ಮಹಾತ್ಮಾ ಗಾಂಧಿ ಮಾನವತಾವಾದಿಯಾಗಿದ್ದರೆ, ಡಾ.ಬಿ. ಆರ್. ಅಂಬೇಡ್ಕರ್ ಮಹಾ ಮಾನವತವಾದಿಯಾಗಿದ್ದರು ಎಂದು ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ತಿಳಿಸಿದರು.
ಸಂವಿಧಾನ ಸಂರಕ್ಷಣಾ ಸಮಿತಿ, ಯಾದಗಿರಿ ವತಿಯಿಂದ ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಂವಿಧಾನ ಜನಜಾಗೃತಿ ಸಮಾವೇಶದಲ್ಲಿ ವಿಶೇಷ ಉಪನ್ಯಾಸವನ್ನು ನೀಡುತ್ತಾ ಅವರು ಮಾತನಾಡಿದರು.
“ದೇಶದ ಇತಿಹಾಸದುದ್ದಕ್ಕೂ ಅನೇಕ ಮಹನೀಯರ ತ್ಯಾಗ ಬಲಿದಾನಗಳು ನಡೆದಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದವರೆಲ್ಲಾ ಶೋಷಿತರು. ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಿಕೊಟ್ಟು ಸಮಾನತೆಯನ್ನು ಸಾರುವುದೇ ಸಂವಿಧಾನದ ಉದ್ದೇಶವಾಗಿದೆ” ಎಂದರು.

“ಮಹಾತ್ಮಾ ಗಾಂಧಿ ಮಾನವತಾವಾದಿಯಾಗಿದ್ದರೆ ಡಾ.ಬಿ.ಆರ್. ಅಂಬೇಡ್ಕರ್ ಮಹಾ ಮಾನವತಾವಾದಿಯಾಗಿದ್ದರು. ಅವರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿರಲಿಲ್ಲ, ವೈಚಾರಿಕವಾಗಿ ಅಭಿಪ್ರಾಯಗಳು ಭಿನ್ನವಾಗಿದ್ದವು. ಡಾ.ಅಂಬೇಡ್ಕರ್ ದೂರದೃಷ್ಟಿ ವ್ಯಕ್ತಿತ್ವ ಹೊಂದಿದ್ದರಿಂದಲೇ ಸಂವಿಧಾನ ರಚನೆ ಸಾಧ್ಯವಾಗಿದೆ. ಭಾರತದ ಬುನಾದಿಯನ್ನು ಅಳ್ಳಾಡಿಸಲು ಸಾಧ್ಯವಿಲ್ಲದಷ್ಟು ಭದ್ರ ಬುನಾದಿಯನ್ನು ಸಂವಿಧಾನದ ಮೂಲಕ ಹಾಕಿಕೊಟ್ಟಿದ್ದಾರೆ” ಎಂದು ಹೇಳಿದರು.
“ಗಾಂಧಿ, ತಿಲಕ್, ಸುಭಾಶ್ಚಂದ್ರ ಬೋಸ್, ನೆಹರೂ ಸೇರಿ ಇನ್ನೂ ಅನೇಕರಿಗೆ ಬ್ರಿಟೀಷರಿಂದ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಬೇಕೆನ್ನುವ ಒಂದೇ ಜವಾಬ್ದಾರಿ ಹೊತ್ತಿದ್ದರೆ. ಡಾ. ಬಿ ಆರ್ ಅಂಬೇಡ್ಕರ್ ಗೆ ತನ್ನ ಸಮುದಾಯವನ್ನು ಮನುಷ್ಯರನ್ನಾಗಿಸುವುದು ಮತ್ತು ಸ್ವಾತಂತ್ರ್ಯ ಕೊಡಿಸುವ ಮಹದಾಸೆ ಎರಡೂ ಜವಾಬ್ದಾರಿ ಅವರ ಮೇಲಿದ್ದವು” ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
“ಸಂವಿಧಾನ ಬಲಹೀನಗೊಳಿಸುವ ಷಡ್ಯಂತ್ರಗಳು ಇಂದು ದೇಶದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ಪ್ರಾಮಾಣಿಕ ಬಡ ನಿಷ್ಠಾವಂತ ಕಾರ್ಯಕರ್ತರನ್ನಾ ಬಿಟ್ಟು ಶ್ರೀಮಂತರಿಗೆ ಸೀಟು ನೀಡುತ್ತಾರೆ. ಇದು ಕೂಡಾ ಸಂವಿಧಾನವನ್ನು ಬಲಹೀನಗೊಳಿಸುವ ಹುನ್ನಾರವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

“ಸಂವಿಧಾನದ ಪರ ಮಾತನಾಡುವ ಶಕ್ತಿಗಳಾದ ಗೌರಿ ಲಂಕೇಶ್, ಎಮ್ ಎಮ್ ಕಲಬುರಗಿಯವರ ಹತ್ಯೆಗೈದಿರುವುದು ಸಂವಿಧಾನವನ್ನು ಬಲಹೀನಗೊಳ್ಳಿಸುವ ಕುತಂತ್ರ ಕೂಡಾ ಇದರಲ್ಲಿ ಅಡಗಿದೆ ಎಂದರು.
ಸತ್ಯವನ್ನು ವ್ಯವಸ್ಥಿತವಾಗಿ ಸುಳ್ಳಾಗಿಸುವ ಕುತಂತ್ರ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸುತ್ತಾ, ಡಾ. ಬಿ ಆರ್ ಅಂಬೇಡ್ಕರ್ ಅವರು ಕೈ ಹಾಕಿದ ಎಲ್ಲ ವಿಚಾರಗಳು ಮಾನವೀಯ ವಿಚಾರವಾಗಿವೆ. ಹಾಗಾಗಿ ಸಣ್ಣತನ, ಸ್ವಾರ್ಥತೆ ಬಿಟ್ಟು ಸಂವಿಧಾನ ರಕ್ಷಣೆಗೆ ಎಲ್ಲರೂ ಮುಂದಾಗಬೇಕೆಂದು ಕರೆ ನೀಡಿದರು.
ಕೇಂದ್ರ ಸರಕಾರದ ಸಂವಿಧಾನ ವಿರೋಧಿ ನೂತನ ವಕ್ಫ್ (ತಿದ್ದುಪಡಿ) ಕಾಯ್ದೆ 2025 ಕುರಿತು ಮಂಗಳೂರಿನ ಎಸ್ ಡಿಪಿಐ ಮುಖಂಡರಾದ ಇಲ್ಯಾಸ್ ಮುಹಮ್ಮದ್ ತುಂಬೆ ವಿಶೇಷ ಉಪನ್ಯಾಸ ನೀಡಿದರು.

“ಚುನಾವಣಾ ಆಯೋಗದ ವಿರುದ್ಧ ಗುರುತರವಾದ ಆರೋಪ ಮಾಡಿರುವ ರಾಹುಲ್ ಗಾಂಧಿ ಅವರಿಗೆ ನಮ್ಮ ನೈತಿಕ ಬೆಂಬಲವಿದೆ. ಮತ ಕಳವಿನ ಕಳ್ಳಾಟವು ನಿಜಕ್ಕೂ ಸೋಜಿಗ ಮೂಡಿಸಿದೆ. ಸಂವಿಧಾನದ ಆಶಯದ ಮೇಲೆ ಮನುವಾದಿಗಳು ದಾಳಿ ನಡೆಸಿದ್ದಾರೆ. ಕೇವಲ ಘೋಷಣೆ ಕೂಗಿದರೆ ಸಾಲದು. ಹೋರಾಟ ಹಾಗೂ ತ್ಯಾಗಕ್ಕೂ ಸಿದ್ದರಾಗಬೇಕು” ಎಂದು ಕರೆ ನೀಡಿದರು.
“ಸಿಎಎ ಕಾನೂನು ಈ ದೇಶದಲ್ಲಿ ಮುಸ್ಲಿಮರ ಪೌರತ್ವ ಕಸಿದುಕೊಳ್ಳುವ ಕಾಯ್ದೆಯಾಗಿದೆ. ವಕ್ಫ್ ತಿದ್ದುಪಡಿ ಕಾಯ್ದೆ ಮುಸ್ಲಿಂ ಧರ್ಮಗಳು ಧಾರ್ಮಿಕ ಉದ್ದೇಶಕ್ಕಾಗಿ ತಮ್ಮ ಭೂಮಿಯನ್ನು ದಾನ ಮಾಡುವ ಪದ್ಧತಿಯಾಗಿದೆ. ಒಂದು ಬಾರಿ ದಾನ ಮಾಡಿದ ಭೂಮಿ ಪುನಃ ವಾಪಸ್ ಪಡೆಯಲು ಸಾಧ್ಯವಿಲ್ಲ. ಆದರೆ ಇಡೀ ದೇಶವನ್ನು ಮುಸ್ಲಿಂ ಸಾಮ್ರಾಜ್ಯನ್ನು ಕಟ್ಟುವ ಹುನ್ನಾರವಾಗಿದೆ ಎಂದು ಬಿಜೆಪಿಯ ನರೇಂದ್ರ ಮೋದಿ ಸರಕಾರ ಬಹು ದೊಡ್ಡ ಸುಳ್ಳು ಹಬ್ಬಿಸಿ ವಕ್ಫ್ ಕಾಯ್ದೆ ಜಾರಿ ಮಾಡಲು ಮುಂದಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ಹಿಂದೂ ಮುಸ್ಲಿಂ ಸಮುದಾಯವನ್ನು ವಿಭಜಿಸಿ, ದಲಿತ ಹಾಗೂ ಮುಸ್ಲಿಮರನ್ನು ದೂರ ತಳ್ಳಿದೆ. ದೇಶದ 9 ಲಕ್ಷ ಎಕರೆಯಷ್ಟು
ಸಮುದಾಯಕ್ಕೆ ಸೇರಿದ ಆಸ್ತಿಯನ್ನು ಕಬಳಿಸುವ ಹುನ್ನಾರದಿಂದ ವಕ್ಫ್ ಕಾಯ್ದೆ ಜಾರಿಗೊಳಿಸಿದೆ” ಎಂದು ಆರೋಪಿಸಿದರು.

ಬೌದ್ಧರ ಸಂವಿಧಾನಿಕ ಹಕ್ಕುಗಳನ್ನು ನಿರಾಕರಿಸುವ ಬೋಧಗಯಾ ಟೆಂಪಲ್ (ಬಿ. ಟಿ ಆಕ್ಟ್ 1949) ಕುರಿತು
ಬುದ್ಧ ಘೋಷ ದೇವಿಂದ್ರ ಹೆಗಡೆ ವಿಶೇಷ ಉಪನ್ಯಾಸ ನೀಡಿದರು.
“ಬುದ್ಧ ಈ ಜಗತ್ತಿನ ಕೇಂದ್ರ ಬಿಂದು ಆಗಿದ್ದು, ಮೋದಿಯವರು ಭಾರತ ಬಿಟ್ಟು ಹೊರಗಡೆ ಹೋದಾಗ ನಾನು ಬುದ್ದನ ನಾಡಿನಿಂದ ಬಂದಿರುವೆನೆಂದು ಹೇಳುತ್ತಾರೆ ಹಾಗೆ ಹೇಳುವುದರ ಮೂಲಕ ಬುದ್ಧನ ನೆಲಕ್ಕೆ ಎಷ್ಟು ಅಪಮಾನ ಮಾಡುತ್ತಿದ್ದಾರೆ ಎಂಬುವುದು ನಾವು ಅರ್ಥ ಮಾಡಿಕೊಳ್ಳಬೇಕ್ಕಾಗಿದೆ ಎಂದರು.
“ಬುದ್ಧನ ಜನ್ಮ ಭೂಮಿ ಲುಂಬಿನಿ, ಜ್ಞಾನೋದಯ ಪಡೆದ ಸ್ಥಳ ಬುದ್ಧಗಯಾ ಮತ್ತು ಮೊದಲ ದಮ್ಮ ಪ್ರಚಾರ ಮಾಡಿರುವ ಮಾಡಿದ ಸ್ಥಳವಾದ ಶಾರನಾಥ, ಪರಿ ನಿರ್ವಾಣ ಹೊಂದಿದ ಕುಶನಾಳಾ” ಜಗತ್ತಿನ ಬೌದ್ಧರಿಗೆ ಈ ನಾಲ್ಕು ಕ್ಷೇತ್ರಗಳು ಪರಮ ಪವಿತ್ರವಾದುದು ಎಂದು ತಿಳಿಸಿದರು.
ಬಿ. ಟಿ ಆ್ಯಕ್ಟ್ 1949 ಸಂವಿಧಾನ ಮೂಲ ಸಿದ್ಧಾಂತ ಅರ್ಟಿಕಲ್ 13, 25, 26,29 ಈ ಕಾಯ್ದೆಗಳನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಬುದ್ಧಗಯಾ ಸಂಪೂರ್ಣ ಬೌದ್ಧರಿಗೆ ನೀಡಬೇಕೆಂದು ಆಗ್ರಹಿಸಿ 2011ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಹಾಕಿದ್ದೇವೆ. ಇವತ್ತಿಗೂ ಕೂಡಾ ಅದು ಇತ್ಯರ್ಥವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಹಾಗಾಗಿ ಅಂಬೇಡ್ಕರ್ ವಾದಿಗಳು, ಈ ದೇಶದ ಸಮಸ್ತ ಸಂವಿಧಾನವಾದಿ, ಪ್ರಜಾಪ್ರಭುತ್ವವಾದಿ, ಎಲ್ಲರೂ ಕೂಡಾ ಈ ಹೋರಾಟಕ್ಕೆ ಕೈ ಜೋಡಿಸಿದರೆ ಮಾತ್ರ ಈ ದೇಶದ ಬೌದ್ಧರಿಗೆ ನ್ಯಾಯ ಸಿಗುತ್ತದೆಂದು” ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, “ಶೋಷಿತ ಶಕ್ತಿಗಳು ಒಗ್ಗೂಡಬೇಕು. ಬಾಯಿ ಚಪಲಕ್ಕಾಗಿ ಹಾಗೂ ರಾಜಕೀಯ ಸ್ವಾರ್ಥಕ್ಕಾಗಿ ಬಿಜೆಪಿಯ ಕೆಲ ಬುದ್ದಿಜೀವಿಗಳು ಧರ್ಮ ಹಾಗೂ ಜಾತಿಯಲ್ಲಿ ತಾರತಮ್ಯ ನೀತಿ ತರುವ ದುರುದ್ದೇಶದಿಂದ ಸಂವಿಧಾನ ಬದಲಾವಣೆ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ನಾವು ಇನ್ನಷ್ಟು ಗಟ್ಟಿ ಹಾಗೂ ಜಾಗೃತಗೊಳ್ಳಬೇಕಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ನೀಲಕಂಠ ಬಡಿಗೇರ, ಪ್ರಾಸ್ತಾವಿಕವಾಗಿ ಗೌರವ ಅಧ್ಯಕ್ಷ ಗಿರೆಪ್ಪಗೌಡ ಬಾಣತಿಹಾಳ ಮಾತನಾಡಿದರು.
ಕಾರ್ಯಕ್ರಮವನ್ನು ವೆಂಕಟೇಶ ಸ್ವಾಗತಿಸಿದರು, ರಾಯಪ್ಪ ಸಾಲಿಮನಿ ನಿರೂಪಿಸಿದರು. ಮಹಾದೇವ ಡಿಗ್ಗಿ ವಂದಿಸಿದರು.
ಈ ವೇಳೆ ವೇದಿಕೆ ಮೇಲೆ ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ, ಶರಣಪ್ಪ ಸಲಾದಪುರ, ಶಿವಮಹಾಂತ ಚಂದಾಪುರ, ರುದ್ರಪ್ಪ ಹುಲಿಮನಿ, ಶಾಂತಪ್ಪ ಕಟ್ಟಮರಾಯಪ್ಪ ಸಾಲಿಮನಿ, ವೆಂಕಟೇಶ ಅಲೂರ, ಮಹಾದೇವಪ್ಪ ಸಾಲಿಮನಿ, ವಕೀಲರ ಸಂಘದ ಅಧ್ಯಕ್ಷ ಯೂಸೂಫ್ ಸಿದ್ದಕಿ, ವಾಸುದೇವ ಕಟ್ಟಿಮನಿ, ಅಯ್ಯಣ್ಣ ಕನ್ಯಾಕೊಳ್ಳುರ, ಮರೆಯಪ್ಪ ಹಳ್ಳಿ, ಸಯ್ಯದ ಸೈಫುದ್ದೀನ್ ಖಾದ್ರಿ, ಸಯ್ಯದ ಖಾಲೀದ್, ಮಹಾದೇವ ದಿಗ್ಗಿ, ರವೀಂದ್ರನಾಥ ಹೊಸಮನಿ, ಮಾನಸಿಂಗ್ ಚವ್ಹಾಣ, ಗೌಡಪ್ಪಗೌಡ ಅಲ್ಪಾಳ, ಮರೆಪ್ಪ ಪ್ಯಾಟಿ, ಮರೆಪ್ಪ ಚಟ್ಟೇಕರ್, ಶಿವಶರಣ ತಳವಾರ, ಮಲ್ಲಣ್ಣ ಗೋಗಿ, ತಾಯಮ್ಮ ದೋರನಹಳ್ಳಿ,
ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿವು ಪೋತೆ, ಮರೆಪ್ಪ ಜಾಲಿಮಂಚಿ, ಸೈದಪ್ಪ ಕೋಲುರ್, ಬಸವರಾಜ್ ಗುಡಿಮನಿ, ಬಸವರಾಜ್ ಚಿಪ್ಪರ್, ಶೇಖರ್ ಬಡಿಗೇರ, ವಿಶ್ವ ನಾಟೇಕರ್, ಶರಣು ದೋರನಹಳ್ಳಿ, ಲಕ್ಷ್ಮಣ ಹಳ್ಳಿಸಾಗರ್, ಸಾಯಿಬಣ್ಣ್ ಪುರ್ಲೆ, ಅಮ್ಜಾದ್ ಹುಸೇನ್, ವಿಶ್ವ ಬಿರಬೂರ್, ಅಯ್ಯಪ್ಪ ವಡಗೇರಾ, ಮರಲಿಂಗ ಹಿರೇಮಠ, ನಿಂಗಪ್ಪ ದೋರನಹಳ್ಳಿ, ಬಲಭೀಮ್, ಮಲ್ಲಿಕಾರ್ಜುನ ಗೌಡ ಶಾಹಬಾದ್, ಇನ್ನಿತರರು ಭಾಗವಹಿಸಿದರು.