ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾವುದೇ ಸಹಾಯ ಮಾಡಿಲ್ಲ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ “ಸಂಪೂರ್ಣ ಸುಳ್ಳು” ಎಂದು ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ಬಡ ರೈತ ಮಹಿಳೆ ಕಲಾವತಿ ಬಂಡೂರ್ಕರ್ ಅವರು ಕಾಂಗ್ರೆಸ್ ಸಹಾಯ ಸ್ಮರಿಸಿದ್ದಾರೆ.
ಸುದ್ದಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು, 2014ರ ನಂತರ ನನಗೆ ಯಾವುದೇ ಸಹಾಯ ದೊರಕಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾವುದೇ ದ್ವೇಷವಿಲ್ಲ. ನನ್ನ ಜೀವನ ರಾಹುಲ್ ಗಾಂಧಿಯವರಿಂದ ಬದಲಾದದ್ದು ನಿಜ ಎಂದು ರೈತ ಮಹಿಳೆ ಕಲಾವತಿ ಸ್ಪಷ್ಟನೆ ನೀಡಿದ್ದಾರೆ.
“ನನ್ನ ಪತಿ 2005ರಲ್ಲಿ ಕೃಷಿ ಸಾಲದ ಬಿಕ್ಕಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡು ನಿಧನರಾದರು. 2008ರವರೆಗೆ, ರಾಹುಲ್ ನಮ್ಮನ್ನು ಭೇಟಿ ಮಾಡುವವರೆಗೂ ಜೀವನ ನಿರ್ವಹಿಸುವುದು ಕಷ್ಟಕರವಾಗಿತ್ತು. ಅವರು ಭೇಟಿ ನೀಡಿದ ನಂತರ ನಮಗೆ ಎಲ್ಲ ರೀತಿಯ ಸಹಾಯ ದೊರಕಿತು” ಎಂದು ಕಲಾವತಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜಸ್ಥಾನ | ಕೋಟಾದಲ್ಲಿ 17 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ; ವಾರದಲ್ಲಿ 3ನೇ ಪ್ರಕರಣ
“ಮೊದಲು ನಾನು 3 ಲಕ್ಷ ರೂ. ಪಡೆದುಕೊಂಡೆ, ಅದರೊಂದಿಗೆ ನಾನು ನನ್ನ ಮನೆಯನ್ನು ದುರಸ್ತಿ ಮಾಡಿಸಿದೆ. ಹಾಗೆಯೇ ನಮ್ಮ ಜೀವನ ಸುಧಾರಿಸಿತು. ಇದರ ನಂತರ ಸ್ವಯಂಸೇವಾ ಸಂಘ ಸುಲಭ್ ಇಂಟರ್‌ನ್ಯಾಶನಲ್ ನೀಡಿದ 30 ಲಕ್ಷ. ರೂ. ಹಣವನ್ನು ಸ್ಥಿರ ಠೇವಣಿಯಾಗಿ ಬ್ಯಾಂಕಿನಲ್ಲಿ ಇರಿಸಿದ್ದೇನೆ. ಇದರಿಂದ ನನಗೆ ಸುಮಾರು ರೂ 16,000 ಬಡ್ಡಿ ಸಿಗುತ್ತಿದೆ” ಎಂದು ಕಲಾವತಿ ಹೇಳಿದ್ದಾರೆ.
2008ರಲ್ಲಿ ಸಂಸತ್ತಿನಲ್ಲಿ ನಡೆದ ಪರಮಾಣು ಒಪ್ಪಂದದ ಬಗ್ಗೆ ನಡೆದ ಅವಿಶ್ವಾಸ ನಿರ್ಣಯ ಚರ್ಚೆಯ ವೇಳೆ ಮಾತನಾಡಿದ್ದ ರಾಹುಲ್ ಗಾಂಧಿ ಕಲಾವತಿ ವಿಷಯವನ್ನು ಪ್ರಸ್ತಾಪಿಸಿದ್ದರು.
ಕಳೆದ ವರ್ಷ ಭಾರತ್ ಜೋಡೋ ಯಾತ್ರೆಯ ವೇಳೆ ಕಲಾವತಿ ಅವರು ರಾಹುಲ್ ಅವರನ್ನು ಸಮೀಪದ ವಾಸೀಮ್‌ನಲ್ಲಿ ಭೇಟಿಯಾಗಿದ್ದರು.
ಸುಳ್ಳು ಹೇಳಿದ ಅಮಿತ್ ಶಾ; ಕಾಂಗ್ರೆಸ್‌ನಿಂದ ಹಕ್ಕುಚ್ಯುತಿ ನೋಟಿಸ್
ರಾಹುಲ್ ಗಾಂಧಿ ನಡುವಿನ ಭೇಟಿಯ ಕುರಿತು ಅಮಿತ್ ಶಾ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷವಾದ ಕಾಂಗ್ರೆಸ್ ಗುರುವಾರ ಹಕ್ಕುಚ್ಯುತಿ ನೋಟಿಸ್ ನೀಡಿದೆ.
ಈ ನೋಟಿಸ್ ಅನ್ನು ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ಕಾಂಗ್ರೆಸ್ ಸಚೇತಕ ಮಣಿಕಂ ಟ್ಯಾಗೋರ್ ಅವರು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಸಲ್ಲಿಸಿದ್ದಾರೆ.
“ನಿನ್ನೆ (ಆಗಸ್ಟ್ 9) ಕಲಾವತಿ ಕತೆಯನ್ನು ತಪ್ಪಾಗಿ ಹೇಳಿ, ಲೋಕಸಭೆಯ ದಾರಿ ತಪ್ಪಿಸಿರುವುದಕ್ಕೆ ನಾನು ಅಮಿತ್ ಶಾ ವಿರುದ್ಧ ಗೌರವಾನ್ವಿತ ಲೋಕಸಭಾಧ್ಯಕ್ಷರಿಗೆ ಹಕ್ಕುಚ್ಯುತಿ ನೋಟಿಸ್ ನೀಡಿದ್ದೇನೆ” ಎಂದು ಟ್ಯಾಗೋರ್ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ ಅವರು ನೋಟಿಸ್ ಪ್ರತಿಯನ್ನು ಹಂಚಿಕೊಂಡಿದ್ದಾರೆ.
ಆ ರೈತ ಮಹಿಳೆಗೆ ಮನೆ ದೊರೆಯುವಂತೆ ಹಾಗೂ ಹಲವಾರು ಸರ್ಕಾರಿ ಯೋಜನೆಗಳು ದೊರೆಯುವಂತೆ ಖಾತ್ರಿಗೊಳಿಸಿದ್ದು ಮೋದಿ ಸರ್ಕಾರ ಎಂದು ಅಮಿತ್ ಶಾ ಪ್ರತಿಪಾದಿಸಿದ್ದರು. ಆದರೆ, ಮೋದಿ ಸರ್ಕಾರ ಕಲಾವತಿ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಆ ರೈತ ಮಹಿಳೆಯ ಹೇಳಿಕೆಯ ಸತ್ಯಾಂಶದ ವಿಡಿಯೋವನ್ನು ಟ್ವಿಟರ್ ಮಾಧ್ಯಮದಲ್ಲಿ ಹಂಚಿಕೊಂಡಿದೆ.
ಟ್ಯಾಗೋರ್ ಅವರು ತಮ್ಮ ನೋಟಿಸ್‌ನಲ್ಲಿ, ಅಮಿತ್ ಶಾ ಸದನವನ್ನು ಉದ್ದೇಶಿಸಿ ಮಾತನಾಡುವಾಗ ಕರಾರುವಾಕ್ ಹಾಗೂ ಸತ್ಯಾಂಶವುಳ್ಳ ಮಾಹಿತಿಯನ್ನು ಎತ್ತಿ ಹಿಡಿಯದೆ ಸಂಸದೀಯ ಹಕ್ಕುಚ್ಯುತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.