ಇತ್ತೀಚೆಗೆ ಧರ್ಮಸ್ಥಳದಲ್ಲಿ ನಿನ್ನೆ ಕುಡ್ಲ ರ‍್ಯಾಂಪೇಜ್ ಎಂಬ ಹೆಸರಿನ ಯೂಟ್ಯೂಬರ್ ಆಗಿರುವ ಅಜಯ್ ಅಂಚನ್, ಯುನೈಟೆಡ್ ಮೀಡಿಯಾದ ಅಭಿಷೇಕ್, ಸಂಚಾರಿ ಸ್ಟುಡಿಯೋದ ವಿಜಯ್ ಮತ್ತು ಕುಡ್ಲಾ ರಾಂಪೇಜ್‌ನ ಕ್ಯಾಮೆರಾ ಪರ್ಸನ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಪ್ರಕರಣದ ಆರೋಪಿಗಳನ್ನು ಬಂಧಿಸಬೇಕು ಎಂದು ಪ್ರೆಸ್ ಕ್ಲಬ್ ಕೌನ್ಸಿಲ್ ಆಗ್ರಹಿಸಿದೆ.
ಈ ಸಂಬಂಧ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪ್ರೆಸ್ ಕ್ಲಬ್ ಕೌನ್ಸಿಲ್ ಮನವಿ ನೀಡಿದೆ. “ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಅಕ್ರಮವಾಗಿ ಹೂತಿಟ್ಟ ಪ್ರಕರಣದ ಬಗ್ಗೆ ಮಾಧ್ಯಮಗಳು ವರದಿ ಮಾಡುವ ಸಮಯದಲ್ಲಿ ಹಲ್ಲೆ ನಡೆದಿದೆ. ಹೂತು ಹಾಕಿರುವ ಶವಗಳ ಅಸ್ಥಿ ಪಂಜರಗಳು ದೊರೆತ ಬಗ್ಗೆ ಯಾರೂ ಪ್ರಸಾರ ಮಾಡಬಾರದೆಂದು ಬೆದರಿಕೆ ಒಡ್ಡಲಾಗುತ್ತಿದೆ” ಎಂದು ಕೌನ್ಸಿಲ್ ಆರೋಪಿಸಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ | ಯೂಟ್ಯೂಬರ್‌ಗಳ ಮೇಲೆ ಹಲ್ಲೆ; ನಟ ಪ್ರಕಾಶ್ ರಾಜ್ ಖಂಡನೆ
“ಈ ಘಟನೆಯನ್ನು ರಾಜ್ಯದ ಎಲ್ಲಾ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ” ಎಂದು ಹೇಳಿರುವ ಕೌನ್ಸಿಲ್, “ಪತ್ರಕರ್ತರ ಮೇಲೆ ನಡೆದ ಹಲ್ಲೆಯನ್ನು ಪ್ರೆಸ್ ಕ್ಲಬ್ ಕೌನ್ಸಿಲ್ ಮಾಧ್ಯಮ ಸಂಸ್ಥೆಯು ತೀವ್ರವಾಗಿ ಖಂಡಿಸುತ್ತೇವೆ” ಎಂದು ತಿಳಿಸಿದೆ.
“ಯೂಟ್ಯೂಬರ್‌ಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇವರ ಹಿಂದಿರುವ ಪ್ರಭಾವಿ ಶಕ್ತಿಗಳು ಯಾರೆಂಬುದನ್ನು ಪತ್ತೆ ಮಾಡಿ ಅವರ ಮೇಲೂ ಕ್ರಮ ಕೈಗೊಳ್ಳಬೇಕು” ಎಂದು ಪತ್ರಿಕಾ ಸಂಸ್ಥೆ ಆಗ್ರಹಿಸಿದೆ.
