವ್ಯವಸ್ಥೆ ಕಲ್ಪಿಸಬೇಕೆಂದು ಎಂದು ವಿನಂತಿಸಿದರು.