ಈ ದಿನ ಸಂಪಾದಕೀಯ | ಮತಗಳ್ಳತನದ ಆರೋಪಕ್ಕೆ ಮೋದಿ ಸರ್ಕಾರವೇ ಉತ್ತರದಾಯಿ

Date:

Advertisements

ನಿನ್ನೆ ದೆಹಲಿಯಲ್ಲಿ ನಡೆದ ರಾಹುಲ್‌ ಪತ್ರಿಕಾಗೋಷ್ಠಿಯ ನಂತರ ಮಹಾರಾಷ್ಟ್ರ ಯಾಕೆಂದರೆ ಅಲ್ಲಿ ಜನರು ಆಯೋಗವನ್ನು ಪ್ರಶ್ನಿಸಲು ಶುರು ಮಾಡಿದ್ದಾರೆ. ಜನರ ಪ್ರಶ್ನೆಗಳಿಗೆ, ಅನುಮಾನಗಳಿಗೆ ಉತ್ತರಿಸುವುದು ಆಯೋಗದ ಜವಾಬ್ದಾರಿ. ಅದರಿಂದ ನುಣುಚಿಕೊಂಡರೆ ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ. ರಾಹುಲ್‌ ಪ್ರಶ್ನೆಗಳಿಗೆ ಉತ್ತರಿಸುವುದು ಚುನಾವಣಾ ಆಯೋಗದ ಕರ್ತವ್ಯ ಮಾತ್ರವಲ್ಲ, ಪ್ರಧಾನಿ ಮೋದಿಯವರೂ ಉತ್ತರಿಸಬೇಕಿದೆ.

ಕರ್ನಾಟಕದ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನವನ್ನು ದಾಖಲೆ ಸಹಿತ ದೇಶದ ಮುಂದಿಟ್ಟ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಇಂದು ಬೆಂಗಳೂರಿನಲ್ಲಿ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಾ, “ಪ್ರಧಾನಿ ನರೇಂದ್ರ ಮೋದಿ ಅವರು ಮತಗಳ ಕಳವು ಮಾಡಿ ಪ್ರಧಾನಿಯಾಗಿದ್ದಾರೆ. ನಾವು ಕೇಳಿದ ಮಾಹಿತಿಯನ್ನು ಚುನಾವಣಾ ಆಯೋಗ ನೀಡಿದರೆ ನಾವು ಅದನ್ನು ಸಾಬೀತುಪಡಿಸಬಲ್ಲೆವು” ಎಂದು ರಾಹುಲ್‌ ಸವಾಲು ಹಾಕಿದ್ದಾರೆ. ಒಬ್ಬ ವ್ಯಕ್ತಿಗೆ ಒಂದು ಮತ ಎಂಬುದನ್ನು ಸಂವಿಧಾನ ಸಾರಿ ಹೇಳಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಒಬ್ಬರೇ ಹಲವು ಮತ ಹಾಕುವ ಮೂಲಕ ಅಕ್ರಮ ನಡೆದಿದೆ. ಚುನಾವಣಾ ಆಯೋಗ ಬಿಜೆಪಿ ಜೊತೆ ಸೇರಿ ಮೋಸ ಮಾಡಿದೆ. ಕರ್ನಾಟಕದಲ್ಲಿ ಇನ್ನೂ ಕೆಲವು ಕ್ಷೇತ್ರಗಳಲ್ಲಿ ಮತಗಳವು ನಡೆದಿದೆ ಎಂದು ಆರೋಪಿಸಿದ್ದಾರೆ. ಈ ಆರೋಪಗಳಿಗೆ ಚುನಾವಣಾ ಆಯೋಗಕ್ಕಿಂತ ಮೋದಿ ಸರ್ಕಾರ ಮತ್ತು ಬಿಜೆಪಿ ಉತ್ತರದಾಯಿ. ಯಾರಾದರೂ ಬಯಸದೇ ಅಥವಾ ಒತ್ತಡ ಹಾಕದೇ ಈ ಕೆಲಸ ಚುನಾವಣಾ ಆಯೋಗ ಮಾಡಿರಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ಮತಗಳ್ಳತನದ ಲಾಭ ಬಿಜೆಪಿಗೆ ಮಾತ್ರ ಆಗಿದೆ.

ರಾಹುಲ್‌ ಅವರು ಚುನಾವಣಾ ಆಯೋಗಕ್ಕೆ ಬಹುಮುಖ್ಯ ಪ್ರಶ್ನೆಗಳನ್ನು ಕೇಳಿದ್ದಾರೆ. ನನ್ನನ್ನು ಪ್ರಶ್ನಿಸುವ ಬದಲಿಗೆ ದೇಶದ ಸಾಮಾನ್ಯ ಜನರಿಗೂ ತಿಳಿದುಕೊಳ್ಳಲು ಅನುಕೂಲವಾಗುವಂತೆ ಮತದಾರರ ಪಟ್ಟಿಯನ್ನು ಡಿಜಿಟಲ್‌ ಫಾರ್ಮ್ಯಾಟ್‌ನಲ್ಲಿ ಯಾಕೆ ನೀಡುತ್ತಿಲ್ಲ? ವಿಡಿಯೋ ಸಾಕ್ಷಿಗಳನ್ನು ಯಾಕೆ ನಾಶಪಡಿಸಿದ್ದೀರಿ? ಇಷ್ಟು ದೊಡ್ಡ ಮಟ್ಟದಲ್ಲಿ ಮತದಾರರ ಗುರುತಿನ ಚೀಟಿ ಅವ್ಯವಹಾರಕ್ಕೆ ಚುನಾವಣಾ ಆಯೋಗ ಯಾಕೆ ಇಳಿದಿದೆ? ಚುನಾವಣಾ ಆಯೋಗ ಯಾಕೆ ಬಿಜೆಪಿ ಏಜೆಂಟ್‌ ತರ ವರ್ತಿಸುತ್ತಿದೆ? ಈ ಪ್ರಶ್ನೆಗಳಿಗೆ ಉತ್ತರಿಸುವುದು ಚುನಾವಣಾ ಆಯೋಗದ ಕರ್ತವ್ಯ. ಇದು ರಾಹುಲ್‌ ಒಬ್ಬರ ಪ್ರಶ್ನೆಯಲ್ಲ, ದೇಶದ ಜನರ ಪ್ರಶ್ನೆ ಎಂದು ಪರಿಗಣಿಸಬೇಕಿದೆ. ಇಂತಹ ಆರೋಪಗಳನ್ನು ಎದುರಿಸುವಂತಾದ ಪರಿಸ್ಥಿತಿಯೇ ಚುನಾವಣಾ ಆಯೋಗಕ್ಕೆ ಕಳಂಕಪ್ರಾಯ.

Advertisements

ಕಳೆದ ಹತ್ತು ವರ್ಷಗಳಿಂದ ಪ್ರತಿ ರಾಜ್ಯದ ಚುನಾವಣೆ ನಡೆದಾಗಲೂ ಮತದಾರರ ಪ್ರಮಾಣ, ಮತಗಳ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದ ಬಗ್ಗೆ ವ್ಯಾಪಕ ಪ್ರಶ್ನೆಗಳು ಎದ್ದಿವೆ. ಕಳೆದ ಲೋಕಸಭಾ ಚುನಾವಣೆ ಎಂಟು ಹಂತಗಳಲ್ಲಿ ನಡೆದಿತ್ತು. ಪ್ರತಿ ಹಂತದಲ್ಲೂ ಮತದಾನದ ನಂತರ ಆಯೋಗದ ವೆಬ್‌ಸೈಟಿನಲ್ಲಿ ಮತದಾನದ ಪ್ರಮಾಣ ಪ್ರಕಟಿಸಲು ವಿಳಂಬ ಮಾಡುವುದು, ಶೇಕಡಾವಾರು ಪ್ರಮಾಣದಲ್ಲಿ ವ್ಯತ್ಯಾಸವಿರುವುದು ಕಂಡುಬಂದಿದೆ. ಆಗೆಲ್ಲ ಚುನಾವಣಾ ಆಯೋಗ ಹಾರಿಕೆಯ ಉತ್ತರ ನೀಡುತ್ತಲೇ ಬಂದಿತ್ತು. ಇದೀಗ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಇಡೀ ದೇಶದಲ್ಲಿ ಮತಗಳ್ಳತನದ ವಿರುದ್ಧ ಪ್ರತಿಭಟನೆಗೆ ಚಾಲನೆ ಸಿಕ್ಕಿದೆ. ಎಲ್ಲ ರಾಜ್ಯಗಳಲ್ಲೂ ಮತದಾರರ ಡಿಜಿಟಲ್‌ ಮಾಹಿತಿಯನ್ನು ಚುನಾವಣಾ ಆಯೋಗ ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿ ತನ್ನ ಪಾರದರ್ಶಕತೆಯನ್ನು ಪ್ರಮಾಣೀಕರಿಸುವ ಅಗತ್ಯವಿದೆ. ರಾಹುಲ್‌ ಗಾಂಧಿ ಅವರು ಮಹಾದೇವಪುರ ಕ್ಷೇತ್ರದ ಮತದಾರರ ಮಾಹಿತಿ ಕೇಳಿದಾಗ ಡಿಜಿಟಲ್‌ ರೂಪದಲ್ಲಿ ನೀಡದೇ ಪೇಪರ್‌ ದಾಖಲೆಗಳನ್ನು ಕೊಟ್ಟು ಬೇಜವಾಬ್ದಾರಿತನ ತೋರಿದೆ. ಆದರೂ ಅಷ್ಟೊಂದು ದಾಖಲೆಗಳನ್ನು ಡಿಲಿಟಲೀಕರಣಗೊಳಿಸಿ ಪ್ರತಿಯೊಂದು ಮತದಾರರ ಫೋಟೋ, ವಿಳಾಸ ಸರಿಯಾಗಿದೆಯೇ ಎಂದು ಪರಿಶೀಲಿಸಿ, ಮತಗಳ್ಳತನದ ಇಂಚಿಂಚು ವಿವರ ಪತ್ತೆ ಮಾಡಲು ಆರು ತಿಂಗಳು ದೀರ್ಘ ಕಾಲ ಹಿಡಿದಿದೆ ಎಂದು ರಾಹುಲ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹಾಗಾದರೆ ಚುನಾವಣಾ ಆಯೋಗ ಇನ್ನೂ ಡಿಜಿಟಲೀಕರಣಗೊಂಡಿಲ್ಲವೇ ಎಂಬ ಪ್ರಶ್ನೆಗೂ ಉತ್ತರಿಸಬೇಕಿದೆ. ಒಂದು ತಪ್ಪು ಮುಚ್ಚಿ ಹಾಕಲು ಇನ್ನೊಂದು ತಪ್ಪು, ಅದನ್ನು ಮುಚ್ಚಲು ಮತ್ತಷ್ಟು ತಪ್ಪುಗಳನ್ನು ಹೆಣೆಯುತ್ತ ಹೋದರೆ ಚುನಾವಣಾ ಆಯೋಗವೇ ಅಕ್ರಮಗಳ ಕಟಕಟೆಯಲ್ಲಿ ನಿಲ್ಲಬೇಕಾದೀತು. ಕಳ್ಳತನ ಎಷ್ಟು ಅಪರಾಧವೋ, ಕಳ್ಳರಿಗೆ ಸಹಕರಿಸುವುದೂ ಅಷ್ಟೇ ದೊಡ್ಡ ಅಪರಾಧ. ಈ ಎಚ್ಚರ ಆಯುಕ್ತರಿಗೆ ಇರಬೇಕು.

ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತವರ ಪಕ್ಷದ ಬ್ರಹ್ಮಾಂಡ ಭ್ರಷ್ಟಾಚಾರ, ಚುನಾವಣಾ ಬಾಂಡ್‌ ಹಗರಣ ಬಯಲಿಗೆ ಬಂದಿತ್ತು. ಬಿಜೆಪಿ ಅಧಿಕಾರ ಹಿಡಿಯಲು ಭ್ರಷ್ಟಾಚಾರದಲ್ಲಿ ತೊಡಗಿರುವುದು ಸ್ಪಷ್ಟವಾಗಿದೆ. ಚುನಾವಣಾ ಬಾಂಡ್‌ ಮೂಲಕ ಬಿಜೆಪಿಗೆ ಸಾವಿರಾರು ಕೋಟಿ ಹಣ ಹರಿದುಬರುತ್ತಿದೆ. ವಿಪಕ್ಷಗಳ ರಾಜಕಾರಣಿಗಳನ್ನು ಇಡಿ, ಸಿಬಿಐ ಛೂಬಿಟ್ಟು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಉದ್ಯಮಿಗಳನ್ನು ಬೆದರಿಸಿ ಬಿಜೆಪಿ ದೇಣಿಗೆ ಸಂಗ್ರಹಿಸಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಸಂಸತ್ತಿನಲ್ಲೂ ಧ್ವನಿ ಎತ್ತಿದ್ದರು. ನಂತರ ಸುಪ್ರೀಂ ಕೋರ್ಟ್‌ ದೇಣಿಗೆ ಕೊಟ್ಟವರ ಮಾಹಿತಿ ಬಹಿರಂಗಪಡಿಸುವಂತೆ ತಾಕೀತು ಮಾಡಿದ ನಂತರ ಬಿಜೆಪಿಗೆ ದೇಣಿಗೆ ನೀಡಿದವರ ಪಟ್ಟಿ ಹೊರಬಿತ್ತು. ಅದನ್ನು ನೋಡಿ ದೇಶವೇ ದಂಗುಬಡಿದಿತ್ತು. ನಷ್ಟದಲ್ಲಿರುವ ಉದ್ಯಮಗಳು, ಆರ್ಥಿಕ ಅಪರಾಧ ಪ್ರಕರಣ ಎದುರಿಸುತ್ತಿದ್ದ ಸಂಸ್ಥೆಗಳು, ಅದಾನಿ ತರಹದ ಉದ್ಯಮ ಸಂಸ್ಥೆಗಳು, ಸರ್ಕಾರದ ಬೃಹತ್‌ ಯೋಜನೆಗಳ ಗುತ್ತಿಗೆ ಪಡೆದವರು ಕೋಟಿಗಟ್ಟಲೆ ದೇಣಿಗೆ ನೀಡಿರುವುದು ಬಯಲಾಗಿತ್ತು.

ಲೋಕಸಭಾ ಚುನಾವಣೆಯಲ್ಲಿ ಬಹುಮತ ಗಳಿಸದೇ, ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಎನ್‌ಡಿಎ ಕೂಟ ರಚನೆ ಮಾಡಿಕೊಂಡು ಮೋದಿಯವರು ಮತ್ತೆ ಪ್ರಧಾನಿಯಾಗಿದ್ದಾರೆ. ಆ ನಂತರ ನಡೆದ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಹರಿಯಾಣದ ಮತ್ತು ಮಹಾರಾಷ್ಟ್ರ ಚುನಾವಣೆಗಳು ಕಾಂಗ್ರೆಸ್‌ಗೆ ತೀರಾ ನಿರಾಸೆಯಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟು ಪಡೆದ ಇಂಡಿಯಾ ಕೂಟಕ್ಕೆ ಮಹಾರಾಷ್ಟ್ರದ ಸೋಲು ಅನಿರೀಕ್ಷಿತವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಹದಿನೇಳು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ಆಡಳಿತ ಪಕ್ಷ ಕೇವಲ ಒಂಭತ್ತು ಸೀಟುಗಳನ್ನು ಪಡೆದು ಮುಖಭಂಗ ಎದುರಿಸಬೇಕಾಗಿ ಬಂದಿತ್ತು. ಆದರೆ, ಪ್ರತಿ ಸೋಲಿನ ನಂತರ ಕಾಂಗ್ರೆಸ್‌ ಸಹಿತ ಹಲವು ಪಕ್ಷಗಳು ಮತದಾನ ಪ್ರಕ್ರಿಯೆಗಳ ಬಗ್ಗೆ ನಿರಂತರವಾಗಿ ಅಸಮಾಧಾನ ಹೊರಹಾಕಿವೆ. ಸೋತಾಗಲೆಲ್ಲ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ ಎಂಬ ಬಿಜೆಪಿ ವ್ಯಂಗ್ಯವಾಡುತ್ತಿತ್ತು.

ಆದರೆ ಈ ಸಲ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಪಕ್ಕಾ ಆಟಂ ಬಾಂಬ್‌ ಇಟ್ಟಿದ್ದಾರೆ. ಅದೂ ಕರ್ನಾಟಕದ ವಿಧಾನಸಭಾ ಕ್ಷೇತ್ರವೊಂದರಲ್ಲಿ ಒಂದು ಲಕ್ಷ‌ ಮತ ಕಳ್ಳತನದ ಆರೋಪ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಸೋಲು ಗೆಲುವು ನಿರ್ಧಾರವಾಗುತ್ತದೆ. ಅಂತಹ ಸನ್ನಿವೇಶದಲ್ಲಿ ಒಂದು ಲಕ್ಷ ಮತಗಳ ಭಾರೀ ಕಳ್ಳತನ ಬಹು ಗಂಭೀರ ಆರೋಪ. ನಿನ್ನೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರಿನ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಆದ ಮತಗಳ್ಳತನವನ್ನು ದಾಖಲೆ ಸಹಿತ ದೇಶದ ಜನರ ಮುಂದಿಟ್ಟಿದ್ದಾರೆ. ಮಹದೇವಪುರದ ಒಂದೇ ಮನೆಯಲ್ಲಿ 80 ಮತದಾರರ ವಿಳಾಸ ಕಂಡು ಬಂದಿವೆ. ಖಾಲಿ ನಿವೇಶನದಲ್ಲಿ 60 ಮತದಾರರ ವಿಳಾಸ ಇದೆ. ಒಬ್ಬನಿಗೆ ನಾಲ್ಕೈದು ಕಡೆ, ಬೇರೆ ಬೇರೆ ರಾಜ್ಯಗಳಲ್ಲಿ ಗುರುತಿನ ಚೀಟಿ ಇರುವುದು, ಬೆಂಗಳೂರಿನ ಮತದಾರ ವಾರಾಣಸಿಯಲ್ಲಿ ಮತದಾನ ಮಾಡಿರುವುದು ಹೀಗೆ ಹಲವು ಬೃಹತ್‌ ಅಕ್ರಮವನ್ನು ರಾಹುಲ್‌ ಬಯಲು ಮಾಡಿದ್ದಾರೆ. ಈ ಕುರಿತು ರಾಹುಲ್‌ ಪತ್ರಿಕಾಗೋಷ್ಠಿಯ ನಂತರ ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ ಬಂದ್‌ ಮಾಡಿದೆ. ಯಾಕೆಂದರೆ ಅಲ್ಲಿ ಜನರು ಆಯೋಗವನ್ನು ಪ್ರಶ್ನಿಸಲು ಶುರು ಮಾಡಿದ್ದಾರೆ. ಜನರ ಪ್ರಶ್ನೆಗಳಿಗೆ, ಅನುಮಾನಗಳಿಗೆ ಉತ್ತರಿಸುವುದು ಆಯೋಗದ ತುರ್ತು ಜವಾಬ್ದಾರಿ. ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಈಗಾಗಲೇ ಪಾತಾಳಕ್ಕೆ ಕುಸಿದಿದೆ. ಭಾರತದ ಜನತಂತ್ರ ಮತ್ತಷ್ಟು ಅಪಹಾಸ್ಯಕ್ಕೆ ಗುರಿಯಾಗುವುದನ್ನು ತಪ್ಪಿಸಬೇಕಿದ್ದರೆ ಚುನಾವಣಾ ಆಯೋಗ ಮೋದಿ ಸರ್ಕಾರದ ʼಗುಲಾಮಗಿರಿʼಯ ಆರೋಪಗಳಿಂದ ಮೈಕೊಡವಿ ಮುಕ್ತವಾಗಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X