ಬಿಹಾರ ವಿಧಾನಸಭೆಯ ವಿಪಕ್ಷ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ ಮತದಾರರ ಗುರುತಿನ ಚೀಟಿ ಸಂಖ್ಯೆ ನಕಲಿ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಘೋಷಿಸಿದೆ. ಹಾಗೆಯೇ 2025ರ ಆಗಸ್ಟ್ 16ರ ಸಂಜೆ ಐದು ಗಂಟೆಯೊಳಗೆ ಪರಿಶೀಲನೆಗಾಗಿ ತಮ್ಮ ಮೂಲ ಮತದಾರರ ಫೋಟೋ ಗುರುತಿನ ಚೀಟಿ (EPIC) ಯನ್ನು ಸಲ್ಲಿಸುವಂತೆ ಇಸಿಐ ತಿಳಿಸಿದೆ. ಈ ಸಂಬಂಧ ಪಟನಾ ಸದರ್‌ನ ಉಪ-ವಿಭಾಗಾಧಿಕಾರಿ (ಎಸ್‌ಡಿಒ) ಆಗಿರುವ ದಿಘಾ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ತೇಜಸ್ವಿಗೆ ನೋಟಿಸ್ ನೀಡಿದ್ದಾರೆ. ತೇಜಸ್ವಿ ಯಾದವ್ ಪತ್ರಿಕಾಗೋಷ್ಠಿಯಲ್ಲಿ ತೋರಿಸಿದ EPIC ಸಂಖ್ಯೆ – RAB2916120 – ಚುನಾವಣಾ ಆಯೋಗದ ಡೇಟಾಬೇಸ್ ಜೊತೆ ಹೊಂದಿಕೆಯಾಗದ ಕಾರಣ ಆ ಮತದಾರರ ಗುರುತಿನ ಚೀಟಿ ನಕಲಿ, ಅನಧಿಕೃತ ಎಂದು ಇಆರ್‌ಒ ಹೇಳಿದ್ದಾರೆ.
