ಸಂಸತ್ತಿನಲ್ಲಿ ವಿಪಕ್ಷ ಸಂಸದರ ಅಮಾನತು ಸರಣಿ ಮುಂದುವರೆದಿದ್ದು, ಈ ಬಾರಿ ಎಎಪಿಯ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರನ್ನು ಅಮಾನತುಗೊಳಿಸಲಾಗಿದೆ.
ಐವರು ರಾಜ್ಯಸಭಾ ಸಂಸದರ ಸಹಿಯನ್ನು ‘ಫೋರ್ಜರಿ’ ಮಾಡಿದ್ದಾರೆ ಎಂಬ ಆರೋಪ ಹೊತ್ತಿರುವ ಎಎಪಿ ಸಂಸದ ರಾಘವ್ ಚಡ್ಡಾ ಅವರನ್ನು ಶುಕ್ರವಾರ(ಆಗಸ್ಟ್ 11) ಸಂಸತ್ತಿನ ಮೇಲ್ಮನೆಯಿಂದ ಅಮಾನತು ಮಾಡಲಾಗಿದೆ.
ರಾಘವ್ ಅವರ ವಿರುದ್ಧದ ಪ್ರಕರಣದ ತನಿಖೆಯ ವಿಶೇಷಾಧಿಕಾರಗಳ ಸಮಿತಿಯು ತನ್ನ ವರದಿಯನ್ನು ಸಲ್ಲಿಸುವವರೆಗೆ ಅವರನ್ನು ರಾಜ್ಯಸಭೆಯಿಂದ ಅಮಾನತಿನಲ್ಲಿ ಇಡಲಾಗಿದೆ. ಅಲ್ಲದೆ ಮತ್ತೋರ್ವ ಎಎಪಿ ಸಂಸದ ಸಂಜಯ್ ಸಿಂಗ್ ಅವರ ಅಮಾನತು ಅವಧಿಯನ್ನು ಸಹ ವಿಸ್ತರಿಸಲಾಗಿದೆ.
ದೆಹಲಿ ಸೇವಾ ಮಸೂದೆ ಮಸೂದೆಯನ್ನು ಆಯ್ಕೆದಾರರ ಸಮಿತಿಗೆ ಕಳಿಸಬೇಕು ಎನ್ನುವ ನಿಟ್ಟಿನಲ್ಲಿ ಸದಸ್ಯರ ಸಹಿ ಇರುವ ಪತ್ರವನ್ನು ಫೋರ್ಜರಿ ಮಾಡಿದ ಆರೋಪ ಹೊತ್ತಿರುವ ಎಎಪಿ ಸಂಸದ ರಾಘವ್ ಚಡ್ಡಾ ಅವರನ್ನು ರಾಜ್ಯಸಭಾ ಅಧ್ಯಕ್ಷರಾದ ಜಗದೀಪ್ ಧನ್‌ಕರ್ ಅನಿರ್ದಿಷ್ಟಾವಧಿಗೆ ಅಮಾನತು ಮಾಡಿದ್ದಾರೆ.
ವಿಶೇಷಾಧಿಕಾರ ಸಮಿತಿ ತನ್ನ ವರದಿಯನ್ನು ಸಲ್ಲಿಸುವವರೆಗೆ ಅವರನ್ನು ರಾಜ್ಯಸಭೆಯಿಂದ ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಹುಲ್ ಗಾಂಧಿ ಶಿಕ್ಷೆಗೆ ತಡೆ ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ವರ್ಗಾವಣೆ
ನಾಲ್ವರು ರಾಜ್ಯಸಭಾ ಸಂಸದರು ತಮ್ಮ ಅನುಮತಿಯಿಲ್ಲದೆ ತಮ್ಮ ಹೆಸರನ್ನು ಆ.7 ರಂದು ನಿರ್ಣಯದಲ್ಲಿ ರಾಘವ್ ಚಡ್ಡಾ ಸೇರಿಸಿದ್ದಾರೆ ಎಂದು ಹೇಳಿಕೊಂಡಿದ್ದರು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಬುಧವಾರ ಈ ವಿಷಯವನ್ನು ಪರಿಶೀಲಿಸಲು ವಿಶೇಷಾಧಿಕಾರ ಸಮಿತಿಗೆ ಸಂಸದರ ದೂರುಗಳನ್ನು ಕಳುಹಿಸಿದ್ದಾರೆ.
ಸಂಸದರಾದ ಸಸ್ಮಿತ್ ಪಾತ್ರ, ಎಸ್ ಫಾಂಗ್ನಾನ್ ಕೊನ್ಯಾಕ್, ಎಂ ತಂಬಿದುರೈ ಮತ್ತು ನರಹರಿ ಅಮೀನ್ ಅವರು, ಆಪ್ ಸಂಸದ ರಾಘವ್ ಚಡ್ಡಾ ನಮ್ಮನ್ನು ಕೇಳದೆ ಸದನ ಸಮಿತಿಗೆ ತಮ್ಮ ಹೆಸರನ್ನು ಸೇರಿಸಿದ್ದಾರೆ ಎಂದು ಆರೋಪಿಸಿದರು.
ಈ ನಡುವೆ, ಚಡ್ಡಾ ಅವರನ್ನು ಬಿಜೆಪಿ “ಉದ್ದೇಶಪೂರ್ವಕವಾಗಿ ಸಿಲುಕಿಸಲು ಪ್ರಯತ್ನಿಸುತ್ತಿದೆ” ಎಂದು ಎಎಪಿ ಆರೋಪಿಸಿದೆ. ರಾಘವ್ ಚಡ್ಡಾ ವಿರುದ್ಧದ ‘ನಕಲಿ ಸಹಿ’ ಆರೋಪಗಳು “ಸುಳ್ಳು ಮತ್ತು ರಾಜಕೀಯ ಪ್ರೇರಿತ” ಎಂದು ಪಕ್ಷವು ಹೇಳಿದೆ.
“ವಿವಾದಾತ್ಮಕ ಮಸೂದೆಯು ಸದನಕ್ಕೆ ಬಂದಾಗ ಮತ್ತು ಮತದಾನದ ಮೊದಲು ಈ ಮಸೂದೆಯನ್ನು ಸುದೀರ್ಘವಾಗಿ ಚರ್ಚಿಸಬೇಕೆಂದು ಸದಸ್ಯರು ಬಯಸಿದಾಗ, ಅವರು ಅದನ್ನು ಆಯ್ಕೆ ಸಮಿತಿಗೆ ಕಳುಹಿಸಲು ಶಿಫಾರಸು ಮಾಡುತ್ತಾರೆ. ಈ ಸಮಿತಿಗೆ ಸಂಸದರ ಹೆಸರನ್ನು ಪ್ರಸ್ತಾಪಿಸಲಾಗುತ್ತದೆ. ಚರ್ಚೆಯ ಭಾಗವಾಗಲು ಇಚ್ಛಿಸದವರನ್ನು ಸಮಿತಿಯು ಅವರ ಹೆಸರನ್ನು ಹಿಂಪಡೆಯಬಹುದು. ಯಾವುದೇ ಸಹಿ ಇಲ್ಲದಿರುವಾಗ ಅದನ್ನು ನಕಲಿ ಮಾಡುವುದು ಹೇಗೆ? ಎಂದು ಚಡ್ಡಾ ಪ್ರಶ್ನಿಸಿದ್ದಾರೆ.