ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಸಮೀಪದ ವಿ.ಕೋಡಿಹಳ್ಳಿ ಗ್ರಾಮದಲ್ಲಿ ಮೂವರನ್ನು ಕಚ್ಚಿ ಗಾಯಗೊಳಿಸಿದ್ದ ಚಿರತೆಯನ್ನು ಅರಣ್ಯ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಬಲೆ ಬೀಸಿ ಯಶಸ್ವಿಯಾಗಿ ಗುರುವಾರ ಸೆರೆ ಹಿಡಿದ್ದಾರೆ.
ಚಿರತೆ ಚಿಕ್ಕಕೆರೆ ಬಾರೆ ತೋಟದ ಸಾಲಿನಲ್ಲಿ ಕಾಣಿಸಿಕೊಂಡು ಸ್ಥಳೀಯ ರೈತರ ಮೇಲೆರಗಿ ಗಾಯಗೊಳಿಸಿತ್ತು. ಈಗಾಗಲೇ ಹಲವು ಕಡೆ ಮನುಷ್ಯರ ಮೇಲೆ ಬೀಳುತ್ತಿದ್ದ ಚಿರತೆ ಬಗ್ಗೆ ಎಚ್ಚೆತ್ತ ಸ್ಥಳೀಯರು ಮಕ್ಕಳು ವೃದ್ಧರ ಮೇಲೆರೆಗುವ ಮುನ್ನ ಸ್ಥಳದಿಂದ ಓಡಿಸುವ ಪ್ರಯತ್ನ ಮಾಡಿ ಮೂವರು ಗಾಯ ಗೊಂಡ ವರದಿ ಪ್ರಕಟವಾಗಿತ್ತು.
ಸ್ಥಳೀಯರ ಆಕ್ರೋಶಕ್ಕೆ ತುತ್ತಾಗಿದ್ದ ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತು ಸಿ.ಎಸ್.ಪುರ ಪೊಲೀಸರ ಸಹಕಾರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು ಎಂಟು ವರ್ಷದ ಚಿರತೆಯನ್ನು ಬಲೆ ಬೀಸಿ ಹಿಡಿದಿದ್ದಾರೆ. ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ನೇತೃತ್ವದ ತಂಡ 24 ಗಂಟೆಗಳಲ್ಲಿ ಚಿರತೆ ಹಿಡಿದ ಕಾರ್ಯಾಚರಣೆಗೆ ಪ್ರಶಂಸೆ ವ್ಯಕ್ತವಾಗಿದೆ.
ತುರುವೇಕೆರೆ ತಾಲ್ಲೂಕಿನಲ್ಲಿ ಐವರ ಮೇಲೆರಗಿ ಗಾಯ ಮಾಡಿದ್ದ ಚಿರತೆ ಹಾಗೂ ನೇರಳೆ ಕೆರೆಯಲ್ಲಿ ಕುರಿಗಾಯಿ ಮೇಲೆ ಬಿದ್ದ ಚಿರತೆ ಇದೇ ಇರಬಹುದೇ ಎಂಬುದು ಅರಣ್ಯ ಇಲಾಖೆ ಸ್ಪಷ್ಟಪಡಿಸಬೇಕಿದೆ. ನಂತರ ದೂರದ ಅರಣ್ಯ ಪ್ರದೇಶಕ್ಕೆ ಸಾಗಿಸಿ ಬಿಡುವುದಾಗಿ ಇಲಾಖೆ ತಿಳಿಸಿದೆ.