‘ಲೋಕಸಭೆಯಲ್ಲಿ ನಿನ್ನೆ ಪ್ರಧಾನಿ ಎರಡು ಗಂಟೆ ಹದಿಮೂರು ನಿಮಿಷ ಭಾಷಣ ಮಾಡಿದರು. ಮಣಿಪುರವು ಕಳೆದ ನಾಲ್ಕು ತಿಂಗಳುಗಳಿಂದ ಉರಿಯುತ್ತಿದೆ. ಜನರನ್ನು ಕೊಲ್ಲಲಾಗುತ್ತಿದೆ. ಮಹಿಳೆಯರನ್ನು ಅತ್ಯಾಚಾರ ಮಾಡಲಾಗುತ್ತಿದೆ. ಮಕ್ಕಳನ್ನು ಕೊಲ್ಲಲಾಗುತ್ತಿದೆ. ಆದರೆ ಪ್ರಧಾನಿ ನಗುತ್ತಾ, ಜೋಕ್ ಮಾಡುತ್ತಾ, ತಮಾಷೆ ಮಾಡುತ್ತಾ ಲಜ್ಜೆ ಇಲ್ಲದೆ ಹಾಸ್ಯ ಮಾಡುತ್ತಿದ್ದರು. ದೇಶದ ಪ್ರಧಾನಿಯಾಗಿ ಆ ರೀತಿ ನಡೆದುಕೊಂಡಿರುವುದು ಪ್ರಧಾನಿ ಹುದ್ದೆಗೆ ಸರಿ ಹೊಂದುವುದಿಲ್ಲ’ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಲೋಕಸಭೆಯಲ್ಲಿ ಎರಡು ಗಂಟೆ ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ಬಳಿಕ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಮಣಿಪುರ ಈಗ ಒಂದಾಗಿಲ್ಲ, ಬಿಜೆಪಿಯಿಂದಾಗಿ ಎರಡಾಗಿದೆ. ಮಣಿಪುರ ಈಗ ಒಂದು ರಾಜ್ಯವಾಗಿ ಉಳಿದಿಲ್ಲ’ ಎಂಬ ಭಯಾನಕ ಸತ್ಯವನ್ನು ರಾಹುಲ್ ಗಾಂಧಿ ಬಿಚ್ಚಿಟ್ಟಿದ್ದಾರೆ.
‘ಮಣಿಪುರಕ್ಕೆ ಭೇಟಿ ನೀಡಿದ ವೇಳೆ ನನಗೆ ಒಂದು ಸತ್ಯದ ಅನಾವರಣವಾಗಿದೆ. ಆದರೆ ಆ ಸತ್ಯವನ್ನು ನಾನು ಈ ಮೊದಲೇ ಹೇಳಬೇಕಿತ್ತು. ಈ ಸತ್ಯವನ್ನು ಕಣ್ಣಾರೆ ಕಂಡಿದ್ದೇನೆ. ಆ ಸತ್ಯ ಏನೆಂದರೆ ಮಣಿಪುರ ಈಗ ಒಂದಾಗಿಲ್ಲ, ಬಿಜೆಪಿಯಿಂದಾಗಿ ಎರಡಾಗಿದೆ. ಮಣಿಪುರ ಈಗ ಒಂದು ರಾಜ್ಯವಾಗಿ ಉಳಿದಿಲ್ಲ. ಏಕೆಂದರೆ ನಾನು ಭೇಟಿ ನೀಡಿದಾಗ ಮೈತೇಯಿ ಸಮುದಾಯದ ಮಂದಿ ನೀವು ಭೇಟಿ ನೀಡುವ ಗುಂಪಿನಲ್ಲಿ ಕುಕಿಗಳು ಇದ್ದರೆ ದಯವಿಟ್ಟು ಕರೆ ತರಬೇಡಿ, ನಾವು ಅವರನ್ನು ಗುಂಡಿಟ್ಟು ಕೊಲ್ಲುತ್ತೇವೆ. ಇದೇ ರೀತಿ, ಕುಕಿ ಸಮುದಾಯವರನ್ನು ಭೇಟಿ ನೀಡುವ ಮುಂಚೆಯೇ ಮೈತೇಯಿ ಸಮುದಾಯದ ಮಂದಿ ಇರಬಾರದು ಎಂಬ ಸ್ಪಷ್ಟವಾದ ಸೂಚನೆ ನಮಗೆ ದೊರಕಿತ್ತು. ಹಾಗಾಗಿ, ನಾವು ಬೇರೆ ಬೇರೆ ಗುಂಪಾಗಿಯೇ ಭೇಟಿ ನೀಡಬೇಕಾಯಿತು. ನನ್ನ 19 ವರ್ಷದ ರಾಜಕೀಯ ಜೀವನದಲ್ಲಿ ಈ ಮೊದಲು ಈ ರೀತಿಯ ಅನುಭವ ನನಗೆ ಆಗಿರಲಿಲ್ಲ. ಹಾಗಾಗಿಯೇ, ನಾನು ಲೋಕಸಭೆಯಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ ಎಂದು ಹೇಳಿದ್ದೆ” ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಮಣಿಪುರ ಈಗ ಒಂದಾಗಿ ಉಳಿದಿಲ್ಲ. ಒಂದು ರಾಜ್ಯದ ಎರಡು ಭಾಗವಾಗಿ ಒಡೆದುಹೋಗಿದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಇದಕ್ಕೆಲ್ಲ ಅಲ್ಲಿನ ಬಿಜೆಪಿ ಸರ್ಕಾರದ ನಡವಳಿಕೆಯೇ ಕಾರಣ. ಅವರಿಂದಾಗಿಯೇ ಈ ರೀತಿ ಆಗಿದೆ. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸುರಕ್ಷಾ ದಳದ ಅಧಿಕಾರಿಗಳು ಕೂಡ, ನಮಗೆ ಯಾವತ್ತೂ ಈ ರೀತಿಯ ಅನುಭವ ಆಗಿಲ್ಲ ಎಂಬುದನ್ನು ನಮ್ಮೊಂದಿಗೆ ಹಂಚಿಕೊಂಡರು ಎಂದು ರಾಹುಲ್ ಗಾಂಧಿ ಹೇಳಿದರು.
‘ಅಲ್ಲಿನ ಅಧಿಕಾರಿಗಳು ನಮ್ಮ ಕೈಯಿಂದ ಪರಿಸ್ಥಿತಿ ಮೀರಿ ಹೋಗಿದೆ ಎಂದು ಹೇಳುತ್ತಿದ್ದಾರೆ. ಹಾಗಾಗಿ, ಒಂದು ವೇಳೆ ಭಾರತೀಯ ಸೇನೆಗೆ ಮಣಿಪುರದ ಪರಿಸ್ಥಿತಿಯನ್ನು ಹಸ್ತಾಂತರಿಸಿದರೆ ಕೇವಲ ಮೂರು ದಿನಗಳಲ್ಲಿ ಮತ್ತೆ ಮುಂದಿನ ಸ್ಥಿತಿಗೆ ತಲುಪಬಹುದು. ಆದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಬೆಂಕಿಯನ್ನು ನಂದಿಸಲು ಇಷ್ಟವಿಲ್ಲ. ಇದುವೇ ನಿಜ ಸ್ಥಿತಿ’ ಎಂದು ರಾಹುಲ್ ಗಾಂಧಿ ತಿಳಿಸಿದರು.