ಪ್ರಧಾನಿ ನರೇಂದ್ರ ಮೋದಿ ಅವರು ಮತಗಳ ಕಳವು ಮಾಡಿ ಪ್ರಧಾನಿಯಾಗಿದ್ದಾರೆ. ನಾವು ಕೇಳಿದ ಮಾಹಿತಿಯನ್ನು, ಡೇಟಾವನ್ನು ಚುನಾವಣಾ ಆಯೋಗ ನಮಗೆ ನೀಡಿದರೆ ನಾವು ಅದನ್ನು ಸಾಬೀತುಪಡಿಸಬಲ್ಲೆವು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ಮತ ಕಳವು ವಿರುದ್ಧವಾಗಿ ಶುಕ್ರವಾರ(ಆಗಸ್ಟ್ 8) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಒಬ್ಬ ಮನುಷ್ಯನಿಗೆ ಒಂದು ಮತ ಎಂಬುದನ್ನು ಸಂವಿಧಾನ ಹೇಳುತ್ತದೆ. ಒಂದು ಮತದ ಅಧಿಕಾರವನ್ನು ಸಂವಿಧಾನ ನೀಡುತ್ತದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಒಬ್ಬರೇ ಹಲವು ಮತ ಹಾಕುವ ಮೂಲಕ ಅಕ್ರಮ ನಡೆದಿದೆ” ಎಂದು ದೂರಿದರು.
ಇದನ್ನು ಓದಿದ್ದೀರಾ? ಮತ ಕಳವು | ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ರ್‍ಯಾಲಿ: ಹಲವೆಡೆ ಸಂಚಾರ ಬಂದ್, ಬದಲಿ ಮಾರ್ಗ ಪರಿಶೀಲಿಸಿ
“ಕಳೆದ ಚುನಾವಣೆಯಲ್ಲಿ ಬಿಜೆಪಿಯ ಮುಖಂಡರು, ನರೇಂದ್ರ ಮೋದಿ ಈ ಗ್ರಂಥದ(ಸಂವಿಧಾನ) ಮೇಲೆ ದಾಳಿ ನಡೆದಿದ್ದಾರೆ. ಲೋಕಸಭೆ ಚುನಾವಣೆ ಆದ ಬಳಿಕ ಮಹಾರಾಷ್ಟ್ರ ಚುನಾವಣೆ ನಡೆದಿದೆ. ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಇಂಡಿಯಾ ಮೈತ್ರಿಕೂಟಾ ಗೆದ್ದಿದೆ. ಅದಾದ ನಾಲ್ಕು ತಿಂಗಳಲ್ಲೇ ನಡೆದ ವಿಧಾನಸಭೆಯಲ್ಲಿ ಬಿಜೆಪಿ ಗೆದ್ದಿದೆ. ಆಶ್ಚರ್ಯಕರ ಫಲಿತಾಂಶ ಹೊರಬಿದ್ದಿದೆ” ಎಂದರು.
“ಇದಾದ ಬಳಿಕ ಪರಿಶೀಲಿಸಿದಾಗ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಂದು ಕೋಟಿ ಅಧಿಕ ಹೊಸ ಮತದಾರರು ಇರುವುದು ತಿಳಿದುಬಂದಿದೆ. ಎಲ್ಲಿ ಹೊಸ ಮತದಾರರು ಇದ್ದಾರೋ ಅಲ್ಲಿ ಬಿಜೆಪಿ ಗೆದ್ದಿದೆ. ಇಂಡಿಯಾ ಒಕ್ಕೂಟದ ಮತವೇನೂ ಕಡಿಮೆಯಾಗಿಲ್ಲ. ಹೊಸ ಮತವೆಲ್ಲವೂ ಬಿಜೆಪಿ ಖಾತೆಗೆ ಸೇರಿದೆ. ಇದು ಹಲವು ಅನುಮಾನಕ್ಕೆ ಕಾರಣವಾಯಿತು” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
“ನಾವು ನಡೆದ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ 15-16ರಷ್ಟು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬೇಕಿತ್ತು. ಆದರೆ ಒಂಬತ್ತರಲ್ಲಿ ಮಾತ್ರ ಗೆಲುವು ಕಂಡಿದ್ದೇವೆ. ನಾವು ನಿಜವಾಗಿಯೂ ಸೋಲು ಕಂಡೆವಾ? ಇದನ್ನು ಪರಿಶೀಲಿಸಲು ಚುನಾವಣಾ ಆಯೋಗದ ಬಳಿ ಮತದಾರರ ಪಟ್ಟಿ ಕೇಳಿದೆವು. ವಿಡಿಯೋಗ್ರಫಿ ಕೇಳಿದೆವು. ಆದರೆ ಆಯೋಗ ನೀಡಲು ನಿರಾಕರಿಸಿತು. ಅಷ್ಟು ಮಾತ್ರವಲ್ಲದೆ 45 ದಿನದಲ್ಲೇ ವಿಡಿಯೋ ಅಳಿಸುವಂತೆ ಕಾನೂನನ್ನೇ ಬದಲಾಯಿಸಿತು” ಎಂದು ದೂರಿದ್ದಾರೆ.
LIVE: Vote Adhikar Rally | Bengaluru, Karnataka https://t.co/b0TrDxoE2d
— Rahul Gandhi (@RahulGandhi) August 8, 2025
“ನಾವು ಕರ್ನಾಟಕದಲ್ಲಿ ಮಹದೇವಪುರ ಕ್ಷೇತ್ರದ ವಿಶ್ಲೇಷನೆ ಆರಂಭಿಸಿದೆವು. ಈ ಬಗ್ಗೆ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ವಿವರವಾದ ಮಾಹಿತಿಯನ್ನು ನಾನು ನೀಡಿದ್ದೇನೆ, ನೀವು ನೋಡಿರುವಿರಿ. ಇಲ್ಲಿ ಮತ ಕಳವು ಆಗಿರುವುದನ್ನು ನಾವು ಶೇಕಡ 100ರಷ್ಟು ಸಾಬೀತುಪಡಿಸಿದ್ದೇವೆ. ಚುನಾವಣಾ ಆಯೋಗ ಬಿಜೆಪಿ ಜೊತೆ ಸೇರಿ ಮೋಸ ಮಾಡಿದೆ. ಆರುವರೆ ಲಕ್ಷ ಮತದಾರರು ಇರುವ ಮಹದೇವಪುರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಕಳವು ಮಾಡಲಾಗಿದೆ. ಅಂದರೆ ಆರರಲ್ಲಿ ಒಂದು ಮತವನ್ನು ಕದಿಯಲಾಗಿದೆ. ಇದೊಂದೇ ಕ್ಷೇತ್ರವಲ್ಲ ಕರ್ನಾಟದಲ್ಲಿ ಇನ್ನೂ ಕೆಲವು ಕ್ಷೇತ್ರಗಳಲ್ಲಿ ಮತಗಳವು ನಡೆದಿದೆ. ಈ ಸಂಬಂಧ ಕರ್ನಾಟಕ ಸರ್ಕಾರ ತನಿಖೆಗೆ ಆದೇಶಿಸಬೇಕು” ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.
“ನನ್ನ ಬಳಿ ಚುನಾವಣಾ ಆಯೋಗ ಅಫಿಡವಿಟ್ ಕೇಳುತ್ತದೆ. ಪ್ರಮಾಣ ಮಾಡುವಂತೆ ಹೇಳುತ್ತದೆ. ಆದರೆ ನಾನು ಈಗಾಗಲೇ ಸಂಸತ್ತಿನಲ್ಲಿ ಪ್ರಮಾಣ ಮಾಡಿದ್ದೇನೆ, ಸಂವಿಧಾನದ ಮೇಲೆ ಪ್ರಮಾಣ ಮಾಡಿದ್ದೇನೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಎಲ್ಲಾ ಮಾಹಿತಿ ಬಿಡುಗಡೆಯಾಗುತ್ತಿದ್ದಂತೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ. ಈ ಬೆನ್ನಲ್ಲೇ ಆಯೋಗ ವೆಬ್‌ಸೈಟ್ ಅನ್ನೇ ಬಂದ್ ಮಾಡಿದೆ. ಮಧ್ಯಪ್ರದೇಶ, ಬಿಹಾರದಲ್ಲಿ ವೆಬ್‌ಸೈಟ್ ಬಂದ್ ಮಾಡಲಾಗಿದೆ. ಚುನಾವಣಾ ಆಯೋಗ ನಮಗೆ ಸಂಪೂರ್ಣವಾದ ಮತದಾರರ ಪಟ್ಟಿಯನ್ನು ನೀಡಿದರೆ ನಾವು ಕರ್ನಾಟಕ ಮಾತ್ರವಲ್ಲ ಭಾರತದಾದ್ಯಂತ ನಡೆದಿರುವ ಈ ಮತ ಕಳವನ್ನು ಸಾಕ್ಷಿ ಸಮೇತ ಬಹಿರಂಗಪಡಿಸಬಲ್ಲೆವು” ಎಂದಿದ್ದಾರೆ.
