ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಬಳಿ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್, ರಸ್ತೆ ಬದಿಯಲ್ಲಿದ್ದ ಮರವೊಂದಕ್ಕೆ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಸರ್ಕಾರಿ ಬಸ್ಸು ಬೆಳಗಾವಿಯಿಂದ ಬೆಳಗುಂದಿಗೆ ಸಾಗುತ್ತಿದ್ದು, ಮಾರ್ಗ ಮಧ್ಯೆ ಬಸ್ಸಿನ ಸ್ಟೀರಿಂಗ್ ರಾಡ್ ಹಠಾತ್ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮವಾಗಿ ಬಸ್ ರಸ್ತೆಯ ಬದಿಯ ಚರಂಡಿಗೆ ಜಾರಿ, ಮರವೊಂದಕ್ಕೆ ಢಿಕ್ಕಿ ಹೊಡೆದಿದೆ.
ಅಪಘಾತದ ವೇಳೆಗೆ ಬಸ್ಸಿನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಇವರ ಪೈಕಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸ್ಥಳೀಯರ ಸಹಕಾರದಿಂದ ಅವರನ್ನು ತುರ್ತು ವೈದ್ಯಕೀಯ ನೆರವಿಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಘಟನೆ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಪ್ರಾರಂಭಿಸಲಾಗಿದೆ.