ಮುಂಗಾರು ಅಧಿವೇಶನದಲ್ಲಿಯೇ ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ಜಾರಿಯಾಗಬೇಕು ಎಂದು ಆಗ್ರಹಿಸಿ ಆಗಸ್ಟ್ 11 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಠಾವಧಿ ಧರಣಿ ಆಯೋಜಿಸಿದ್ದು ಸಮುದಾಯದ ಎಲ್ಲಾ ಮುಖಂಡರು, ಒಳ ಮೀಸಲಾತಿ ಹೋರಾಟಗಾರರು ಭಾಗವಹಿಸಬೇಕು ಎಂದು ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಎಸ್.ಮಾರೆಪ್ಪ ಹೇಳಿದರು.
ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನ್ಯಾಯಮೂರ್ತಿ ನಾಗಮೋಹನದಾಸ ನೇತೃತ್ವದ ಆಯೋಗ ನೀಡಿರುವ ವರದಿಯನ್ನು ಸರ್ಕಾರ ಪಡೆದು ವಿಶೇಷ ಸಚಿವ ಸಂಪುಟದಲ್ಲಿ ಚರ್ಚಿಸುವುದಾಗಿ ಹೇಳುತ್ತಿದೆ. ಸರ್ಕಾರದ ವಿಳಂಬ ಧೋರಣೆಗೆ ಅವಕಾಶ ನೀಡದೇ ಅನುಮೋದನಡೆ ನೀಡಿ ಇದೇ ಅಧಿವೇಶನದಲ್ಲಿ ಅಂಗೀಕಾರಗೊಳಿಸಬೇಕು. ಇಲ್ಲದೇ ಹೊದಲ್ಲಿ ರಾಜ್ಯದಲ್ಲಿ ಯಾವ ಸಚಿವರು ಪ್ರವಾಸ ಮಾಡದಂತೆ ತಡೆಯುವ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾಗಮೋಹನ ದಾಸ್ ಆಯೋಗ ವರದಿಗೆ ಛಲವಾದಿ ಸಮಾಜ ಆಕ್ಷೇಪ ವ್ಯಕ್ತಪಡಿಸಿ ದೂರು ನೀಡಿದೆ. ಆದರೆ ಆಯೋಗ ವರದಿಯಲ್ಲಿ ಆಕ್ಷೇಪಗಳು ಸರಿಪಡಿಸಿಕೊಳ್ಳಬಹುದೇ ಹೊರತು ಇಡಿ ಆಯೋಗವರದಿಯನ್ನೇ ತಿರಸ್ಕರಿ ಸಬೇಕೆನ್ನುವದು ಸರಿಯಾದುದ್ದಲ್ಲ. ಯಾವ ಆಯೋಗ ವರದಿಗಳು ಸಹ ನೂರಕ್ಕೆ ನೂರರಷ್ಟು ಸರಿ ಇರಲ್ಲ. ವ್ಯತ್ಯಾಸಗಳಿರುವದು ಸಹಜ. ಪರಿಶೀಷ್ಟ ಜಾತಿಗಳಲ್ಲಿಯೇ 65 ಜಾತಿಗಳು ಅತ್ಯಂತ ಹಿಂದುಳಿದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶೈಕ್ಷಣಿಕವಾಗಿ 45 ಜಾತಿಗಳು ಶಿಕ್ಷಣ ಪಡೆದಿದರೆ ಮಾದಿಗ ಮತ್ತು ಅಲೆಮಾರಿ ಸಮೂದಾಯಗಳು ಶೇ 60ಕ್ಕಿಂತ ಕಡಿಮೆ ಶಿಕ್ಷಣ ಪಡೆದಿವೆ ಎಂದು ಆಯೋಗ ವರದಿ ಮಾಡಿದೆ. ಉದ್ಯೋಗದಲ್ಲಿಯೂ ಅನ್ಯಾಯವಾಗಿದೆ. ಮೀಸಲಾತಿಯನ್ನು ಹೆಚ್ಚಾಗಿ ಪಡೆದ ಜಾತಿಗಳು ಸಹ ಸಾಮಾಜಿಕನ್ಯಾಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ಮುಖ್ಯಮಂತ್ರಿಗಳು ರಾಜಕೀಯ ಪ್ರಭಾವವನ್ನು ಪರಿಗಣಿಸದೇ ತೆಲಂಗಾಣದ ಮುಖ್ಯಮಂತ್ರಿ ಕೈಗೊಂಡಿರುವ ನಿರ್ಧಾರವನ್ನು ರಾಜ್ಯದಲ್ಲಿಯೂ ಪ್ರದರ್ಶಿಸಬೇಕಿದೆ. ಆ.11 ರಿಂದ 22 ವರೆಗೆ ವಿಧಾನಮಂಡಲದ ಅಧಿವೇಶನ ನಡೆಯಲಿದೆ. ಸದನದಲ್ಲಿ ಮಂಡಿಸಿ ಅಂಗೀಕಾರಗೊಳಿಸದೇ ಹೋದರೆ ರಾಜ್ಯದಾಧ್ಯಂತ ಗಂಭೀರ ಸ್ವರೂಪದ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಮುಕ್ಕುಂದಾ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಸೌಲಭ್ಯಗಳ ಅಭಾವ – ದಲಿತ ಸೇನೆ ಒತ್ತಾಯ
ಒಳ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಹೇಮರಾಜ ಅಸ್ಕಿಹಾಳ, ಆಂಜಿನೇಯ್ಯ ಉಟ್ಕೂರು, ನರಸಿಂಹಲು ಮರ್ಚಟ್ಟಾಳ, ಶ್ರೀನಿವಾಸ ಕೊಪ್ಪರ, ಆಂಜನೇಯ ಕುರುಬದೊಡ್ಡಿ, ತಾಯಪ್ಪ ಗಧಾರ ಗೋಷ್ಠಿಯಲ್ಲಿ ಇದ್ದರು.
