ವಿಶ್ವವಿಖ್ಯಾತ ಜೋಗ್ ಜಲಪಾತದ ನಿಷೇಧಿತ ಮತ್ತು ಅತ್ಯಂತ ಅಪಾಯಕಾರಿ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಆರೋಪದ ಮೇಲೆ ಯೂಟ್ಯೂಬರ್ ಸೇರಿದಂತೆ ಇಬ್ಬರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಮೂಲದ ಯೂಟ್ಯೂಬರ್ ಗೌತಮ್ ಅರಸು ಮತ್ತು ಅವರಿಗೆ ಮಾರ್ಗದರ್ಶನ ನೀಡಿದ ಸೊರಬ ಮೂಲದ ಗೈಡ್ ಸಿದ್ದರಾಜ್ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ್ದಾರೆ. ಕಳೆದ ಜುಲೈ 6ರಂದು ಗೌತಮ್ ಅರಸು, ಗೈಡ್ ಸಿದ್ಧರಾಜ್ ಅವರ ಸಹಾಯದಿಂದ ಜೋಗ ಜಲಪಾತ ಬೀಳುವ ಅತ್ಯಂತ ಅಪಾಯಕಾರಿ ರಾಜಾ ಫಾಲ್ಸ್‌ನ ಬಂಡೆಯ ಮೇಲೆ ಹೋಗಿ ವಿಡಿಯೋ ಚಿತ್ರೀಕರಿಸಿದ್ದಾರೆ. ಈ ಪ್ರದೇಶದಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಸ್ಪಷ್ಟವಾಗಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದ್ದರೂ, ನಿಯಮ ಉಲ್ಲಂಘಿಸಿ ಈ ಕೃತ್ಯ ಎಸಗಿದ್ದಾರೆ.

“ಸ್ಲಿಪ್ ಆದರೆ ಗೋವಿಂದ” ಮತ್ತು “ಸಾಯೋದರೊಳಗೆ ನೋಡು ಒಮ್ಮೆ ಜೋಗದ ಗುಂಡಿ” ಎಂಬಂತಹ ಪ್ರಚೋದನಕಾರಿ ಶೀರ್ಷಿಕೆ ಮತ್ತು ಸಂಭಾಷಣೆಗಳೊಂದಿಗೆ ಈ ವಿಡಿಯೋವನ್ನು ‘Gowtham Naidu’ ಎಂಬ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದು ಇತರ ಪ್ರವಾಸಿಗರಿಗೂ ಅಪಾಯಕಾರಿ ಸಾಹಸಗಳಿಗೆ ಪ್ರೇರಣೆ ನೀಡುವ ಸಾಧ್ಯತೆ ಇರುವುದರಿಂದ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಪಾಠ ಕಲಿಯದ ಪ್ರಜ್ವಲ್, ಕಲಿಸಿದ್ದು ಯಾರಿಗೆ?
ನಿನ್ನೆ (ಆ.7) ಸಿದ್ದಾಪುರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಶಾಂತಿನಾಥ ಕೆ. ಪಾಸಾನೆ ಅವರು ಸರ್ಕಾರದ ಪರವಾಗಿ ಯೂಟ್ಯೂಬರ್ ಮತ್ತು ಗೈಡ್ ವಿರುದ್ಧ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.