ಬಿಜೆಪಿ ಸಂಸದ ಡಾ. ಕೆ ಸುಧಾಕರ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಸುಧಾಕರ್ ರಾಜೀನಾಮೆಗೆ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ. ಸುಧಾಕರ್ ವಿರುದ್ಧ ಬಿಜೆಪಿ ಕೂಡ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಿಇಒ ಕಾರು ಚಾಲಕ ಬಾಬು ಎಂಬವರು ಜಿಲ್ಲಾ ಪಂಚಾಯತಿ ಕಚೇರಿಯ ಹಿಂಭಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ ಸುಧಾಕರ್ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.
ಡೆತ್‌ನೋಟ್‌ನಲ್ಲಿ; “ನನ್ನ ಸಾವಿಗೆ ಸಂಸದ ಡಾ. ಕೆ ಸುಧಾಕರ್ ಹಾಗೂ ಚಿಕ್ಕಕಾಡಿಗಾನಹಳ್ಳಿ ನಾಗೇಶ್ ಹಾಗೂ ಲೆಕ್ಕ ಪರಿಶೋಧಕ ಮಂಜುನಾಥ್ ಕಾರಣ. ಈ ಮೂವರೂ ನನಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ, 25 ಲಕ್ಷ ರೂ. ಹಣ ಪಡೆದು, ವಂಚಿಸಿದ್ದಾರೆ” ಎಂದು ಆರೋಪಿಸಿದ್ದಾರೆ. ಡೆತ್‌ನೋಟ್ ಆಧರಿಸಿದಿ ಸುಧಾಕರ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಬಾಬು ಅವರ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ, ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಬಾಬು ಅವರು ಬರೆದಿರುವ ಡೆತ್‌ನೋಟ್‌ನಲ್ಲಿ ಸಂಸದರ ಹೆಸರು ಉಲ್ಲೇಖಿಸಿದ್ದಾರೆ. ಆ ಡೆತ್‌ನೋಟ್‌ಅನ್ನು ಆಧರಿಸಿ, ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಬಾಬು ದಲಿತ ಸಮುದಾಯಕ್ಕೆ ಸೇರಿದವರು. ಪದೇ ಪದೇ ಹಣ ಕೇಳಿದ್ದಕ್ಕಾಗಿ ಅವರು ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ” ಎಂದಿದ್ದಾರೆ. ಬಾಬು ಆತ್ಮಹತ್ಯೆಗೆ ಕಾರಣರಾದ ಸಂಸದ ಸುಧಾಕರ್ ರಾಜೀನಾಮೆ ನೀಡಿಬೇಕು ಎಂದು ಆಗ್ರಹಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಕೂಡ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದು, “ಇದೇ ಸಾವು ಬೇರೆ ಕಡೆ ಆಗಿದ್ದರೆ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲೇ ಉಲ್ಲೇಖಿಸಿ ಅಬ್ಬರಿಸುತ್ತಿದ್ದರು. ಆದರೆ, ಈಗ ಮೌನವಾಗಿದ್ದಾರೆ. ಬಾಬು ಆತ್ಮಹತ್ಯೆ ಈ ಪ್ರಕರಣವನ್ನು ನಮ್ಮ ಸರ್ಕಾರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತದೆ. ಬಿಜೆಪಿಗರು ಯಾಕೆ ಮೌನವಾಗಿದ್ದಾರೆ. ಈ ಹಿಂದೆ ಮಾತನಾಡಿದಂತೆ, ಈಗಲೂ ಮಾತಾಡುವ ದಮ್ಮು ತಾಕತ್ತು ಅಶೋಕ್ ಮತ್ತು ಛಲವಾದಿ ನಾರಾಯಣ ಸ್ವಾಮಿಗೆ ಇದೆಯಾ” ಎಂದು ಪ್ರಶ್ನಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಶೇ. 50 ಸುಂಕ ವಿಧಿಸಿದ ಡೊನಾಲ್ಡ್ ಟ್ರಂಪ್: ಭಾರತದ ಮೇಲಾಗುವ ಪರಿಣಾಮವೇನು?
ಆದಾಗ್ಯೂ, ಪ್ರಕರಣದಲ್ಲಿ ಸುಧಾಕರ್ ಅವರನ್ನು ಅಶೋಕ್ ಸಮರ್ಥಿಸಿಕೊಂಡಿದ್ದಾರೆ. ‘ಕಾಂಗ್ರೆಸ್ಸಿಗರು ವಿಪಕ್ಷದವರನ್ನು ಟಾರ್ಗೆಟ್ ಮಾಡಿದ್ದಾರೆ. ಕಿರುಕುಳ ನೀಡಲು ಪೊಲೀಸರನ್ನು ಬಳಸುತ್ತಿದೆ. ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಸುಧಾಕರ್ ಪಾತ್ರ ಇಲ್ಲದಿದ್ದರೂ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ಆರೋಪಿಸಿದ್ದಾರೆ.
ಆದಾಗ್ಯೂ, ಬಿಜೆಪಿಯ ಇತರ ಯಾವುದೇ ನಾಯಕರು ಪ್ರಕರಣದ ಬಗ್ಗೆಯಾಗಲೀ, ಸುಧಾಕರ್ ಪರವಾಗಿಯಾಗಲೀ ಮಾತನಾಡಿಲ್ಲ. ಹೀಗಾಗಿ, ಬಿಜೆಪಿಗರು ಸುಧಾಕರ್ ಅವರನ್ನು ಕೈಬಿಟ್ಟಿದ್ದಾರೆಯೇ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ.