ವರದಕ್ಷಿಣೆ ತರುವಂತೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬೀದರ್ ನಗರದ ಶಹಾಗಂಜ ಬಡಾವಣೆಯು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ʼ2022ರಲ್ಲಿ ಮದುವೆ ಸಮಯದಲ್ಲಿ 5 ತೊಲೆ ಬಂಗಾರ ಹಾಗೂ ₹5 ಲಕ್ಷ ವರದಕ್ಷಿಣೆ ನೀಡುವುದಾಗಿ ಮಾತಾಗಿತ್ತು. 2022ರ ಡಿಸೆಂಬರ್‌ನಲ್ಲಿ ಮದುವೆ ನಿಗದಿಯಾಗಿತ್ತು. ಮದುವೆ ಮುಂಚೆಯೇ ₹5 ಲಕ್ಷ ವರದಕ್ಷಿಣೆ ಗಂಡನ ಮನೆಯವರು ತೆಗೆದುಕೊಂಡಿದ್ದರು. ಮದುವೆ ವೇಳೆ ನನ್ನ ಹಾಗೂ ಗಂಡನಿಗೆ 5 ತೊಲೆ ಬಂಗಾರದ ಆಭರಣಗಳು ಮಾಡಿಕೊಟ್ಟಿದ್ದರುʼ ಎಂದಿದ್ದಾರೆ.
ʼಮದುವೆಯಾದ ವರ್ಷದವರೆಗೆ ಎಲ್ಲರೂ ಚನ್ನಾಗಿಯೇ ಇದ್ದರು. ಬಳಿಕ ಮದುವೆ ಸಂದರ್ಭದಲ್ಲಿ ಹೆಚ್ಚಿನ ವರದಕ್ಷಿಣೆ ನೀಡಲಿಲ್ಲ. ಇನ್ನೂ 2 ತೊಲೆ ಬಂಗಾರ ₹2 ಲಕ್ಷ ವರದಕ್ಷಿಣೆ ತೆಗೆದುಕೊಂಡು ಬರುವಂತೆ ಗಂಡ ಸೇರಿದಂತೆ ಅತ್ತೆ, ಮಾವ, ಮೈದುನ ಎಲ್ಲರೂ ಕಿರುಕುಳ ಕೊಟ್ಟು ನನ್ನ ಗಂಡ ದೈಹಿಕ ಹಲ್ಲೆ ಮಾಡಿದ್ದಾರೆ. ಈ ವಿಷಯ ನನ್ನ ತವರು ಮನೆಯವರಿಗೆ ತಿಳಿಸಿದಾಗ ನನ್ನ ತಂದೆ, ಸಹೋದರ ಬಂದು ಕಲಬುರಗಿ ಜಿಲ್ಲೆಯ ನನ್ನ ತವರೂರು ಆಳಂದಗೆ ಕರೆದುಕೊಂಡು ಹೋಗಿದ್ದರುʼ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ʼಎರಡು ತಿಂಗಳ ಕಳೆದ ನಂತರ ಗಂಡ ಸೇರಿದಂತೆ ಎಲ್ಲರೂ ನನ್ನ ತವರು ಮನೆಗೆ ಬಂದು ʼನಮ್ಮಿಂದ ತಪ್ಪಾಗಿದೆ, ಚನ್ನಾಗಿ ಇರುತ್ತೇವೆʼ ಎಂದು ಹೇಳಿ ಬೀದರ್‌ಗೆ ಕರೆದುಕೊಂಡು ಬಂದಿದ್ದರು. ಸ್ವಲ್ಪ ದಿನಗಳ ಬಳಿಕ ʼನಿನಗೆ ವರದಕ್ಷಿಣೆ ತರಲು ಹೇಳಿದರೂ ತಂದಿಲ್ಲʼ ಪುನಃ ಕಿರುಕುಳ ಕೊಟ್ಟು ಅವಾಚ್ಯ ಶಬ್ದಗಳಿಂದ ಬೈಯುವುದು ಮಾಡಿದ್ದಾರೆ. 2025ರ ಜುಲೈ 9ರಂದು ರಾತ್ರಿ ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಗಂಡ, ಮಾವ, ಅತ್ತೆ, ಮೈದುನ ಹಾಗೂ ನೆಗೆಣಿ ಸೇರಿ ಕುಟುಂಬಸ್ಥರು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹೊಡೆಯುವುದು ಮಾಡುತ್ತಿದ್ದರುʼ ಎಂದು ಆರೋಪಿಸಿದರು.
ʼಗಂಡ, ಮಾವ, ಅತ್ತೆ ಸೇರಿದಂತೆ ಮನೆಯವರೆಲ್ಲರೂ ನನ್ನನ್ನು ಹೊಡೆದು ಗಾಯಗೊಳಿಸಿದ್ದರು. ವರದಕ್ಷಿಣೆ ತರದಿದ್ದರೆ ನಮ್ಮ ಮನೆಗೆ ಬರಬೇಡಾ, ನಮ್ಮ ಮಗನಿಗೆ ಬೇರೆ ಮದುವೆ ಮಾಡುತ್ತೇವೆ. ಬಂದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಜೀವ ಭಯದಿಂದ ನಮ್ಮ ಪೋಷಕರು ನನ್ನ ತವರು ಮನೆಗೆ ಜುಲೈ 10ರಂದು ತವರು ಮನೆಗೆ ಕರೆದು ಹೋಗಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕುʼ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಶಾಲಾ ಮೇಲ್ಚಾವಣಿ ಕುಸಿದು ವಿದ್ಯಾರ್ಥಿಗೆ ಗಾಯ : ಜಿಲ್ಲಾಡಳಿತಕ್ಕೆ ಖಡಕ್ ಸೂಚನೆ ನೀಡಿದ ಸಚಿವ ಈಶ್ವರ ಖಂಡ್ರೆ
ದೂರಿನ್ವಯ ಶಹಾಗಂಜನ ಮಹಿಳೆ ಪೂಜಾ ಅವರ ಪತಿ ಆಕಾಶ, ಮಾವ ಸೂರ್ಯಕಾಂತ, ಮೈದುನ ಸಾಗರ, ರಾಹುಲ್ ಹಾಗೂ ನೆಗೆಣಿ ವಿಜಯಲಕ್ಷ್ಮಿ ಸೇರಿ ಒಟ್ಟು ಏಳು ಜನರ ವಿರುದ್ಧ ವಿರುದ್ಧ ಐಪಿಸಿಯ ಕಲಂ 85, 115(2), 352, 351(2) ಜೊತೆ 3 (5) ಬಿಎನ್‌ಎಸ್ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಕಲಂ 3 ಮತ್ತು 4ರಡಿ ಬೀದರ್ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.