ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮಹದೇವಪುರದಲ್ಲಿ ನಡೆದ ಚುನಾವಣಾ ಅಕ್ರಮ ಮತ್ತು ಮತಗಳ್ಳತನ ವಿರೋಧಿಸಿ ಫ್ರೀಡಂ ಪಾರ್ಕ್‌ನಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.
ಈ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಬಂದಿದ್ದರು. ಈ ವೇಳೆ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ ಹಲವರು, “ಬಿಜೆಪಿ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳು ಸೇರಿಕೊಂಡು ಈ ಸಂಚನ್ನು ರೂಪಿಸಿದ್ದಾರೆ. ಹಾಗಾಗಿ, ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು” ಎಂದು ಆಗ್ರಹಿಸಿದ್ದಾರೆ.

ಬಸವನಗುಡಿಯಿಂದ ಬಂದಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡರೋರ್ವರು ಮಾತನಾಡಿ, “ರಾಹುಲ್ ಗಾಂಧಿಯವರ ಹೋರಾಟಕ್ಕೆ ನಮ್ಮ ಬೆಂಬಲ ನೀಡಲು ಬಂದಿದ್ದೇವೆ. ಈ ಹಿಂದೆ ಶೇಷನ್ ಅವರಂತಹ ಪ್ರಾಮಾಣಿಕ ಅಧಿಕಾರಿಗಳು ಚುನಾವಣಾ ಆಯೋಗದಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಈಗಿನ ಕೆಲವು ಅಧಿಕಾರಿಗಳು ಬಿಜೆಪಿಯ ಕೇಂದ್ರ ಕಚೇರಿಯಿಂದ ನಿಯೋಜಿಸಲ್ಪಡುತ್ತಿದ್ದಾರೆ. ಒಂದು ರೀತಿಯಲ್ಲಿ ಏಜೆಂಟ್ ಥರ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಾದರೆ ಚುನಾವಣಾ ಆಯೋಗದ ಬಗ್ಗೆ ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಬೇಕು” ಎಂದು ಒತ್ತಾಯಿಸಿದರು.
ಮೈಸೂರಿನಿಂದ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತ ಮಾತನಾಡಿ, “ಪ್ರಧಾನಿ ಮೋದಿ, ಚುನಾವಣಾ ಆಯೋಗವೂ ಒಳಗೊಂಡಂತೆ ಮತಗಳ್ಳತನದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ಮಹದೇವಪುರದಲ್ಲಿ 1 ಲಕ್ಷ ಮತಗಳವು ಆಗಿರುವುದಾಗಿ ದಾಖಲೆ ಬಿಡುಗಡೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕು. ಮುಂದಿನ ದಿನಗಳಲ್ಲಿ ಚುನಾವಣೆಗೂ ಮೊದಲು ಕಾಂಗ್ರೆಸ್ ಕಾರ್ಯಕರ್ತರು ಎಲ್ಲವನ್ನೂ ಹೆಚ್ಚು ಜಾಗರೂಕತೆಯಿಂದ ಪರಿಶೀಲನೆ ನಡೆಸುತ್ತೇವೆ” ಎಂದು ತಿಳಿಸಿದರು.
ಬ್ಯಾಟರಾಯನಪುರದಿಂದ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತೆ ಮಾತನಾಡಿ, “ದಾಖಲೆ ಇಟ್ಟುಕೊಂಡೇ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಹಾಗಾಗಿ, ಅಕ್ರಮ ನಡೆದಿರುವುದು ಸ್ಪಷ್ಟ. ಜನರು ಈ ಬಗ್ಗೆ ಜಾಗೃತರಾಗಬೇಕು. ತಮ್ಮ ವೋಟನ್ನು ಬೇರೆಯವರು ಹಾಕದಂತೆ ನೋಡಿಕೊಳ್ಳಬೇಕು” ಎಂದು ತಿಳಿಸಿದರು.

ಪುಲಕೇಶಿನಗರದಿಂದ ಬಂದಿದ್ದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡರೋರ್ವರು ಮಾತನಾಡಿ, “ಮೋದಿ ಹವಾ ಅಂತ ಚುನಾವಣಾ ಸಮಯದಲ್ಲಿ ಬೊಗಳೆ ಬಿಡಲಾಗುತ್ತಿದೆ. ಮೋದಿ ಹವಾ ಏನೂ ಇಲ್ಲ. ಇದೆಲ್ಲ ಚೋರ್ ಹವಾ ಇದು. ಎಲೆಕ್ಷನ್ ಕಮಿಷನ್ ಹಾಗೂ ಬಿಜೆಪಿಗೆ ಧಿಕ್ಕಾರ ಹೇಳುತ್ತೇವೆ” ಎಂದು ಆಕ್ರೋಶ ಹೊರಹಾಕಿದರು.
ಈ ದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, “ಇಡಿ, ಸಿಬಿಐ ಸೇರಿದಂತೆ ಕೇಂದ್ರದ ಸಂಸ್ಥೆಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ ಚುನಾವಣಾ ಆಯೋಗವನ್ನೂ ಕೂಡ ಬಿಜೆಪಿಯವರು ಬಳಸಿಕೊಳುತ್ತಿದ್ದಾರೆ. ಇದರ ಬಗ್ಗೆ ಜನರು ಜಾಗೃತರಾಗಬೇಕು” ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಬರುತ್ತಿದ್ದ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿದ ಪೊಲೀಸರು
ಇನ್ನು ಫ್ರೀಡಂ ಪಾರ್ಕಿನಲ್ಲಿ ಭದ್ರತೆಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಅನ್ನು ಮಾಡಲಾಗಿತ್ತು. ಪ್ರತಿಭಟನಾ ಸ್ಥಳದ ಸುತ್ತಲೂ ಕಾಂಗ್ರೆಸ್ ನಾಯಕರ ಫ್ಲೆಕ್ಸ್‌ಗಳು ರಾರಾಜಿಸುತ್ತಿತ್ತು.
ಎರಡು ಕಡೆ ನಿರ್ಮಿಸಲಾಗಿದ್ದ ಪ್ರವೇಶ ದ್ವಾರಗಳ ಬಳಿ ಮಾಧ್ಯಮದ ಪ್ರತಿನಿಧಿಗಳೂ ಸೇರಿದಂತೆ ಸಭಾಂಗಣಕ್ಕೆ ಬರುತ್ತಿದ್ದ ಪ್ರತಿಯೊಬ್ಬರನ್ನೂ ಕೂಡ ಪೊಲೀಸರು ತಪಾಸಣೆ ನಡೆಸುತ್ತಿದ್ದ ದೃಶ್ಯ ಕಂಡು ಬಂತು. ಮಹಿಳೆಯರಿಗೆ ಸಭಾಂಗಣದ ಒಳಗೆ ಪ್ರವೇಶಿಸಲು ವಿಶೇಷವಾಗಿ ಬೇರೆಯದೇ ಪ್ರವೇಶದ್ವಾರವನ್ನು ಕೂಡ ಪೊಲೀಸರು ಮಾಡಿದ್ದರು.

ಕೇವಲ ತಪಾಸಣೆ ಮಾತ್ರವಲ್ಲದೇ, ಕೈಯ್ಯಲ್ಲಿದ್ದ ಗುಟ್ಕಾ ಪಾಕೆಟ್, ನೀರಿನ ಬಾಟಲ್, ಪ್ಲೆ ಕಾರ್ಡ್‌ಗಳನ್ನೂ ಕೂಡ ಸಭಾಂಗಣದೊಳಗೆ ಕೊಂಡೊಯ್ಯಲು ಪೊಲೀಸರು ಅನುಮತಿಸಲಿಲ್ಲ. ಈ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಪ್ಲೆಕಾರ್ಡ್ ಇಟ್ಟುಕೊಂಡು ಉತ್ಸಾಹದಿಂದ ಬಂದಿದ್ದ ಕೆಲವು ಕಾರ್ಯಕರ್ತರಿಗೆ ನಿರಾಸೆಯಾಯಿತು. ಫ್ರೀಡಂ ಪಾರ್ಕಿನ ಕಟ್ಟೆಯ ಬಳಿ ಪ್ಲೆ ಕಾರ್ಡ್, ಕಾಂಗ್ರೆಸ್ ಬಾವುಟಗಳ ರಾಶಿಯೇ ಬಿದ್ದಿದ್ದು ಕಂಡು ಬಂತು.

ಬೃಹತ್ ಪ್ರಮಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೆರೆದಿದ್ದರಿಂದ ಫ್ರೀಡಂ ಪಾರ್ಕಿನಿಂದ ಮೆಜೆಸ್ಟಿಕ್‌ನವರೆಗೆ ಸ್ವಲ್ಪಮಟ್ಟಿಗೆ ಟ್ರಾಫಿಕ್ ಜಾಮ್ ಉಂಟಾದದ್ದು ಕಂಡುಬಂತಾದರೂ, ವಾಹನಗಳು ರಸ್ತೆಯ ಬದಿಗಳಲ್ಲಿ ಪಾರ್ಕಿಂಗ್ ಮಾಡದಂತೆ ಟ್ರಾಫಿಕ್ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದರು. ಅಲ್ಲಲ್ಲಿ ಪಾರ್ಕಿಂಗ್ ಮಾಡಿ ತೆರಳಿದ್ದ ವಾಹನಗಳಿಂದ ಸಮಸ್ಯೆಯಾದಾಗ ಟೋಯಿಂಗ್ ಮಾಡಿ, ಪೊಲೀಸರೇ ತೆರವುಗೊಳಿಸಿದರು.



ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.