ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ ಅವರು ಈ ವರ್ಷದ ಅಂತ್ಯದವರೆಗೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯುವ ಎಲ್ಲ ಸಾಧ್ಯತೆಗಳೂ ಇವೆ.
ಬಿಜೆಪಿಯ ಅಧ್ಯಕ್ಷರಾಗಿ ಜಗತ್ ಪ್ರಕಾಶ್ ನಡ್ಡಾ (ಜೆ.ಪಿ ನಡ್ಡಾ) ಅವರ ಅಧಿಕಾರಾವಧಿ 2024ರ ಜನವರಿಗೆ ಕೊನೆಗೊಂಡಿದೆ. ಅವರ ಅಧಿಕಾರದ ಅವಧಿ ಮುಗಿದು ಒಂದೂವರೆ ವರ್ಷಗಳಾದರೂ ಹೊಸ ಅಧ್ಯಕ್ಷರ ನೇಮಕವಾಗಿಲ್ಲ. ಇಂದಿಗೂ ಬಿಜೆಪಿ ರಾಷ್ಟ್ರಾಧ್ಯಕ್ಷರ ನೇಮಕ ಬಿಜೆಪಿಗೆ ಕಗ್ಗಂಟಾಗಿದೆ. ಬಿಜೆಪಿಯಲ್ಲಿ ಆಂತರಿಕವಾಗಿ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಲಾಗುತ್ತಿದ್ದರೂ, ಮೋದಿ ಬಣ ಮತ್ತು ಆರ್‌ಎಸ್‌ಎಸ್ ನಡುವಿನ ಜಟಾಪಟಿಯೇ ಅಧ್ಯಕ್ಷರ ನೇಮಕವನ್ನು ಜಟಿಲಗೊಳಿಸಿದೆ ಎಂಬುದು ವಾಸ್ತವ. ಈ ಕಗ್ಗಂಟನ್ನು ಬಿಡಿಸಲಾಗದೆ ಬಿಜೆಪಿ ಒದ್ದಾಡುತ್ತಿದೆ.
ಕೇಂದ್ರ ಆರೋಗ್ಯ ಸಚಿವರಾಗಿರುವ ನಡ್ಡಾ ಅವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಈವರೆಗೆ, ಮೋದಿ ಕಡೆಯವರು ಮತ್ತು ಎಸ್‌ಎಸ್‌ಎಸ್ ನಡುವೆ ಹಲವು ಸುತ್ತುಗಳ ಮಾತುಕತೆಗಳು ನಡೆದಿವೆ. ಆದರೆ, ಒಮ್ಮತಕ್ಕೆ ಬರಲಾಗಿಲ್ಲ. ಈಗ, ಬಿಹಾರ ಚುನಾವಣೆಗಳು ನಡೆಯುತ್ತಿವೆ. ಆ ಚುನಾವಣೆಯ ಬಳಿಕ, ಬಿಜೆಪಿ ಅಧ್ಯಕ್ಷೀಯ ಹುದ್ದೆಯ ಮಾತುಕತೆಗಳು ನಡೆಯುತ್ತವೆ ಎನ್ನಲಾಗುತ್ತಿದೆ.
ಈ ಹಿಂದೆ, 2024ರ ಸೆಪ್ಟೆಂಬರ್‌ನಲ್ಲಿ ರಾಜನಾಥ್ ಸಿಂಗ್ ಅವರ ನಿವಾಸದಲ್ಲಿ ಮೋದಿ ಬಣ ಮತ್ತು ಆರ್‌ಎಸ್‌ಎಸ್ ಬಣಗಳು ಭೇಟಿಯಾಗಿದ್ದವು. ರಾಜನಾಥ್ ಸಿಂಗ್ ಜೊತೆಗೆ, ಅಮಿತ್ ಶಾ ಮತ್ತು ಬಿ.ಎಲ್. ಸಂತೋಷ್ ಬಿಜೆಪಿ ಪರವಾಗಿ ಹಾಜರಿದ್ದರು. ಆರ್‌ಎಸ್‌ಎಸ್ ಪ್ರತಿನಿಧಿಗಳಾಗಿ, ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮತ್ತು ಭಾವಿ ಸರಸಂಘಚಾಲಕ್ ಅರುಣ್ ಕುಮಾರ್ ಭಾಗಿಯಾಗಿದ್ದರು. 5 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಬಿಜೆಪಿಯಿಂದ ಹಲವು ಹೆಸರುಗಳು ಪರಿಗಣನೆಗೆ ಬಂದಿದ್ದವು. ಆದರೆ, ಆರ್‌ಎಸ್‌ಎಸ್ ಆ ಹೆಸರುಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ನಿರಾಕರಿಸಿತು.
ಅಂದಿನಿಂದ ಇಂದಿನವರೆಗೂ ಅಧ್ಯಕ್ಷರನ್ನು ಆಯ್ಕೆ ಮಾಡಲು ಬಿಜೆಪಿ-ಆರ್‌ಎಸ್‌ಎಸ್‌ಗೆ ಸಾಧ್ಯವಾಗಲಿಲ್ಲ. ಸಂಘದ ಸಂಪ್ರದಾಯದಂತೆ ಬಿಜೆಪಿ ಅಧ್ಯಕ್ಷ ಹುದ್ದೆಗೆ ಆರ್‌ಎಸ್‌ಎಸ್ ನಿರ್ದಿಷ್ಟ ಹೆಸರುಗಳನ್ನು ಸೂಚಿಸುವುದಿಲ್ಲ. ಹೆಸರುಗಳನ್ನು ಬಿಜೆಪಿಯೇ ಪ್ರಸ್ತಾಪಿಸುತ್ತದೆ. ಆ ಪ್ರಸ್ತಾವನೆಗಳನ್ನು ಬಿಜೆಪಿ-ಆರ್‌ಎಸ್‌ಎಸ್ ಸೌಹಾರ್ದಯುತವಾಗಿ ಚರ್ಚಿಸಿ, ಅನುಮೋದಿಸಲಾಗುತ್ತದೆ. ಈವರೆಗೆ ಇದೇ ಸಂಪ್ರದಾಯ ನಡೆದುಕೊಂಡು ಬಂದಿದೆ. ಆದರೆ, ಬಾರಿ ಎಲ್ಲವೂ ತಲೆಕೆಳಗಾಗುತ್ತಿವೆ ಎಂಬ ಅಭಿಪ್ರಾಯಗಳಿವೆ.
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ಬಿಜೆಪಿಯು ಎಂಟು-ಒಂಬತ್ತು ಹೆಸರುಗಳನ್ನು ಪ್ರಸ್ತಾಪಿಸಿತ್ತು. ಅವರಲ್ಲಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್, ಎಬಿವಿಪಿ ಮಾಜಿ ಅಧ್ಯಕ್ಷ ವಿನೋದ್ ತಾವ್ಡೆ ಅವರು ಆರ್‌ಎಸ್‌ಎಸ್ ನಾಯಕ ಹೊಸಬಾಳೆ ಅವರ ನಿಖಟವರ್ತಿಗಳಾಗಿದ್ದಾರೆ. ಇತರ ಹೆಸರುಗಳಲ್ಲಿ ಸಿ.ಆರ್ ಪಾಟೀಲ್, ಮನೋಹರ್ ಲಾಲ್ ಖಟ್ಟರ್, ಶಿವರಾಜ್ ಸಿಂಗ್ ಚೌಹಾಣ್, ರಾಜನಾಥ್ ಸಿಂಗ್, ಭೂಪೇಂದರ್ ಯಾದವ್, ದೇವೇಂದ್ರ ಫಡ್ನವೀಸ್ ಮತ್ತು ಧರ್ಮೇಂದ್ರ ಪ್ರಧಾನ್ ಅವರಿದ್ದಾರೆ. ಇವರೆಲ್ಲರೂ ಮೋದಿ ಪಡೆಯಲ್ಲಿ ಗುರುತಿಸಿಕೊಂಡಿದ್ದಾರೆ.
ಆದರೆ, ಬಿಜೆಪಿ ಪ್ರಸ್ತಾಪಿಸಿದ್ದ ಈ ಎಲ್ಲರೂ ವ್ಯಕ್ತಿಗಳು ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಬಲ್ಲರು ಎಂದು ಭಾವಿಸಿದ್ದರೂ, ಆರ್‌ಎಸ್‌ಎಸ್ ಒತ್ತು ಕೊಡುವುದು ರಾಜಕೀಯ ಅನುಭವ ಮತ್ತು ಸ್ವಾಯತ್ತತೆಯ ಜೊತೆಗೆ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವ ವ್ಯಕ್ತಿಗಳಿಗೆ ಮಾತ್ರವೆಂದು ಹೇಳಲಾಗಿದೆ. ಈ ವಿಳಂಬದ ಕಾರಣಕ್ಕಾಗಿ, ಹಂಗಾಮಿ ಅಥವಾ ಕಾರ್ಯಾಧ್ಯಕ್ಷರನ್ನು ನೇಮಿಸುವುದಾಗಿ ಬಿಜೆಪಿ ಹೇಳಿಕೊಂಡಿತ್ತು. ಆದರೆ, ಈವರೆಗೂ ಅದೂ ಕೂಡ ಆಗಿಲ್ಲ.
ಅಧ್ಯಕ್ಷ ಹುದ್ದೆಯ ಪ್ರಸ್ತಾವನೆಯಲ್ಲಿರುವ ಚೌಹಾಣ್ ಮತ್ತು ರಾಜನಾಥ್ ಸಿಂಗ್– ಈ ಇಬ್ಬರೂ ಕೇಂದ್ರ ಸರ್ಕಾರದ ಹಿರಿಯ ಸಚಿವರಾಗಿದ್ದು, ಆರ್‌ಎಸ್‌ಎಸ್ ಜೊತೆಗೂ ಉತ್ತಮ ಒಡನಾಟ, ಒಲವು ಹೊಂದಿದ್ದಾರೆ. ಆದರೂ, ಈ ಇಬ್ಬರನ್ನೂ ತಮ್ಮ ಸಂಪುಟದಿಂದ ಹೊರಕಳಿಸಲು ಪ್ರಧಾನಿ ಮೋದಿ ಹಿಂದೇಟು ಹಾಕುತ್ತಿದ್ದಾರೆ.
ಬಿಜೆಪಿಗರಿಗೆ ನಡ್ಡಾ ಅವರಂತಹವರು ಅಧ್ಯಕ್ಷರಾಗಿರಬೇಕು. ಅವರು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಅಡಿಯಲ್ಲಿ ಪಕ್ಷವನ್ನು ಮುನ್ನಡೆಸಬೇಕು. ಕೇಂದ್ರ ಸರ್ಕಾರವು ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಅಧ್ಯಕ್ಷರಾಗಿ ಅವರು ಬೆಂಬಲಿಸುವಂತಿರಬೇಕು. ಅಂದರೆ, ಅರ್ಥಾತ್ – ಚುನಾವಣಾ ಆಯೋಗ, ಸಿಎಜಿ, ಇಡಿ, ಸಿಬಿಐ, ಸಿಐಸಿ, ಸಿವಿಸಿನಂತಹ ಶಾಸನಬದ್ಧ ಸಂಸ್ಥೆಗಳು ಹೇಗೆ ಕೇಂದ್ರದ ಆಣತಿಯಲ್ಲಿ ಕೈಗೊಂಬೆಯಂತೆ ಕೆಲಸ ಮಾಡುತ್ತಿವೆಯೋ, ಅದೇ ರೀತಿ ಬಿಜೆಪಿಯೂ ಕೂಡ ಪಕ್ಷವಾಗಿ ಮೋದಿ ಸರ್ಕಾರದ ನಿರ್ಧಾರಗಳಿಗೆ ‘’ಹ್ಮೂಂ’ಗುಟ್ಟಬೇಕು ಎಂಬುದು ಅವರ ಬಯಕೆ. ಅದರಂತೆಯೇ, ಹೆಸರುಗಳನ್ನು ಬಿಜೆಪಿ ಪ್ರಸ್ತಾಪಿಸುತ್ತಿದೆ.
ಆದರೆ, ಇದನ್ನು ಆರ್‌ಎಸ್‌ಎಸ್ ಒಪ್ಪುತ್ತಿಲ್ಲ. ಪಕ್ಷವು ಸ್ವತಂತ್ರವಾಗಿ ಸರ್ಕಾರಕ್ಕೆ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸಲಹೆ, ಸೂಚನೆಗಳನ್ನು ನೀಡುವಂತಿರಬೇಕು ಎಂದು ಆರ್‌ಎಸ್‌ಎಸ್ ಬಯಸುತ್ತಿದೆ.
ಅಂತಹ ಸ್ವತಂತ್ರವನ್ನು ವಾಜಪೇಯಿ ಆಡಳಿತಾವಧಿಯಲ್ಲಿ ಬಿಜೆಪಿ ಹೊಂದಿತ್ತು. ವಾಜಪೇಯಿ ಸರ್ಕಾರಕ್ಕೆ ಸ್ವತಂತ್ರವಾಗಿ ಸಲಹೆಗಳನ್ನು ನೀಡುತ್ತಿತ್ತು. ವಿಮಾ ನಿಯಂತ್ರಣ ಮಸೂದೆ ಮತ್ತು ಬೆಲೆ ಏರಿಕೆಯಂತಹ ವಿಷಯಗಳಲ್ಲಿ ವಿರೋಧವನ್ನೂ ವ್ಯಕ್ತಪಡಿಸಿತ್ತು. 2001 ಜುಲೈ 31ರಂದು ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಸರ್ಕಾರದ ನಿರ್ಧಾರಗಳ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದಕ್ಕೆ, ವಾಜಪೇಯಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದರು. ಆದಾಗ್ಯೂ, ಸರ್ಕಾರವನ್ನು ಬೆಂಬಲಿಸುತ್ತಲೇ, ಬಿಜೆಪಿ ವಿಮರ್ಶೆಯನ್ನೂ ಮಾಡುತ್ತಿತ್ತು.
ಆದರೆ, ಈಗ ನಡ್ಡಾ ನೇತೃತ್ವದಲ್ಲಿ ಬಿಜೆಪಿ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟಿದೆ. ಬಿಜೆಪಿ ಸಭೆಗಳಿಗೆ ಮೋದಿಯವರು ಕೇವಲ ಭಾಷಣ ಮಾಡಲು ಮಾತ್ರವೇ ಹಾಜರಾಗುತ್ತಾರೆ. ಸಭೆಗಳಲ್ಲಿ ಅವರು ಅಭಿಪ್ರಾಯವನ್ನು ಆಲಿಸುವುದಿಲ್ಲ. ಸಲಹೆಗಳನ್ನು ಸ್ವೀಕರಿಸುವುದಿಲ್ಲ ಎಂಬ ಆರೋಪಗಳಿವೆ. ಹೀಗಾಗಿ, ಬಿಜೆಪಿಯಲ್ಲಿ ರಚನಾತ್ಮಕ ಪಾತ್ರವನ್ನು ಪುನಃಸ್ಥಾಪಿಸಲು ಆರ್‌ಎಸ್‌ಎಸ್ ಬಯಸಿದೆ. ಇದಕ್ಕೆ, ಮೋದಿ-ಶಾ ಬಗ್ಗುತ್ತಿಲ್ಲ.
ಈ ಲೇಖನ ಓದಿದ್ದೀರಾ?: ತಮಿಳುನಾಡಿನ ಜಾತಿ ತಾರತಮ್ಯವೂ; ಕರಾಳ ಮುಖ ಬಿಚ್ಚಿಟ್ಟ ದಲಿತ ಇಂಜಿನಿಯರ್ ಕೆವಿನ್ ಹತ್ಯೆಯೂ
ಗಮನಾರ್ಹವಾಗಿ, 1980ರಲ್ಲಿ ಬಿಜೆಪಿ ರಚನೆಯಾದಾಗಿನಿಂದಲೂ ಪಕ್ಷದೊಂದಿಗೆ ಆರ್‌ಎಸ್‌ಎಸ್ ಸ್ನೇಹದಿಂದಿದೆ. ತನ್ನ ರಾಜಕೀಯ ಘಟಕವನ್ನು ಸಂಘಟಿಸುವಲ್ಲಿ, ಪ್ರಚಾರ ಮಾಡುವಲ್ಲಿ ತನ್ನ ಪ್ರಚಾರಕರನ್ನು ಪಕ್ಷಕ್ಕೆ ಕಳಿಸಿದೆ. ಪಕ್ಷದ ಆರಂಭಿಕ ವರ್ಷಗಳಲ್ಲಿ ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕರನ್ನು ಬಿಜೆಪಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನಿಯೋಜಿಸಲಾಗುತ್ತಿತ್ತು. ಅವರು ಪಕ್ಷ ಮತ್ತು ಸಂಘದ ನಡುವೆ ಸಂಯೋಜಕರಾಗಿ ಅಥವಾ ‘ರಾಜಕೀಯ ಕಮಿಷನರ್’ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಹೀಗಾಗಿಯೇ, ಬಿಜೆಪಿ ಅಧ್ಯಕ್ಷರು ಮತ್ತು ರಾಷ್ಟ್ರೀಯ ಕಾರ್ಯಕಾರಿಣಿಯ ಆಯ್ಕೆಯಲ್ಲಿ ಆರ್‌ಎಸ್‌ಎಸ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಹಿಂದೆ, ಅಮಿತ್ ಶಾ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದಾಗಲೂ, ಅಮಿತ್ ಶಾ ಪಕ್ಷ ಮತ್ತು ಸಂಘದ ನಡುವಿನ ಸಂಬಂಧವನ್ನು ಸರಿದೂಗಿಸಿಕೊಂಡು ಹೋಗುತ್ತಾರೆಂದೇ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ, ಅಮಿತ್ ಶಾ ಗೃಹ ಮಂತ್ರಿಯಾದರು, ಪಕ್ಷದ ಅಧ್ಯಕ್ಷ ಸ್ಥಾನ ತ್ಯಜಿಸಿದರು. ಅಂದಿನಿಂದ ಅವರ ವರ್ತನೆ ಬದಲಾಯಿತು. ಮೋದಿ-ಶಾ ಜೋಡಿ, ಸಂಘವನ್ನು ಕಡೆಗಣಿಸಿ, ತಮ್ಮದೇ ರಾಜ್ಯಭಾರ ನಡೆಸಲು ಮುಂದಾದರು.
ಬಿಜೆಪಿ ಅಧ್ಯಕ್ಷ ನಡ್ಡಾ ಅವರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿಕೊಂಡರು. ಈಗ ನಡ್ಡಾ ಅಧಿಕಾರ ಮುಗಿದಿದೆ. 2024ರ ಜನವರಿಯಲ್ಲಿ ಲೋಕಸಭಾ ಚುನಾವಣೆಯ ಕಾರಣ ಹೇಳಿ, ಅವರ ಅಧ್ಯಕ್ಷಗಿರಿಯ ಅಧಿಕಾರವನ್ನು ಆರು ತಿಂಗಳ ಕಾಲ ವಿಸ್ತರಿಸಲಾಗಿತ್ತು. ಆ ನಂತರ, ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ ಹಾಗೂ ದೆಹಲಿ ವಿಧಾನಸಭಾ ಚುನಾವಣೆಗಳನ್ನು ಮುಂದಿಟ್ಟುಕೊಂಡು ಒಂದೂವರೆ ವರ್ಷಗಳ ಕಾಲ ಅಧ್ಯಕ್ಷರ ನೇಮಕವನ್ನು ಮುದಕ್ಕೆ ತಳ್ಳಲಾಗಿದೆ. ಆದಾಗ್ಯೂ, ಇದೇ ಅವಧಿಯಲ್ಲಿ ಅನೇಕ ರಾಜ್ಯಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕವೂ ಆಗಿದೆ. ಆದರೆ, ನಡ್ಡಾ ಉತ್ತರಾಧಿಕಾರಿಯ ನೇಮಕ ಮಾತ್ರ ಸಾಧ್ಯವಾಗಿಲ್ಲ. ಈಗ, ಬಿಹಾರ ಚುನಾವಣೆ ಮುಂದಿದೆ. ಬಹುಶಃ, ಈ ಚುನಾವಣೆಯ ಕಾರಣವನ್ನಿಟ್ಟುಕೊಂಡು, ಅಧ್ಯಕ್ಷರ ನೇಮಕ ಮತ್ತಷ್ಟು ಮುಂದಕ್ಕೆ ಹೋಗಬಹುದು.
ಆದರೆ, ಮುಖ್ಯವಾಗಿ, ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ ಅವರು ಈ ವರ್ಷದ ಅಂತ್ಯದವರೆಗೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯುವ ಎಲ್ಲ ಸಾಧ್ಯತೆಗಳೂ ಇವೆ.