ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಹೆಚ್ಚು ಭೂಮಿ ತಂಪಾಗುತ್ತಿರುವುದರಿಂದ ರೈತರು ಬೆಳೆಸಿರುವ ಬೆಳೆಗಳಿಗೆ ಯೂರಿಯಾ ಗೊಬ್ಬರದ ಅಗತ್ಯತೆ ಹೆಚ್ಚು. ಸಮೃದ್ಧವಾಗಿ ಮಳೆಯಾಗುತ್ತಿರುವ ಬಿರುಸಾಗಿ ರೈತರ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ರೈತರಿಗೆ ಅಗತ್ಯವಾದಷ್ಟು ಯೂರಿಯಾ ಗೊಬ್ಬರ ದೊರೆಯುತ್ತಿಲ್ಲ, ಲಾರಿ ತುಂಬ ಗೊಬ್ಬರವನ್ನು ಬೇರೆ ಕಡೆ ಸಾಗಿಸಲಾಗುತ್ತಿದೆ ಎಂದು ರೈತರು ಆರೋಪಿಸಿ ದಿಢೀರನೆ ರಸ್ತೆಗಿಳಿದು ಕೊಪ್ಪಳದಲ್ಲಿ ನಡೆಸಿದರು.
ಬೇರೆಡೆಗೆ ಸೊಸೈಟಿಗಳಿಗೆ ಸಾಗಿಸುತ್ತಿದ್ದ ಗೊಬ್ಬರ ತುಂಬಿದ ಲಾರಿಗಳನ್ನು ತಡೆದು ಪ್ರತಿಭಟನೆಗಿಳಿದಿದ್ದರಿಂದ ಸಂಚಾರಕ್ಕೆ ಕ್ಷಣ ಕಾಲ ಅಡೆತಡೆಯಾಯಿತು. ನಂತರ ಪೊಲೀಸರ ಮಧ್ಯ ಪ್ರವೇಶದಿಂದ ಲಾರಿಗಳನ್ನು ಗೋದಾಮಿಗೆ ಮರಳಿಸಲಾಗುವುದು ಎಂದು ಮನವೊಲಿಸಿದ್ದರಿಂದ ಪ್ರತಿಭಟನೆ ಕೈಬಿಟ್ಟ ರೈತರು, ಲಾರಿಗಳೊಂದಿಗೆ ಗೊಬ್ಬರ ವಿತರಣಾ ಕೇಂದ್ರಕ್ಕೆ ಮರಳಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ
ತಾಲೂಕು ಒಕ್ಕಲತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕೇಂದ್ರಕ್ಕೆ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು. ಅಲ್ಲದೇ ರೈತರಿಗೆ ಸರಿಯಾಗಿ ಗೊಬ್ಬರ ವಿತರಿಸುವಂತೆ ಸೂಚಿಸಿದರು.
ರಸಗೊಬ್ಬರ ಖರೀದಿಸುವವರ ಸಾಲಿನಲ್ಲಿ ಸಮವಸ್ತ್ರದಲ್ಲಿ ಮಕ್ಕಳು ನಿಂತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಮಕ್ಕಳನ್ನು ಕರೆದು ಶಾಲೆಗೆ ಹೋಗುವುದು ಬಿಟ್ಟು ಇಲ್ಲಿಗೆ ಯಾಕೆ ಬಂದಿದ್ದೀರಿ? ಎಂದು ಮಕ್ಕಳಲ್ಲಿ ಕೇಳಿ ಪಾಲಕರ ಬಳಿ ವಿಚಾರಿಸಿ, ತಿಳಿ ಹೇಳಿ ಕಳುಹಿಸಿದರು.

