ಮತ ಕಳವು ವಿರುದ್ಧವಾಗಿ ಶುಕ್ರವಾರ(ಆಗಸ್ಟ್ 8) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರ್‍ಯಾಲಿ ನಡೆಯಲಿದ್ದು, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ. ಈ ನಿಟ್ಟಿನಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಕೊಂಚ ವ್ಯತ್ಯಯವಾಗುವ ಬಗ್ಗೆ ಬೆಂಗಳೂರು ನಗರ ಸಂಚಾರ ಇಲಾಖೆಯು ಮಾಹಿತಿ ನೀಡಿದೆ.
ಬೆಳಗ್ಗೆ 10:30ಯಿಂದ 11:30ವರೆಗೆ ಮತ್ತು ಸಂಜೆ 3:30ಯಿಂದ 4:30ವರೆಗೆ ಎಂಜಿ ರೋಡ್, ಕಬ್ಬನ್ ರೋಡ್ ಮತ್ತು ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ನಿರ್ಬಂಧ ವಿಧಿಸಲಾಗಿದ್ದು, ಬದಲಿ ಮಾರ್ಗದ ಸಲಹೆ ನೀಡಲಾಗಿದೆ. ಚಾಲುಕ್ಯ ರಸ್ತೆ, ಶಾಂತಲಾ ಜಂಕ್ಷನ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ. ನಗರದ ಹಲವು ಪ್ರದೇಶಗಳಲ್ಲಿ ಪಾರ್ಕಿಂಗ್ ನಿರ್ಬಂಧಗಳನ್ನು ಸಹ ವಿಧಿಸಲಾಗಿದೆ.
ಇದನ್ನು ಓದಿದ್ದೀರಾ? ಕರ್ನಾಟಕದಲ್ಲಿ ಭಾರಿ ಮತ ಕಳವು: ರಾಹುಲ್ ಗಾಂಧಿ ಆರೋಪ
ಶಾಂತಲಾ ಜಂಕ್ಷನ್ ಮತ್ತು ಖೋಡ್ ಸರ್ಕಲ್‌ನಿಂದ ಆನಂದ ರಾವ್ ಫ್ಲೈ ಓವರ್, ಓಲ್ಡ್ ಜೆಡಿಎಸ್ ಕ್ರಾಸ್, ಶೇಷಾದ್ರಿ ರಸ್ತೆಯಿಂದ ಫ್ರೀಡಂ ಪಾರ್ಕ್ ಕಡೆಗೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಲುಲು ಮಾಲ್, ಕೆಎಫ್‌ಎಂ, ರಾಜೀವ್ ಗಾಂಧಿ ಸರ್ಕಲ್, ಮಂತ್ರಿ ಮಾಲ್, ಸ್ವಸ್ತಿಕ್ ಸರ್ಕಲ್, ಶೇಷಾದ್ರಿಪುರಂ, ನೆಹರು ಸರ್ಕಲ್, ರೇಸ್ ಕೋರ್ಸ್ ಫ್ಲೈ ಓವರ್, ರೇಸ್ ಕೋರ್ಟ್ ರಸ್ತೆ ಮೂಲಕ ಸಂಚಾರ ಮಾಡುವಂತೆ ತಿಳಿಸಲಾಗಿದೆ.
ಮೈಸೂರು ಬ್ಯಾಂಕ್ ಕಡೆಯಿಂದ ಚಾಲುಕ್ಯ ಸರ್ಕಲ್ ಕಡೆಗೆ ಸಂಚಾರ ಬಂದ್ ಮಾಡಲಾಗಿದ್ದು, ಕೆಜಿ ರಸ್ತೆ, ಮೈಸೂರು ಬ್ಯಾಂಕ್, ಜಂಕ್ಷನ್, ಸಾಗರ್ ಜಂಕ್ಷನ್, ಕೆಜಿ ಜಂಕ್ಷನ್, ಎಲೈಟ್, ಟಿಬಿ ರಸ್ತೆ, ಕೆಎಫ್‌ಎಂ, ರಾಜೀವ್ ಗಾಂಧಿ ಸರ್ಕಲ್, ಸ್ವಸ್ತಿಕ್, ನೆಹರು ಸರ್ಕಲ್, ರೇಸ್ ಕೋರ್ಸ್ ಫ್ಲೈ ಓವರ್ ರಸ್ತೆ ಮೂಲಕ ಸಂಚರಿಸಬಹುದು.
ಚಾಲುಕ್ಯ ಸರ್ಕಲ್‌ನಿಂದ ಮೈಸೂರು ಬ್ಯಾಂಕ್ ಕಡೆಗೆ ಸಂಚಾರ ನಿರ್ಬಂಧಿಸಲಾಗಿದೆ. ಚಾಲುಕ್ಯ ಸರ್ಕಲ್, ಎಲ್‌ಆರ್‌ಡಿ, ರಾಜಭವನ ರಸ್ತೆ, ಇನ್ ಪೆಂಟ್ರಿ ರಸ್ತೆ, ಇಂಡಿಯನ್ ಎಕ್ಸ್‌ಪ್ರೆಸ್‌ನಿಂದ ಸಂಚರಿಸಬಹುದಾಗಿದೆ.
ಕಾಳಿದಾಸ ರಸ್ತೆ ಕನಕದಾಸ ಜಂಕ್ಷನ್ ಕಡೆಯಿಂದ ಫ್ರೀಡಂ ಪಾರ್ಕ್ ಕಡೆಗೆ ಸಂಚಾರ ನಿರ್ಬಂಧಿಸಲಾಗಿದೆ. ಕನಕದಾಸ ಜಂಕ್ಷನ್ ಬಲ ತಿರುವು ಪಡೆದು ಸಾಗರ ಜಂಕ್ಷನ್ ಕಡೆಗೆ ಸಂಚರಿಸಬಹುದಾಗಿದೆ. ಮೌರ್ಯ/ಸುಬ್ಬಣ್ಣ ಜಂಕ್ಷನ್‌ನಿಂದ ಫ್ರೀಡಂ ಪಾರ್ಕ್ ಕಡೆಗೆ ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ. ಸುಬ್ಬಣ್ಣ ಜಂಕ್ಷನ್‌ನಿಂದ ಬಲ ತಿರುವು ಆನಂದ್ ರಾವ್ ಸರ್ಕಲ್ ಕಡೆಗೆ ಸಂಚರಿಸಬಹುದಾಗಿದೆ.
ಈ ಹಿಂದೆ ಆಗಸ್ಟ್ 5ರಂದು ಈ ಪ್ರತಿಭಟನೆಯ ಯೋಜನೆ ಮಾಡಲಾಗಿತ್ತು. ಆದರೆ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ನಿಧನದ ಕಾರಣ ಪ್ರತಿಭಟನೆ ಮುಂದೂಡಲಾಯಿತು. ಶುಕ್ರವಾರ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಮತ ಕಳವು ವಿರುದ್ಧದ ರ್‍ಯಾಲಿಯಲ್ಲಿ ರಾಹುಲ್ ಗಾಂಧಿ ಮಾತ್ರವಲ್ಲದೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಭಾಗಿಯಾಗಲಿದ್ದಾರೆ.
