ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್ ಈಗ ಗ್ರಾಹಕರಿಗೆ, ಅದರಲ್ಲೂ ಉಳಿತಾಯ ಖಾತೆ ಹೊಂದಿರುವವರಿಗೆ ಭಾರೀ ದುಬಾರಿಯಾಗಿದೆ. ತನ್ನ ಎಲ್ಲ ಶಾಖೆಗಳಲ್ಲಿ ಉಳಿತಾಯ ಖಾತೆಗಳಲ್ಲಿ ಗ್ರಾಹಕರು ಹೊಂದಿರಬೇಕಿದ್ದ ಕನಿಷ್ಠ ಬ್ಯಾಲೆನ್ಸ್ ಮೊತ್ತವನ್ನು ಏರಿಕೆ ಮಾಡಿದೆ.
ಶನಿವಾರ, ಅಧಿಕೃತ ಪ್ರಕಟಣೆ ಹೊರಡಿಸಿರುವ ಬ್ಯಾಂಕ್, ಈ ನೂತನ ನಿಯಮವು ಆಗಸ್ಟ್ 1ರಿಂದಲೇ ಜಾರಿಗೆ ಬಂದಿದೆ ಎಂದು ತಿಳಿಸಿದೆ.
ಮೆಟ್ರೊ ಮತ್ತು ನಗರ ಪ್ರದೇಶಗಳ ಶಾಖೆಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು ತಮ್ಮ ಖಾತೆಗಳಲ್ಲಿ ಕನಿಷ್ಠ 50,000 ರೂ. ಬ್ಯಾಲೆನ್ಸ್ ಹೊಂದಿರಬೇಕು ಎಂದು ತಿಳಿಸಿದೆ. ಈ ಹಿಂದೆ, ಕನಿಷ್ಠ ಬ್ಯಾಲೆನ್ಸ್ ಪ್ರಮಾಣವು 10,000 ರೂ. ಇತ್ತು. ಇನ್ನು, ಅರೆ-ನಗರ ಪ್ರದೇಶಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಮೊತ್ತವು 5,000 ರೂ. ಇದ್ದದ್ದು, 25,000 ರೂ.ಗೆ ಹೆಚ್ಚಿಸಲಾಗಿದೆ. ಅಂತೆಯೇ, ಗ್ರಾಮೀಣ ಭಾಗದ ಶಾಖೆಗಳಲ್ಲಿದ್ದ ಕನಿಷ್ಠ ಬ್ಯಾಲೆನ್ಸ್ ಮಿತಿಯು 2,500 ರೂ.ನಿಂದ 10,000 ರೂ.ಗೆ ಏರಿಕೆ ಮಾಡಲಾಗಿದೆ.
ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿದ್ದರೆ ಮಾಸಿಕ 500 ರೂ. ದಂಡ ಅಥವಾ ಅಗತ್ಯವಿರುವ ಬ್ಯಾಲೆನ್ಸ್ ಮತ್ತು ನಿಜವಾದ ಬ್ಯಾಲೆನ್ಸ್ ನಡುವಿನ ಕೊರತೆಯ ಮೊತ್ತದಲ್ಲಿ 6% ಮೊತ್ತವನ್ನು ದಂಡವಾಗಿ ಕಡಿತ ಮಾಡಿಕೊಳ್ಳಲಾಗುತ್ತದೆ ಎಂದು ಸೂಚಿಸಿದೆ.
ಐಸಿಐಸಿಐ ಬ್ಯಾಂಕ್ ಜಾರಿಗೊಳಿಸಿರುವ ಹೊಸ ನಿಮಯವು ಗ್ರಾಮೀಣ, ಅರೆನಗರ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಹುಸಂಖ್ಯಾತರ ಕೃಷಿಕರು, ಕೂಲಿ ಕಾರ್ಮಿಕರು ಹಾಗೂ ಕಡಿಮೆ ವೇತನ ಪಡೆಯುತ್ತಿರುವ ಉದ್ಯೋಗಿಗಳ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಗಳಿವೆ. ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವವರಲ್ಲಿ ಹೆಚ್ಚಿನವರು ಕಾರ್ಮಿಕರು ಮತ್ತು ಕೂಲಿ ಕಾರ್ಮಿಕರೇ ಆಗಿದ್ದಾರೆ. ಇವರೆಲ್ಲರೂ, ಮಾಸಿಕ 50,000 ರೂ. ದುಡಿಮೆ ಮಾಡುವುದೇ ಸಾಧ್ಯವಿಲ್ಲ. ಹೀಗಿರುವಾಗ, ಕನಿಷ್ಠ ಬ್ಯಾಲೆನ್ಸ್ 50,000 ರೂ. ನಿರ್ವಹಿಸುವುದು ಕಷ್ಟ ಸಾಧ್ಯ. ಹೀಗಾಗಿ, ಹಲವಾರು ಗ್ರಾಹಕರು ಐಸಿಐಸಿಐ ಬ್ಯಾಂಕ್‌ನಿಂದ ವಿಮುಖರಾಗುವ ಸಾಧ್ಯತೆಯೂ ಇದೆ.
ಆದಾಗ್ಯೂ, ಕಡಿಮೆ ಆದಾಯ ಹೊಂದಿರುವ ಬಡಜನರನ್ನು ತನ್ನ ಶಾಖೆಗಳಿಂದ ಹೊರಗಿಡುವ ಉದ್ದೇಶದಿಂದಲೇ ಈ ಕ್ರಮವನ್ನು ಬ್ಯಾಂಕ್ ತೆಗೆದುಕೊಂಡಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ದೇಶದ ಎರಡನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಐಸಿಐಸಿಐನ ಈ ಕ್ರಮವು ವ್ಯಾಪಕ ಟೀಕೆಗೂ ಗುರಿಯಾಗಿದೆ. ಆದಾಗ್ಯೂ, ಬ್ಯಾಂಕ್ ತನ್ನ ಕ್ರಮ ಮತ್ತು ಎದುರಾಗಿರುವ ಟೀಕೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.