ಕುರಿಗಾಹಿ ಸಂರಕ್ಷಣಾ ಕಾಯ್ದೆ ಜಾರಿಗೆ ಮೀನಾಮೇಷ; ಕುರಿಗಾರರ ಸಮಗ್ರ ಕಲ್ಯಾಣ ಆಗುವುದೆಂತು?

Date:

Advertisements

ರಾಜ್ಯದಲ್ಲಿ ಸಾಂಪ್ರದಾಯಿಕ ಕುರಿಗಾಹಿಗಳು ಹಲವು ವರ್ಷಗಳಿಂದ ಭೀತಿಯ ಬದುಕು ನಡೆಸುತ್ತಿದ್ದು, ಕಳ್ಳರು, ದುಷ್ಕರ್ಮಿಗಳ ಕಾಟದಿಂದ ರಕ್ಷಣೆಯಿಲ್ಲದಂತಾಗಿದೆ. ಶೋಷಿತ ಸಮುದಾಯಗಳು ಹಾಗೂ ಹಿಂದೂಳಿದ ವರ್ಗಗಳು ಕುರಿಗಾರಿಕೆ ಮೂಲಕ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವ ಸಾಂಪ್ರದಾಯಿಕ ಕುಲ ಕಸಬಾಗಿರುತ್ತದೆ. ಕುರಿಗಾಹಿಗಳ ಮೇಲೆ ದೌರ್ಜನ್ಯ, ಕೊಲೆ, ಅತ್ಯಾಚಾರದಂತಹ ಘಟನೆಗಳು ನಡೆದಿವೆ. ಈಗಾಗಲೇ ಜಾರಿಯಾಗಬೇಕಿದ್ದ ಕುರಿಗಾಹಿ ಸಂರಕ್ಷಣಾ ಕಾಯ್ದೆಯ ವಿಚಾರದಲ್ಲಿ ಸರ್ಕಾರವು ಮೀನಾಮೇಷ ಮಾಡುತ್ತಿದೆ. ಈ ಕುರಿತು ಜಿಲ್ಲಾಮಟ್ಟದಲ್ಲಿ ಪ್ರತಿಭಟನೆಗಳೂ‌ ನಡೆದಿವೆ. ಇದೀಗ ಹೋರಾಟದ ರೂಪವು ರಾಜ್ಯಮಟ್ಟಕ್ಕೆ ತೀವ್ರಗೊಂಡಿದ್ದು, ಆಗಸ್ಟ್ 19ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ʼಕುರಿಗಾರರ ನಡೆ ವಿಧಾನಸೌಧದ ಕಡೆʼ ಎಂಬ ಘೋಷವಾಕ್ಯದೊಂದಿಗೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಕುರಿಗಾಹಿ ಹಿತರಕ್ಷಣೆಯ ಜೊತೆಗೆ ಅವರ ಆರ್ಥಿಕ, ಶೈಕ್ಷಣಿಕ, ಇನ್ನಿತರ ಮೂಲಭೂತ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಕೆಲಸವಾಗಲಿ ಎಂದು ಆಗ್ರಹಿಸುತ್ತಿದ್ದಾರೆ.

ಕುರಿಗಾಹಿಗಳು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಅನೇಕರು ತಮ್ಮ ಕುರಿಗಳನ್ನು ಕಳೆದುಕೊಳ್ಳುವುದರ ಜೊತೆಗೆ, ಹತ್ಯೆಗೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿಂದೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಕುರಿಗಾಹಿ ಮಹಿಳೆ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆ ಪ್ರಕರಣ ಮಾಸುವ ಮುನ್ನವೆ ಬೆಳಗಾವಿ ಜಿಲ್ಲೆ ಹಾಗೂ ಬೀದರ್ ಜಿಲ್ಲೆ ಮತ್ತು ಇತ್ತೀಚೆಗಷ್ಟೇ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದ ಕುರಿಗಾಹಿತ ಕೊಲೆ ನಡೆದು ಹೋಗಿದೆ.‌ ಹೀಗೆ ಇಲ್ಲಿಯವರೆಗೆ 3 ಕೊಲೆ ಸಂಭವಿಸಿವೆ. ಇಂತಹ ಘಟನೆಗಳು ರಾಜ್ಯಾದ್ಯಂತ ದಿನೇ ದಿನೇ ಹೆಚ್ಚಾಗುತ್ತಿದ್ದು, ಕುರಿಗಾಹಿ ಮಾತ್ರವಲ್ಲದೇ ಕುರಿಕಾರ ಮಹಿಳೆಯರಿಗೂ ರಕ್ಷಣೆ ಇಲ್ಲದಂತಾಗಿದೆ. ಈ ಕಾರಣದಿಂದ ಕುರಿಗಾಹಿ ಸಂರಕ್ಷಣಾ ಕಾಯ್ದೆ ಶೀಘ್ರ ಜಾರಿಗೆ ರಾಜ್ಯಾದ್ಯಂತ ಒತ್ತಾಯಿಸುತ್ತಿದ್ದಾರೆ.

WhatsApp Image 2025 08 08 at 6.14.02 PM

ಕುರಿಗಾಹಿಗಳ ಬದುಕು ಮೊದಲೇ ದುಸ್ಥರ ಸ್ತಿತಿಯಲ್ಲಿದ್ದು, ಅಲೆಮಾರಿಗಳಾಗಿ ಊರೂರು ತಿರುಗಿ, ಗುಡಿಸಲು ಕಟ್ಟಿಕೊಂಡು, ಅರಣ್ಯದಲ್ಲಿ ಬದುಕುತ್ತಾರೆ.‌ ಅನಾರೋಗ್ಯಕ್ಕೆ ತುತ್ತಾದಾಗ ತಕ್ಷಣ ಆಸ್ಪತ್ರೆಗೂ ಹೋಗುವ ಪರಿಸ್ಥಿತಿ ಇರುವುದಿಲ್ಲ. ಕಳ್ಳರು ಮತ್ತು ಉಳ್ಳವರ ದೌರ್ಜನ್ಯಕ್ಕೆ ಒಳಗಾದಾಗ; ಆರಕ್ಷಕರೂ ರಕ್ಷಣೆ ನೀಡದಿದ್ದರೆ; ಅವರು ಬದುಕು ಸಾಗಿಸುವುದೆಂತು? ಅತ್ತ ಶಿಕ್ಷಣದಿಂದಲೂ ವಂಚಿತರಾಗುತ್ತಾರೆ. ಇತ್ತ ನೆಮ್ಮದಿ ಬದುಕು ಸಾಗಿಸಲೂ ಸಾಧ್ಯವಾಗದೆ; ಭೀತಿಯ ವಾತಾವರಣವೇ ಅವರ ಸುತ್ತಲು ಸುಳಿದಾಡುತ್ತದೆ. ಹಗಲು ಕುರಿಗಳನ್ನು ಮೇಯಿಸಿಕೊಂಡು ಮತ್ತೆ ಇಡೀ ರಾತ್ರಿ ಕುರಿಗಳನ್ನು ಕಾಯುವುದರಲ್ಲೇ ಬೆಳಗಾಗುತ್ತದೆ. ಕಾಡಿನಲ್ಲಿ ಸಿಗುವ ಕಟ್ಟಿಗೆಗಳನ್ನು ಆರಿಸಿಕೊಂಡು ಬಂದು ಅಡುಗೆ ಮಾಡಿಕೊಳ್ಳುತ್ತಾರೆ. ಮಳೆ, ಗಾಳಿ, ಬಿಸಿಲಿಗೆ ಮೈವೊಡ್ಡಿ ಬದುಕು ಸಾಗಿಸುವ ಇವರಿಗೆ ಸರ್ಕಾರವು ಅಭಯ ಹಸ್ತ ತೋರಬೇಕಿದೆ.

Advertisements

ನಾವು ತಲೆತಲಾಂತರದಿಂದ ಕುರಿ ಕಾಯುವುದನ್ನೇ ಪಂಪರೆಯಾಗಿ ನಡೆಸಿಕೊಂಡು ಬಂದಿದ್ದೇವೆ. ಆದರೆ; ನಮ್ಮ‌ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.‌ ರಾಜಕಾರಣಿಗಳು ಓಟ್ ಕೇಳುವ ಸಂದರ್ಭದಲ್ಲಿ ಮಾತ್ರ ನಾವು ಇದ್ದಲ್ಲಿಗೇ ಬಂದು ಮಾತನಾಡಿಸುತ್ತಾರೆ. ತದನಂತರ ನಮ್ಮ ಬದುಕಿನ ಕುರಿತು ಕನಸಿನಲ್ಲೂ ಯೋಚಿಸುವುದಿಲ್ಲ. ನಾವು ಅರಣ್ಯದಲ್ಲಿ, ಪ್ರಕೃತಿಯೊಂದಿಗೆ ಬದುಕುವವರು. ಕುರಿಗಳನ್ನು‌ ಮೇಯಿಸಿ ಕಾಡನ್ನು ನಾಶಗೊಳಿಸುವುದೇನು ನಮ್ಮ ಉದ್ದೇಶವಲ್ಲ. ಈ ವಿಚಾರವಾಗಿ ನಮ್ಮ‌ ಮೇಲೆ ಹಲವು ಆರೋಪಗಳಿವೆ. ಅವುಗಳನ್ನೇ ಗುರಿಯಾಗಿಸಿಕೊಂಡು ಉಳ್ಳವರು ದೌರ್ಜನ್ಯ ಎಸಗುತ್ತಾರೆ. ಅಂತಹ ಸಂದರ್ಭಗಳಲ್ಲಿ ನಾವೇ ಕ್ಷಮೆ ಕೇಳಿ ಸುಮ್ಮನಾಗುತ್ತೇವೆ. ಇದುವರೆಗೆ ಕಳ್ಳತನವಾದ ಕುರಿಗಳ ಲೆಕ್ಕವೇ ಇಲ್ಲ. ಇತ್ತ ನಾವು ಬದುಕು ಸಾಗಿಸುವಾಗ; ಹಲವು ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಸರಿಯಾಗಿ ಕುಡಿಯಲು ನೀರು ಸಹಿತ ಸಿಗುವುದಿಲ್ಲ.‌ ಮಳೆಯಿಂದ ಅಲ್ಲಲ್ಲಿ ಶೇಖರಣೆಗೊಂಡ ನೀರನ್ನೇ ಕುಡಿದು ದಾಹ ತೀರಿಸಿಕೊಳ್ಳುತ್ತೇವೆ. ನಮಗೆ ಮುಖ್ಯವಾಗಿ ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸಲು ಅವಕಾಶ ಕಲ್ಪಿಸಬೇಕು. ನಮ್ಮ ಮೇಲೆ ನಡೆಯುವ ಕೊಲೆ, ದೌರ್ಜನ್ಯಗಳನ್ನು ತಡೆಯಲು ಸೂಕ್ತ ಕಾನೂನು ಜಾರಿ ಮಾಡಬೇಕು ಎಂದು ಹೇಳುತ್ತಾರೆ ಕುರಿಗಾಯಿ ಮಹಿಳೆ.

WhatsApp Image 2025 08 08 at 6.12.38 PM 1

ಈ ಕುರಿತು ಕುರಿಗಾಯಿ ಸಂಘಟನೆಯ ಹೋರಾಟಗಾರ ಡಾ. ಯಲ್ಲಪ್ಪ ಹೆಗಡೆ ಮಾತನಾಡಿ, ಹಗಲು, ರಾತ್ರಿ, ಮಳೆ, ಗಾಳಿ, ಚಳಿಯೆನ್ನದೆ ಕಾಯಕದಲ್ಲಿ‌ ನಿರತರಾದ ಕುರಿಗಾಯಿಗಳಿಗೆ ರಕ್ಷಣೆಯಿಲ್ಲ. ಮತ್ತು ನಿರಂತರ ಅವರ ಮೇಲೆ ಅತ್ಯಾಚಾರ, ಕೊಲೆ, ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಕುರಿಗಾಹಿಗಳು ಬೆಟ್ಟ-ಗುಡ್ಡಗಳನ್ನು ಒಳಗೊಂಡಂತೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ಥಳೀಯವಾಗಿ ಹಾಗೂ ಸಂಚರಿಸುವ ಮೂಲಕ ಕುರಿಗಳನ್ನು ಪಾಲನೆ ಮಾಡುತ್ತಿದ್ದು, ಬಡವರ ಪಾಲಿಗೆ ಕುರಿಗಾರಿಕೆ ವರದಾನವಾಗಿರುತ್ತದೆ. ರಾಜ್ಯದಲ್ಲಿರುವ ಗುಡ್ಡುಗಾಡು ಪ್ರದೇಶಗಳಲ್ಲಿ ಕುರಿ ಮೇಸಲು ಹೋದಾಗ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಹಾಗೂ ಸಿಬ್ಬಂದಿಗಳಿಂದ ನಿರಂತರ ಕಿರುಕುಳ, ದೌರ್ಜನ್ಯಗಳು ನಡೆಯುತ್ತಿವೆ. ರಾಜ್ಯದ ಕುರಿಗಾರರ ಮೇಲೆ ನಿರಂತವಾಗಿ ನಡೆಯುತ್ತಿರುವ ಹಲ್ಲೆ, ಜೀವ ಬೇದರಿಕೆ, ಅತ್ಯಾಚಾರ, ಕುರಿ ಕಳ್ಳತನ, ಅರಣ್ಯಾಧಿಕಾರಿಗಳ ಲಂಚದ ಬೇಡಿಕೆ ಅಧಿಕ ಪ್ರಮಾಣದಲ್ಲಿ ನಡೆಯುತ್ತಿವೆ. ಸರ್ಕಾರವು ಎಲ್ಲ ವರ್ಗದ ಮಹಿಳೆಯರ, ಮಕ್ಕಳ, ಶೋಷಿತ ಸಮುದಾಗಳ ಪರ ಹಾಗೂ ವಿವಿಧ ವೃತ್ತಿಪರರ ಹಿತರಕ್ಷಣೆಗೆ ವಿವಿಧ ವಿಶೇಷ ಕಾಯ್ದೆಗಳನ್ನು ಜಾರಿ ಮಾಡಿ ಅವರ ರಕ್ಷಣೆ ಮಾಡಿದ್ದು ಅದೇ ರೀತಿ ಕುರಿಗಾಯಿಕೆ ಮೇಲೆ ಉಪಜೀವನ ನಡೆಸುತ್ತಿರುವ ಕುರಿಗಾರರ ಮೇಲೆ ಆಗುತ್ತಿರುವ ದೌರ್ಜನ್ಯಗಳು, ಹಲ್ಲೆ, ನಿಂದಣಿ, ಪ್ರಾಣಾಪಾಯ, ಕಳ್ಳತನ, ಅತ್ಯಾಚಾರ ಇತ್ಯಾದಿ ದುಷ್ಕೃತ್ಯಗಳ ಕಡಿವಾಣಕ್ಕಾಗಿ ಸಾಂಪ್ರದಾಯಿಕ ಕುರಿಗಾಯಿಗಳ ಹಿತರಕ್ಷಣಾ ಕಾಯ್ದೆಯನ್ನು ರೂಪಿಸಿ ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಕುರಿ ಮೇಯಿಸಿ ಅರಣ್ಯ ಸಂಪತ್ತು ರಕ್ಷಣೆ ಮಾಡುವ ಕುರಿಗಾಹಿಗಳಿಗಾಗಿ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಜಾರಿಗೆ ತರುವುದರಲ್ಲಿ ತಪ್ಪೇನಿದೆ? ಕುರಿಗಾಹಿಗಳು ಈ ದೇಶದ ಸಂಸ್ಕೃತಿಯನ್ನು ಉಳಿಸುತ್ತಿರುವವರು. ಮಳೆ, ಗಾಳಿ, ಬಿಸಿಲೆನ್ನದೇ ಕುರಿ ಹಿಂಡುಗಳೊಂದಿಗೆ ಊರೂರು ಅಲೆದಾಡುತ್ತಾ, ಕುರಿಗಳ ಆಹಾರಕ್ಕಾಗಿ ತಮ್ಮ ಕುಟುಂಬಗಳ ಜೀವಗಳನ್ನು ಲೆಕ್ಕಿಸದೇ ಅಲೆಮಾರಿಗಳಾಗಿ ಜೀವಿಸುತ್ತಿದ್ದಾರೆ. ಇಂತಹ ಕುರಿಗಾರರ ಮೇಲೆ ಇತ್ತೀಚೆಗೆ ಕೊಪ್ಪಳದ ಬಲ್ಡೋಟಾ ಕಂಪನಿಯ ನೌಕರರು ಕುರಿಗಾರರಿಗೆ ರಕ್ತ ಬರುವ ಹಾಗೆ ಹೊಡೆದು ಓಡಿಸುತ್ತಿದ್ದ ಅಮಾನವೀಯ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಸ್ವತಃ ಕುರಿಗಾರರಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕುರಿಗಾರರ ಸಂಕಷ್ಟಗಳ ಬಗ್ಗೆ ಗೊತ್ತಿದ್ದರೂ ಸುಮ್ಮನಿರುವುದು ಏಕೆ? ಎಂದು ಹೋರಾಟಗಾರರೊಬ್ಬರು ಪ್ರಶ್ನಿಸುತ್ತಾರೆ.

WhatsApp Image 2025 08 08 at 6.13.08 PM

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರಲು ಕುರುಬ ಸಮುದಾಯದ ಹೆಚ್ಚಿನ ಬೆಂಬಲವೇ ಕಾರಣವೆಂಬುದನ್ನು ಕಾಂಗ್ರೆಸ್ ಪಕ್ಷ ಕೂಡಾ ಮರೆಯಬಾರದು. ಕುರಿಗಾರರ ಸಂರಕ್ಷಣಾ ಕಾಯಿದೆಯಿಂದ ಕಳ್ಳಕಾಕರಿಗೆ, ದೌರ್ಜನ್ಯ ನಡೆಸುವವವರಿಗೆ ಭಯವಾದರೂ ಬರಬಹುದು. ಇನ್ನು ಎಲ್ಲಾ ಸಮುದಾಯದವರು ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಹೀಗಾಗಿ ಇದು ಜಾತಿ, ಸಮುದಾಯದ ಹಿತರಕ್ಷಣೆಯ ಕಾಯ್ದೆ ಅಲ್ಲ ಎಂಬುದು ಸ್ಪಷ್ಟ. ಕುರಿಗಾಹಿಗಳು ತಮ್ಮ ಜೀವ ಮತ್ತು ಜೀವನಗಳನ್ನು ರಕ್ಷಿಸಿಕೊಳ್ಳಲು ರಕ್ಷಣೆ ಮತ್ತು ಭದ್ರತೆ ಕೇಳುತ್ತಿದ್ದಾರೆ. ಆದ್ದರಿಂದ ಈಗಾಗಲೇ ಸಿದ್ಧವಾಗಿರುವ ಕಾಯಿದೆಯನ್ನು ಸರ್ಕಾರಿ ಆದೇಶವನ್ನಾಗಿಸಿ ಜಾರಿಗೊಳಿಸಬೇಕು ಎಂದು ರಾಜ್ಯದ ಕುರಿಗಾಹಿಗಳ ಬೇಡಿಕೆಯಾಗಿದೆ.

ಸರ್ಕಾರವು 2024-25 ನೇ ಸಾಲಿನ ಬಜೆಟ್‌ನಲ್ಲಿ ಕುರಿಗಾಯಿಗಳಿಗೆ ಸಂಬಂಧಿಸಿದಂತೆ ದೌರ್ಜನ್ಯ ತಡೆ ಕಾಯ್ದೆ ರೂಪಿಸಲು ಪ್ರಸ್ಥಾಪಿಸಿತು. ಈ ಮಸೂದೆಯನ್ನು ಸರ್ಕಾರವು ಆ.11 ರಂದು ನಡೆಯಲಿರುವ ಅಧಿವೇಶನದಲ್ಲಿ ಕಾಯ್ದೆಯಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಕುರಿಗಾರರು ಈ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ಹೋರಾಟದಲ್ಲಿ ಕೇವಲ‌ ಕುರಿಗಾರರಷ್ಟೇ ಅಲ್ಲದೆ ನಾಡಿನ ಪ್ರಗತಿಪರರು, ವಿವಿಧ ಶೋಷಿತ ಸಮುದಾಯಗಳು, ಹೋರಾಟಗಾರರು, ಚಿಂತಕರು, ರೈತ ಮುಖಂಡರು ಭಾಗವಸಲಿದ್ದಾರೆ. ಈ ಬೃಹತ್ ಪ್ರತಿಭಟನೆ ಮೂಲಕ ರಾಜ್ಯ ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ, ಎಲ್ಲ ಶಾಸಕರಿಗೆ ಕುರಿಗಾರರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಮೂಲಕ ಕುರಿಗಾಹಿ ಸಂರಕ್ಷಣಾ ಕಾಯಿದೆಯನ್ನು ಜಾರಿಗೋಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

“ನನಗೆ ಸುಮಾರು 15 ವರ್ಷದವಳಿದ್ದಾಗ ಮದುವೆ ಆಗುತ್ತದೆ. ಅಂದಿನಿಂದ ಕುರಿ ಮೇಸುತ್ತಾ ಬಂದಿದ್ದೇವೆ. ಈಗಲೂ‌ ಮೇಯಿಸುತ್ತೇವೆ. ಇವರಿಗೇನು ಕಡಿಮೆ ಬಹಳಷ್ಟು ಕುರಿಗಳಿದ್ದಾವೆ. ಹೆಚ್ಚು ಲಾಭ ಗಳಿಸುತ್ತಾರೆ ಎಂದು ಬಹಳ ಮಂದಿ ಮಾತನಾಡುತ್ತಾರೆ. ಆದರೆ; ನಾವು ನಿರಂತರ ಭಯದ ವಾತಾವರಣದಲ್ಲಿಯೇ ಬದುಕು ಸಾಗಿಸುತ್ತಿದ್ದೇವೆ. ಯಾವ ಹೊತ್ತಿನಲ್ಲಿ ಯಾರು ಬಂದು ನಮ್ಮ ಬದುಕನ್ನು ಕಸಿದುಕೊಳ್ಳುವರೋ ಎಂಬ ಚಿಂತೆಯಲ್ಲಿ ದಿನಂಪ್ರತಿ ಬೆಳಗಾಗುತ್ತದೆ. ಒಂದೆಡೆ ಗುಡ್ಡದಲ್ಲಿ ಮೇಯಿಸಲು ಬಿಡಬೇಡಿ ಎಂದು ಅಧಿಕಾರಿಗಳ ನಮ್ಮಿಂದ ಒಂದು ಆಡು ಅಥವಾ ಕುರಿಯನ್ನು ತೆಗೆದುಕೊಳ್ಳುತ್ತಾರೆ. ಮತ್ತೊಂದೆಡೆ ಕುರಿ ಮೇಯಿಸುವಾಗ; ಇಲ್ಲೇಕೆ ಮೇಯಿಸುತ್ತೀರಿ ಎಂದು ಏಕಾಏಕಿ ಹೊಡೆದದ್ದು ಉಂಟು. ನಮಗೆ ಸರ್ಕಾರದಿಂದ ಸಂರಕ್ಷಣೆ ದೊರೆಯಬೇಕಿದೆ. ನಾವೂ ಎಲ್ಲರಂತೆ ಮನುಷ್ಯರೇ‌ ಎಂಬ ಅರಿವು ಕೆಲವರಲ್ಲಿ ಬರಬೇಕಿದೆ” ಎನ್ನುತ್ತಾರೆ ಕುರಿಗಾಹಿ ಅಜ್ಜಿ ಶಿವಕ್ಕ.

WhatsApp Image 2025 08 08 at 6.12.38 PM

ಇದನ್ನೂ ಓದಿ: ಧಾರವಾಡ | ಕೆಲಸದಲ್ಲಿ ಬದ್ಧತೆ ಹೊಂದಿರುವ ಅಧಿಕಾರಿಗಳು ಇಲಾಖೆಯ ಆಸ್ತಿ: ಭುವನೇಶ್ ಪಾಟೀಲ

ಈ ಕುರಿತು 2024 ರಲ್ಲಿ ಪತ್ರಕಾಗೋಷ್ಠಿಯೊಂದರಲ್ಲಿ ಸಿಎಂ ಸಿದ್ಧರಾಮಯ್ಯ ಮಾತನಾಡುತ್ತಾ, ಕುರಿಗಳ ಕಳ್ಳತನ ತಡೆಯಲು ಅಗತ್ಯವಿದ್ದವರಿಗೆ ಬಂದೂಕಿನ ಲೈಸೆನ್ಸ್ ಕೊಡಿಸಲು ಸೂಚಿಸಲಾಗುವುದು. ಕಳ್ಳತನ ಪ್ರಕರಣಗಳ ಕುರಿತು ಯಾವುದೇ ಠಾಣೆಗೆ ದೂರು ಬಂದ ಕೂಡಲೇ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು. ಸಂಚಾರಿ ಕುರಿಗಾಹಿಗಳಿಗೆ, ಕುರಿಗಳಿಗೆ ಅಗತ್ಯ ಭದ್ರತೆ ಒದಗಿಸಲು ಸೂಚಿಸಲಾಗುವುದು. ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಮಾತ್ರ ಮೇಯಿಸಲು ಅವಕಾಶ ನೀಡುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ರಾಜ್ಯದಲ್ಲಿನ ವಲಸೆ ಕುರಿಗಾರರ ಮತ್ತು ಅವರ ಸ್ವತ್ತುಗಳ ಮೇಲಿನ ದೌರ್ಜನ್ಯ ತಡೆಯುವ ಕಾಯ್ದೆ ರೂಪಿಸುವುದು, ಕುರಿಗಳಿಗೆ ಉಚಿತ ಲಸಿಕೆ ನೀಡಲು ಅಗತ್ಯ ಸೂಚನೆ ನೀಡಲಾಗುವುದು. ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ ನೀಡಿ ಅದರ ಆಧಾರದ ಮೇಲೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು. ಕುರಿಗಾಹಿಗಳ ಮಕ್ಕಳಿಗೆ ಸರ್ಕಾರಿ ವಸತಿ ಶಾಲೆಗಳಲ್ಲಿ ಆದ್ಯತೆ ಮೇರೆಗೆ ಪ್ರವೇಶ ನೀಡುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದರು.

ಅದೆಷ್ಟು ಕುರಿಗಾರರು ಈ ಎಲ್ಲ ಸವಲತ್ತು ಒಡೆಯುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಒಟ್ಟಿನಲ್ಲಿ ಕುರಿಗಾಹಿ ಸಂರಕ್ಷಣಾ ಕಾಯಿದೆ ಜಾರಿಗೊಳಿಸಿ ಕುರಿಗಾರರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹೀಗೆ ಅವರ ಸಮಗ್ರ ಕಲ್ಯಾಣವಾಗಬೇಕು. ಈ ಕಲ್ಯಾಣ ಆಗುವುದು ಯಾವಾಗ? ಎಂದು ಕುರಿಗಾಹಿಗಳು ಪ್ರಶ್ನಿಸುತ್ತಿದ್ದಾರೆ. ಮುಖ್ಯವಾಗಿ ಕುರಿಗಾರರು ಭಯರಹಿತ ಬದುಕು ಸಾಗಿಸಬೇಕಿದೆ. ಅವರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆಗಳಂತಹ ಅಹಿತಕರ ಘಟನೆಗಳನ್ನು ತಡೆಯಬೇಕಿದೆ.

WhatsApp Image 2024 09 06 at 11.32.31 a95e9ba6
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಸಾಗುವಳಿ ರೈತರಿಗೆ ಭೂಮಿಯನ್ನು ಮಂಜೂರು ಮಾಡಬೇಕು : ಮಾರೆಪ್ಪ ಹರವಿ

ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ನೀಡಬೇಕೆಂದು ಭೂಮಿ ಮತ್ತು ವಸತಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

Download Eedina App Android / iOS

X