ಪೊಲೀಸ್ ಕಸ್ಟಡಿಯಲ್ಲಿದ್ದ ಕಳ್ಳನೊಬ್ಬ ತನ್ನ ಪತ್ನಿಯೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡಲು ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಳ್ಳನಿಗೆ ಪೊಲೀಸ್ ಸಮವಸ್ತ್ರ ಕೊಟ್ಟ ಆರೋಪದ ಮೇಲೆ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರನ್ನು ಅಮಾನತು ಮಾಡಲಾಗಿದೆ.
ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ 2024ರಲ್ಲಿ ಘಟನೆ ನಡೆದಿತ್ತು. ಆದರೆ, ಇತ್ತೀಚೆಗೆ ಬೇರೊಂದು ಪ್ರಕರಣದ ತನಿಖೆ ನಡೆಸುವಾದ, ಈ ಪ್ರಕರಣ ಬೆಳಕಿಗೆ ಬಂದಿದೆ.
2024ರ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದ ಎಚ್‌ಆರ್ ಸೋನಾರ್ ಅವರನ್ನು ಅಮಾನತು ಮಾಡಲಾಗಿದೆ. ಅವರು ಸಲೀಮ್ ಶೇಖ್ ಎಂಬಾತನಿಗೆ ಸಮವಸ್ತ್ರ ನೀಡಿದ್ದರು ಎಂದು ಆರೋಪಿಸಲಾಗಿದೆ.
50ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿರುವ ಸಲೀಮ್‌ನನ್ನು 2024ರಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದರು. ಕದ್ದ ಆಭರಣಗಳು, ಸೀರೆಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಮರಳಿ ಪಡೆಯಲು ಆತನನ್ನು ಹೋಟೆಲ್‌ವೊಂದರಲ್ಲಿ ಇರಿಸಿದ್ದರು. ಆತ ತಪ್ಪಿಸಿಕೊಳ್ಳದಂತೆ ನಿಗಾ ಇಡಲು ಸೋನಾರ್ ಮತ್ತು ಇನ್ನೊಬ್ಬ ಕಾನ್‌ಸ್ಟೇಬಲ್‌ನನ್ನು ನಿಯೋಜಿಸಲಾಗಿತ್ತು.
ಈ ವೇಳೆ, ಪೇದೆಗಳಿಬ್ಬರು ಶಾಪಿಂಗ್ ಮಾಡಲು ತೆರಳಿದ್ದಾಗ, ಹೋಟೆಲ್ ರೂಮ್‌ನಲ್ಲಿದ್ದ ಕಳ್ಳತನದ ಆರೋಪಿ ಸಲೀಮ್ ಅಲ್ಲಿದ್ದ ಸೋನಾರ್ ಅವರ ಸಮವಸ್ತ್ರವನ್ನು ಧರಿಸಿ, ತನ್ನ ಪತ್ನಿಗೆ ವಿಡಿಯೋ ಕರೆ ಮಾಡಿದ್ದನು ಎಂದು ವರದಿಯಾಗಿದೆ.
“ಸಲೀಂ ತನ್ನ ಹೆಂಡತಿಯ ಎದುರು ತಾನೊಬ್ಬ ಪೊಲೀಸ್ ಎಂಬಂತೆ ತೋರಿಸಿಕೊಳ್ಳಲು ಬಯಸಿದ್ದನು. ಅದಕ್ಕಾಗಿ, ರೂಮ್‌ನಲ್ಲಿದ್ದ ಸೋನಾರ್ ಅವರ ಸಮವಸ್ತ್ರವನ್ನು ಧರಿಸಿದ್ದನು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ತಿಳಿದುಬಂದಿದೆ.
ಈ ಪ್ರಕರಣ ಆ ಸಂದರ್ಭದಲ್ಲಿ ಬೆಳಕಿಗೆ ಬಂದಿರಲಿಲ್ಲ. ಆದರೆ, 2025ರ ಮೇ ತಿಂಗಳಿನಲ್ಲಿ ಇಂದಿರಾನಗರದಲ್ಲಿ ನಡೆದ ಮತ್ತೊಂದು ಕಳ್ಳತನ ಘಟನೆ ವೇಳೆ ಸಲೀಂ ಸಿಕ್ಕಿಬಿದ್ದಿದ್ದನು. ಆತನನ್ನು ತನಿಖೆಗೆ ಒಳಪಡಿಸಿದಾಗ, ಆತ ಪೊಲೀಸ್ ಸಮವಸ್ತ್ರದಲ್ಲಿರುವ ಫೋಟೋಗಳು ಆತನ ಫೀನ್‌ನಲ್ಲಿ ದೊರೆತಿವೆ. ಹೀಗಾಗಿ, ಹಳೆಯ ಘಟನೆ ಬೆಳಕಿಗೆ ಬಂದಿದೆ.
ಇದೀಗ, ನಿರ್ಲಕ್ಷ್ಯ ಆರೋಪದ ಮೇಲೆ ಸೋನಾರ್ ಅವರನ್ನು ಅಮಾನತು ಮಾಡಿ ಉಪ ಪೊಲೀಸ್ ಆಯುಕ್ತ (ಪೂರ್ವ) ಬಿ ದೇವರಾಜ್ ಆದೇಶಿಸಿದ್ದಾರೆ.