ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಮತ ಕಳವು ನಡೆದಿದೆ, ಚುನಾವಣಾ ಅಕ್ರಮವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸತ್ಯಶೋಧನ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಬೆನ್ನಲ್ಲೇ, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್ ಮತ್ತು ಚುನಾವಣಾ ಆಯೋಗದ ಮತದಾರರ ಸೇವಾ ಪೋರ್ಟಲ್‌ನಲ್ಲಿ 2024ರ ಮತದಾರರ ಪಟ್ಟಿ ಕಾಣೆಯಾಗಿದೆ.
ಗುರುವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಮತ್ತು ಶುಕ್ರವಾರ ಬೆಂಗಳೂರಿನಲ್ಲಿ ಪ್ರತಿಭಟನಾ ಸಮಾವೇಶ ನಡೆಸಿರುವ ರಾಹುಲ್ ಗಾಂಧಿ, “2024ರ ಲೋಕಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರದಲ್ಲಿ ಮತದಾರರ ಪಟ್ಟಿಗೆ ಸುಮಾರು 1 ಲಕ್ಷಕ್ಕಿಂತ ಹೆಚ್ಚು ಮತದಾರ ಹೆಸರನ್ನು ಅಕ್ರಮವಾಗಿ ಸೇರಿಸಲಾಗಿದೆ. ಒಂದೇ ವಿಳಾಸದಲ್ಲಿ ಹಲವಾರು ಮತದಾರರ ನೋಂದಣಿಯಾಗಿದೆ. ಚುನಾವಣೆಯಲ್ಲಿ ಗೆಲ್ಲಲು ಅಕ್ರಮ ಎಸಗಲಾಗಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಮಾತ್ರವಲ್ಲದೆ, ಕೆಲ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದಾರೆ.
ಈ ಬೆನ್ನಲ್ಲೇ, ಹಲವಾರು ಮಾಧ್ಯಮಗಳು ಮತದಾರರ ಪಟ್ಟಿಯ ಪರಿಶೀಲನೆಗಾಗಿ 2024ರ ಮತದಾರರ ಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಚುನಾವಣಾ ಆಯೋಗದ ವೆಬ್‌ಸೈಟ್‌ಅನ್ನು ಪರಿಶೀಲಿಸಿವೆ. ಆದರೆ, ವೆಬ್‌ಸೈಟ್‌ನಲ್ಲಿ ಮತದಾರರ ಪಟ್ಟಿಯೇ ಕಾಣೆಯಾಗಿದೆ. ಅಲ್ಲಿ, ಯಾವುದೇ ಕಡತಗಳು ದೊರೆತಿಲ್ಲ.
ಈ ಲೇಖನ ಓದಿದ್ದೀರಾ?: ಟ್ರಂಪ್ ಕೊಟ್ಟ ಏಟಿಗೆ ಚೀನಾದತ್ತ ತಿರುಗಿದ ಪ್ರಧಾನಿ; ಚೀನೀ ಭಜನೆ ಮಾಡುತ್ತಿದೆ ಮೋದಿ ಭಕ್ತ ಗಣ
ಮತದಾರರ ಪಟ್ಟಿಯನ್ನು ಡೌನ್‌ಲೋಡ್ ಮಾಡಲು ಅಗತ್ಯ ಮಾಹಿತಿಗಳನ್ನು ತುಂಬಿದ ಬಳಿಕ, ‘ವಾರ್ನಿಂಗ್/ಸಕ್ಸಸ್’ ಎಂಬ ಸಂದೇಶ ಬರುತ್ತಿದೆ. ಆದರೆ, ಪಟ್ಟಿಗಳು ಪ್ರದರ್ಶನವಾಗಿಲ್ಲ. ಮಾತ್ರವಲ್ಲದೆ, ಡೌನ್‌ಲೋಡ್ ಕೂಡ ಆಗಿಲ್ಲ.
ಆಧಾಗ್ಯೂ, 2025ರ ಮತದಾರರ ಪಟ್ಟಿಗಳು ಸೇರಿದಂತೆ ಉಳಿದೆಲ್ಲ ಪಟ್ಟಿಗಳು ಡೌನ್‌ಲೋಡ್ ಆಗುತ್ತಿವೆ.