2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಸಮಯದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳ ಕಳ್ಳತನ ನಡೆದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿರುವ ಸಂಗತಿ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.
ಮತಗಳ್ಳತನದ ಸ್ಫೋಟಕ ದಾಖಲೆಗಳನ್ನು ನವದೆಹಲಿಯಲ್ಲಿ ಗುರುವಾರ ಬಿಡುಗಡೆ ಮಾಡಿ, ಶುಕ್ರವಾರ ಬೆಂಗಳೂರಿನಲ್ಲಿ ಅಕ್ರಮ ಮತದಾನದ ವಿರುದ್ಧ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿ ದೇಶಾದ್ಯಂತ ಅಭಿಯಾನಕ್ಕೆ ಕರೆ ನೀಡಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಅಕ್ರಮವಾಗಿ 1,00,250 ಮತಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ ನಕಲಿ ಮತದಾರರು, ಅಮಾನ್ಯ ವಿಳಾಸಗಳು, ಒಂದೇ ವಿಳಾಸದಲ್ಲಿ ಅನೇಕ ಮತದಾರರು, ಅಸ್ಪಷ್ಟ ಫೋಟೋಗಳು ಹಾಗೂ ಫಾರ್ಮ್-6 ದುರ್ಬಳಕೆ ಮೂಲಕ ಮತಗಳ್ಳತನ ನಡೆದಿದೆ ಎಂದು ಬಿಡಿಬಿಡಿಯಾಗಿ ವಿವರಿಸಿದ್ದಾರೆ.
ರಾಷ್ಟ್ರಮಟ್ಟದ ಸುದ್ದಿಗಾರರ ಮುಂದೆಯೇ ಪಿಪಿಟಿ ಪ್ರಸೆಂಟೇಷನ್ ಮೂಲಕ ಮತಗಳ್ಳತನದ ವಿವರ ತೆರೆದಿಟ್ಟು, “ನಮ್ಮ ಸಂವಿಧಾನದ ಅಡಿಪಾಯವೇ ಒಂದು ವ್ಯಕ್ತಿಗೆ ಒಂದು ಮತ. ಆದರೆ ಭಾರತದ ಚುನಾವಣೆಗಳ ಬಗ್ಗೆ ನೋಡಿದಾಗ ಒಂದು ವ್ಯಕ್ತಿಗೆ ಒಂದು ಮತ ಭರವಸೆ ಎಷ್ಟು ಗಟ್ಟಿಯಾಗಿದೆ” ಎಂದು ಗಂಭೀರವಾದ ಪ್ರಶ್ನೆಗಳನ್ನು ಎತ್ತಿದ್ದಾರೆ.
ಮತಗಳ್ಳತನ ಬಗ್ಗೆ ‘ಅಣು ಬಾಂಬ್’ ಸಿಡಿಸುತ್ತೇನೆ ಎಂದಿದ್ದ ರಾಹುಲ್ ಗಾಂಧಿ ಅಕ್ಷರಶಃ ಬಾಂಬ್ ಸಿಡಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿ ಆರೋಪ ಸದ್ದು ಮಾಡುತ್ತಿದೆ. ಬಿಜೆಪಿಯೊಂದಿಗೆ ಚುನಾವಣೆ ಆಯೋಗದ ಮೈತ್ರಿ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ.
‘ವೋಟ್ ಚೋರಿ’ ಶೀರ್ಷಿಕೆಯಡಿ ವಿವರವಾದ ವರದಿ ಬಿಡುಗಡೆಯಾಗಿದ್ದು, ವ್ಯವಸ್ಥಿತವಾಗಿ ಚುನಾವಣಾ ಅಕ್ರಮ ನಡೆದಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ. “ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮಹದೇವಪುರ ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಆದರೆ, ಮಹದೇವಪುರದಲ್ಲೇ ಬಿಜೆಪಿಗೆ 1,14,046 ಮತಗಳ ಮುನ್ನಡೆ ಸಿಕ್ಕಿತ್ತು. ಅಧ್ಯಯನ ನಡೆಸಿದಾಗ 1,00,250 ಮತದಾರರು ನಕಲಿ ಎಂಬುದು ಗೊತ್ತಾಯಿತು. ಹೀಗಾಗಿ, ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ” ಎಂದು ರಾಹುಲ್ ದೂರಿದ್ದಾರೆ.
ಮಹಾದೇವಪುರದಲ್ಲಿನ ಮತಗಳ್ಳತನದ ಬಗ್ಗೆ ಐದು ವಿಧಗಳಾಗಿ ವಿವರಿಸಿರುವ ರಾಹುಲ್ ಗಾಂಧಿ, ನಕಲಿ ಮತದಾರರು 11,965 ಇದ್ದಾರೆ, ನಕಲಿ ಮತ್ತು ಅಮಾನ್ಯ ವಿಳಾಸಗಳು 40,009 ಇವೆ, ಒಂದೇ ವಿಳಾಸದಲ್ಲಿ 10,452 ಮತದಾರರಿದ್ದಾರೆ, ಅಮಾನ್ಯ ಫೋಟೋಗಳು 4,132 ಇವೆ ಹಾಗೂ ಫಾರ್ಮ್-6ರ ದುರ್ಬಳಕೆಯಲ್ಲಿ 33,692 ಮತದಾರರ ವಿವರ ಇದೆ. ಇದೆಲ್ಲ ಸೇರಿದರೆ 1,00,250 ಮತದಾರರು ಮಹಾದೇವಪುರದಲ್ಲಿ ನಕಲಿಯಾಗಿದ್ದಾರೆ ಎಂದು ದಾಖಲೆ ಮುಂದಿಟ್ಟು ಬಯಲು ಮಾಡಿದ್ದಾರೆ. ಇದಕ್ಕೆ ಚುನಾವಣೆ ಆಯೋಗ ಉತ್ತರಿಸಬೇಕಾದ ಹೊಣೆಗಾರಿಕೆ ಇದೆ.
ಎಲ್ಲ ಅಕ್ರಮಗಳಿಗೆ ಚುನಾವಣಾ ಆಯೋಗದ ವೈಫಲ್ಯವೇ ಕಾರಣ ಎಂದು ರಾಹುಲ್ ಗಾಂಧಿ ನೇರವಾಗಿ ದೂರಿದ್ದಾರೆ. “ಪಾರದರ್ಶಕತೆಗಾಗಿ ಯಂತ್ರ ಓದಬಲ್ಲ ಡಿಜಿಟಲ್ ಮತದಾರರ ಪಟ್ಟಿಯನ್ನು ನೀಡಲು ಚುನಾವಣಾ ಆಯೋಗ ನಿರಾಕರಿಸಿದೆ. ಮತದಾನದ ಪ್ರಕ್ರಿಯೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯುವ ನಿಯಮಗಳನ್ನು ಬದಲಾಯಿಸಿ, ಸಾಕ್ಷ್ಯ ನಾಶಕ್ಕೆ ಅನುವು ಮಾಡಿಕೊಡಲಾಗಿದೆ” ಎಂದಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ಮತದಾರರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಮತ್ತು ಮತದಾನದ ಸಮಯ ಮುಗಿದ ನಂತರ ಮತದಾನದ ಶೇಕಡಾವಾರು ಪ್ರಮಾಣದಲ್ಲಿ ಅಸಹಜ ಹೆಚ್ಚಳ ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಹತಾಶೆಯಿಂದ ರಾಹುಲ್ ಗಾಂಧಿ ಆರೋಪ
“ಜನರು ಕಾಂಗ್ರೆಸ್‌ಗೆ ಜನಾದೇಶ ನೀಡದ ಕಾರಣ ಹತಾಶೆ ಮತ್ತು ಕೋಪದಿಂದ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಬೇಜವಾಬ್ದಾರಿ ಹಾಗೂ ನಾಚಿಕೆ ಇಲ್ಲದ ನಡವಳಿಕೆಗಾಗಿ ಕಾಂಗ್ರೆಸ್ ಪಕ್ಷವನ್ನು ಮತದಾರರು ತಿರಸ್ಕರಿಸುತ್ತಲೇ ಇದ್ದಾರೆ” ಎಂದು ಬಿಜೆಪಿ ಟೀಕಿಸಿದೆ.
“ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸರ್ವಜ್ಞನಗರದಲ್ಲೂ ಮತ ಪ್ರಮಾಣ ಹೆಚ್ಚಾಗಿದೆ. ಇಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಸಿಕ್ಕಿದೆ. ಮತ ಪ್ರಮಾಣ ಹೆಚ್ಚಾಗಿರುವ ಬಗ್ಗೆ ರಾಹುಲ್ ಗಾಂಧಿ ಅವರು ಅಲ್ಲೂ ಅಧ್ಯಯನ ನಡೆಸಲಿ” ಎಂದು ಸಂಸದ ಪಿ.ಸಿ.ಮೋಹನ್ ಆಗ್ರಹಿಸಿದ್ದಾರೆ.
“ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದ ಮೇಲೆ ಆರೋಪ ಹೊರಿಸುವ ಮೊದಲು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಾವ ರೀತಿಯಲ್ಲಿ ಗೆದ್ದಿತು ಎಂಬುದಕ್ಕೆ ರಾಹುಲ್ ಗಾಂಧಿ ಉತ್ತರಿಸಲಿ” ಎಂದು ಕೇಂದ್ರ ಆಹಾರ ಸಚಿವ ಪ್ರಹ್ಲಾದ ಜೋಶಿ ಸವಾಲು ಹಾಕಿದ್ದಾರೆ.
6.60 ಲಕ್ಷ ಮತದಾರರ ಮಾಹಿತಿ ಪರಿಶೀಲನೆ: ಖರ್ಗೆ
“2024ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಮತಗಳ್ಳತನ ಮಾಡಿ ಈ ದೇಶದ ಪ್ರಧಾನಮಂತ್ರಿಯಾಗಿದ್ದಾರೆ. ರಾಹುಲ್ ಗಾಂಧಿ ಅವರು ಸತತ ಆರು ತಿಂಗಳ ಕಾಲ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದ 6.60 ಲಕ್ಷ ಮತದಾರರ ಮಾಹಿತಿಯನ್ನು ಪರಿಶೀಲನೆ ಮಾಡಿ ಮತದಾನದ ಅಕ್ರಮವನ್ನು ಬಯಲಿಗೆಳೆದಿದ್ದಾರೆ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
“ಚುನಾವಣಾ ಆಯೋಗ ಬಿಜೆಪಿಯ ಶಾಖಾ ಕಚೇರಿ ಆಗಿದೆ. ಮತಗಳ್ಳತನದ ವಿರುದ್ಧ ಕರ್ನಾಟಕ ರಾಜ್ಯದಿಂದ ಆರಂಭವಾಗಿರುವ ಪ್ರತಿಭಟನಾ ಅಭಿಯಾನ ಇಡೀ ದೇಶಾದ್ಯಂತ ವ್ಯಾಪಿಸಲಿದೆ. ರಾಹುಲ್ ಗಾಂಧಿಯವರು ಸಂಪೂರ್ಣವಾಗಿ ಅಧ್ಯಯನ ಮಾಡಿ, ಮತದಾನದ ಅಂಕಿ ಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಿ ದಾಖಲೆಗಳ ಸಮೇತ ದೇಶದ ಜನರ ಮುಂದೆ ಇಟ್ಟಿದ್ದಾರೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದ್ದಾರೆ.
“ಚುನಾವಣೆ ಆಯೋಗದ ಮೇಲೆ ಸುಳ್ಳಿನ ಸುರಿಮಳೆ ಜನತಂತ್ರಕ್ಕೆ ನೇಣು ಬಿಗಿಯುವ ದೂರ್ತ ಹುನ್ನಾರ. ಅಮೃತಕಾಲದ ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ್ಯ. ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅಸತ್ಯದ ಆರೋಪದ ಮೂಲಕ ಅನುಮಾನದ ಪ್ರಯೋಜನ ಪಡೆಯುವ ಕಿಡಿಗೇಡಿ ಪಿತೂರಿ. ಮತಗಳ್ಳತನಕ್ಕೆ ಒಂದೇ ಮದ್ದು- ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದು. ಅಷ್ಟು ಮಾಡಿದರೆ ಮತಗಳ್ಳರ ಆಟಕ್ಕೆ ಅಂಕೆ ಬೀಳುವುದು ಗ್ಯಾರಂಟಿ” ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಚುನಾವಣಾ ಆಯೋಗಕ್ಕೆ ಸಲಹೆ ನೀಡಿದ್ದಾರೆ.
ರಾಹುಲ್ ಗಾಂಧಿ ಮಾಡಿರುವ ಮತಗಳ್ಳತನದ ಆರೋಪದ ಬಗ್ಗೆ ಚುನಾವಣಾ ಆಯೋಗ ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿ ಅವರು ತಮ್ಮ ಆರೋಪಗಳಿಗೆ ಸಹಿ ಹಾಕಿ ಚುನಾವಣೆ ಆಯೋಗಕ್ಕೆ ದೂರು ನೀಡಲಿ. ತಮ್ಮ ವಿಶ್ಲೇಷಣೆ ಸತ್ಯವೆಂದು ಮತ್ತು ಆಯೋಗದ ವಿರುದ್ಧದ ಆರೋಪಗಳು ನಿಜವೆಂದು ರಾಹುಲ್ ಗಾಂಧಿ ಅವರು ಭಾವಿಸಿದ್ದರೆ, ತಮ್ಮ ಘೋಷಣೆಗೆ ನಿಯಮಗಳ ಆಧಾರದಲ್ಲಿ ಸಹಿ ಹಾಕಲು ಹಾಗೂ ಮತದಾರರ ಪಟ್ಟಿಗೆ ತಪ್ಪಾಗಿ ಸೇರಿಸಲಾಗಿರುವ ಅಥವಾ ಕೈಬಿಟ್ಟಿರುವ ಹೆಸರುಗಳ ವಿವರ ನೀಡಲು ಹಿಂಜರಿಯಬಾರದು. ಇದು ಮಾಡದಿದ್ದರೆ ದೇಶದ ಜನರೆದುರು ಕ್ಷಮೆ ಕೋರಬೇಕು” ಎಂದು ಹೇಳಿದೆ.
ಮತದಾರರ ಮನಸಲ್ಲಿ ರಾಹುಲ್ ಗಾಂಧಿ ಆರೋಪದ ಬಗ್ಗೆ ಏನಿದೆ ಎಂಬುದನ್ನು ಈ ದಿನ.ಕಾಂ ತಿಳಿಯುವ ಪ್ರಯತ್ನ ಮಾಡಿತು. ಗದಗ ಜಿಲ್ಲೆಯ ಶಿವಾನಂದ ಯಡಿಯಾಪುರ ಎಂಬುವರು ಮಾತನಾಡಿ, “ಮತಗಳ್ಳತನದ ಬಗ್ಗೆ ಹಿಂದಿನಿಂದಲೂ ಆರೋಪಗಳಿವೆ. ಈಗ ದೊಡ್ಡಮಟ್ಟದಲ್ಲಿ ರಾಹುಲ್ ಗಾಂಧಿ ಧ್ವನಿ ಎತ್ತಿದ್ದಾರೆ. ಚುನಾವಣೆ ಆಯೋಗ ಇದಕ್ಕೆಲ್ಲ ಸ್ಪಷ್ಟವಾಗಿ ಉತ್ತರಿಸಬೇಕು. ನುಣುಚಿಕೊಳ್ಳುವುದರಲ್ಲಿ ಅರ್ಥವಿಲ್ಲ. ಚುನಾವಣೆ ಪಾರದರ್ಶಕತೆ ಹೇಗಿದೆ ಎಂಬುದನ್ನು ದೇಶಕ್ಕೆ ತೋರಿಸಲಿ” ಎಂದು ಹೇಳಿದರು.
ಬಾಗಲಕೋಟೆಯ ಮಲ್ಲಿಕಾರ್ಜುನ ಗಣಾಚಾರಿ ಮಾತನಾಡಿ, “ರಾಹುಲ್ ಗಾಂಧಿ ಮತ ಕಳುವಾಗಿದೆ ಎಂದು ಆರೋಪಿಸಿದ್ದಾರೆ. ಇದು ಸಾಮಾನ್ಯ ಸಂಗತಿಯಲ್ಲ. ದೇಶಕ್ಕೆ ಸತ್ಯ ಗೊತ್ತಾಗಬೇಕು. ರಾಹುಲ್ ಗಾಂಧಿ ಹೇಳಿರುವುದು ನಿಜವೋ ಸುಳ್ಳೋ ಎಂಬುದು ತಿಳಿಯಬೇಕು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಬಗ್ಗೆ ತನಿಖೆಯಾಗಲಿ. ಮತಯಂತ್ರಗಳ ಪಾರದರ್ಶಕತೆ ಬಗ್ಗೆ ಅನುಮಾನಗಳು ಹಿಂದಿನಿಂದಲೂ ಇವೆ. ಬ್ಯಾಲೆಟ್ ಪೇಪರ್ ಮತ್ತು ಮತಯಂತ್ರಗಳನ್ನು ಇಟ್ಟು ಮತಚಲಾವಣೆಯಾಗಲಿ. ಆಗ ಸತ್ಯ ಗೊತ್ತಾಗುತ್ತದೆ” ಎಂದರು.
ಬಳ್ಳಾರಿ ಜಿಲ್ಲೆಯ ರೇಖಾ ಗುಪ್ತಾ ಮಾತನಾಡಿ, “ಈ ರಾಜಕೀಯ ವಿಷಯದಲ್ಲಿ ಅಷ್ಟು ಆಸಕ್ತಿ ಇಲ್ಲ. ಇಲ್ಲ ಎಲ್ಲರೂ ಅವರೇ. ಮನಸ್ಸಿನಿಂದ ಯಾರು ಕೆಲಸ ಮಾಡುತ್ತಿದ್ದಾರೆ ಹೇಳಿ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಮತಗಳು ಕಳುವು ಆಗುತ್ತವೆ ಎಂಬುದೇ ದೊಡ್ಡ ಸಂಗತಿ. ಇದು ಬರೀ ಒಂದು ಪ್ರತಿಭಟನೆ ನಡೆದು ವಿಷಯ ಮುಗಿಯಬಾರದು. ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದು, ಚುನಾವಣೆ ಆಯೋಗದ ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಎಲ್ಲದರಲ್ಲೂ ಅಕ್ರಮ ಎಂದಾದರೆ ಚುನಾವಣೆಗಳು ಏಕೆ ಬೇಕು” ಎಂದು ಪ್ರಶ್ನಿಸಿದರು.
ಮೈಸೂರಿನ ಪುನಿತ್ ಮಾತನಾಡಿ, “ಮತಯಂತ್ರಗಳು ಮನುಷ್ಯ ನಿರ್ಮಿತವಾಗಿವೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದಕ್ಕೆ ಯಾವ ಗ್ಯಾರಂಟಿ? ಬಿಜೆಪಿ ಈ ಆರೋಪ ಹೊರುವುದಕ್ಕಿಂತ ಸರ್ವಪಕ್ಷಗಳ ಸದಸ್ಯರ ಕಮಿಟಿ ರಚಿಸಿ, ಉನ್ನತಮಟ್ಟದ ತನಿಖೆ ನಡೆಸಲಿ. ಆಗ ಬಿಜೆಪಿ ಮತಗಳ್ಳತನ ಮಾಡಿದೆಯೋ ಇಲ್ಲವೋ ತಿಳಿಯುತ್ತದೆ. ರಾಹುಲ್ ಗಾಂಧಿ ಆರೋಪ ಸುಳ್ಳಿದ್ದರೆ ಕಾಂಗ್ರೆಸ್‌ನ ಬಣ್ಣವೂ ಬಯಲಾಗುತ್ತದೆ” ಎಂದು ಹೇಳಿದರು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.