GROUND REPORT: ಸಾಮಾನ್ಯರ ಬದುಕು ಹೈರಾಣಾದ ‘ಧರ್ಮಸ್ಥಳ’ದಲ್ಲಿ ಕಂಡಿದ್ದಿಷ್ಟು…

Date:

Advertisements
"ಸತ್ಯ ಏನೇ ಇರಲಿ, ಜನರಿಗೆ ಮೊದಲು ಹೊಟ್ಟೆಪಾಡೇ ಮುಖ್ಯವಾಗುತ್ತದೆ. ದೊಡ್ಡವರ ಮೇಲೆ ಸಿಟ್ಟಿದ್ದರೂ ಅವರನ್ನೇ ಅವಲಂಬಿಸಿ ಬದುಕಬೇಕಾದ ಸ್ಥಿತಿ ಇಲ್ಲಿನ ಜನರದ್ದು” ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಗೂಡಂಗಡಿ ವ್ಯಾಪಾರಿಗಳು.

ಬುಧವಾರ ಬೆಳಿಗ್ಗೆಯೇ ಮುಂದಾಗುವ ಸೂಚನೆಗಳು ದೊರೆತ್ತಿದ್ದವು. ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಕಳೆದೊಂದು ವಾರದಲ್ಲಿ ಕಂಡುಬರದ ಜನಜಂಗುಳಿ ಅಂದು ಆಶ್ಚರ್ಯಕರವಾಗಿ ಸೇರುತ್ತಿತ್ತು. ಅವರ್ಯಾರೂ ಯಾತ್ರಿಕರಲ್ಲ ಎಂಬುದು ಮೇಲುನೋಟಕ್ಕೆ ಗೊತ್ತಾಗುತ್ತಿತ್ತು.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವುದಾಗಿ ದೂರುದಾರ ಮುಂದೆ ಬಂದ ಬಳಿಕ, ಎಸ್‌ಐಟಿ ರಚನೆಯಾಗಿ ತನಿಖೆ ತೀವ್ರಗೊಂಡ ನಂತರದಲ್ಲಿ ಧರ್ಮಸ್ಥಳ ಬಿಕೋ ಅನ್ನಲು ಶುರುವಾಗಿದ್ದು ಕಣ್ಣಿಗೆ ರಾಚುತ್ತಿತ್ತು. ಇಡೀ ಪ್ರಕರಣ ಮೀಡಿಯಾ ಕೇಂದ್ರಿತವಾದ ಮೇಲೆ ಯಾತ್ರಿಕರು ಧರ್ಮಸ್ಥಳದತ್ತ ಬರುವುದು ಕಡಿಮೆಯಾಗಿರುವುದು ನಮ್ಮ ಅನುಭವಕ್ಕೆ ಬಂದ ಮೇಲೆ, “ಇಲ್ಲಿನ ಜನಸಾಮಾನ್ಯರ ಬದುಕು ಏನಾಗಿದೆ?” ಎಂಬ ಪ್ರಶ್ನೆ ಹುಟ್ಟಿತ್ತು. ಸ್ಥಳೀಯರು ಏನನ್ನೂ ಮಾತನಾಡುವುದಿಲ್ಲ ಎಂಬ ಅರಿವಿದ್ದರೂ ಅವರನ್ನು ಮಾತಿಗೆಳೆದು ವಿಷಯ ತಿಳಿಸುವ ಪ್ರಯತ್ನಕ್ಕೆ ಕೈಹಾಕಿದ್ದೆವು.

ಧರ್ಮಸ್ಥಳ ಮತ್ತು ನೇತ್ರಾವತಿ ಸ್ನಾನಘಟ್ಟದ ನಡುವೆ ಸಂಚರಿಸುವ ‘ಡಿ’ ಸಂಖ್ಯೆಯ ಆಟೋ ಚಾಲಕರ ಸುತ್ತ ಯಾವುದೋ ಸಂಚಲನ ಕಂಡುಬರುತ್ತಿದ್ದರಿಂದ ಇಂದು ಏನೋ ಸಂಭವಿಸುತ್ತದೆ ಎಂಬ ಸೂಚನೆಯಂತೂ ಅಲ್ಲಿತ್ತು. ಇಂತಹ ಸನ್ನಿವೇಶದಲ್ಲಿ ನಾಲ್ಕು ಜನರ ಗುಂಪೊಂದನ್ನು, “ಧರ್ಮಸ್ಥಳದಲ್ಲಿ ಜನಜೀವನ ಹೇಗಿದೆ? ಮೀಡಿಯಾಗಳ ವರದಿ ಹೆಚ್ಚಾದ ಬಳಿಕ ಅವರ ಬದುಕಿನ ಮೇಲೆ ಏನಾದರೂ ಪರಿಣಾಮ ಬೀರಿದೆಯಾ? ಮಾಧ್ಯಮದೊಂದಿಗೆ ಮಾತಾಡುತ್ತೀರಾ?” ಎಂದು ಕೇಳಿದೆವು. ಆಗ ಒಬ್ಬಾತ ಪಾರ್ಕಿಂಗ್ ಕಡೆ ತೋರಿಸಿ,  “ಅಲ್ಲಿಗೆ ಹೋಗಿ, ಎಲ್ಲಾ ಮಾತಾಡ್ತಾರೆ” ಎಂದನು.

ಧರ್ಮಸ್ಥಳದಿಂದ ಸ್ನಾನಘಟ್ಟಕ್ಕೆ ತಲುಪಿದ ಕೂಡಲೇ ಸಿಗುವ ಮೊದಲ ತಿರುವಿನ ಪಕ್ಕದ ಪಾರ್ಕಿಂಗ್ ಸ್ಥಳದಲ್ಲಿ ವಿಪರೀತ ಜನ ಕೂಡಿಕೊಂಡಿದ್ದರು. ದೂರುದಾರ ಗುರುತಿಸಿರುವ 13ನೇ ಸ್ಪಾಟ್‌ ಅಗೆಯುವ ಮುನ್ಸೂಚನೆಯೇನೂ ಇರಲಿಲ್ಲ. 12ನೇ ಸ್ಥಳವನ್ನು ಮುಗಿಸಿರುವುದರಿಂದ, ಅತಿದೊಡ್ಡ ಜಾಗವಾದ 13ರತ್ತ ಎಲ್ಲರ ಚಿತ್ತ ನೆಟ್ಟಿತ್ತು. ಬಹುಶಃ ಈ ಗುಂಪು ಕೂಡ 13ರ ಶೋಧದ ವೇಳೆ ಗಲಭೆ ಸೃಷ್ಟಿಸುವ ಉದ್ದೇಶ ಹೊಂದಿರಬಹುದೆಂದು ಅನಿಸತೊಡಗಿತು.

ಇದನ್ನೂ ಓದಿರಿ: ಧರ್ಮಸ್ಥಳ | ಸಾಕ್ಷಿ ದೂರುದಾರನ ಮಾಹಿತಿ ಆಧರಿಸಿ ಬಾಹುಬಲಿ ಬೆಟ್ಟದ ಬಳಿ ಶೋಧಕ್ಕೆ ಮುಂದಾದ ಎಸ್‌ಐಟಿ

ನಾವು ಮಾತನಾಡಿಸುವುದು ಬೇಡವೆಂದು ಹಿಂದಕ್ಕೆ ಸರಿದರೂ ಬೈಟ್ ತೆಗೆದುಕೊಳ್ಳುತ್ತಾರೋ ಇಲ್ಲವೋ ಎಂದು ಸುತ್ತಲಿನ ಜನ ಗಮನಿಸುತ್ತಲೇ ಇದ್ದರು. ಧೈರ್ಯ ಮಾಡಿ, ನಾನು ಮತ್ತು ನಮ್ಮ ವಿಡಿಯೊ ಜರ್ನಲಿಸ್ಟ್ ಮುಸ್ತಫಾ ಅಳವಂಡಿ ಪಾರ್ಕಿಂಗ್‌ನತ್ತ ನಡೆದೆವು. ನಮ್ಮನ್ನು ಕಂಡಕೂಡಲೇ, “ಓಹ್, ಈದಿನದವರಾ? ನಾವು ಹೇಳೋದೆಲ್ಲ ಹಾಕೋದಾದ್ರೆ ಮಾತಾಡ್ತೀವಿ, ಹಾಕ್ತೀರಾ? ಎಲ್ಲಿ ಆ ಕುಡ್ಲಾ ರಾಮ್‌ಪೇಜ್ನನವನು, ಬಂದಿಲ್ಲವಾ? ಇವತ್ತು 13ನೇ ಸ್ಪಾಟ್ ಅಗೆಯಲಿ. ಅಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ್‌ನ ಅಪ್ಪನ ಶವಗಳು ಸಿಗ್ತವೆ. ಮಾತಾಡ್ತೀವಿ ಬನ್ನಿ” ಎಂದು ಒತ್ತಾಯಿಸಿದರು.

d8
ಸ್ನಾನಘಟ್ಟಕ್ಕೆ ಹೊಂದಿಕೊಂಡಂತೆ ಗುರುತಿಸಲಾಗಿರುವ 13ನೇ ಸ್ಪಾಟ್

ಮುಂದಾಗುವ ಅನಾಹುತಗಳೇನೆಂದು ನಮಗೆ ಸ್ಪಷ್ಟವಾಯಿತು. ಇಲ್ಲಿದ್ದರೆ ಅಪಾಯ ಎಂದು ಎಣಿಸಿ, “ಅವ್ಯಾಚ್ಯವಾಗಿ ನಿಂದಿಸುವುದನ್ನು ನಾವು ಪ್ರಕಟಿಸುವುದಿಲ್ಲ. ಮತ್ತೊಮ್ಮೆ ಮಾತಾಡೋಣ” ಎಂದು ಹೇಳಿ ಅಲ್ಲಿಂದ ನಯವಾಗಿ ಜಾರಿಗೊಂಡೆವು. ಎದುರಿಗೆ ಬಂದಾತ ಒಬ್ಬ ನಮ್ಮನ್ನು ಗುದ್ದಿಕೊಂಡು ಹೋಗಲು ನೋಡಿದ. ಬದಿಗೆ ಸರಿದು ನಿಂತ ನಾವು, ನಮ್ಮ ಕಾರನ್ನು ಹತ್ತಿ ಸೀದಾ ಉಜಿರೆಯ ಕಡೆಗೆ ಹೊರಟೆವು.

“ನೋಡು ಮುಸ್ತಫಾ, ಯಾವತ್ತೂ ಸೇರದ ಜನ ಇವತ್ತು ಒಂದು ಕಡೆ ಸೇರ್ತಾ ಇದ್ದಾರೆ. ಏನೋ ಪಿತೂರಿ ನಡೆಯುತ್ತಿರುವ ವಾಸನೆ ಬಡಿಯುತ್ತಿದೆ” ಎಂದೆ. “ಹೌದು, ಇಂದು ಏನೋ ಆಗಲಿಕ್ಕಿದೆ. ನನಗೂ ಹಾಗೇ ಅನಿಸುತ್ತಿದೆ” ಎಂದು ಮರುತ್ತರಿಸಿದ. ಕಚೇರಿಯ ಹಿರಿಯ ಸಹೋದ್ಯೋಗಿಗಳಿಗೆ ಕರೆ ಮಾಡಿ, “ಧರ್ಮಸ್ಥಳದಲ್ಲಿ ಇವತ್ತು ಅನಾಹುತಗಳು ಆಗುವ ಸಂಭವವಿದೆ. ಅಲರ್ಟ್ ಆಗಿರಿ. ನಮಗಂತೂ ಸೇಫ್ ಅನಿಸುತ್ತಿಲ್ಲ” ಎಂದೂ ತಿಳಿಸಿದ್ದೆವು. ಉಜಿರೆಗೆ ತಲುಪಿ, ಈಗಾಗಲೇ ರೆಕಾರ್ಡ್ ಮಾಡಿದ ವಿಡಿಯೊಗಳನ್ನು ಕಚೇರಿಗೆ ತಲುಪಿಸುವ ವೇಳೆಗೆ ಮಧ್ಯಾಹ್ನವಾಗಿತ್ತು.

“ಬಿಗ್ ಬಾಸ್ ಖ್ಯಾತಿಯ ರಜತ್ ಅವರು ಸೌಜನ್ಯ ಅವರ ಮನೆಗೆ ಹೋಗುತ್ತಿರುವ ಮೆಸೇಜ್ ಬರ್ತಾ ಇದೆ. ಹೋಗೋಣವೇ?” ಎಂದ ಮುಸ್ತಫಾ. ಆ ವೇಳೆಗೆ ಮತ್ತೊಬ್ಬ ದೂರುದಾರ ಬೆಳ್ತಂಗಡಿ ಎಸ್.ಐ.ಟಿ. ಕಚೇರಿಗೆ ಹೋಗುತ್ತಿರುವ ಸಂದೇಶವೂ ನಮಗೆ ಬಂತು. “ಮುಸ್ತಫಾ, ನಾವೀಗ ಮೂರನೇ ದೂರುದಾರನನ್ನು ಭೇಟಿಯಾಗೋಣ. ರಜತ್‌ಗಿಂತ ಇದು ಮುಖ್ಯವಾಗುತ್ತದೆ” ಎಂದು ಬೆಳ್ತಂಗಡಿ ಕಡೆಗೆ ಹೊರಟು, ಆ ದೂರುದಾರನ ನಂಬರ್ ಸಂಗ್ರಹಿಸಿ ಕರೆ ಮಾಡಿದೆವು. “ಸರ್, ನಾನೀಗ ಉಜಿರೆ ಕಡೆಗೆ ಬರುತ್ತಿದ್ದೇನೆ. ಅಲ್ಲೇ ಸಿಗ್ತೀನಿ. ನಾನಿನ್ನೂ ಊಟವನ್ನೂ ಮಾಡಿಲ್ಲ” ಎಂದರು. ಹೊರಟಿದ್ದ ಕಾರನ್ನು ನಿಲ್ಲಿಸಿ ದೂರುದಾರನನ್ನು ಕಾಯುತ್ತಾ ಕೂತೆವು. ಅದರ ನಡುವೆ ನಾವೂ ಊಟ ಮುಗಿಸಿದೆವು. ಆದರೆ ದೂರುದಾರ ನಂತರದಲ್ಲಿ ನಮ್ಮ ಕರೆಯನ್ನು ಸ್ವೀಕರಿಸಲೇ ಇಲ್ಲ. ಮೂರು ಮುಕ್ಕಾಲಾದರೂ ಪ್ರತಿಕ್ರಿಯಿಸದ ಕಾರಣ ಮುಂದಿನ ಕಾರ್ಯಗಳಿಗೆ ಸಿದ್ಧವಾದೆವು.

ಎಸ್.ಐ.ಟಿ ಕಚೇರಿಯಲ್ಲಿ ಎಸ್‌ಐಟಿಯ ಮುಖ್ಯಸ್ಥ ಪ್ರಣಬ್ ಮೊಹಂತಿಯವರು ಬೆಳಿಗ್ಗೆಯಿಂದಲೂ ನಿರಂತರ ಸಭೆಗಳನ್ನು ನಡೆಸುತ್ತಿದ್ದರು. ಅವರನ್ನು ಮಾಧ್ಯಮದವರು ಕಾಯುತ್ತಿದ್ದಾರೆಂದು ತಿಳಿದು ಬೆಳ್ತಂಗಡಿಗೆ ಹೋದೆವು. ಎಸ್.ಐ.ಟಿ ಕಚೇರಿ ತಲುಪುವ ವೇಳೆಗೆ, ಕುಡ್ಲಾ ರಾಮ್‌ಪೇಜ್‌ನ ಅಜಯ್ ಅಂಚನ್ ಮೇಲೆ ಹಲ್ಲೆಯಾಗಿದೆ ಎಂಬ ಸಂದೇಶ ಬಂತು. ನಮಗೆ ಮೊದಲಿನಿಂದಲೂ ಚಿರಪರಿಚಿತರಾಗಿದ್ದ ಅಜಯ್ ಅವರಿಗೆ ಕೂಡಲೇ ಕಾಲ್ ಮಾಡಿದೆವು. ಅವರು ಏದುಸಿರು ಬಿಡುತ್ತಾ ಉಸಿರುಕಟ್ಟಿಕೊಂಡು ಮಾತಾಡುತ್ತಿದ್ದರು. ಸೌಜನ್ಯ ಮನೆ ಪಾಂಗಾಳಕ್ಕೆ ಸಂಪರ್ಕ ಕಲ್ಪಿಸುವ ಮಹಾತ್ಮ ಗಾಂಧಿ ವೃತ್ತದಲ್ಲಿದ್ದೇವೆ ಎಂದರು. ಉಜಿರೆ- ಧರ್ಮಸ್ಥಳ ರಸ್ತೆಯಲ್ಲಿರುವ ವೃತ್ತಕ್ಕೆ ತಕ್ಷಣ ಹೊರಟು ಬಂದೆವು. ನಾವು ಹೋಗುವಷ್ಟರಲ್ಲಿ ಯೂಟ್ಯೂಬರ್‌ಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಮಾಧ್ಯಮದವರೂ ಸ್ಥಳದಲ್ಲಿ ಇರಲಿಲ್ಲ. ಮಹೇಶ್ ಶೆಟ್ಟಿ ತಿಮರೋಡಿ ಅವರ ಅಣ್ಣನ ಮಗ ತನುಶ್ ಶೆಟ್ಟಿ ಹಾಗೂ ಒಂದಿಷ್ಟು ಜನರು ಅಲ್ಲಿದ್ದರು. “ನಾಲ್ಕು ಜನರಿಗೆ ಹೊಡೆದಿದ್ದಾರೆ. ನಾನು ಇಲ್ಲಿಯೇ ಇದ್ದೆ. ಇವನು ತನುಶ್, ಈತನನ್ನು ಮುಟ್ಟಬೇಡಿ ಎನ್ನುತ್ತಿದ್ದರು. ಸುಮಾರು 60ಕ್ಕೂ ಹೆಚ್ಚು ಜನ ಬಂದು ಹಲ್ಲೆ ನಡೆಸಿದ್ದಾರೆ. ಕ್ಯಾಮೆರಾಗಳನ್ನು ಒಡೆದು ಹಾಕಿದ್ದಾರೆ. ಈಗ ಆಸ್ಪತ್ರೆಗೆ ಹೊರಟಿದ್ದೇನೆ” ಎಂದರು ತನುಶ್. ಬಹುಶಃ ತನುಶ್ ಅವರನ್ನು ಮುಟ್ಟಿದ್ದರೆ ಮುಂದೆ ಏನಾಗುತ್ತದೆ ಎಂಬುದು ಆ ದುಷ್ಕರ್ಮಿಗಳಿಗೆ ಗೊತ್ತಿತ್ತು ಎನ್ನುತ್ತವೆ ಮೂಲಗಳು. ಯೂಟ್ಯೂಬರ್‌ಗಳಾದ ರಾಮ್‌ಪೇಜ್‌ನ ಅಜಯ್, ಸಂಚಾರಿ ಸ್ಟುಡಿಯೊದ ಸಂತೋಷ್, ಯುನೈಟೆಡ್ ಮೀಡಿಯಾದ ಅಭಿಷೇಕ್ ಆ ಗುಂಪಿನ ಟಾರ್ಗೆಟ್ ಆಗಿತ್ತು. ಕುಡ್ಲಾರಾಮ್‌ಪೇಜ್‌ನ ವಿಡಿಯೊ ಜರ್ನಲಿಸ್ಟ್ ಕೂಡ ಹಲ್ಲೆಗೆ ಒಳಗಾಗಿದ್ದರು. ತನುಶ್ ಹೊರಟು ಹೋದ ಬಳಿಕ ನಾವು ಇಲ್ಲಿರುವುದು ಕ್ಷೇಮವಲ್ಲ ಎಂದು ತಿಳಿದು ಉಜಿರೆಯ ಬೆನಕ ಆಸ್ಪತ್ರೆ ಕಡೆಗೆ ಕಾರು ಹತ್ತಿದೆವು. ಬಹುಶಃ ನಾವು ಏನಾದರೂ ದೂರುದಾರನ ಹಿಂದೆ ಬೀಳದೆ ಸೌಜನ್ಯ ಅವರ ಮನೆಯ ಕಡೆ ಹೊರಟಿದ್ದರೆ ಗೂಂಡಾಪಡೆಯಿಂದ ಹಲ್ಲೆಗೊಳಗಾಗುತ್ತಿದ್ದೆವು ಎಂದು ಅನಿಸತೊಡಗಿತು.

d5
ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆಸುತ್ತಿರುವ ದುಷ್ಕರ್ಮಿಗಳು

ಇದನ್ನೂ ಓದಿರಿ: ಧರ್ಮಸ್ಥಳ ಪ್ರಕರಣ | ಮಾನಹಾನಿಕರ ವರದಿ ಪ್ರಸಾರ ತಡೆ ಕೋರಿ ಅರ್ಜಿ; ರಾಜ್ಯದ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ

ಆಗಲೇ ಇಳಿಸಂಜೆಯಾಗುತ್ತಿತ್ತು. ಬೆನಕ ಆಸ್ಪತ್ರೆಯ ಕಡೆಗೆ ಸೌಜನ್ಯ ಪರ ಹೋರಾಟಗಾರರು ಒಬ್ಬೊಬ್ಬರಾಗಿ ಬರತೊಡಗಿದ್ದರು. “ಹಲ್ಲೆಗೊಳಗಾದವರು ಐಸಿಯುನಲ್ಲಿದ್ದಾರೆ. ಅವರನ್ನು ಮಾತನಾಡಿಸಲು ಅವಕಾಶವಿಲ್ಲ” ಎಂದರು ಆಸ್ಪತ್ರೆಯ ಸಿಬ್ಬಂದಿ. ಚಿಕಿತ್ಸೆ ಪಡೆಯುತ್ತಿರುವ ಫೋಟೋ ಮತ್ತು ವಿಡಿಯೊಗಳನ್ನು ನಿರೀಕ್ಷಿಸುತ್ತಾ ಕಾದೆವು. ಸ್ವಲ್ಪ ಹೊತ್ತಿನಲ್ಲಿ ಮತ್ತೊಂದು ಸಂದೇಶ ಬಂದಿತು. ನೇತ್ರಾವತಿ ಬಳಿ ನೂರಾರು ಜನ ಸೇರಿಕೊಂಡು ಉದ್ವಿಗ್ನತೆ ಉಂಟಾಗಿದೆ ಎಂದು ತಿಳಿದ ತಕ್ಷಣ ಮತ್ತೆ ಧರ್ಮಸ್ಥಳ ಕಡೆ ಹೊರಟೆವು. ನೇತ್ರಾವತಿ ಸ್ನಾನಘಟ್ಟದಲ್ಲಿ ಯಾವುದೇ ಗುಂಪು ಇರಲಿಲ್ಲ. ಆದರೆ ಪಾಂಗಾಳ ರಸ್ತೆಯಲ್ಲೇ (ಅಂದರೆ ಮಹಾತ್ಮ ಗಾಂಧಿ ವೃತ್ತದಲ್ಲಿ) ಜಮಾಯಿಸಿರುವುದು ನಮಗೆ ಖಚಿತವಾಗಿತ್ತು. ನಮ್ಮ ಬಾಡಿಗೆ ಕಾರಿನ ಡ್ರೈವರ್ ಸ್ಥಳೀಯರಾಗಿದ್ದು ನಮಗೆ ಕೊಂಚ ನಿರಾಳತೆಯನ್ನು ತಂದಿತ್ತು. ಡ್ರೈವರ್ ಬ್ಯಾರಿ ಸಮುದಾಯದವನು. ಧರ್ಮಸ್ಥಳದಲ್ಲಿ ಕೆಲಸ ಮಾಡುವ ಬ್ರಾಹ್ಮಣ ಸಮುದಾಯದ ಸ್ನೇಹಿತರೊಬ್ಬರು ಬೆಳಿಗ್ಗೆ ಆತನಿಗೆ ಕರೆ ಮಾಡಿ ಮಾತನಾಡಿದ್ದನ್ನು ಹೇಳುತ್ತಿದ್ದನು. “ನಾನು ಧರ್ಮಸ್ಥಳಕ್ಕೆ ಬಾಡಿಗೆಗೆ ಬಂದಿದ್ದು ಸ್ನೇಹಿತನಿಗೆ ತಿಳಿದಿದ್ದರಿಂದ ಮುಂಜಾನೆ ಕರೆ ಮಾಡಿದ್ದ. ಇವತ್ತು ಏನೋ ಆಗಲಿಕ್ಕಿದೆ ಎಂದಿದ್ದ” ಎಂದು ನೆನಪಿಸಿಕೊಳ್ಳುತ್ತಿದ್ದನು. ನಾವು ಮಹಾತ್ಮ ಗಾಂಧಿ ವೃತ್ತಕ್ಕೆ ಹೋದಾಗ ಮಾಧ್ಯಮಗಳು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಒಂದಿಷ್ಟು ಪೊಲೀಸರು ಹಾಗೂ ಇನ್ನೂರಕ್ಕೂ ಹೆಚ್ಚು ಜನರ ಗುಂಪು ಅಲ್ಲಿತ್ತು. “ಮಹೇಶ್ ಶೆಟ್ಟಿ ತಿಮರೋಡಿಗೆ ಧಿಕ್ಕಾರ, ಗಿರೀಶ್ ಮಟ್ಟಣ್ಣನವರಿಗೆ ಧಿಕ್ಕಾರ, ಕಮ್ಯುನಿಸ್ಟರ ಪಿತೂರಿಗೆ ಧಿಕ್ಕಾರ, ಧರ್ಮಸ್ಥಳ ವಿರೋಧಿಗಳಿಗೆ ಧಿಕ್ಕಾರ” ಎಂದು ಕೂಗುತ್ತಿತ್ತು. ಯೂಟ್ಯೂಬರ್‌ಗಳಿಗೆ ಹೊಡೆದವರೇ ಪ್ರತಿಭಟನೆ ಮಾಡುತ್ತಿದ್ದಾರೆಂದು ಸ್ಪಷ್ಟವಾಯಿತು. ವಿಡಿಯೊ ಜರ್ನಲಿಸ್ಟ್ ಮುಸ್ತಫಾ ಕೆಳಗಿಳಿದು, ಕೆಲ ಹೊತ್ತು ಚಿತ್ರೀಕರಣ ಮಾಡಿಕೊಂಡನು. ಸೌಜನ್ಯ ಅವರ ಮಾವನಾದ ವಿಠಲ ಗೌಡ ಅವರಿಗೆ ಸೇರಿದ ಖಾಲಿ ಕಾರು ತಿರುವಿನಲ್ಲಿ ನಿಂತಿತ್ತು. ಕಾರಿನ ಮೇಲೆ ಅಂಟಿಸಲಾಗಿದ್ದ ‘ಜಸ್ಟಿಸ್ ಫಾರ್ ಸೌಜನ್ಯ’ ಎಂಬ ಸ್ಟಿಕ್ಟರ್ ಹರಿದು ಹಾಕಿ, ಕಾರಿನ ಗಾಜುಗಳನ್ನು ಪುಡಿಪುಡಿ ಮಾಡಲಾಗಿತ್ತು. ‘ಸೌಜನ್ಯ ಮನೆಗೆ ದಾರಿ’ ಎಂಬ ಬೋರ್ಡ್ ಹರಿದು ಹಾಕಲಾಗಿತ್ತು. ಅಲ್ಲಿರುವುದು ಕ್ಷೇಮವಲ್ಲ ಎಂದು ಭಾವಿಸಿ, ಹೆಚ್ಚಿನ ಪತ್ರಕರ್ತರು ಬರುವವರೆಗೂ ಸ್ಥಳದಲ್ಲಿರುವುದು ಬೇಡವೆಂದು ಮತ್ತೆ ಕಾರನ್ನು ವಾಪಸ್ ಉಜಿರೆಯ ಕಡೆಗೆ ತಿರುಗಿಸಿದೆವು.

d10
‘ಸೌಜನ್ಯ ಮನೆಗೆ ದಾರಿ’ ಎಂಬ ಸೂಚನಾ ಫಲಕ ಹರಿದು ಹಾಕಿರುವುದು

ಸೌಜನ್ಯ ಪರ ಹೋರಾಟಗಾರ ಜೊತೆ ಮೊದಲಿನಿಂದಲೂ ‘ಈದಿನ ಡಾಟ್ ಕಾಮ್’ ನಿಂತಿದ್ದರಿಂದ ಉದ್ರಿಕ್ತರ ಗುಂಪು ನಮ್ಮ ಮೇಲೆಯೂ ಹಲ್ಲೆ ನಡೆಸಬಹುದು ಎಂಬ ಭಯ ನಮಗಿತ್ತು. ಹೀಗಾಗಿ ಹೆಚ್ಚು ಹೊತ್ತು ಅಲ್ಲಿ ನಿಲ್ಲಲಿಲ್ಲ. ನೇತ್ರಾವತಿ ನದಿಯನ್ನು ದಾಟಿ ರಸ್ತೆ ಬದಿಯಲ್ಲಿ ಸ್ವಲ್ಪ ಹೊತ್ತು ನಿಂತೆವು. “ಇನ್ನೂ ಭಯ ಪಡುವುದು ವ್ಯರ್ಥ” ಎಂದು ಧೈರ್ಯ ಮಾಡಿ ಮತ್ತೆ ವಾಪಸ್ ಘಟನಾ ಸ್ಥಳಕ್ಕೆ ಹೊರಟೆವು. ಆ ವೇಳೆಗಾಗಲೇ ಉಜಿರೆಯ ಕಡೆಯಿಂದ ಒಂದಿಷ್ಟು ಜನ ಮಹಾತ್ಮ ಗಾಂಧಿ ವೃತ್ತಕ್ಕೆ ಹೋಗಿ ಎರಡು ಗುಂಪುಗಳ ನಡುವೆ ಉದ್ವಿಗ್ನತೆ ಉಂಟಾಗಿ, ಲಘು ಲಾಠಿ ಚಾರ್ಜ್ ಆಗಿದೆ ಎಂಬುದು ತಿಳಿಯಿತು. ಆದರೆ ನಾವು ಹೋಗುವ ವೇಳೆಗೆ ಉಜಿರೆಯ ಕಡೆಯ ಗುಂಪು ಸ್ಥಳದಿಂದ ಹಿಂತಿರುಗಿತ್ತು. ಮಾಧ್ಯಮಗಳು ದೌಡಾಯಿಸಿದ್ದವು. ಹೆಚ್ಚಿನ ಪೊಲೀಸರು ಜಮಾಯಿಸಿದ್ದರು. ಪೊಲೀಸ್ ವ್ಯಾನಿನ ಸೈರನ್ ಶಬ್ದ ಜೋರಾಗಿತ್ತು. ಆ ವೃತ್ತದಿಂದ ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. “ಇನ್ನೂ ಇಲ್ಲೇ ಇದ್ದರೆ ಅಕ್ರಮ ಕೂಟ ಸೇರಿದೆ ಎಂದು ಪ್ರಕರಣ ದಾಖಲಿಸಲಾಗುವುದು” ಎಂದು ಪೊಲೀಸರು ಅನೌನ್ಸ್ ಮಾಡಿದರು. ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಕುಟುಂಬಸ್ಥರಾದ ಧೀರಜ್ ಕೆಲ್ಲಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ನಮ್ಮ ಕಣ್ಣಿಗೂ ಬಿತ್ತು. ಪ್ರತಿಭಟನೆಯ ಮುಂದಾಳುಗಳು, “ನಾವು ಇವರನ್ನೆಲ್ಲ ವಾಪಸ್ ಕರೆದುಕೊಂಡು ಹೋಗುತ್ತೇವೆ” ಎಂದು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಲೇ ಇದ್ದರು. ವೃತ್ತವನ್ನು ದಾಟಿದ ಆ ಗುಂಪು ಧರ್ಮಸ್ಥಳ ಪೊಲೀಸ್ ಠಾಣೆ ಕಡೆ ತೆರಳಿ ಅಲ್ಲಿ ಜಮಾಯಿಸಿತು. ಮತ್ತದೇ ಧಿಕ್ಕಾರ. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್‌ ವಿರುದ್ಧ ಆಕ್ರೋಶ ಹೊರಹಾಕುವ ಜೊತೆಗೆ ಮತ್ತೊಬ್ಬ ದೂರುದಾರ ಜಯಂತ್ ಟಿ ಮತ್ತು ಧರ್ಮಸ್ಥಳ ಭೂ ಹಗರಣಗಳ ವಿರುದ್ಧ ಹೋರಾಡುತ್ತಿರುವ ನಾಗರಿಕ ಸೇವಾ ಟ್ರಸ್ಟ್‌ನ ಸೋಮನಾಥ್ ನಾಯಕ್ ವಿರುದ್ಧವೂ ಘೋಷಣೆ ಮೊಳಗಿತು. “ಈ ಎಲ್ಲದರ ಹಿಂದಿರುವ ಮಾಸ್ಟರ್ ಮೈಂಡ್ ಸೋಮನಾಥ್ ನಾಯಕ್” ಎಂಬುದು ಆ ಉದ್ರಿಕ್ತ ಗುಂಪಿನ ಮುಖಂಡರ ಆರೋಪವಾಗಿತ್ತು.

d4
ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವ ಉದ್ರಿಕ್ತ ಗುಂಪು
d3
ಧರ್ಮಸ್ಥಳ ಪೊಲೀಸ್ ಠಾಣೆ ಎದುರು ಪ್ರತಿಭಟನೆ

ಇಲ್ಲಿಯೇ ಮತ್ತೊಂದು ಅನುಭವವನ್ನೂ ದಾಖಲಿಸುವುದು ಸೂಕ್ತ. ಧರ್ಮಸ್ಥಳದ ವರದಿಗಾಗಿ ವಾರಗಳ ಕಾಲ ಸುತ್ತಾಡಿದ್ದರಿಂದ ಅನೇಕ ಜನರನ್ನು ಮಾತನಾಡಿಸಿದ್ದೆವು. ಕಾರ್ಯಾಚರಣೆ ಮಾಡುವ ಜಾಗದಲ್ಲಿ, ಟೀ ಅಂಗಡಿಗಳ ಬಳಿ, ಅಲ್ಲಿ ಇಲ್ಲಿ ಸಿಕ್ಕ ಬಿಡಿಬಿಡಿ ಜನರ ಮಾತುಗಳನ್ನು ಆಗಾಗ್ಗೆ ಆಲಿಸಿದ್ದೆವು. ‘ಇನ್‌ಫಾಮರ್ಸ್’ ರೀತಿ ತಿರುಗಾಡಿಕೊಂಡು ಇದ್ದವರ ಮಾತುಗಳು ಅಸಹನೆಯಿಂದ ಕೂಡಿರುತ್ತಿದ್ದವು. “ಹೀಗೆ ವಾಚ್‌ ಮಾಡುತ್ತಿರುವವರು ಪ್ರಭಾವಿಗಳ ಕಡೆಯವರು. ಧರ್ಮಸ್ಥಳ ಸುತ್ತಮುತ್ತ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಹೀಗಾಗಿಯೇ ಧರ್ಮಸ್ಥಳದಲ್ಲಿ ಕಮ್ಯುನಿಸ್ಟರ ಪಿತೂರಿ ನಡೆಯುತ್ತಿದೆ ಎಂಬ ನರೇಟಿವ್ ಕಟ್ಟುವ ಮತ್ತು ಸಿಕ್ಕಸಿಕ್ಕವರಿಗೆ ಅದನ್ನೇ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ” ಎಂಬುದು ನಮ್ಮ ಅರಿವಿಗೆ ಬಂದಿತ್ತು. ಗಾಂಧಿ ವೃತ್ತದಲ್ಲಾದ ಗಲಾಟೆಯ ವೇಳೆ ನಮಗೆ ಕಂಡ ಅನೇಕರು ಈ ಹಿಂದೆ ಅಲ್ಲಲ್ಲಿ ಮಾತಿಗೆ ಸಿಕ್ಕವರೇ ಆಗಿದ್ದರು!

ಮತ್ತೆ ಘಟನೆಯ ವಿಷಯಕ್ಕೆ ಮರಳುವುದಾದರೆ, “ಉಜಿರೆಯಲ್ಲಿ ಸುವರ್ಣ ಟಿವಿ ವರದಿಗಾರ ಮತ್ತು ಕ್ಯಾಮೆರಾ ಮ್ಯಾನ್‌ಗಳಿಗೆ ಹೊಡೆದಿದ್ದಾರಂತೆ” ಎಂಬ ಮಾಹಿತಿ ಬಂತು. ಧರ್ಮಸ್ಥಳದಲ್ಲಿ ಉದ್ವಿಗ್ನತೆ ಉಂಟಾದಂತೆ ಉಜಿರೆಯಲ್ಲೂ ಜನ ಸೇರಿದ್ದಾರೆಂಬುದು ನಮಗೆ ತಿಳಿಯದೆ ಇರಲಿಲ್ಲ. ಸೀದಾ ಬೆನಕ ಆಸ್ಪತ್ರೆಗೆ ದೌಡಾಯಿಸಿದ್ದೆವು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಬೆನಕ ಆಸ್ಪತ್ರೆಗೆ ಆಗಮಿಸಿದ್ದರು. ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ತಮ್ಮಣ್ಣ ಶೆಟ್ಟಿ, ಸೌಜನ್ಯ ಮಾವನವರಾದ ವಿಠಲ ಗೌಡ, 2ನೇ ದೂರುದಾರ ಟಿ.ಜಯಂತ್ ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಹಿಂದುತ್ವ ಕಾರ್ಯಕರ್ತರು ಜಮಾಯಿಸಿದ್ದರು. “ಸುವರ್ಣ ಟಿವಿಯಲ್ಲಿ ಈಗಾಗಲೇ ಪ್ರಸಾರವಾಗಿದ್ದ ವರದಿ ಚರ್ಚೆಯಾಗುತ್ತಿತ್ತು. ನಾವು ಯಾರೂ ಹೊಡೆದಿಲ್ಲ. ಆದರೂ ನಮ್ಮ ವರದಿಗಾರರ ಮೇಲೆ ಹಲ್ಲೆಯಾಗಿದೆ ಎಂದು ಆ ಅಜಿತ್ ಜೈನ್ ಸುದ್ದಿ ಪ್ರಕಟಿಸಿದ್ದಾನೆ. ಆ ವರದಿಗಾರರನ್ನು ಇಲ್ಲಿಯೇ ಆಸ್ಪತ್ರೆಗೆ ದಾಖಲಿಸಿದ್ದೇವೆ” ಎಂದು ಪೊಲೀಸರೊಂದಿಗೆ ಮಹೇಶ್ ಶೆಟ್ಟಿ ಮಾತನಾಡುತ್ತಿದ್ದರು. ಅಲ್ಲಿದ್ದ ಯುವಕರು, ಕೋಪೋದ್ರಿಕ್ತರಾಗಿದ್ದರು ಎಂಬುದು ಸುಳ್ಳಲ್ಲ. “ಎಸ್‌ಪಿ ಸಾಹೇಬರೇ, ನಾವು ನಿಮ್ಮ ಮಾತಿಗೆ ಬೆಲೆ ಕೊಡುತ್ತೇವೆ. ನಮಗೆ ಇಲ್ಲಿನ ಸ್ಥಳೀಯ ಪೊಲೀಸರ ಮೇಲೆ ಯಾವುದೇ ನಂಬಿಕೆ ಇಲ್ಲ. ಆ ವರದಿಗಾರನ ಮೇಲೆ ಯಾರೂ ಹಲ್ಲೆ ಮಾಡಿಲ್ಲ. ಸರಿಯಾದ ತನಿಖೆಯಾಗಬೇಕು. ನಿಮ್ಮ ಮಾತಿಗೆ ಬೆಲೆ ಕೊಟ್ಟು ನಾವೀಗ ತೆರಳುತ್ತೇವೆ” ಎಂದರು ತಿಮರೋಡಿ.

d7
ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ

‘ಈದಿನ’ದ ಜೊತೆ ಮಾತನಾಡಿದ ಅವರು, “ಮೂರನೇ ತಾರೀಖಿನಿಂದ ಉತ್ಖನನ ಕಾರ್ಯ ನಡೆಯುತ್ತಿದೆ. ಜೈಲಿಗೆ ಹೋಗಬೇಕಾದವರು ವಿಚಲಿತರಾಗಿದ್ದಾರೆ. ಮಾಧ್ಯಮಗಳ ಮೇಲೆ ಹಲ್ಲೆ ಮಾಡಬೇಕೆಂದು ಮೂರು ದಿನಗಳಿಂದ ಸಂಚು ರೂಪಿಸಿದ್ದರು. ಉಜಿರೆಯ ಲಕ್ಷ್ಮಿ ಗ್ರೂಪ್‌ನ ಮೋಹನ್, ಉದಯ್ ಚಿಕನ್ ಸೆಂಟರ್‌ನ ರಾಮಚಂದ್ರ ಶೆಟ್ಟಿ, ಮಹಾವೀರ ಟೆಕ್ಸ್‌ಟೈಲ್ಸ್‌ನ ಪ್ರಭಾಕರ ಜೈನ್ ಮತ್ತು ಧರ್ಮಸ್ಥಳದವರು ಸೇರಿಕೊಂಡು ಮೀಟಿಂಗ್ ಮಾಡಿದ್ದಾರೆ. ರಾಮ್ ಪೇಜ್‌ನವನಿಗೆ ಹೊಡೆಯಬೇಕು; ಸಂಚಾರಿ ಸ್ಟುಡಿಯೊ, ಯುನೈಟೆಡ್ ಮೀಡಿಯಾದವರಿಗೆ ಹೊಡೆಯಬೇಕು ಎಂದು ಧರ್ಮಸ್ಥಳದಲ್ಲಿ ಸೇರಿ ಸಭೆ ಮಾಡಿದ ಪಾಪಿಗಳು ಈ ಉಜಿರೆಯವರೇ ಆಗಿದ್ದಾರೆ. ಇನ್ನು ಮುಂದೆ ನಿಮಗೆ ಕಾದಿದೆ ಹಬ್ಬ. ಮೂರು ದಿನಗಳಿಂದ ಈ ಸಂಬಂಧ ವಿಡಿಯೊ ಮಾಡಿ ಬಿಡುತ್ತಿದ್ದೆವು. ನಾಳೆ ಈದಿನ ಚಾನೆಲ್‌ನವರ ಮೇಲೂ ದಾಳಿಯಾಗಬಹುದು. ಇಂದು ಇವರೆಲ್ಲ ಬೆತ್ತಲಾಗುತ್ತಿದ್ದಾರೆ. ಎಸ್‌ಐಟಿ ತನಿಖೆಯನ್ನು ನಿಲ್ಲಿಸಲು ಒಳಸಂಚು ರೂಪಿಸಿದ್ದಾರೆ. ಹಲ್ಲೆಯಲ್ಲಿ ಭಾಗಿಯಾಗಿರುವ ಡಿ ನಂಬರ್‌ನವರಿಗೆ ಧರ್ಮಸ್ಥಳವೇ ಅಂತಿಮವಾಗಬೇಕಾಗುತ್ತದೆ” ಎಂದ ತಕ್ಷಣ ಅಲ್ಲಿದ್ದ ಬೆಂಬಲಿಗರು ಜೋರಾಗಿ ಚಪ್ಪಾಳೆ ಹೊಡೆದರು.

ತಿಮರೋಡಿ ಮಾತು ಮುಂದುವರಿಸಿದರು: “ಇಂದು ಮಾಧ್ಯಮದವರಿಗೆ ಹೊಡೆದಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಕಲ್ಲು ಬೀಸಿದ್ದಾರೆ. ಈ ಅತ್ಯಾಚಾರಿಗಳಿಗೆ ಮುಂದೆ ಹೇಗೆ ಕಲ್ಲು ಬೀಳುತ್ತವೆ ಎಂಬುದನ್ನು ಕಾದು ನೋಡಿ. ನಾವು ಕರೆ ಕೊಡದೆ ಸಾವಿರಾರು ಹುಡುಗರು ಬಂದು ಸೇರಿದ್ದಾರೆ. ಕರೆ ಕೊಟ್ಟರೆ ಬೇರೆಯೇ ಆಗುತ್ತದೆ. ಅವನ್ಯಾವನೋ ಚಂದನ್ ಕಾಮತ್ ಅಂತ. ಅವನ ರೆಸಾರ್ಟ್‌ನಲ್ಲಿಯೇ ಅತ್ಯಾಚಾರ ನಡೆದದ್ದು. ಇಂದು ನಡೆದ ಪಿತೂರಿಯಲ್ಲಿ ಅವನೂ ಸೇರಿಕೊಂಡಿದ್ದಾನೆ. ಪೊಲೀಸರು ಈ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು. ಇಲ್ಲವಾದರೆ ಇಡೀ ರಾಜ್ಯದ ಜನ ಬೆಳ್ತಂಗಡಿಯಲ್ಲಿ ಸೇರಲು ಕರೆ ಕೊಡುತ್ತೇವೆ. ಸುವರ್ಣ ಚಾನೆಲ್‌ನವರನ್ನು ಗಲಾಟೆ ಮಾಡಲು ಕಳುಹಿಸಿದ್ದಾರೆ. ಧರ್ಮಸ್ಥಳದಲ್ಲಿ ಮಾಧ್ಯಮಗಳಿಗೆ ಹೊಡೆದಿರುವುದನ್ನು ಕೌಂಟರ್ ಮಾಡಲು, ಬೆನಕ ಆಸ್ಪತ್ರೆಗೆ ಸುವರ್ಣ ವರದಿಗಾರರನ್ನು ಕಳುಹಿಸಿ ರಂಪಾಟ ಮಾಡಿಸಲು ಯತ್ನಿಸಿದ್ದಾರೆ. ಯಾರೂ ಹೊಡೆಯದಿದ್ದರೂ ಮಹೇಶ್ ಶೆಟ್ಟಿ ಥಳಿಸಿರುವುದಾಗಿ ಅಜಿತ್ ಜೈನ್ ಸುದ್ದಿ ಮಾಡಿದ್ದಾನೆ. ಹೀಗೆ ಸುಳ್ಳು ಹಬ್ಬಿಸಿದರೆ ಸುವರ್ಣ ಟಿವಿಯರಿಗೆ ಸಿಕ್ಕಲ್ಲಿ ಹೊಡೆಯುತ್ತೇವೆ” ಎಂದು ಎಚ್ಚರಿಸಿದರು.

ಇದನ್ನೂ ಓದಿರಿ: ಧರ್ಮಸ್ಥಳ | ಯೂಟ್ಯೂಬರ್‌ಗಳ ಮೇಲೆ ಹಲ್ಲೆ; ಆರೋಪಿಗಳ ಬಂಧನಕ್ಕೆ ಪ್ರೆಸ್ ಕ್ಲಬ್ ಕೌನ್ಸಿಲ್ ಆಗ್ರಹ

ಮಾತಿಗಿಳಿದ ಮಟ್ಟಣ್ಣನವರ್, “ಆ ವರದಿಗಾರರನ್ನು ಇಲ್ಲಿಂದ ಎಸ್‌ಡಿಎಂ ಆಸ್ಪತ್ರೆಗೆ ಹೋಗಲು ನಾವು ಬಿಡಲಿಲ್ಲ. ಅಲ್ಲಿಗೆ ಹೋದರೆ, ನಿಮ್ಮ ಕೈಕಾಲು ಮುರಿದು ಹಾಕಿ, ತಿಮರೋಡಿ ಕಡೆಯವರು ಹಲ್ಲೆ ಮಾಡಿದ್ದಾರೆಂದು ಸರ್ಟಿಫಿಕೇಟ್ ಮಾಡಿಸುತ್ತಾರೆಂದು ವರದಿಗಾರರಿಗೆ ತಿಳಿಸಿ, ಬೆನಕ ಆಸ್ಪತ್ರೆಯಲ್ಲಿಯೇ ಟ್ರೀಟ್‌ಮೆಂಟ್ ಕೊಡಿಸಿದ್ದೇವೆ” ಎಂದರು. ಇಷ್ಟಾದ ಮೇಲೆ ಗುಂಪು ಚದುರಿತು. ನಾವು ಉಳಿದುಕೊಂಡಿದ್ದ ಲಾಡ್ಜ್‌ಗೆ ತಲುಪುವ ವೇಳೆಗೆ ರಾತ್ರಿ ಹತ್ತು ಗಂಟೆಯಾಗಿತ್ತು.

d6
ಹೋರಾಟಗಾರ ಗಿರೀಶ್ ಮಟ್ಟಣ್ಣನವರ್

ಬುಧವಾರ ಯಾವುದೇ ಉತ್ಖನನ ನಡೆದಿರಲಿಲ್ಲ. 13ನೇ ಸ್ಥಳ ಹಾಗೆಯೇ ಉಳಿಯಿತು. ಪ್ರತಿದಿನ ಸಾಮಾನ್ಯವಾಗಿ ಹನ್ನೊಂದು ಗಂಟೆಯ ಒಳಗೆ ಎಸ್‌ಐಟಿ ಕಾರ್ಯಾಚರಣೆ ಶುರುವಾಗಿ ಸಂಜೆ ಆರು ಗಂಟೆಯವರೆಗೆ ನಡೆಯುತ್ತಿತ್ತು. ಆದರೆ ಅಂದು 13ನೇ ಸ್ಪಾಟ್ ಬದಲು, ಸ್ಪಾಟ್ 12ರ ಬಳಿ (ಬಂಗ್ಲೆಗುಡ್ಡದ ಕಾಡಿನಲ್ಲಿ) ಹುಡುಕಾಟ ನಡೆಸಿ ನಾಲ್ಕು ಗಂಟೆಗೆಯೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಮಾರನೇ ದಿನ ಪ್ರಮುಖವಾಗಿ ಘಟಿಸಿದ್ದೆಲ್ಲ ಪ್ರಕರಣ ದಾಖಲಿಸುವ ಕಾರ್ಯ. ಬೆಳ್ತಂಗಡಿ ಠಾಣೆಯಲ್ಲಿ ನಾಲ್ಕು, ಧರ್ಮಸ್ಥಳ ಠಾಣೆಯಲ್ಲಿ ಮೂರು ಕೇಸ್‌ಗಳನ್ನು ಪೊಲೀಸರು ಬುಕ್ ಮಾಡಿದರು. ಸುಳ್ಳು ಸುದ್ದಿ ಹಬ್ಬಿಸಿದ ಸುವರ್ಣ ಟಿ.ವಿ ಮತ್ತು ಅಜಿತ್ ಹನುಮಕ್ಕನವರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ವರದಿಗಾರ ಕೊಟ್ಟ ದೂರಿನ ಅನ್ವಯ, ಮಟ್ಟಣ್ಣನವರ್, ತಿಮರೋಡಿ, ಜಯಂತ್ ಮತ್ತು ಯೂಟ್ಯೂಬರ್ ಸಮೀರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್‌ಐಆರ್ ಮಾಡಲಾಗಿತ್ತು. ಯೂಟ್ಯೂಬರ್ಸ್‌ಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಧರ್ಮಸ್ಥಳದಲ್ಲಿ ಕೇಸ್ ಬುಕ್ ಮಾಡಲಾಯಿತು.

ಗುರುವಾರ ಮುಖ್ಯವಾಹಿನಿ ಮಾಧ್ಯಮಗಳ ವಿರುದ್ಧ ಸೌಜನ್ಯಪರ ಹೋರಾಟಗಾರರು ಸಿಡಿದೆದ್ದಿದ್ದರು. “ಸುವರ್ಣ ನ್ಯೂಸ್, ಟಿವಿ 9 ಕನ್ನಡ, ಪಬ್ಲಿಕ್ ಟಿವಿ ಮತ್ತು ಆರ್. ಕನ್ನಡ ವಾಹಿನಿಯವರಿಗೂ ಧರ್ಮಸ್ಥಳ ದೇವಸ್ಥಾನ ಮಂಡಳಿಗೂ ಹಣಕಾಸು ಸಂಬಂಧಗಳಿವೆಯೇ ಎಂಬುದನ್ನು ಬಹಿರಂಗಪಡಿಸಬೇಕು” ಎಂಬ ಹೇಳಿಕೆಯನ್ನು ಸುಜಾತಾ ಭಟ್ (ಧರ್ಮಸ್ಥಳದಲ್ಲಿ ಕಾಣೆಯಾದ ಅನನ್ಯಾ ಭಟ್ ಅವರ ತಾಯಿ) ಪರ ವಕೀಲರು ಬಿಡುಗಡೆ ಮಾಡಿದ್ದರು. ಮಧ್ಯಾಹ್ನದ ವೇಳೆಗೆ ಸುವರ್ಣ ಟಿವಿಯ ವರದಿಗಾರರಿಬ್ಬರ ವೈದ್ಯಕೀಯ ತಪಾಸಣಾ ವರದಿ ‘ಈದಿನ’ಕ್ಕೆ ಲಭ್ಯವಾಗಿತ್ತು. “ಪೊಲೀಸ್ ಇನ್‌ಸ್ಪೆಕ್ಟರ್ ಸಮ್ಮುಖದಲ್ಲಿ ತಪಾಸಣೆ ನಡೆದಿದ್ದು, ವರದಿಗಾರರ ಮೇಲೆ ಯಾವುದೇ ಹಲ್ಲೆಯಾಗಿಲ್ಲ” ಎಂದಿತ್ತು ರಿಪೋರ್ಟ್.

ಸಮೀರ್‌ ಮತ್ತು ಕೋಮು ಸಾಮರಸ್ಯ

ಧರ್ಮಸ್ಥಳ ಪ್ರಕರಣದ ಸುತ್ತ ನಡೆಯುತ್ತಿರುವ ಎಸ್‌ಐಟಿ ತನಿಖೆಯಂತೂ ಉತ್ತಮವಾಗಿದೆ ಎಂಬುದು ಹೋರಾಟಗಾರರ ಅಭಿಪ್ರಾಯ. ಹೆಚ್ಚುವರಿ ಜಾಗಗಳಲ್ಲಿಯೂ ಕಾರ್ಯಾಚರಣೆ ಮುಂದುವರಿಯುತ್ತಿದೆ. ಇದರ ನಡುವೆ ನಾವು ಗಮನಿಸಬೇಕಾದ ಮತ್ತಷ್ಟು ಸ್ವಾರಸ್ಯಕರ ಸಂಗತಿಗಳು ಧರ್ಮಸ್ಥಳ ಕೇಸ್ ಸುತ್ತ ಕಂಡು ಬರುತ್ತವೆ.

ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ತಪ್ಪಿತಸ್ಥನಲ್ಲ ಎಂಬ ತೀರ್ಪು ಹೊರಬಿದ್ದ ಬಳಿಕ ‘ಜಸ್ಟಿಸ್ ಫಾರ್ ಸೌಜನ್ಯ’ ಹೋರಾಟ ಭುಗಿಲೆದ್ದು ಮತ್ತೆ ತಣ್ಣಗಾಗಿತ್ತು. ಆ ಸಂದರ್ಭದಲ್ಲಿ ಯೂಟ್ಯೂಬರ್ ಸಮೀರ್ ಎಂ.ಡಿ. ತನ್ನ ‘ಧೂತ’ ಚಾನೆಲ್‌ನಲ್ಲಿ ಮಾಡಿದ ವಿಡಿಯೊ ಕರ್ನಾಟಕದ ಮನೆಮಾತಾಯಿತು. ಆ ನಂತರ ಸೌಜನ್ಯಪರ ಹೋರಾಟವನ್ನು ‘ಹಿಂದೂ ವಿರೋಧಿ’ ಎಂದೂ, ‘ಇದರ ಹಿಂದೆ ಜಿಹಾದಿಗಳ ಕೈವಾಡವಿದೆ’ ಎಂದೂ ಕಪೋಲಕಲ್ಪಿತ ನರೇಟಿವ್ ಕಟ್ಟಲು ಯತ್ನಿಸಲಾಯಿತು. ಸಮೀರ್ ವಿರುದ್ಧ ಪ್ರಕರಣ ದಾಖಲಾದಾಗ ಆತನ ಜೊತೆಗೆ ನಿಂತಿದ್ದು ಕಟ್ಟರ್ ಹಿಂದುತ್ವ ಸಂಘಟನೆ ‘ಹಿಂದೂ ಜಾಗರಣ ವೇದಿಕೆ’ಯ ನಾಯಕರಾದ ಮಹೇಶ್ ಶೆಟ್ಟಿ ತಿಮರೋಡಿ. “ಯಾರ್ರೀ ಸಮೀರ್? ಆತ ನಮ್ಮ ಹುಡುಗ. ಸೌಜನ್ಯ ಪರ ಮುಸ್ಲಿಮನಾದವನು ಮಾತನಾಡಬಾರದಾ? ಸೌಜನ್ಯ ಹಿಂದೂ ಅಲ್ಲವಾ? ಪದ್ಮಲತಾ, ವೇದವಲ್ಲಿ, ಅನನ್ಯಾ ಭಟ್, ಆನೆ ಮಾವುತ ನಾರಾಯಣ ಮತ್ತು ಯಮುನಾ ಹಿಂದೂಗಳಲ್ಲಾ? ನೂರಾರು ಜನ ಸತ್ತಿದ್ದಾರೆ. ಅವರು ಹಿಂದೂಗಳಲ್ಲವಾ?” ಎಂದು ಮಟ್ಟಣ್ಣ ಮತ್ತು ತಿಮರೋಡಿ ಮತ್ತೆಮತ್ತೆ ಕೇಳುತ್ತಿರುವುದು ಕೋಮುದ್ವೇಷಿಗಳಿಗೆ ಬಹುದೊಡ್ಡ ಹಿನ್ನಡೆಯಾಗಿ ತೋರುತ್ತದೆ. ಹಿಂದುತ್ವ ಸಂಘಟನೆಯ ಮುಖಂಡರು, ‘ಹಿಂದೂ- ಮುಸ್ಲಿಂ ಒಂದಾಗಿ, ನ್ಯಾಯವನ್ನು ಕೇಳುತ್ತಿರುವುದಕ್ಕೆ ಸೌಜನ್ಯ ಎಂಬ ಶಕ್ತಿ ಕಾರಣ’ ಎನ್ನುತ್ತಾರೆ. ತಿಮರೋಡಿಯವರು ಸಮೀರ್ ಅವರನ್ನು ಜೋಪಾನವಾಗಿ ರಕ್ಷಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. “ಈಗ ಜೈನರ ವಿರುದ್ಧ ಪಿತೂರಿ ಎಂಬ ವಾದವನ್ನೂ ಮುನ್ನಲೆಗೆ ತಂದಿದ್ದಾರೆ. ನಾವು ಜೈನರ ವಿರುದ್ಧವಿಲ್ಲ. ಚಾರುತೀರ್ಥ ಭಟ್ಟಾರಕರನ್ನು ಹಲವು ಸಲ ಭೇಟಿಯಾದವನು ನಾನು. ಹಿಂದೂ ಟೆಂಪಲ್ ಮೇಲೆ ದಾಳಿಯಾಗುತ್ತಿದೆ ಎಂದು ಹಬ್ಬಿಸುತ್ತಿರುವವರು, ಕೋರ್ಟ್‌ನಲ್ಲಿ ಮಾತ್ರ ಧರ್ಮಸ್ಥಳದ ದೇವಾಲಯ ಜೈನರಿಗೆ ಸೇರಿದ್ದು ಎಂದು ಅಫಿಡವಿಟ್ ಸಲ್ಲಿಸಿದ್ದಾರೆ” ಎನ್ನುತ್ತಾರೆ ಗಿರೀಶ್ ಮಟ್ಟಣ್ಣನವರ್. “ಸಮೀರ್ ನಮ್ಮ ಜೊತೆ ನಿಂತಿದ್ದ ಕಾರಣಕ್ಕೆ ಹಿಂದೂ- ಮುಸ್ಲಿಂ ವಿವಾದ ಮಾಡಲು ನೋಡುತ್ತಿದ್ದಾರೆ. ಇವರೇ ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನ ಮಾಡುತ್ತಾರೆ. ಅದು ಮಾತ್ರ ಹಿಂದೂ- ಮುಸ್ಲಿಂ ಆಯಾಮದಲ್ಲಿ ಬರುವುದಿಲ್ಲ” ಎಂಬ ಲಾಜಿಕ್ ಪ್ರಶ್ನೆಯನ್ನು ಕೇಳುತ್ತಾರೆ ಹಿಂದುತ್ವ ಕಾರ್ಯಕರ್ತರು.

d9
ಯೂಟ್ಯೂಬರ್ ಸಮೀರ್ ಎಂ.ಡಿ.

ಇದನ್ನೂ ಓದಿರಿ: ಧರ್ಮಸ್ಥಳ | ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಪ್ರಕರಣ: ಓರ್ವ ಆರೋಪಿಯ ಬಂಧನ

ನೆಲಕಚ್ಚಿದ ವ್ಯಾಪಾರ ವಹಿವಾಟು

ಧರ್ಮಸ್ಥಳ, ಉಜಿರೆಯ ಸುತ್ತಮುತ್ತಲಿನ ಸಾಮಾನ್ಯ ಜನರಿಗೆ ಇಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಮಾತನಾಡುವ ಮನಸ್ಸಿದೆ. ಆದರೆ ಅವರಿಗೆ ಬಾಯಿಬಿಟ್ಟು ಏನನ್ನೂ ಹೇಳಲಾಗದ ಸಂದಿಗ್ಧತೆ ಎದುರಾಗಿದೆ. ಕ್ಯಾಮೆರಾ ಎದುರು ಏನನ್ನೂ ಹೇಳದ ಸಾಮಾನ್ಯ ಜನರನ್ನು ಆತ್ಮೀಯವಾಗಿ ಮಾತಿಗೆಳೆದರೆ, “ಅಲ್ಲಿ ಬುರುಡೆಗಳು ಇರಬಹುದು. ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಏನಾಗುತ್ತದೆಯೋ ಕಾದು ನೋಡೋಣ” ಎನ್ನುತ್ತಾರೆ.

ಬಹುಮುಖ್ಯವಾಗಿ ಈ ವಿದ್ಯಮಾನಕ್ಕೂ ಅವರ ಬದುಕಿಗೂ ಸಂಕೀರ್ಣ ಸಂಬಂಧಗಳಿವೆ. ಇಲ್ಲಿನ ವಿದ್ಯಾಸಂಸ್ಥೆಗಳಲ್ಲಿ ಕೆಲಸ ಮಾಡುವ, ಧರ್ಮಕ್ಷೇತ್ರವನ್ನೇ ನಂಬಿ ಹೋಟೆಲ್, ಲಾಡ್ಜ್, ಸಣ್ಣಪುಟ್ಟ ವ್ಯಾಪಾರ, ಆಟೋ, ಜೀಪು ಇತ್ಯಾದಿಗಳನ್ನೇ ಅವಲಂಬಿಸಿರುವ ಜನರ ಬದುಕು ಹೈರಾಣಾಗಿದೆ.

 “ನೋಡಿ ಇದು ಶ್ರಾವಣ. ಮಳೆಗಾಲವಾದರೂ ಜನ ಧರ್ಮಸ್ಥಳಕ್ಕೆ ಬರುವುದನ್ನು ಈ ಹಿಂದೆ ಕಡಿಮೆ ಮಾಡಿದ್ದಿಲ್ಲ. ಆದರೀಗ ಹೋಟೆಲ್‌ಗಳು, ವಸತಿ ಗೃಹಗಳು ಖಾಲಿ ಖಾಲಿ. ಲಾಡ್ಜ್‌ಗಳ ಮುಂದೆ ನಿಂತ ಕಾರುಗಳ ಲೆಕ್ಕದಲ್ಲೇ ಪ್ರವಾಸಿಗರ ಪ್ರಮಾಣವನ್ನು ಅಳೆದುಬಿಡಬಹುದಿತ್ತು. ಲೀಸ್‌ಗೆ ತೆಗೆದುಕೊಂಡು ವಸತಿ ಗೃಹಗಳನ್ನು ನಡೆಸುತ್ತಿದ್ದವರು ಚಿಂತೆಗೀಡಾಗಿದ್ದಾರೆ. ಒಬ್ಬರಿಗೆ ಐದು ನೂರು ರೂಪಾಯಿ, ಇಬ್ಬರಿಗೆ ಸಾವಿರ ರೂಪಾಯಿವರೆಗೂ ಪಡೆದು ರೂಮ್‌ಗಳನ್ನು ಕೊಡುತ್ತಿದ್ದರು. ಈಗ ಇನ್ನೂರು, ಇನ್ನೂರೈವತ್ತು ರೂಪಾಯಿಗೆಲ್ಲ ಬಾಡಿಗೆಗೆ ರೂಮ್‌ಗಳು ದೊರಕುತ್ತಿವೆ. ಪ್ಯಾಪಾರ ವಹಿವಾಟು ತುಂಬಾ ಕಸಿತ ಕಂಡಿದೆ. ಸತ್ಯ ಏನೇ ಇರಲಿ, ಜನರಿಗೆ ಮೊದಲು ಹೊಟ್ಟೆಪಾಡೇ ಮುಖ್ಯವಾಗುತ್ತದೆ. ದೊಡ್ಡವರ ಮೇಲೆ ಸಿಟ್ಟಿದ್ದರೂ ಅವರನ್ನೇ ಅವಲಂಬಿಸಿ ಬದುಕಬೇಕಾದ ಸ್ಥಿತಿ ಇಲ್ಲಿನ ಜನರದ್ದು” ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಉಜಿರೆಯ ಗೂಡಂಗಡಿ ವ್ಯಾಪಾರಿಗಳು.

ಯಾವುದೇ ವ್ಯಾಪಾರಿಯ ಜೊತೆ ಮಾತಿಗಿಳಿದರೂ ಹೆಸರು ಉಲ್ಲೇಖಿಸದೆ ಸಾಕಷ್ಟು ವಿವರಗಳನ್ನು ನೀಡುತ್ತಾ ಹೋಗುತ್ತಾರೆ. ಎಲ್ಲರ ಮಾತಿನಲ್ಲೂ “ಬೇಗ ತನಿಖೆಯಾಗಲಿ, ಸತ್ಯ ಹೊರಬಂದು ಪ್ರಕರಣ ಮುಗಿದು ಹೋಗಲಿ” ಎಂಬ ಆಶಯ ಅವರದ್ದು. ಜೊತೆಗೆ, “ಇಷ್ಟು ದಿನ ಬೇಕಾಬಿಟ್ಟಿ ಬೆಲೆ ಹೆಚ್ಚಿಸಿ ಕೊಬ್ಬಿದ್ದವರಿಗೆ ಈಗ ಹತಾಶೆಯಾಗಿದೆ” ಎಂಬ ಅಭಿಪ್ರಾಯವೂ ಅನೇಕರಿಗಿದೆ. ಆದರೆ “ಹೆಚ್ಚು ಹೊಡೆತ ಬೀಳುವುದು ಬಡವರ ಮೇಲೆ” ಎಂದೂ ಮರುಕಪಡುತ್ತಾರೆ. “ಅಂದು ದುಡಿದು ಅಂದೇ ತಿನ್ನುವ ಜನರಿದ್ದಾರೆ. ದುಡ್ಡು ಮಾಡಿ ಗಂಟ್ಟಿಕ್ಕಿಕೊಂಡವರಿಗೆ ಈ ವಿದ್ಯಮಾನದಿಂದ ನಷ್ಟವೇನೂ ಆಗುವುದಿಲ್ಲ” ಎಂಬುದನ್ನೂ ಗಂಭೀರವಾಗಿ ನೋಡಬೇಕಾಗುತ್ತದೆ.

ಕಲ್ಲೇರಿಯ ದೆವ್ವದ ಕಥೆ

13ನೇ ಸ್ಪಾಟ್‌ನಲ್ಲಿ ಸದ್ಯಕ್ಕಂತೂ ಕಾರ್ಯಾಚರಣೆ ನಡೆದಿಲ್ಲ. 6 ಮತ್ತು 11ನೇ ಜಾಗದ ಸಮೀಪದಲ್ಲಿ ನಡೆದ ಉತ್ಖನನ ವೇಳೆ ಮೂಳೆಗಳು ಸಿಕ್ಕಿರುವುದು ತನಿಖೆಯನ್ನು ತೀವ್ರಗೊಳಿಸಲು ಕಾರಣವಾಗಿವೆ. ಮುಂದುವರಿದಂತೆ ಧರ್ಮಸ್ಥಳ ಸಮೀಪದ ಕಲ್ಲೇರಿ ಕಾಡು, ಬಾಹುಬಲಿ ಬೆಟ್ಟದ ಸಮೀಪದಲ್ಲಿ ಹೆಚ್ಚುವರಿ ಸ್ಥಳಗಳನ್ನು ಗುರುತು ಹಾಕಲಾಗಿದೆ. ಅದರಲ್ಲೂ ಕಲ್ಲೇರಿ ಭಾಗದ ಕಾಡಿನ ಬಗ್ಗೆ ಇಲ್ಲಿನ ಸ್ಥಳೀಯರೊಬ್ಬರು ಹೇಳಿದ ಸಂಗತಿಯನ್ನು ಇಲ್ಲಿ ಉಲ್ಲೇಖಿಸಬೇಕಿದೆ.

“ಕಲ್ಲೇರಿ ಕಡೆಗೆ ರಾತ್ರಿ ವೇಳೆ ಯಾರೂ ಹೋಗದಂತೆ ಮೊದಲಿನಿಂದಲೂ ಭಯ ಹುಟ್ಟಿಸಲಾಗಿದೆ. ಅಲ್ಲಿ ದೆವ್ವಗಳು ಕತ್ತಲಲ್ಲಿ ತಿರುಗಾಡುತ್ತವೆ ಎಂದು ಹತ್ತಾರು ವರ್ಷಗಳಿಂದಲೂ ನಂಬಿಸಲಾಗಿದೆ. ಬಹುಶಃ ಅಲ್ಲಿ ಸಾಕಷ್ಟು ಅಪರಿಚಿತರ ಶವಗಳನ್ನು ಹೂತು ಹಾಕಿರುವುದರಿಂದಲೇ ದೆವ್ವದ ಕಥೆಗಳನ್ನು ಸೃಷ್ಟಿ ಮಾಡಿದ್ದರಾ ಎಂಬ ಗುಮಾನಿ ಈಗ ಮೂಡುತ್ತಿದೆ. ರಾತ್ರಿ ವೇಳೆ ಆ ಭಾಗದಲ್ಲಿ ತಿರುಗಾಡುವಾಗ ಹೆಂಗಸಿನ ಗೋಳಿನ ದನಿ ಕೇಳಿ ದೆವ್ವವೆಂದು ಹೆದರಿ ಓಡಿ ಹೋದವರೇ ಹೆಚ್ಚಿರಬಹುದು. ಕತ್ತಲಲ್ಲಿ ತಲೆ ಕೆದರಿ, ಬಟ್ಟೆ ಹರಿದುಕೊಂಡು ರಸ್ತೆ ಬದಿ ಯಾವ ಹೆಣ್ಣಾದರೂ ನಿಂತಿದ್ದರೆ ಇದ್ಯಾವುದೋ ದೆವ್ವವೆಂದು ತಿಳಿದು ಮುಂದೆ ಹೋಗಿರಬಹುದು. ಯಾವ ಪಾಪದ ಹೆಣ್ಣು, ಸಹಾಯಕ್ಕಾಗಿ ಕೂಗು ಹಾಕುತ್ತಿತ್ತೋ, ಯಾರಾದರೂ ಕಾಪಾಡಲಿ ಎಂದು ಬೇಡುತ್ತಿತ್ತೋ” ಎನ್ನುತ್ತಾ ಹಳೆಯ ಅನುಭವಗಳನ್ನು ಕೆಲವು ಸ್ಥಳೀಯರು ಹಂಚಿಕೊಳ್ಳುತ್ತಾರೆ. ಇಂತಹ ಗುಮಾನಿಗಳು ನಿಜವೂ ಇರಬಹುದು, ಸುಳ್ಳೂ ಇರಬಹುದು. ಆದರೆ ಕಲ್ಲೇರಿಯ ಸಂಬಂಧ ದೆವ್ವದ ಕಥೆಗಳಂತೂ ಧರ್ಮಸ್ಥಳ ಸುತ್ತಮುತ್ತ ಚಾಲ್ತಿಯಲ್ಲಿರುವುದು ಸತ್ಯ.

d2
ಕಲ್ಲೇರಿ ಭಾಗದಲ್ಲಿ ಕಾರ್ಯಾಚರಣೆ

ನಾವು ಗ್ರೌಂಡ್ ರಿಪೋರ್ಟ್‌ ಸಂದರ್ಭದಲ್ಲಿ ಹಲವು ಹೋರಾಟಗಾರರನ್ನು ಮಾತನಾಡಿಸಿದ್ದೇವೆ. ಪರ ವಿರೋಧ ಇರುವ ಜನರನ್ನೂ ಭೇಟಿ ಮಾಡಿದ್ದೇವೆ. ಸೌಜನ್ಯ ಹೋರಾಟದೊಂದಿಗೆ ಬಲವಾಗಿ ಗುರುತಿಸಿಕೊಂಡ ಯೂಟ್ಯೂಬರ್‌ಗಳ ಸಂದರ್ಶನಗಳನ್ನು ನಡೆಸಿದ್ದೇವೆ. ಒಬ್ಬೊಬ್ಬರಾಗಿ ಮುಂದೆ ಬರುತ್ತಿರುವ ಸಾಕ್ಷಿದಾರರ ಮಾತುಗಳನ್ನು ದಾಖಲಿಸಿದ್ದೇವೆ. ನಮಗೆ ಕಂಡ ಸತ್ಯಗಳನ್ನು ಆಧರಿಸಿ ನಿರಂತರ ವಿಡಿಯೊ ವರದಿಗಳನ್ನು ಪ್ರಸ್ತುತಪಡಿಸಿದ್ದೇವೆ. ಧರ್ಮಸ್ಥಳ ಬೂದಿಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇದೆ. ತನಿಖೆ ಮುಂದುವರಿದಿದೆ. ಹಳೆಯ ಪ್ರಕರಣಗಳೆಲ್ಲ ಮತ್ತೆ ಮುನ್ನೆಲೆಗೆ ಬಂದಿವೆ. ಸೌಜನ್ಯ, ಪದ್ಮಲತಾ, ಅನನ್ಯಾ ಭಟ್ ಕೇಸ್‌ಗಳು ಮರು ತನಿಖೆಯಾಗಬೇಕೆಂಬ ಆಗ್ರಹಗಳು ಕೇಳಿಬಂದಿವೆ. ಇದು ಆರಂಭದ ಬಿಂದುವಷ್ಟೇ. ಧರ್ಮಸ್ಥಳ ಮತ್ತಷ್ಟು ಕಾಲ ಸುದ್ದಿಯಲ್ಲಿರಲಿದೆ.

ಇದನ್ನೂ ಓದಿರಿ: ಧರ್ಮಸ್ಥಳ | ತಮ್ಮ ಮೇಲೆಯೇ ಹಲ್ಲೆಯಾಗಿದೆ ಎಂದು ಸುಳ್ಳು ವರದಿ: ಅಜಿತ್ ಹನುಮಕ್ಕನವರ್ ಸೇರಿ ‘ಸುವರ್ಣ ನ್ಯೂಸ್’ನ ಮೂವರ ವಿರುದ್ಧ ಎಫ್‌ಐಆರ್

ಈ ಹಿಂದೆ ಹಲ್ಲೆಗೊಳಗಾದವರು, ಭೂಮಿ ಕಳೆದುಕೊಂಡವರನ್ನೂ ಮಾತನಾಡಿಸಲು ಯತ್ನಿಸಿದ್ದೇವೆ. “ನಮ್ಮ ಅನುಭವಗಳನ್ನು ಹೇಳಿಕೊಂಡು ಏನು ಪ್ರಯೋಜನ? ಒಂದೆರಡು ದಿನ ಸುದ್ದಿಯಾಗುತ್ತದೆ. ಆಮೇಲೆ ನಮ್ಮ ಸ್ಥಿತಿ ಏನು?” ಎಂಬುದು ಅನೇಕರ ಅಭಿಪ್ರಾಯ. ಸುಮಾರು ನಲವತ್ತು ವರ್ಷಗಳ ಹಿಂದೆ ಭೀಕರವಾಗಿ ಹಲ್ಲೆಗೊಳಗಾದ ಕುಟುಂಬವೊಂದನ್ನು ಭೇಟಿ ಮಾಡಲು ಹೋದಾಗ ಧರ್ಮಸ್ಥಳದ ಮತ್ತೊಂದು ಮಗ್ಗಲು ನಮಗೆ ಪರಿಚಯವಾಗುತ್ತಾ ಹೋಯಿತು. “ಇಲ್ಲಿ ಬದುಕುಬೇಕಾದವರು ನಾವು. ನಿಮ್ಮಂತೆಯೇ ಸಾಕಷ್ಟು ಜನ ನಮ್ಮನ್ನು ಹುಡುಕಿಕೊಂಡು ಬರುತ್ತಾರೆ. ನಮ್ಮ ಮಕ್ಕಳು ಇಲ್ಲಿ ಓದುತ್ತಿದ್ದಾರೆ. ನೀವಿಲ್ಲಿಗೆ ಬಂದಿರುವ ವಿಷಯ ಈಗಾಗಲೇ ಮೇಲಿನವರಿಗೆ ಮುಟ್ಟಿರುತ್ತದೆ. ಮಾತನಾಡಲು ನಮಗೇನೂ ಭಯವಿಲ್ಲ. ಆದರೆ ಮಾತನಾಡಿದರೆ ನ್ಯಾಯ ಸಿಗುತ್ತದೆಯೇ? ಹೊರಟು ಹೋಗಿ ಇಲ್ಲಿಂದ. ಎಲ್ಲವನ್ನೂ ಆ ಅಣ್ಣಪ್ಪ ಸ್ವಾಮಿ ನೋಡಿಕೊಳ್ಳುತ್ತಾನೆ” ಎಂದಿತು ಆ ಕುಟುಂಬ. ಸುರಿವ ಜೋರು ಮಳೆಯ ನಡುವೆ ಅವರ ಮಾತುಗಳು ಅಸ್ಪಷ್ಟವಾಗಿದ್ದವು. ಅವರ ಸ್ಥಿತಿ ಕಂಡು ಸಾಂತ್ವನವಷ್ಟೇ ನೀಡಬಹುದು ಎಂದೆನಿಸಿ, ಮಳೆಯ ಕಡೆಗೆ ನಮ್ಮ ಕೊಡೆಗಳು ಚದುರಿ ನಿಂತವು.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿದ್ಯಾರ್ಥಿ ಕಣ್ಣಲ್ಲಿ ಗಾಂಧೀಜಿ ಬಯಸಿದ ನ್ಯಾಯಸಮ್ಮತ ತತ್ವದ ರಾಜಕೀಯ ವ್ಯವಸ್ಥೆ

ಸ್ವಾತಂತ್ರ್ಯೋತರ ಭಾರತ ಹೇಗಿರಬೇಕು ಎಂಬುದರ ಕುರಿತು ಗಾಂಧೀಜಿಯ ಕನಸು ವಿಭಿನ್ನವಾಗಿದ್ದು, ರಾಜಕೀಯವು...

ಗಾಂಧೀಜಿ, ಶಾಸ್ತ್ರಿಯವರ ತ್ಯಾಗ, ಬಲಿದಾನ ಎಂದಿಗೂ ಆದರ್ಶಪ್ರಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಅಕ್ಟೋಬರ್ 2ರಂದು ದೇಶಾದ್ಯಂತ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಅವರ ನೇತೃತ್ವದಲ್ಲಿ ನಡೆದ...

5 ಹುಲಿ, 20 ನವಿಲು, 19 ಕೋತಿಗಳ ಸಾವು ವನ್ಯಜೀವಿ ಸಂರಕ್ಷಣೆಯ ಜವಾಬ್ದಾರಿ ಹೆಚ್ಚಿಸಿದೆ: ಈಶ್ವರ ಖಂಡ್ರೆ

ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿ, ಮಧುಗಿರಿಯ ಮಿಡಿಗೇಶಿಯಲ್ಲಿ 20 ನವಿಲು,...

Download Eedina App Android / iOS

X