ಬೆಂಗಳೂರಿನಲ್ಲಿ ನಿರ್ಮಾಣಗೊಂಡಿರುವ ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿದ್ದಾರೆ. ಇದೇ ಸಂದರ್ಭದಲ್ಲಿ, 5 ವರ್ಷದ ಬಾಲಕಿಯೊಬ್ಬಳು ಮೋದಿ ಅವರಿಗೆ ಹೃದಯಸ್ಪರ್ಶಿ ಪತ್ರ ಬರೆದಿದ್ದು, ತಾನು ದಿನನಿತ್ಯ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದಾರೆ.
ಬಾಲಕಿಯ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರು ನಿವಾಸಿ ಅಭಿರೂಪ್ ಅವರ ಪುತ್ರಿ ಆರ್ಯ ಅವರು ಈ ಪತ್ರವನ್ನು ಬರೆದಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಜಾಮ್ (ಸಂಚಾರ ದಟ್ಟಣೆ) ಸಮಸ್ಯೆ ಬಗ್ಗೆ ವಿವರಿಸಿದ್ದಾರೆ.
“ನರೇಂದ್ರ ಮೋದಿ ಜಿ, ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಇದೆ. ಇದರಿಂದಾಗಿ, ನಾವು ಶಾಲೆ ಮತ್ತು ಕಚೇರಿಗೆ ತಡವಾಗಿ ಹೋಗುವಂತಾಗಿದೆ. ರಸ್ತೆಗಳು ತುಂಬಾ ಕೆಟ್ಟದಾಗಿವೆ. ದಯವಿಟ್ಟು ಸಹಾಯ ಮಾಡಿ” ಎಂದು ಆರ್ಯ ಬರೆದಿದ್ದಾರೆ.
PM is visiting Bangalore. My 5-year-old girl sees it as her chance to finally fix traffic. pic.twitter.com/EJdzpxSs89
— Abhiroop Chatterjee (@AbhiroopChat) August 10, 2025
ತನ್ನ ಮಗಳು ಬರೆದ ಪತ್ರವನ್ನು ‘ಎಕ್ಸ್‘ನಲ್ಲಿ ಹಂಚಿಕೊಂಡಿರುವ ಅಭಿರೂಪ್, “ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಅವರ ಭೇಟಿಯು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಅವಕಾಶವೆಂದು ನನ್ನ 5 ವರ್ಷದ ಮಗಳು ಭಾವಿಸಿದ್ದಾಳೆ” ಎಂದು ಪೋಸ್ಟ್ ಮಾಡಿದ್ದಾರೆ.
ಈ ಪತ್ರವು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಬೆಂಗಳೂರಿನ ಸಂಚಾರ ದಟ್ಟಣೆಯು ಮಕ್ಕಳನ್ನೂ ಹೇಗೆ ಪ್ರಭಾವಿಸಿದೆ ಎಂಬುದರ ಬಗ್ಗೆ ಚರ್ಚೆಗಳು ನಡೆದಿವೆ.