ಗ್ರಾಮ ಪಂಚಾಯತ್‌ನಲ್ಲಿ ಕಳೆದ ಎರಡು ತಿಂಗಳಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೇಮಕವಾಗಿಲ್ಲ. ಇದರಿಂದಾಗಿ ಪಂಚಾಯತ್ ಕಾರ್ಯಗಳಲ್ಲಿ ಸ್ವಚ್ಛತಾ ಕಾರ್ಯ ಸ್ಥಗಿತಗೊಂಡ ಹಿನ್ನಲೆಯಲ್ಲಿ ಲಿಂಗಸೂಗೂರು ತಾಲ್ಲೂಕು ಕೋಠಾ ಪಂಚಾಯತಿಗೆ ಬೀಗ ಹಾಕಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಕಸದ ರಾಶಿ, ಒಳಚರಂಡಿ ಸಮಸ್ಯೆ, ಹಾಗೂ ಕುಡಿಯುವ ನೀರು ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ಕಚೇರಿಗೆ ಅಲೆದಾಟ ದಿನೇ ದಿನೇ ಹೆಚ್ಚುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಬಗ್ಗೆ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ತಾಲ್ಲೂಕು ಮುಖಂಡ ಮಲ್ಲೇಶ ಮ್ಯಾಗೇರಿ ಮಾತನಾಡಿ, ʼಗ್ರಾಮ ಪಂಚಾಯತ್ ಕಚೇರಿಯು ತಾತ್ಕಾಲಿಕವಾಗಿ ಬೇರೆ ಪಂಚಾಯತ್‌ನ ಪಿಡಿಒ ಸಹಾಯ ಪಡೆಯುತ್ತಿದ್ದರೂ, ಅದು ಸಮರ್ಪಕ ಪರಿಹಾರ ದೊರಕುತ್ತಿಲ್ಲ.
ಗ್ರಾಪಂನಲ್ಲಿ ಹಿಂದಿನ ಪಿಡಿಒ ಅಮಾನತುಗೊಂಡ ಬಳಿಕ, ಹೊಸ ಪಿಡಿಒ ನೇಮಕವಾಗದೇ ಹಲವು ದಿನಗಳಿಂದ ಪಂಚಾಯಿತಿ ಕಾರ್ಯಗಳು ಸ್ಥಗಿತಗೊಂಡಿವೆ. ದಿನನಿತ್ಯದ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ವ್ಯತ್ಯಯ ಉಂಟಾಗಿದೆʼ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಿಡಿಒ ಹುದ್ದೆ ಖಾಲಿಯಿಂದ ವಿವಿಧ ಸರ್ಕಾರಿ ಸೇವೆಗಳು, ನಿರ್ಮಾಣ ಕಾಮಗಾರಿಗಳು, ದಾಖಲೆ ಪತ್ರಗಳ ನವೀಕರಣ, ಹಿತಾಸಕ್ತಿ ಯೋಜನೆಗಳ ಜಾರಿ ಸೇರಿದಂತೆ ಹಲವು ಕೆಲಸಗಳು ನಿಂತು ಹೋಗಿವೆ. ಪಂಚಾಯಿತಿ ಕಚೇರಿಗೆ ತೆರಳಿದರೆ ಅಧಿಕಾರಿಗಳು ಇಲ್ಲ ಎನ್ನುತ್ತಾರೆ. ಇದರಿಂದ ನಮ್ಮ ಅರ್ಜಿಗಳು ತಿಂಗಳಿನಿಂದ ಬಾಕಿ ಇವೆʼ ಎಂದು ದೂರಿದರು.


ಈ ಸುದ್ದಿ ಓದಿದ್ದೀರಾ? ರಾಯಚೂರು | ಪ್ರೀತಿ ವಿಚಾರದಲ್ಲಿ ಯುವಕನ ಹತ್ಯೆ ಖಂಡಿಸಿ – ಸಾಲಿಡಾರಿಟಿ ಪ್ರತಿಭಟನೆ
ಕೂಡಲೇ ಖಾಯಂ ಪಿಡಿಒ ನೇಮಕ ಮಾಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
