‘ಮೇಘಸ್ಪೋಟದಲ್ಲಿ ಎಲ್ಲವೂ ಬಲಿಯಾಗಿವೆ. ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಈಗ ನಮ್ಮೊಂದಿಗೆ ಇರುವುದು ನೆನಪುಗಳು ಮಾತ್ರ’ ಇದು ಉತ್ತರಕಾಶಿಯಲ್ಲಿ ಹೋಮ್‌ಸ್ಟೇ ನಡೆಸುತ್ತಿರುವ ಮಾಲಿಕ ಭೂಪೇಂದ್ರ ಅವರ ಅಳಲು.
ಉತ್ತರಾಖಂಡದ ಉತ್ತರಕಾಶಿಯಲ್ಲಿ ಭಾರೀ ಮಳೆಯಾಗಿದ್ದು, ಮೇಘಸ್ಫೋಟವೂ ಸಂಭವಿಸಿದೆ. ಪರಿಣಾಮ, ಆಗಸ್ಟ್ 5ರಂದು ಭೀಕರ ಪ್ರವಾಹವಾಗಿದೆ. ಪ್ರವಾಹದಲ್ಲಿ ಸುಮಾರು 10 ಮಂದಿ ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಪ್ರವಾಹವು ಎಲ್ಲವನ್ನು ಕೊಚ್ಚಿಕೊಂಡುಹೋಗಿದೆ. ಭೀಕರ ಪ್ರವಾಹದಲ್ಲಿ ಉತ್ತರಕಾಶಿಯ ಧಾರಲಿಯಲ್ಲಿ ಹೋಮ್‌ಸ್ಟೇ ನಡೆಸುತ್ತಿದ್ದ ಭೂಪೇಂದ್ರ ಅವರ ಹೋಮ್‌ಸ್ಟೇ ಸಂಪೂರ್ಣವಾಗಿ ನಾಶವಾಗಿದೆ.
ನಾಲ್ಕು ತಿಂಗಳ ಹಿಂದೆ (ಏಪ್ರಿಲ್) ಭೂಪೇಂದ್ರ ಅವರು ಸೇಬು ತೋಟಗಳ ಮತ್ತು ಹೋಮ್‌ಸ್ಟೇಅನ್ನು ನಿರ್ಮಿಸಿದ್ದರು. ಅದಕ್ಕಾಗಿ, ತಮ್ಮ ಬಳಿಯಿದ್ದ ಎಲ್ಲ ಹಣವನ್ನು ವ್ಯಯಿಸಿದ್ದರು. ಆದರೆ, ಈಗ ಎಲ್ಲವೂ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಹೋಮ್ ಸ್ಟೇ ನೆಲಸಮಗೊಂಡಿದೆ. ಸೇಬಿನ ಗಿಡಗಳಿಗೂ ಭಾರೀ ಹಾನಿಯಾಗಿದೆ.
ತಮ್ಮ ಬದುಕಿಗೆ ಆಧಾರವಾಗಿದ್ದ ಹೇಮ್‌ಸ್ಟೇಯನ್ನು ಕಳೆದುಕೊಂಡಿರುವ ಭೂಪೇಂದ್ರ, “ನನ್ನ ಕನಸುಗಳು ಇನ್ನೇನು ನೆರವೇರಿತು ಅಂದುಕೊಳ್ಳುತ್ತಿದೆ. ಆದರೆ, ನಮ್ಮ ಕಣ್ಣೆದುರೇ ಕ್ಷಣಾರ್ಧದಲ್ಲಿ ಎಲ್ಲವೂ ಪ್ರವಾಹಕ್ಕೆ ಸಿಲುಕಿ ನಾಶವಾಗಿ ಹೋಯಿತು” ಎಂದು ಕಣ್ಣೀರು ಹಾಕಿದ್ದಾರೆ.
“ಪರ್ವತಗಳಲ್ಲಿ ಟ್ಯಾಕ್ಸಿ ಓಡಿಸಿ , ಪ್ರತಿ ಪೈಸೆಯನ್ನೂ ಉಳಿಸಿ ಹೋಮ್ ಸ್ಟೇ ನಿರ್ಮಾಣ ಮಾಡಿದ್ದೆ. ಉತ್ತಮ ಬದುಕು ಕಟ್ಟಿಕೊಳ್ಳಲು ಪಟ್ಟ ಪ್ರಯತ್ನಗಳೆಲ್ಲ ಒಂದೇ ಕ್ಷಣದಲ್ಲಿ ಪರ್ವತಗಳ ಅಡಿಯಲ್ಲಿ ಅವಶೇಷಗಳಾಗಿಹೋಗಿವೆ. ಪ್ರಕೃತಿ ವಿಕೋಪಗಳ ಬಗ್ಗೆ ನಮಗೆ ಅರಿವಿದೆ. ಆದರೆ, ಈಗ ಸಂಭವಿಸಿದ ದುರಂತವು ನಮ್ಮ ಕಲ್ಪನೆಗೂ ಮೀರಿದ್ದಾಗಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಉತ್ತರಕಾಶಿಯಲ್ಲಿ ಹಠಾತ್ ಪ್ರವಾಹ: ಯೋಜನಾರಹಿತ ಅಭಿವೃದ್ಧಿ ಮೇಘಸ್ಫೋಟಕ್ಕೆ ಕಾರಣವಾಯಿತೇ?
“ಉತ್ತರಕಾಶಿಯಲ್ಲಿ ಜಾತ್ರೆ ನಡೆಯುತ್ತಿದ್ದರಿಂದ, ಅಲ್ಲಿಗೆ ಹೋಗುವ ಬಗ್ಗೆ ಮಾತನಾಡುತ್ತಾ ಹೋಮ್‌ಸ್ಟೇ ಹೊರಭಾಗದಲ್ಲಿ ನಿಂದಿದ್ದೆವು. ಇದ್ದಕ್ಕಿದ್ದಂತೆ ಜನರು ಓಡಿ-ಓಡಿ ಎಂದು ಕಿರುಚುವ ಸದ್ದು ಕೇಳಿಸಿತು. ಹಿಂದಿನಿಂದ ವೇಗವಾಗಿ ಬಂದ ಕಾರೊಂದು ನಮ್ಮನ್ನು ಹತ್ತಿಸಿಕೊಂಡು ಕರೆದೊಯ್ಯಿತು. ಹೀಗಾಗಿ, ನಮ್ಮ ಜೀವ ಉಳಿಯಿತು” ಎಂದು ಅವರು ತಿಳಿಸಿದ್ದಾರೆ.
“ನನ್ನ ಹೆಂಡತಿ ಮಕ್ಕಳು ಉತ್ತರಕಾಶಿಯಲ್ಲಿ ಸಿಲುಕಿಹಾಕಿಕೊಂಡಿದ್ದರು. ನಾನು ಮುಖ್ಬಾದಲ್ಲಿದ್ದೆ. ಅಲ್ಲಿಂದ ನನ್ನನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಿ ಉತ್ತರಕಾಶಿಗೆ ತಲುಪಿಸಿದರು” ಎಂದು ಭೂಪೇಂದ್ರ ಪನ್ವಾರ್ ವಿವರಿಸಿದ್ದಾರೆ.