ಸೌಜನ್ಯ ಪ್ರಕರಣ | ಮರುತನಿಖೆಗೆ ಈ ಪ್ರಕರಣ ಯೋಗ್ಯವೇ ? ಇಲ್ಲಿದೆ ಸಂಪೂರ್ಣ ಮಾಹಿತಿ

Date:

Advertisements
ಈ ಕೇಸಿನಲ್ಲಿ ಸೌಜನ್ಯ ಕುಟುಂಬದವರು ಮತ್ತು ಸಂತೋಷ್‌ ರಾವ್‌ ಹೈಕೋರ್ಟ್ ಅಥವಾ ನೇರವಾಗಿ ಸುಪ್ರೀಂ ಕೋರ್ಟ್‌ ಕದ ತಟ್ಟುವುದು ಸೂಕ್ತ. ಈ ಕೇಸಿನ ಹಿನ್ನೆಲೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ತೀರ್ಪಿನ ಅಂಶಗಳನ್ನು ಪರಿಗಣಿಸಿದರೆ, ಮರುತನಿಖೆ ನಡೆಸಲು ಸಾಕಷ್ಟು ಅಂಶಗಳು ಈ ಕೇಸಿನಲ್ಲಿದೆ. ಸೂಕ್ತ ರೀತಿಯಲ್ಲಿ ಅರ್ಜಿ ಸಲ್ಲಿಸಿ ಈ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದರೆ, ಖಂಡಿತವಾಗಿ ಈ ಪ್ರಕರಣವನ್ನು ಮರುತನಿಖೆಗೆ ಒಳಪಡಿಸುವ ಸಾಧ್ಯತೆಯಿದೆ

ಸೌಜನ್ಯ ಕೊಲೆ ಪ್ರಕರಣದಲ್ಲಿ ಪ್ರಾಥಮಿಕ ಹಂತದಲ್ಲಿ ಬೆಳ್ತಂಗಡಿ ಪೊಲೀಸರು ಭಾಗಶಃ ತನಿಖೆಯನ್ನು ಪೂರೈಸಿದ ನಂತರ ಕರ್ನಾಟಕ ಸರ್ಕಾರವು ಪ್ರಕರಣವನ್ನು ಸಿ.ಒ.ಡಿ.ಗೆ ಒಪ್ಪಿಸಿರುತ್ತಾರೆ. ಪ್ರಾಥಮಿಕ ಹಂತದಲ್ಲಿ ಬೆಳ್ತಂಗಡಿ ಪೊಲೀಸರು ಸಂತೋಷ್‍ರಾವ್ ಎಂಬ ವ್ಯಕ್ತಿಯನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಪರಿಗಣಿಸಿ, ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. ತದನಂತರ, ಸರ್ಕಾರವು ಈ ಪ್ರಕರಣವನ್ನು ಸಿ.ಒ.ಡಿ.ಗೆ ಒಪ್ಪಿಸಿರುತ್ತಾರೆ. ಸಿ.ಒ.ಡಿ.ಯವರು ಈ ಪ್ರಕರಣವನ್ನು ಭಾಗಶಃ ತನಿಖೆ ನಡೆಸಿದ ನಂತರ, ಈ ಒಂದು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮತ್ತು ಸಾರ್ವಜನಿಕ ಒತ್ತಡ ಬಂದ ಕಾರಣ ಕರ್ನಾಟಕ ಸರ್ಕಾರವು ಈ ಪ್ರಕರಣವನ್ನು ಸಿ.ಬಿ.ಐ.ಗೆ ಹಸ್ತಾಂತರ ಮಾಡಿರುತ್ತದೆ. ಸಿ.ಬಿ.ಐ. ಈ ಪ್ರಕರಣದಲ್ಲಿ ತನಿಖೆಯನ್ನು ಪೂರೈಸಿ ಅಂತಿಮ ವರದಿಯನ್ನು (ದೋಷಾರೋಪಣ ಪಟ್ಟಿ) ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. (ಸಿ.ಬಿ.ಐ. ತಂಡ ಬೆಳ್ತಂಗಡಿ ಪೊಲೀಸರು ನಡೆಸಿದ ತನಿಖಾ ವರದಿ ಮತ್ತು ಸಿ.ಒ.ಡಿ. ತನಿಖಾ ವರದಿಯನ್ನು ಅವಲಂಭಿಸಿ ಪರಿಣಾಮಕಾರಿ ತನಿಖೆಯನ್ನು ಮಾಡದೆ ಅಂತಿಮ ವರದಿ ಸಲ್ಲಿಸಿದ್ದು ಕಾಣುತ್ತದೆ) ಬೆಳ್ತಂಗಡಿ ಪೊಲೀಸರು, ಸಿ.ಒ.ಡಿ. ತನಿಖಾ ತಂಡ ಮತ್ತು ಸಿ.ಬಿ.ಐ. ತನಿಖಾ ತಂಡ ನಡೆಸಿದ ತನಿಖಾ ವರದಿಯ ಪ್ರಕಾರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂತೋಷ್‍ರಾವ್ ಎಂಬ ವ್ಯಕ್ತಿಯೇ ಭಾಗಿಯಾಗಿದ್ದಾರೆಂದು ಹೇಳಿರುತ್ತಾರೆ.

ಸದರಿ, ಪ್ರಕರಣದಲ್ಲಿ ಸಿ.ಬಿ.ಐ. ನ್ಯಾಯಾಲಯವು ವಿಚಾರಣೆ ನಡೆಸಿ “ಈ ಕೇಸಿಗೂ ಅಂದರೆ, ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ತನಿಖಾ ತಂಡಗಳು ಹೆಸರಿಸಿದಂತ ವ್ಯಕ್ತಿಗೆ ಯಾವುದೇ ಸಂಬಂಧವಿಲ್ಲ” ಎಂದು ಖಡಾಖಂಡಿತವಾಗಿ ತನ್ನ ತೀರ್ಪಿನ ಪ್ಯಾರ ಸಂಖ್ಯೆ : 142ರಲ್ಲಿ ಹೇಳಿರುತ್ತಾರೆ. ಅಲ್ಲದೇ, ಪ್ಯಾರ ಸಂಖ್ಯೆ : 143ರಲ್ಲಿ “ಈ ಒಂದು ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂತೋಷ್‍ರಾವ್ ಎಂಬ ಆರೋಪಿ ಮಾಡಿದ್ದಾನೆ ಎಂದು ಹೇಳಲು ಅಭಿಯೋಜನೆಯು ಯಾವುದೇ ಸಾಕ್ಷಾಧಾರವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿರುವುದಿಲ್ಲ” ಎಂದು ಹೇಳಿರುತ್ತಾರೆ. ಅಲ್ಲದೇ, ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಪ್ರಾಥಮಿಕ ತನಿಖಾ ಹಂತದಲ್ಲಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಸೂಕ್ತವಾದ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಅಂದರೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಸರಿಯಾಗಿ ತನಿಖೆಯನ್ನು ನಡೆಸಿಲ್ಲ ಎಂದು ತೀರ್ಪಿನಲ್ಲಿ ಹೇಳಿರುತ್ತಾರೆ, ಮುಂದುವರೆದು, ಈ ತೀರ್ಪಿನ ನಕಲನ್ನು ಕರ್ನಾಟಕ ಅಕ್ಯೂಟಲ್ ಕಮಿಟಿ ಮುಂದೆ ಇಟ್ಟು ಸೂಕ್ತವಾದ ಕಾನೂನು ಕ್ರಮವನ್ನು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಜರುಗಿಸಬೇಕೆಂದು ತನ್ನ ತೀರ್ಪಿನಲ್ಲಿ ಮಹತ್ವದ ಆದೇಶವನ್ನು ನೀಡಿರುತ್ತಾರೆ. ಅಂದರೆ ಈ ಪ್ರಕರಣದ ತನಿಖೆಯನ್ನು ಸರಿಯಾಗಿ ನಡೆಸಿಲ್ಲ, ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನ್ಯಾಯಾಲಯವು ಖಡಾಖಂಡಿತವಾಗಿ ತನ್ನ ತೀರ್ಪಿನಲ್ಲಿ ಹೇಳಿದೆ.

ಈ ಕೇಸಿನ ಇನ್ನೊಂದು ಮುಖ್ಯ ಅಂಶವೇನೆಂದರೆ, ಅಭಿಯೋಜನೆ ಹಾಜರುಪಡಿಸಿದ ಕೆಲವು ಸಾಕ್ಷಿಗಳೂ ಕೂಡಾ, ಈ ಕೇಸಿಗೂ ಸಂತೋಷ್‍ರಾವ್‍ಗೂ, ಯಾವುದೇ ರೀತಿಯ ಸಂಬಂಧವಿಲ್ಲ ಮತ್ತು ಸೌಜನ್ಯಳ ಅತ್ಯಾಚಾರ ಮತ್ತು ಕೊಲೆಯನ್ನು ಮಾಡಿದವರು ಬೇರೆ ವ್ಯಕ್ತಿಗಳು ಎಂದು ನುಡಿದ ಸಾಕ್ಷ್ಯವನ್ನು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಈ ತೀರ್ಪಿನ ಒಟ್ಟಾರೆ ಅಂಶವೇನೆಂದರೆ ಈ ಪ್ರಕರಣದ ಆರೋಪಿ ಸಂತೋಷ್‍ರಾವ್‌ಗೂ, ಈ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಸರಿಯಾದ ರೀತಿಯಲ್ಲಿ ತನಿಖೆಯನ್ನು ಮಾಡಿಲ್ಲ ಮತ್ತು ತೀವ್ರತರವಾದ ನಿರ್ಲಕ್ಷ್ಯತೆಯನ್ನು ಮಾಡಿರುತ್ತಾರೆ ಎಂಬ ಅಂಶವನ್ನು ಸಹಾ ಉಲ್ಲೇಖಿಸಿರುತ್ತಾರೆ. ಈ ಪ್ರಕರಣದ ಸಾರಾಂಶ ಮತ್ತು ತೀರ್ಪಿನ ಅಂಶಗಳನ್ನೂ ಕೂಲಂಕಷವಾಗಿ ಗಮನಿಸಿದರೆ, ಯಾರನ್ನೋ ಬಚಾವ್ ಮಾಡುವ ಉದ್ದೇಶದಿಂದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳೂ ಮತ್ತು ವೈದ್ಯಾಧಿಕಾರಿಗಳೂ ಒಬ್ಬ ಅಮಾಯಕ ವ್ಯಕ್ತಿಯನ್ನು ಈ ಕೇಸಿನಲ್ಲಿ ಸಿಲುಕಿಸಿದ ಗುಮಾನಿ ಎದ್ದು ಕಾಣುತ್ತದೆ.

Advertisements
ಸಂತೋಷ್‌
ಕೊಲೆಯಾದ ಸೌಜನ್ಯ, ದೋಷಮುಕ್ತರಾದ ಸಂತೋಷ್‌ ರಾವ್‌

ಈ ಪ್ರಕರಣದಲ್ಲಿ, ಒಟ್ಟಾಗಿ ಎರಡು ಕುಟುಂಬಗಳು ನೊಂದಿವೆ. ಸೌಜನ್ಯಳ ಕುಟುಂಬದವರು ಮತ್ತು ಸಂತೋಷ್‍ರಾವ್ ಹಾಗು ಅವನ ಕುಟುಂಬದವರು. ಸೌಜನ್ಯಳ ಕುಟುಂಬದವರ ಪ್ರಕಾರ, ಈ ಪ್ರಕರಣಕ್ಕೂ ಸಂತೋಷ್‍ರಾವ್‍ಗೂ ಯಾವುದೇ ರೀತಿಯ ಸಂಬಂಧವಿಲ್ಲ ಮತ್ತು ಈ ಪ್ರಕರಣದಲ್ಲಿ ಧೀರಜ್ ಜೈನ್, ಮಲ್ಲಿಕ್ ಜೈನ್ ಮತ್ತು ಉದಯ್ ಜೈನ್ ಎಂಬ ವ್ಯಕ್ತಿಗಳ ಮೇಲೆ ಸಂಶಯವಿದೆ. ಸಂತೋಷ್‍ರಾವ್‍ರವರ ಪ್ರಕಾರ ಈ ಪ್ರಕರಣಕ್ಕೂ, ತನಗೂ ಯಾವುದೇ ರೀತಿಯ ಸಂಬಂಧವಿಲ್ಲ ಮತ್ತು ನಾನೊಬ್ಬ ಅಮಾಯಕ ಎಂಬ ನಿಲುವನ್ನು ಈ ಪ್ರಕರಣದಲ್ಲಿ ಪ್ರಾಥಮಿಕ ಹಂತದಿಂದಲೂ ಹೇಳುತ್ತಾ ಬಂದಿರುತ್ತಾರೆ. ಈ ಎರಡೂ ನೊಂದ ಕುಟುಂಬಗಳ ಒಟ್ಟಾರೆ ನಿಲುವು ಏನೆಂದರೆ, ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆಯನ್ನು ನಡೆಸದೇ ನಿಜವಾದ ಆರೋಪಿಗಳನ್ನು ರಕ್ಷಿಸುವ ಸಲುವಾಗಿ ಅಮಾಯಕ ಸಂತೋಷ್‍ರಾವ್ ಎಂಬ ವ್ಯಕ್ತಿಯನ್ನು ಈ ಕೇಸಿನಲ್ಲಿ ಆರೋಪಿಯನ್ನಾಗಿಸಿದ್ದಾರೆ.

ಈ ಪ್ರಕರಣದಲ್ಲಿ, ಈಗಾಗಲೇ ಸಂಬಂಧಪಟ್ಟ ತನಿಖಾ ತಂಡಗಳು ಹಲವಾರು ಹಂತದಲ್ಲಿ ತನಿಖೆಯನ್ನು ನಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿ, ಸಿ.ಬಿ.ಐ. ನ್ಯಾಯಾಲಯವು ತನ್ನ ತೀರ್ಪನ್ನು ಈಗಾಗಲೇ ನೀಡಿರುತ್ತಾರೆ. ಈ ತೀರ್ಪಿನ ನಂತರ ನೊಂದ ಕಕ್ಷಿದಾರರು ಮತ್ತು ಸಾರ್ವಜನಿಕರು ದೊಡ್ಡ ಮಟ್ಟದ ಹೋರಾಟವನ್ನು ಮಾಡುತ್ತಾ, ಈ ಪ್ರಕರಣವನ್ನು ಮರುತನಿಖೆ ನಡೆಸಬೇಕೆಂದು ಸರ್ಕಾರವನ್ನು ಈಗಾಗಲೇ ಕೋರಿರುತ್ತಾರೆ. ಈ ಬಗ್ಗೆ ಸೌಜನ್ಯಳ ಮನೆಯವರು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿರುತ್ತಾರೆ. ಈ ಸಂದರ್ಭದಲ್ಲಿ ಸರ್ಕಾರವು ಯಾವ ರೀತಿಯ ನಿಲುವನ್ನು ತಳೆಯಬಹುದು ಮತ್ತು ಏನು ಮಾಡಬಹುದು ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಇಂಥ ಸಂದರ್ಭದಲ್ಲಿ ಈ ಕೇಸನ್ನು ಸಿ.ಬಿ.ಐ. ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖಿಸಿದ ಅಂಶಗಳ ಆಧಾರದ ಮೇಲೆ ಸಿ.ಬಿ.ಐ.ಗೆ ಸರ್ಕಾರವು ಕೋರಿಕೆಯನ್ನು ಸಲ್ಲಿಸಿ, ಮರುತನಿಖೆಗೆ ನಿರ್ದೇಶನವನ್ನು ಕೊಡಲು ಅವಕಾಶವಿರುತ್ತದೆ.

ಒಂದು ವೇಳೆ ಸರ್ಕಾರದ ಮನವಿಯನ್ನು ಪರಿಗಣಿಸಿ ಸಿ.ಬಿ.ಐ. ಅಧಿಕಾರಿಗಳಿಗೆ ಈ ಪ್ರಕರಣವು ಪುನರ್ ತನಿಖೆ ನಡೆಸಲು ಅರ್ಹವಾದ ಪ್ರಕರಣ ಎಂದು ಮನದಟ್ಟಾದರೆ ಸರ್ಕಾರದ ಮನವಿಯ ಮೇರೆಗೆ ಈ ಪ್ರಕರಣವನ್ನು ಪುನರ್ ತನಿಖೆ ನಡೆಸಲೂಬಹುದು. ಬೇರೆ ತನಿಖಾಧಿಕಾರಿಗಳನ್ನು ನೇಮಿಸಿಕೊಳ್ಳುವುದು, ನಂತರ ಮಾಮೂಲಿನಂತೆ ಕಾನೂನಿನ ಪ್ರಕ್ರಿಯೇ ಪ್ರಾರಂಭವಾಗುತ್ತದೆ ಮತ್ತು ಈ ಹಿಂದೆ ನಡೆಸಿದಂತಹ ಎಲ್ಲಾ ತನಿಖಾ ವರದಿಗಳಿಗೆ ಯಾವುದೇ ರೀತಿಯ ಕಾನೂನಿನ ಮಾನ್ಯತೆ ಇರುವುದಿಲ್ಲ. ಸಿ.ಬಿ.ಐ ಹೊಸದಾಗಿ ತನಿಖೆಯನ್ನು ನಡೆಸಬೇಕಾಗುತ್ತದೆ.

ಒಂದು ವೇಳೆ ಸಿ.ಬಿ.ಐ. ಈ ಪ್ರಕರಣವನ್ನು ಮರುತನಿಖೆ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ ಮತ್ತು ನಾವು ಈಗಾಗಲೇ ಕೂಲಂಕಷವಾಗಿ ಈ ಪ್ರಕರಣವನ್ನು ತನಿಖೆ ಮಾಡಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ನ್ಯಾಯಾಲಯವು ವಿಚಾರಣೆಯನ್ನು ನಡೆಸಿ ಸಂತೋಷ್‍ರಾವ್‍ರವರನ್ನು ದೋಷಮುಕ್ತಗೊಳಿದ ಕಾರಣ ಈ ಪ್ರಕರಣವನ್ನು ಪುನರ್ ತನಿಖೆ ನಡೆಸಲು ಆಗುವುದಿಲ್ಲ ಎಂದು ಹೇಳಲೂಬಹುದು. ಆ ಸಂದರ್ಭದಲ್ಲಿ ಸೌಜನ್ಯಳ ಕುಟುಂಬದವರು ಅಥವಾ ನೊಂದವರು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ (Criminal Procedure of Code) ಕ್ರಿಮಿನಲ್ ಪ್ರೋಸಿಜರ್ ಕೋಡ್ 482 ಮತ್ತು ಆರ್ಟಿಕಲ್‌ 226(1) ಭಾರತದ ಸಂವಿಧಾನದ ಅಡಿಯಲ್ಲಿ ಸೂಕ್ತವಾದ ಅರ್ಜಿಯನ್ನು ಸಲ್ಲಿಸಿ, ಈ ಪ್ರಕರಣವನ್ನು ಪುನರ್ ತನಿಖೆ ನಡೆಸಲು ಸೂಕ್ತವಾದ ತನಿಖಾ ತಂಡಕ್ಕೆ ನಿರ್ದೇಶನ ನೀಡಬೇಕು ಎಂದು ಕೇಳಲು ಮೇಲ್ಕಂಡ ಸೆಕ್ಷನ್‌ ಮತ್ತು ಆರ್ಟಿಕಲ್‌ ಅಡಿಯಲ್ಲಿ ಅವಕಾಶವಿರುತ್ತದೆ. ಅದೂ ಅಲ್ಲದೇ, ಸಂವಿಧಾನದ ಆರ್ಟಿಕಲ್‌ 32 ಅಡಿಯಲ್ಲೂ ಸೌಜನ್ಯಳ ಕುಟುಂಬದವರೂ ಅಥವಾ ನೊಂದವರೂ ಸರ್ವೋಚ್ಛ ನ್ಯಾಯಾಲಯಕ್ಕೆ ಒಂದು ಅರ್ಜಿಯನ್ನು ಸಲ್ಲಿಸಿ, ಈ ಪ್ರಕರಣದಲ್ಲಿ ನ್ಯಾಯೋಚಿತ ತನಿಖೆ ಆಗದೇ ಇರುವುದರಿಂದ ನಮ್ಮ ಮೂಲಭೂತ ಹಕ್ಕು ಮೊಟಕ್ಕಾಗಿದೆ, ಆದ್ದರಿಂದ ಈ ಪ್ರಕರಣವನ್ನು ಪುನರ್ ತನಿಖೆ ನಡೆಸಬೇಕು ಎಂದು ಕೋರಿಕೊಳ್ಳಲು ಮೇಲ್ಕಂಡ ಸೆಕ್ಷನ್‌ ಮತ್ತು ಆರ್ಟಿಕಲ್‌ ಅಡಿಯಲ್ಲಿ ಅವಕಾಶವಿರುತ್ತದೆ. ಅಲ್ಲದೇ, ಮಾನ್ಯ ಉಚ್ಛ ನ್ಯಾಯಾಲಯ ಮತ್ತು ಮಾನ್ಯ ಸರ್ವೋಚ್ಛ ನ್ಯಾಯಾಲಯಕ್ಕೆ ಮರುತನಿಖೆ ನಡೆಸಲು ಮೇಲ್ಕಂಡ ಸೆಕ್ಷನ್‌ ಮತ್ತು ಆರ್ಟಿಕಲ್‌ ಅಡಿಯಲ್ಲಿ ಪರಮಾಧಿಕಾರವಿರುತ್ತದೆ.

ಆದ್ದರಿಂದ, ಈ ಕೇಸಿನಲ್ಲಿ ಸೌಜನ್ಯಳ ಕುಟುಂಬದವರು ಮತ್ತು ಸಂತೋಷ್‌ ಕುಟುಂಬದವರು ಕರ್ನಾಟಕ ಉಚ್ಛ ನ್ಯಾಯಾಲಯ ಅಥವಾ ನೇರವಾಗಿ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಕದ ತಟ್ಟುವುದು ಸೂಕ್ತ. ಈ ಕೇಸಿನ ಹಿನ್ನೆಲೆಯನ್ನು ಗಮನಿಸಿದರೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ತೀರ್ಪಿನ ಅಂಶಗಳನ್ನು ಪರಿಗಣಿಸಿದರೆ, ಮರುತನಿಖೆ ನಡೆಸಲು ಸಾಕಷ್ಟು ಅಂಶಗಳು ಈ ಕೇಸಿನಲ್ಲಿದೆ ಮತ್ತು ಈ ಅಂಶಗಳನ್ನು ಮಾನ್ಯ ಉಚ್ಛ ನ್ಯಾಯಾಲಯಕ್ಕೆ ಮತ್ತು ಮಾನ್ಯ ಸರ್ವೋಚ್ಛ ನ್ಯಾಯಾಲಯಕ್ಕೆ ಸೂಕ್ತ ಅರ್ಜಿಯನ್ನು ಸಲ್ಲಿಸಿ ಈ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದರೆ, ಖಂಡಿತವಾಗಿ ಈ ಪ್ರಕರಣವನ್ನು ಮರುತನಿಖೆಗೆ ಒಳಪಡಿಸುವ ಸಾಧ್ಯತೆಗಳು ಇದೆ.

ಆದರೆ, ಕ್ರಿಮಿನಲ್ ಪ್ರೋಸಿಜರ್ ಕೋಡ್‍ನಲ್ಲಿ ಮರುತನಿಖೆಯ ಬಗ್ಗೆ ಸೂಕ್ತವಾದ ವ್ಯಾಖ್ಯೆಗಳು ಇಲ್ಲದೇ ಇರುವುದರಿಂದ ಈ ಪ್ರಕರಣವನ್ನು ಮರುತನಿಖೆ ನಡೆಸಲು ಸಾಂವಿಧಾನಿಕ ನ್ಯಾಯಾಲಯಗಳು ಅಂದರೆ ಕರ್ನಾಟಕ ಉಚ್ಛ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯಕ್ಕೆ ಪರಮಾಧಿಕಾರವಿರುತ್ತದೆ. ಆದರೆ, ಈ ಒಂದು ಪ್ರಕರಣದಲ್ಲಿ ಇನ್ನೊಂದು ಬಹು ಮುಖ್ಯವಾದ ಕಾನೂನಿನ ಅಂಶವೂ ಒಳಗೊಂಡಿದೆ, ಅದೇನೆಂದರೆ, ಒಂದು ಪ್ರಕರಣದಲ್ಲಿ ತನಿಖೆಯನ್ನು ನಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ ನಂತರ ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಆರೋಪಿಯನ್ನು ನಿರ್ದೋಷಿಯೆಂದು ಘೋಷಿಸಿದ ನಂತರ ಕಾನೂನಿನಲ್ಲಿ ಮರುತನಿಖೆ ನಡೆಸಲು ಅವಕಾಶವಿದೆಯೇ ? ಅಥವಾ ಇಲ್ಲವೇ ? ಆದರೆ ಗುಜರಾತಿನ ಕೋಮುಗಲಭೆಯಲ್ಲಿ ನಡೆದಂತಹ ಕೆಲವು ಪ್ರಕರಣಗಳಲ್ಲಿ ಆರೋಪಿಗಳನ್ನು ನಿರ್ದೋಷಿಯೆಂದು ಘೋಷಿಸಿದ ನಂತರ ಸರ್ವೋಚ್ಚ ನ್ಯಾಯಾಲಯವು ಪುನರ್ ವಿಚಾರಣೆಗೆ ಆದೇಶ ಕೊಟ್ಟಂತಹ ದೃಷ್ಟಾಂತಗಳಿವೆ. ಆದರೆ, ನಿರ್ದೋಷಿಯೆಂದು ಯಾವುದೇ ನ್ಯಾಯಾಲಯ ಘೋಷಿಸಿದ ನಂತರ ಮರುತನಿಖೆಗೆ ಆದೇಶ ಕೊಟ್ಟಂಥ ದೃಷ್ಟಾಂತಗಳು ನಮ್ಮ ಮುಂದೆ ಇಲ್ಲ.

ಈ ಹಿಂದೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು ವಿನಯ್‍ತ್ಯಾಗಿ ವಿರುದ್ಧ ಹಿಶ್ರ್ಯಾದ್ ಆಲಿ, (2013) 5 Sಅಅ 762 ಈ ಪ್ರಕರಣದಲ್ಲಿ ಹೇಳಿದ ಅಂಶವೆಂದರೆ “ಯಾವುದೇ ಒಂದು ತನಿಖೆಯು ನ್ಯಾಯೋಚಿತವಾಗಿ ನಡೆಯದೇ ಇದ್ದ ಪಕ್ಷದಲ್ಲಿ ಅಥವಾ ಗಂಭೀರವಾದ ಕಾನೂನಿನ ಉಲ್ಲಂಘನೆ ಆದ ಪಕ್ಷದಲ್ಲಿ, ಅಂತಹ ಪ್ರಕರಣವನ್ನು ಸ್ವತಂತ್ರವಾದ ತನಿಖಾ ತಂಡದ ಮೂಲಕ ಮರುತನಿಖೆ ನಡೆಸಬಹುದು”. ಆದರೆ, ಮರುತನಿಖೆಯನ್ನು ಎಲ್ಲಾ ಪ್ರಕರಣಗಳಲ್ಲಿ ಮಾಡಲು ಸಾಧ್ಯವಿಲ್ಲ. ಮರುತನಿಖೆ ಮಾಡುವಂಥ ಸಂದರ್ಭ ಅಪರೂಪದಲ್ಲಿ ಅಪರೂಪ ಪ್ರಕರಣಗಳಲ್ಲಿ ಮಾತ್ರ ಮರುತನಿಖೆಯನ್ನು ಮಾಡಲು ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ಪರಮಾಧಿಕಾರವಿರುತ್ತದೆ.

ಆದರೆ, ಈ ಸೌಜನ್ಯ ಪ್ರಕರಣದಲ್ಲಿ ಈಗಾಗಲೇ ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಇಲ್ಲಿ ಉದ್ಭವವಾಗುವ ಬಹುಮುಖ್ಯ ಕಾನೂನಿನ ಅಂಶವೇನೆಂದರೆ, ಆರೋಪಿಯನ್ನು ಬಿಡುಗಡೆ ಮಾಡಿದ ನಂತರ, ಪುನಃ ಸದರಿ ಪ್ರಕರಣವನ್ನು ಮರುತನಿಖೆಗೆ ಒಳಪಡಿಸಬಹುದೇ ? ಅಥವಾ ಇಲ್ಲವೇ ? ಎಂಬ ಕಾನೂನಿನ ಅಂಶ ಉದ್ಭವವಾಗುತ್ತದೆ. ಈ ಹಿಂದೆ ಕೆಲವು ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಗಮನಿಸಿದರೆ, ಒಂದು ಪ್ರಕರಣದಲ್ಲಿ ಆರೋಪಿ ಬಿಡುಗಡೆಯಾದ ನಂತರವೂ, ಸದರಿ ಪ್ರಕರಣವನ್ನು ಮರುವಿಚಾರಣೆ ನಡೆಸಿದಂತಾದ ದೃಷ್ಟಾಂತಗಳು ನಮ್ಮ ಮುಂದೆ ಇದೆ. ಸದರಿ ಪರಮಾಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ಇರುತ್ತದೆ. ಆದರೆ ನಿರ್ದೋಷಿಯೆಂದು ಘೋಷಿಸಿದ ಪ್ರಕರಣದಲ್ಲಿ ಮರುತನಿಖೆಗೆ ಕೊಟ್ಟಂತಹ ದೃಷ್ಟಾಂತಗಳು ನಮ್ಮ ಮುಂದೆ ಇಲ್ಲ. ಆದರೂ (ಅಡಿ.P.ಅ.) ಸಿ.ಆರ್.ಪಿ.ಸಿ. ಕಲಂ. 482 ಮತ್ತು ಸಾಂವಿಧಾನದ ಆರ್ಟಿಕಲ್‌ 226(1)ಯಲ್ಲಿರುವ ಅಂಶಗಳನ್ನು ಅವಲೋಕಿಸಿದರೆ, ಮಾನ್ಯ ಉಚ್ಛ ನ್ಯಾಯಾಲಯಕ್ಕೆ ಮರುತನಿಖೆಗೆ ಆದೇಶ ಕೊಡುವಂತ ಪರಮಾಧಿಕಾರವಿದೆ, ಅಲ್ಲದೆ ಸಾಂವಿಧಾನದ ಆರ್ಟಿಕಲ್‌ 32ರಲ್ಲಿರುವ ಸಾರಾಂಶಗಳನ್ನು ಕೂಲಂಕಷವಾಗಿ ಪರಿಗಣಿಸಿದರೆ ಸರ್ವೋಚ್ಛ ನ್ಯಾಯಾಲಯಕ್ಕೆ ಮರುತನಿಖೆಗೆ ಆದೇಶಿಸಲು (ನಿರ್ದೋಷಿಯೆಂದು ಘೋಷಿಸಿದ ನಂತರವೂ) ಪರಮಾಧಿಕಾರವಿರುತ್ತದೆ.

ಕೇರಳದ ಪ್ರಕರಣ: ನಿರ್ದೋಷಿಯ ರಿಟ್‌ ಆಧರಿಸಿ ಪುನರ್‌ ತನಿಖೆ

ಈ ಹಿಂದೆ ಸೌಜನ್ಯಳ ಪ್ರಕರಣದ ರೀತಿಯಲ್ಲೇ, ಕೇರಳ ಉಚ್ಛ ನ್ಯಾಯಾಲಯ ರಾಜನ್ ಅಲಿಯಾಸ್‌ ರಾಮು ವಿರುದ್ಧ ಕೇರಳ ಸರ್ಕಾರ ಮತ್ತು ಇತರರು, [ W.P.(ಅIಗಿIಐ) ] ರಿಟ್ ಪಿಟಿಷನ್ (ಸಿ) ಸಂಖ್ಯೆ : 30976/2018, ದಿನಾಂಕ: 04.05.2020) ಸದರಿ ಪ್ರಕರಣದಲ್ಲಿ ಒಬ್ಬ ಆರೋಪಿ ಬಿಡುಗಡೆಯಾದ ನಂತರ, ಸದರಿ ಆರೋಪಿ ಸಲ್ಲಿಸಿದ ರಿಟ್ ಪಿಟಿಷನ್ ಮೇರೆಗೆ ಅವನು ಬಿಡುಗಡೆಯಾದ ಪ್ರಕರಣವನ್ನು ಮರುತನಿಖೆಗೆ ಒಳಪಡಿಸಿ ಆದೇಶಿಸಿರುತ್ತಾರೆ. ಸದರಿ ಪ್ರಕರಣದಲ್ಲಿ, ರಾಜನ್ ಅಲಿಯಾಸ್‌ ರಾಮು ಎಂಬ ಆರೋಪಿಯು ಮಾನ್ಯ ಉಚ್ಛ ನ್ಯಾಯಾಲಯ, ಕೇರಳ, ಇಲ್ಲಿ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಎತ್ತಿದ ಅಂಶವೇನೆಂದರೆ “ಈ ಕೇಸಿಗೂ, ನನಗೂ ಯಾವುದೇ ಸಂಬಂಧವಿಲ್ಲ, ನಾನು ಅತ್ಯಾಚಾರದಲ್ಲಿ ಭಾಗಿಯಾಗಿಲ್ಲ, ನಿಜವಾದ ಆರೋಪಿಗಳನ್ನು ಈ ಪ್ರಕರಣದಲ್ಲಿ ಗುರುತಿಸಬೇಕು. ಆದ್ದರಿಂದ ಈ ಪ್ರಕರಣವನ್ನು ಮರುತನಿಖೆ ನಡೆಸಬೇಕು”ಎಂದು ಕೋರಿಕೊಂಡ ಮೇರೆಗೆ ಕೇರಳ ಉಚ್ಛ ನ್ಯಾಯಾಲಯವು ಸಂಬಂಧಪಟ್ಟ ತನಿಖಾ ತಂಡಕ್ಕೆ ಪುನರ್ ತನಿಖೆ ಮಾಡಲು ಆದೇಶಿಸಿರುತ್ತಾರೆ.

kerala 1
ರಾಜನ್‌ ಅಲಿಯಾಸ್‌ ರಾಮು ಪ್ರಕರಣ ಮರು ತನಿಖೆಗೆ ಆದೇಶಿಸಿದ ಕೇರಳ ಹೈಕೋರ್ಟ್‌

ಆದ್ದರಿಂದ, ಈ ಒಂದು ಪ್ರಕರಣದಲ್ಲಿ ಸೌಜನ್ಯಳ ಕುಟುಂಬದವರು ಅಲ್ಲದೇ ಆರೋಪಿ ಸಂತೋಷ್‍ ರಾವ್ ಕೂಡಾ ಸಿ.ಬಿ.ಐ. ನ್ಯಾಯಾಲಯದ ತೀರ್ಪಿನಲ್ಲಿ ಎತ್ತಿದ ಅಂಶಗಳ ಮೇರೆಗೆ, (ಅಡಿ.P.ಅ.) ಸಿ.ಆರ್.ಪಿ.ಸಿ. ಕಲಂ 482 ಅಥವಾ ಆರ್ಟಿಕಲ್‌ 226(1) ಭಾರತದ ಸಂವಿಧಾನದ ಅಡಿಯಲ್ಲಿ ಆರೋಪಿ ಸಂತೋಷ್‍ರಾವ್ ಕೂಡ ಮರುತನಿಖೆ ಮತ್ತು ಪರಿಹಾರಕ್ಕಾಗಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಕದವನ್ನು ತಟ್ಟಬಹುದು ಅಥವಾ ಆರ್ಟಿಕಲ್‌ 32ರ ಅಡಿಯಲ್ಲಿ ಸರ್ವೋಚ್ಛ ನ್ಯಾಯಾಲಯಕ್ಕೂ ಅರ್ಜಿಯನ್ನು ನೇರವಾಗಿ ಸಲ್ಲಿಸಿ ಸೂಕ್ತವಾದ ಆದೇಶವನ್ನು ಪಡೆಯಲು ಆರೋಪಿ ಸಂತೋಷ್‍ರಾವ್‍ಗೂ ಸಾಂವಿಧಾನಿಕ ಹಕ್ಕು ಇದೆ, ಯಾಕೆಂದರೆ, ಈ ಒಂದು ಪ್ರಕರಣದಲ್ಲಿ ಸಂತೋಷ್‍ರಾವ್‍ನ ಮೂಲಭೂತ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಹಕ್ಕಿನ ಹರಣ ಮತ್ತು ಉಲ್ಲಂಘನೆಯಾಗಿದೆ.

ಈ ಹಿಂದೆ, ಹಲವಾರು ಪ್ರಕರಣಗಳಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವೂ ಉಲ್ಲೇಖಿದ ಅಂಶವೇನೆಂದರೆ, “ಪ್ರತಿಯೊಂದು ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯೋಚಿತ ತನಿಖೆ ಮತ್ತು ನ್ಯಾಯೋಚಿತ ವಿಚಾರಣೆಯು ಒಬ್ಬ ಪ್ರಜೆಯ ಮೂಲಭೂತ ಹಕ್ಕು ಮತ್ತು ಅದನ್ನು ಕೇಳಲು ವೈಯಕ್ತಿಕ ಸ್ವಾತಂತ್ರದ ಅಡಿಯಲ್ಲಿ ಪ್ರತಿಯೊಬ್ಬ ಪ್ರಜೆಯು ಅರ್ಹನಾಗಿರುತ್ತಾನೆ (ಆರ್ಟಿಕಲ್‌ 14, 21 ಮತ್ತು 39-ಎ ಭಾರತದ ಸಂವಿಧಾನ)” ಮತ್ತು ಪ್ರತಿಯೊಂದು ಕ್ರಿಮಿನಲ್ ಪ್ರಕರಣದಲ್ಲಿ ಸಮಾನ ನ್ಯಾಯವನ್ನು ಒದಗಿಸುವುದು ಪ್ರತಿಯೊಂದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿರುತ್ತದೆ. ಈ ಒಂದು ಪ್ರಕರಣದಲ್ಲಿ ಸೌಜನ್ಯಳ ಕುಟುಂಬದವರ ಮತ್ತು ಆರೋಪಿ ಸಂತೋಷ್‍ರಾವ್‍ರವರ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿರುತ್ತದೆ. ಅಲ್ಲದೇ, ಸರ್ಕಾರವು ನ್ಯಾಯೋಚಿತ ತನಿಖೆಯನ್ನು ನಡೆಸುವಲ್ಲಿ ಮತ್ತು ನ್ಯಾಯವನ್ನು ಒದಗಿಸಿ ಕೊಡುವಲ್ಲಿ ಸಾಂವಿಧಾನಿಕ ತಪ್ಪನ್ನು ಎಸಗಿದ್ದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಇದನ್ನು ಓದಿ ಐಪಿಸಿ, ಸಿಆರ್‌ಪಿಸಿ ಬದಲು 3 ಹೊಸ ಕ್ರಿಮಿನಲ್ ಕಾನೂನುಗಳು: ಲೋಕಸಭೆಯಲ್ಲಿ ವಿಧೇಯಕಗಳ ಮಂಡನೆ

ಈ ಪ್ರಕರಣದ ಗಂಭೀರತೆ ಮತ್ತು ನಡೆದುಕೊಂಡು ಬಂದಂತಹ ಬೆಳವಣಿಗೆಗಳು, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಮತ್ತು ವೈದ್ಯಾಧಿಕಾರಿಗಳ ನಿರ್ಲಕ್ಷತೆ, ಅಲ್ಲದೇ ಸಿ.ಬಿ.ಐ. ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಕೊಟ್ಟಂತಹ ಅಂಶಗಳನ್ನು ಗಮನಿಸಿದರೆ ಈ ಒಂದು ಪ್ರಕರಣವು ಮರುತನಿಖೆ ನಡೆಸಲು ಸೂಕ್ತವಾದ ಪ್ರಕರಣ ಮತ್ತು ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ಇದನ್ನು ಮರುತನಿಖೆಗೆ ಒಳಪಡಿಸಲು ಕಾನೂನಿನ ಅಡಿಯಲ್ಲಿ ವಿಶೇಷವಾದ ಪರಮಾಧಿಕಾರವಿರುತ್ತದೆ. ಆದರೆ ಸರ್ಕಾರಕ್ಕೆ ಮರುತನಿಖೆಗೆ ಒಳಪಡಿಸಲು ಬಹಳ ಸೀಮಿತವಾದ ಅಧಿಕಾರವಿರುತ್ತದೆ. ಯಾಕೆಂದರೆ ಈ ಒಂದು ಪ್ರಕರಣದಲ್ಲಿ ಈಗಾಗಲೇ ಸಂಬಂಧಪಟ್ಟ ನ್ಯಾಯಾಲಯವು ವಿಚಾರಣೆಯನ್ನು ಪೂರ್ಣಗೊಳಿಸಿ ಆರೋಪಿಯನ್ನು ನಿರ್ದೋಷಿ ಎಂದು ಘೋಷಿಸಿರುತ್ತದೆ. ಅಲ್ಲದೆ ಸಿ.ಬಿ.ಐ.ನ ಈ ತೀರ್ಪನ್ನು ಪ್ರಶ್ನಿಸಿ ಸಿ.ಬಿ.ಐ. ಉಚ್ಛ ನ್ಯಾಯಾಲಯಕ್ಕೆ ಕ್ರಿಮಿನಲ್ ಅಪೀಲ್ ಸಲ್ಲಿಸುವ ಸಾಧ್ಯತೆಯು ಇರಲೂಬಹುದು ಅಥವಾ ಇಲ್ಲದೇ ಇರಲೂಬಹುದು ಮತ್ತು ಅಂತಹ ಕ್ರಿಮಿನಲ್ ಅಪೀಲ್ ಸಲ್ಲಿಸುವ ಮೊದಲು ಸಿ.ಬಿ.ಐ. ಪರವಾಗಿ ಪ್ರತಿನಿಧಿಸಿದ ಹಿರಿಯ ಸಾರ್ವಜನಿಕ ಅಭಿಯೋಜಕರ ಅಭಿಪ್ರಾಯವನ್ನು ಪಡೆದುಕೊಳ್ಳಬೇಕಾಗುತ್ತದೆ.

ಸೌಜನ್ಯಳ ಕುಟುಂಬದವರು ಮತ್ತು ನೊಂದ ಸಂತೋಷ್‍ರಾವ್ ಕುಟುಂಬದವರು ಕೂಡಲೇ ಸೂಕ್ತ ವಕೀಲರನ್ನು ನೇಮಿಸಿಕೊಂಡು, ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ (ಅಡಿ.P.ಅ.) ಸಿ.ಆರ್.ಪಿ.ಸಿ. ಕಲಂ. 482ರ ಅಡಿಯಲ್ಲಿ ಅಥವಾ ಆರ್ಟಿಕಲ್‌ 226(1) ಅಥವಾ ನೇರವಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿ ಆರ್ಟಿಕಲ್‌ 32, ಭಾರತದ ಸಂವಿಧಾನದ ಅಡಿಯಲ್ಲಿ ಸೂಕ್ತವಾದ ಅರ್ಜಿಯನ್ನು ಸಲ್ಲಿಸಿ ಆದೇಶವನ್ನು ಪಡೆಯಲು ಕಾನೂನಿನಲ್ಲಿ ಅವಕಾಶವಿರುತ್ತದೆ.

 

M R Balakrishna
ಎಂ ಆರ್‌ ಬಾಲಕೃಷ್ಣ
+ posts

ಹೈಕೋರ್ಟ್‌ ವಕೀಲರು, ಬೆಂಗಳೂರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಎಂ ಆರ್‌ ಬಾಲಕೃಷ್ಣ
ಎಂ ಆರ್‌ ಬಾಲಕೃಷ್ಣ
ಹೈಕೋರ್ಟ್‌ ವಕೀಲರು, ಬೆಂಗಳೂರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X