ಉತ್ತರ ಕನ್ನಡದ ಕಾರವಾರದಲ್ಲಿರುವ ಸಖಿ ಕೇಂದ್ರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಕಾರವಾರ ಕೇಂದ್ರವು ಇತರೆ ತಾಲೂಕುಗಳಿಂದ ದೂರ ಇರುವ ಕಾರಣ ನೊಂದ ಮಹಿಳೆಯರಿಗೆ ತಕ್ಷಣದಲ್ಲಿ ಸೂಕ್ತ ನೆರವು ನೀಡುವ ಉದ್ದೇಶದಿಂದ, ಶಿರಸಿಯಲ್ಲಿ ಹೆಚ್ಚುವರಿ ಸಖೀ ಕೇಂದ್ರ ತೆರೆಯುವ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ, ಮಿಷನ್ ಶಕ್ತಿ ಯೋಜನೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಮಿಷನ್ ಶಕ್ತಿ ಯೋಜನೆಯ ಮಾರ್ಗಸೂಚಿಯನ್ವಯ ಭೌಗೋಳಿಕ ವಿಸ್ತಾರ ಹೊಂದಿರುವ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ದಾಖಲಾಗುವ ಜಿಲ್ಲೆಗಳಲ್ಲಿ ಹೆಚ್ಚುವರಿ ಸಖೀ ಒನ್ ಸ್ಟಾಪ್ ಸೆಂಟರ್ ತೆರೆಯಲು ಅವಕಾಶವಿದ್ದು, ಜಿಲ್ಲೆಯು ಭೌಗೋಳಿಕವಾಗಿ ವಿಸ್ತೀರ್ಣವಾಗಿರುವುದರಿಂದ ಶಿರಸಿಯನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಹೆಚ್ಚುವರಿ ಸಖೀ ಕೇಂದ್ರ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ” ತಿಳಿಸಿದರು.
“ಪೊಲೀಸ್ ಇಲಾಖೆಯ ಮಾಹಿತಿಯಂತೆ, ಜೋಯಿಡಾ, ಹಳಿಯಾಳ, ಮುಂಡಗೋಡ, ಯಲ್ಲಾಪುರ, ಶಿರಸಿ ಹಾಗೂ ಸಿದ್ದಾಪುರ ತಾಲೂಕುಗಳ ಪೊಲೀಸ್ ಠಾಣೆಗಳಲ್ಲಿ 2022ರಲ್ಲಿ 240, 2023ರಲ್ಲಿ 305, 2024ರಲ್ಲಿ 297 ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಪೋಕ್ಸೋ ಪ್ರಕರಣಗಳ ನಿಯಂತ್ರಣ ಕುರಿತಂತೆ ಹೆಚ್ಚಿನ ಸಂಖ್ಯೆಯ ಜಾಗೃತಿ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲದೇ ಗ್ರಾಮಮಟ್ಟದಲ್ಲಿ ಆಯೋಜಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿನ ಕಾವಲು ಸಮಿತಿಯ ಸದಸ್ಯರಿಗೆ ಮಹಿಳಾ ಮತ್ತು ಮಕ್ಕಳ ಕುರಿತ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು” ಎಂದರು.
“ಶಿರಸಿಯಲ್ಲಿನ ಸಖಿ ಸದನ ಕೇಂದ್ರದಲ್ಲಿನ ಮಹಿಳೆಯರಿಗೆ ಆರೋಗ್ಯ ಇಲಾಖೆಯ ಮೂಲಕ ಮನಃಶಾಸ್ತ್ರಜ್ಞರಿಂದ ಕೌನ್ಸಲಿಂಗ್ ಆಯೋಜಿಸುವುದರ ಜೊತೆಗೆ ವಕೀಲರಿಂದ ಕಾನೂನು ನೆರವು ಒದಗಿಸಿ , ಜಿಲ್ಲೆಯಲ್ಲಿನ ಸಖಿ ಮತ್ತು ಸ್ವೀಕಾರ ಕೇಂದ್ರಗಳಲ್ಲಿ ಮಹಿಳೆಯರಿಗೆ ನೆರವಾಗುವ ಮಾಹಿತಿ ಒಳಗೊಂಡ ಪುಸ್ತಕಗಳ ಸಂಗ್ರಹಾಲಯ ವ್ಯವಸ್ಥೆ ಮಾಡಿ. ಶಿರಸಿ ಮತ್ತು ಅಂಕೋಲದಲ್ಲಿ ಸಖಿ ನಿವಾಸ ಇದ್ದು, ಕಾರವಾರದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷಿತ ಮತ್ತು ಅನುಕೂಲಕರವಾದ ವಸತಿ ಸೌಕರ್ಯ ಒದಗಿಸುವ ಕುರಿತಂತೆ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ ತೆರೆಯುವ ಬಗ್ಗೆ ಕ್ರಮ ಕೈಗೊಳ್ಳಿ , ಇದಕ್ಕಾಗಿ ಖಾಸಗಿ ಸಂಸ್ಥೆಗಳು ಅಥವಾ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸೂಕ್ತ ವ್ಯವಸ್ಥೆಗಳುಳ್ಳ ಕಟ್ಟಡ ಲಭ್ಯವಿರುವ ಬಗ್ಗೆ ಪರಿಶೀಲಿಸಿ” ಎಂದರು.
ಇದನ್ನೂ ಓದಿ: ಉತ್ತರ ಕನ್ನಡ | ಕುಮಟಾ ಉಪವಿಭಾಗದ ಸಹಾಯಕ ಆಯುಕ್ತರಾಗಿ ಪಿ ಶ್ರವಣ್ ಕುಮಾರ್ ನೇಮಕ
“ಜಿಲ್ಲೆಯಾದ್ಯಂತ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆವತಿಯಿಂದ ಆಯೋಜಿಸುವ ಎಲ್ಲಾ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಕ್ಯಾಲೆಂಡರ್ ಮಾದರಿಯಲ್ಲಿ ಕ್ರಿಯಾ ಯೋಜನೆ ರೂಪಿಸಿ ಅದರಂತೆ ಅನುಷ್ಠಾನಗೊಳಿಸಬೇಕು. ಕಾರ್ಯಕ್ರಮ ಅನುಷ್ಠಾನಗೊಳಿಸುವ ಪೂರ್ವದಲ್ಲಿ ಸಂಬಂಧಂಪಟ್ಟ ಎಲ್ಲಾ ಭಾಗೀಧಾರ ಇಲಾಖೆಗಳಿಗೆ ಮತ್ತು ಸ್ಥಳೀಯರಿಗೆ ಸಾಕಷ್ಟು ಮುಂಚಿತವಾಗಿ ಮಾಹಿತಿ ನೀಡಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ” ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ಝುಪಿಶಾನ್ ಹಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.