ಕಾರೊಂದು ಸುಮಾರು 500 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದು ಒಂದೇ ಕುಟುಂಬದ ಐವರು ಸೇರಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಟಿಸ್ಸಾ ಉಪವಿಭಾಗದ ಚಾನ್ವಾಸ್ ಬಳಿ ನಡೆದಿದೆ. ಕುಟುಂಬವು ತಮ್ಮ ಮನೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವಾಗ ಈ ಕಾರು ಅಪಘಾತ ಸಂಭವಿಸಿದೆ.
ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ತಮ್ಮ ಕುಟುಂಬ ಸದಸ್ಯರೊಂದಿಗೆ ಬನಿಖೇತ್‌ನಿಂದ ಮನೆಗೆ ಹಿಂತಿರುಗುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಬಂಡೆ ಬಿದ್ದ ಪರಿಣಾಮ ವಾಹನ ಕಂದಕಕ್ಕೆ ಉರುಳಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಛತ್ತೀಸ್‌ಗಢ | ಭೀಕರ ಅಪಘಾತ: ಮೂವರ ಸಾವು, ಆರು ಮಂದಿಗೆ ಗಾಯ
ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿ ತಾವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಮೃತರನ್ನು ಬನಿಖೇತ್‌ನ ಶಿಕ್ಷಕ ರಾಜೇಶ್, ಅವರ ಪತ್ನಿ ಹನ್ಸೊ (36), ಅವರ ಮಗ ದೀಪಕ್ (15), ಮತ್ತು ಮಗಳು ಆರತಿ (17), ಸೋದರ ಮಾವ ಹೇಮರಾಜ್ ಮತ್ತು ತನ್ನ ಕಾರಿನಲ್ಲಿ ಕರೆದೊಯ್ದ ಇನ್ನೋರ್ವ ಸಂಬಂಧಿಕ ಎಂದು ಗುರುತಿಸಲಾಗಿದೆ.
ಗುರುವಾರ ರಾತ್ರಿ 9:30ರ ಸುಮಾರಿಗೆ ಈ ಅಪಘಾತ ನಡೆದಿದ್ದು, ಮೃತದೇಹಗಳನ್ನು ಹೊರತೆಗೆಯಲು ಸುಮಾರು ಆರು ಗಂಟೆಗಳು ತಗುಲಿದೆ. ಸದ್ಯ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
