ಸಾರ್ವಜನಿಕರಿಗೆ ಅನಾನುಕೂಲ, ಮಾಲಿನ್ಯ, ಜೀವಭಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ರೈಲ್ವೆ ನಿಲ್ದಾಣದ ಮೂಲಕ ಅದಿರು ಸಾಗಾಣಿಕೆ ಮಾಡುವುದನ್ನು ಸ್ಥಗಿತಗೊಳಿಸಲು ಮನವಿ ಮಾಡಿ ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗುವುದು. ಭೇಟಿ ನೀಡುವವರೆಗೆ ತಾತ್ಕಾಲಿಕವಾಗಿ ಅದಿರು ಸಾಗಾಟ ಸ್ಥಗಿತಗೊಳಿಸಿ” ಎಂದು ಕಂಪನಿಗೆ ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

ಚಿತ್ರದುರ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಚಳ್ಳಕೆರೆ ನಗರದ ರೈಲ್ವೆ ಯಾರ್ಡ್ ಬಳಿ ಖಾಸಗಿ ಕಂಪನಿಯ ಅದಿರು ಸಾಗಾಟದ ಧೂಳಿನಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆ ನಡೆಸಿ ಅವರು ಮಾತನಾಡಿದ ಅವರು “ಚಳ್ಳಕೆರೆ ನಗರದ ರೈಲ್ವೆ ನಿಲ್ದಾಣದಲ್ಲಿ ಅದಿರನ್ನು ಲೋಡ್ ಮತ್ತು ಅನ್‍ಲೋಡ್ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೆಚ್ಚಿನ ಸಂಖ್ಯೆ ಹಾಗೂ ಭಾರೀ ಸಾಮರ್ಥ್ಯದ ಲಾರಿಗಳ ಓಡಾಟದಿಂದ ಅಪಾಯದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರು ಕೇಳಿ ಬಂದಿವೆ. ಈ ಹಿನ್ನಲೆಯಲ್ಲಿ ಪರಿಸರ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದೇನೆ. ವಾರದಲ್ಲಿ ಅಧಿಕಾರಿಗಳು ವರದಿ ನೀಡಲಿದ್ದಾರೆ. ಇದನ್ನು ಆಧರಿಸಿ ರೈಲ್ವೆ ಇಲಾಖೆಗೆ ಪತ್ರದ ಮುಖೇನ ಅದಿರು ಸಾಗಾಟ ಸ್ಥಗಿತಗೊಳಿಸಲು ಮನವಿ ಮಾಡಲಾಗುವುದು. ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರೊಂದಿಗೂ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ” ಭರವಸೆ ನೀಡಿದರು.

“ಅದಿರು ಸಾಗಾಣಿಕೆಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಉಪವಿಭಾಗಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ, ಲೋಕೋಪಯೋಗಿ, ಪ್ರಾದೇಶಿಕ ಸಾರಿಗೆ, ಚಳ್ಳಕೆರೆ ನಗರಸಭೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಉಪ ಸಮಿತಿ ರಚನೆಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು. ಈ ಉಪ ಸಮಿತಿ ನಿಯಮಾನುಸಾರ ಅದಿರು ಸಾಗಾಣಿಕೆ ಮಾಡಲಾಗುತ್ತಿದೆಯೇ ಎಂದು ಪರಿಶೀಲಿಸುವುದರ ಜೊತೆಗೆ, ಪರ್ಯಾಯ ಮಾರ್ಗಗಳ ಕುರಿತು ಸಲಹೆ ಸೂಚನೆಗಳನ್ನು ಒಂದು ವಾರದಲ್ಲಿ ನೀಡಲಿದೆ ಎಂದು ತಿಳಿಸಿದರು.
“ಸೋಮವಾರ ಖುದ್ದು ಸ್ಥಳಕ್ಕೆ ಭೇಟಿ ನೀಡುತ್ತೇನೆ. ಈ ಸಮಯದಲ್ಲಿ ತಾತ್ಕಾಲಿಕವಾಗಿ ಅದಿರು ಸಾಗಾಟ ಸ್ಥಗಿತಗೊಳಿಸಿ” ಎಂದು ಕಂಪನಿಗೆ ಸಭೆಯಲ್ಲಿ ತಿಳಿಸಲಾಯಿತು. ಕೂಡಲೇ ಧರಣಿ ನಿಲ್ಲಿಸುವಂತೆ ಮುಖಂಡರಿಗೆ ಜಿಲ್ಲಾಧಿಕಾರಿ ಕೋರಿದರು.
ಈ ಸುದ್ದಿ ಓದಿದ್ದೀರಾ? ಸ್ಮಶಾನ ಒತ್ತುವರಿ | ಹಲವು ವರ್ಷಗಳಾದರೂ ತೆರವುಗೊಳಿಸದೆ ಅಧಿಕಾರಿಗಳ ನಿರ್ಲಕ್ಷ್ಯ
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಎಂ.ಜೆ.ಮಹೇಶ್, ಪರಿಸರಾಧಿಕಾರಿ ಆಸಿಫ್ ಖಾನ್, ನಗರಾಭಿವೃದ್ಧಿ ಯೋಜನೆ ನಿರ್ದೇಶಕಿ ರೇಷ್ಮಾ ಹಾನಗಲ್, ಚಳ್ಳಕೆರೆ ತಹಶೀಲ್ದಾರ್ ರೆಹಮಾನ್ ಪಾಷ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ನಾಗರಾಜ್, ಪ್ರಕಾಶ್ ಸ್ಪಾಂಜ್ ಕಂಪನಿ ಪ್ರತಿನಿಧಿಗಳು, ರೈಲ್ವೆ ಇಲಾಖೆ ಅಧಿಕಾರಿಗಳು, ಮುಖಂಡರಾದ ಕೆ.ಟಿ.ಕುಮಾರಸ್ವಾಮಿ, ಸೋಮಶೇಖರ್, ಶ್ರೀನಾಥ್, ಮುರುಳಿ, ಜಯಪಾಲಯ್ಯ ಸೇರಿದಂತೆ ಇತರರು ಹಾಜರಿದ್ದರು.