ಧರ್ಮಸ್ಥಳದಲ್ಲಿ ಅಕ್ರಮವಾಗಿ ಹೂತು ಹಾಕಲಾಗಿದೆ ಎನ್ನಲಾದ ಶವಗಳನ್ನು ಉತ್ಖನನ ನಡೆಸುವ ಪ್ರಕ್ರಿಯೆಯನ್ನು ವಿಶೇಷ ತನಿಖಾ ತಂಡ ಮುಂದುವರಿಸುತ್ತಲೇ ಇದೆ. ಈ ನಡುವೆ ಧರ್ಮಸ್ಥಳ ಸುತ್ತಮುತ್ತ ನಡೆಯುತ್ತಿರುವ ಬೆಳವಣಿಗೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಸಂಸದ ಜನಾರ್ದನ ಪೂಜಾರಿ ನೀಡಿರುವ ಹೇಳಿಕೆಯು ಸದ್ಯ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಎಂಬಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ ಮುದ್ದುಕೃಷ್ಣ ಸಮಾರಂಭದಲ್ಲಿ ಮಾತನಾಡಿದ್ದ ಜನಾರ್ದನ ಪೂಜಾರಿ, “ಧರ್ಮಸ್ಥಳದ ಹೆಸರು ಹಾಳು ಮಾಡಲಾಗುತ್ತಿದೆ. ಧರ್ಮಸ್ಥಳದ ವಠಾರವನ್ನು ಎಸ್ಐಟಿ ಅಗೆಯುತ್ತಿದೆ. ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ಮೋದಿಯವರು ಏನು ಮಾಡುತ್ತಿದ್ದಾರೆ ಮುಖ್ಯಮಂತ್ರಿಯವರೇ ನಾಚಿಕೆಯಾಗುತ್ತಿದೆ ನನಗೆ, ಒಂದು ದೇವಸ್ಥಾನವನ್ನು ಹಾಳುಗೆಡವುತ್ತಿರುವಾಗ ಮಾತನಾಡುವ ಧೈರ್ಯ ಇಲ್ಲವೇ ನಿಮಗೆ? ನಾನು ಇದರ ವಿರುದ್ಧ ಧ್ವನಿ ಎತ್ತುತ್ತೇನೆ. ನನ್ನನ್ನು ಬೇಕಾದರೆ ಜೈಲಿಗೆ ಹಾಕಿ. ಆದರೆ ಧರ್ಮಸ್ಥಳದ ಹೆಸರು ಹಾಳು ಮಾಡಲು ನಾನು ಬಿಡುವುದಿಲ್ಲ. ಮುಸ್ಲಿಂ-ಕ್ರಿಶ್ಚಿಯನ್ ಸಮುದಾಯದಲ್ಲಿ ಸತ್ತ ಮನುಷ್ಯರ ಮೃತದೇಹವನ್ನು ಮಸೀದಿ- ಚರ್ಚ್ ಸಮೀಪವೇ ಹೂಳಲಾಗುತ್ತದೆ. ಎಸ್ಐಟಿಯವರು ಧರ್ಮಸ್ಥಳದಲ್ಲಿ ಮೃತದೇಹದ ಹುಡುಕಾಟ ನಡೆಸುತ್ತಿದ್ದರೂ, ಆದರೆ ಏನೂ ಸಿಗಲಿಲ್ಲ. ಏನೂ ಸಿಗುವುದೂ ಇಲ್ಲ. ವೀರೇಂದ್ರ ಹೆಗ್ಗಡೆಯವರೇ ಹೆದರದಿರಿ, ನಿಮ್ಮೊಂದಿಗೆ ನಾವಿದ್ದೇವೆ. ಕುದ್ರೋಳಿ ದೇವಸ್ಥಾನವಿದೆ. ಧೈರ್ಯದಿಂದ ಇದನ್ನು ಎದುರಿಸಿ” ಎಂದು ಎಂದು ಬೆಂಬಲ ನೀಡಿದ್ದಾರೆ.
ಧರ್ಮಸ್ಥಳ ದೇವಸ್ಥಾನ, ವೀರೇಂದ್ರ ಹೆಗ್ಗಡೆಯವರ ಪರವಾಗಿ ಹೇಳಿಕೆ ನೀಡುವ ಭರದಲ್ಲಿ ಮುಸ್ಲಿಮರ ಮಸೀದಿ ಹಾಗೂ ಕ್ರಿಶ್ಚಿಯನ್ನರ ಚರ್ಚ್ ಅನ್ನೂ ಕೂಡ ಈಗ ಎಳೆದು ತಂದಿರುವುದು ಚರ್ಚೆಗೆ ವೇದಿಕೆಯೊದಗಿಸಿದೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ, “ಚುನಾವಣಾ ರಾಜಕಾರಣದಿಂದ ನಿವೃತ್ತರಾದ ತರುವಾಯ, ಕಳೆದ ಏಳೆಂಟು ವರ್ಷಗಳ ಅವಧಿಯಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ಜನಾರ್ದನ ಪೂಜಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದೇ ಇಲ್ಲ. ಕುದ್ರೋಳಿ ಕ್ಷೇತ್ರದ ಕಾರ್ಯಕ್ರಮಗಳಲ್ಲಷ್ಟೆ ಕಾಣಿಸಿಕೊಳ್ಳುತ್ತಿದ್ದರು. ಈ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ ಹಲವು ಮತೀಯ ದ್ವೇಷದ ಕೊಲೆಗಳು, ಹಿಂಸಾಚಾರಗಳು, ಅಹಿತಕರ ಘಟನೆಗಳು ಸರಣಿಯಾಗಿ ಘಟಿಸಿದ್ದವು. ಜನ ಜೀವನ ಪೂರ್ತಿ ಅಸ್ತವ್ಯಸ್ತಗೊಂಡಿದ್ದವು. ಈ ವರ್ಷದಲ್ಲಿ ನಡೆದ ಮತೀಯ ದ್ವೇಷದ ಹತ್ಯೆಗಳು ಜನತೆಯನ್ನು ಭೀತಿಯಲ್ಲಿ ಕೆಡವಿತ್ತು. ರಾಜಕೀಯ ತಲ್ಲಣ ಸೃಷ್ಟಿಸಿತ್ತು. ಆಗೆಲ್ಲ, ಕನಿಷ್ಠ ಪಕ್ಷ ‘ಶಾಂತಿ ಕಾಪಾಡಿ’ ಎಂಬ ಸಾಮಾನ್ಯ ಹೇಳಿಕೆಯನ್ನೂ ಜನಾರ್ದನ ಪೂಜಾರಿಯವರು ನೀಡಿರಲಿಲ್ಲ” ಎಂದು ತಿಳಿಸಿದ್ದಾರೆ.

“ಅಂತಹ ಜನಾರ್ದನ ಪೂಜಾರಿಯವರು, ಈಗ ಏಕಾಏಕಿ ಸಣ್ಣ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿರುವುದು, ಅಲ್ಲಿ ಬಹಳ ಗಟ್ಟಿ ಧ್ವನಿಯಲ್ಲಿ ಧರ್ಮಸ್ಥಳದ ವಿಷಯಕ್ಕೆ ಸಂಬಂಧಿಸಿ ಅಲ್ಲಿನ ಆಡಳಿತಗಾರರ ಪರವಾಗಿ ಮಾತಾಡಿರುವುದು, ತನ್ನ ರಾಜಕೀಯ, ಸೈದ್ದಾಂತಿಕ ನಿಲುವುಗಳಿಗೆ ವ್ಯತಿರಿಕ್ತವಾಗಿ ಮಸೀದಿ, ಚರ್ಚ್‌ಗಳನ್ನು ಎಳೆದು ತಂದಿರುವುದು ಜನತೆಯನ್ನು ಅಚ್ಚರಿಯಲ್ಲಿ ಕೆಡವಿದೆ. ಇದರ ಹಿಂದಿನ ಮರ್ಮ, ಶಕ್ತಿಗಳ ಕುರಿತು ಚರ್ಚೆ ಶುರುವಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಕಾರ್ಟೂನಿಸ್ಟ್, ಪತ್ರಕರ್ತರಾದ ದಿನೇಶ್ ಕುಕ್ಕುಜಡ್ಕ, “ಈಗ ನಿಜಕ್ಕೂ ನೆನಪಾಗುವುದು ದಿವಂಗತ ವಸಂತ ಬಂಗೇರರಂಥ ನಿಜವಾದ ದಿಟ್ಟ ಜನನಾಯಕರು. ಆ ಪಕ್ಷದಿಂದ ಅತ್ಯಂತ ತಿರಸ್ಕೃತರಂತೆ, ಅಂಡರ್ ರೇಟೆಡ್ ರಾಜಕಾರಣಿ ಎಂಬಂತೆ ನಡೆಸಲ್ಪಟ್ಟವರು. ಈ ಪೂಜಾರಿ, ಆಸ್ಕರ್… ಮುಂತಾದ ಕಿಚನ್ ಕ್ಯಾಬಿನೆಟ್‌ಗಳ ಈ ವರ್ತನೆಗೆ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ದೊಡ್ಡ ಪುಟಗಳೇ ಮೀಸಲಾಗಿವೆ. ಚಾಲ್ತಿಯಲ್ಲಿರುವಾಗ ಮಾಡಿದ ಒಳ್ಳೊಳ್ಳೆಯ ಜನೋಪಯೋಗಿ ಕಾರ್ಯಗಳು ನೀರಲ್ಲಿಟ್ಟ ಹೋಮದಂತಾಗುವುದು, ಹೀಗೆ ಕೊನೆಗಾಲದಲ್ಲಿ ನಡೆದುಕೊಳ್ಳುವ ಅರುಳುಮರುಳು ರೀತಿ ನೀತಿಗಳಿಂದ” ಎಂದು ತಿಳಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಸುದೀರ್ಘವಾದ ಪೋಸ್ಟ್ ಹಾಕಿರವ ಸನ್ಮಾರ್ಗ ಪತ್ರಿಕೆಯ ಸಂಪಾದಕ ಏ ಕೆ ಕುಕ್ಕಿಲ, “ಜನಾರ್ದನ ಪೂಜಾರಿಯವರು ಈ ಮೊದಲು ಹೀಗೆ ಮಾತಾಡಿದ್ದು ನನಗೆ ಗೊತ್ತಿಲ್ಲ. ಧರ್ಮಸ್ಥಳ ಪ್ರಕರಣದಲ್ಲಿ ಅವರು ಮುಸ್ಲಿಮರನ್ನು ಅನಗತ್ಯವಾಗಿ ಎಳೆದು ತಂದಿದ್ದಾರೆ. ಮಸೀದಿಯಲ್ಲಿ ಶವ ಹೂತಿಡಲ್ವಾ.. ಎಂದು ಮಂಗಳೂರು ಸಮೀಪದ ತೊಕ್ಕೊಟ್ಟಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶ್ನಿಸಿದ್ದಾರೆ. ಅಂದಹಾಗೆ, ಧರ್ಮಸ್ಥಳ ಪ್ರಕರಣಕ್ಕೂ ಮಸೀದಿಗೂ ಏನು ಸಂಬಂಧ? ಧರ್ಮಸ್ಥಳ ಪ್ರಕರಣದ ಬಗ್ಗೆ ಮಾತಾಡುವಾಗ ಮಸೀದಿಯನ್ನು ಏಕೆ ಎಳೆದು ತರಲಾಗುತ್ತದೆ. ಮುಸ್ಲಿಮರನ್ನು ಎಳೆದು ತರದೇ ಪ್ರಕರಣವೊಂದರ ಮೇಲೆ ಮಾತಾಡುವುದಕ್ಕೆ ಸಾಧ್ಯ ಇಲ್ಲವಾ? ನಿಮಗೆ ಗೊತ್ತಿರಲಿ” ಎಂದು ತಿಳಿಸಿದ್ದಾರೆ.
“ಮಸೀದಿಯಲ್ಲಿ ಶವಗಳನ್ನು ಯಾರೂ ಹೂಳುವುದಿಲ್ಲ. ಮಸೀದಿಗೆ ಅದರದೇ ಆದ ದಫನ ಭೂಮಿ ಇದೆ. ಅಲ್ಲಿ ಹೂಳ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಸುಮಾರು 4 ಬಾರಿ ಪ್ರತಿನಿಧಿಸಿದ ಜನಾರ್ದನ ಪೂಜಾರಿಯವರಿಗೆ ಇವೆಲ್ಲ ಗೊತ್ತಿಲ್ಲವೇ? ಮಸೀದಿಯ ದಫನ ಭೂಮಿಯಲ್ಲಿ ಹೂತ ಈ ಶವಗಳೆಲ್ಲ ಅಕ್ರಮವಾದದ್ದು ಎಂದು ಅವರು ಹೇಳುತ್ತಿದ್ದಾರೆಯೇ? ಅಂಥ ಆರೋಪಗಳು ಯಾವಾಗ ಬಂದಿದೆ? ಎಲ್ಲಿ ಬಂದಿದೆ? ಆರೋಪಗಳೇ ಇಲ್ಲದ ಮತ್ತು ಕಾನೂನು ಪ್ರಕಾರವಾಗಿ ದಫನ ಭೂಮಿಯಲ್ಲಿ ನಡೆಯುತ್ತಿರುವ ಶವ ಹೂಳುವಿಕೆಯನ್ನು ಸಂದೇಹದ ಮೊನೆಯಲ್ಲಿ ಅವರು ತೂಗಿಬಿಟ್ಟದ್ದೇಕೆ? ಧರ್ಮಸ್ಥಳ ಪ್ರಕರಣದಲ್ಲಿ ಅವರಿಗೆ ನಿರ್ದಿಷ್ಟ ಗುಂಪಿನ ಪರ ನಿಲ್ಲುವ ಸ್ವಾತಂತ್ರ್ಯ ಇದೆ. ಅದನ್ನವರು ಮಾಡಲಿ. ಆದರೆ ತನ್ನ ನಿಲುವನ್ನು ಸಮರ್ಥಿಸುವುದಕ್ಕಾಗಿ ಮಸೀದಿ ವಠಾರದ ದಫನ ಭೂಮಿಯಲ್ಲಿ ಹೂಳುವ ಶವಗಳನ್ನು ವಿವಾದಾಸ್ಪದ ಎಂಬಂತೆ ಬಿಂಬಿಸಿದ್ದೇಕೆ? ಅವರಲ್ಲಿ ಈ ಮಾತನ್ನು ಹೇಳಿಸಿದವರು ಯಾರು? ಸ್ಮಶಾನವೇ ಅಲ್ಲದ ಜಾಗದಲ್ಲಿ ಶವಗಳನ್ನು ಹೂಳಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಬಗ್ಗೆ ಮಾತಾಡುವಾಗ ಕಾನೂನು ಬದ್ಧವಾಗಿ ಮಸೀದಿ ವಠಾರದಲ್ಲಿ ಇರುವ ದಫನ ಭೂಮಿಯಲ್ಲಿ ಹೂಳಲಾದ ಶವಗಳ ಬಗ್ಗೆ ಮಾತಾಡುವುದು ಅವಿವೇಕ ಅನ್ನೋದಕ್ಕಿಂತಲೂ ಇದರ ಹಿಂದೆ ಸಂಚಿದೆ ಎಂದೇ ಅನಿಸುತ್ತದೆ” ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ | ‘ಪದ್ಮಲತಾ ಕಳೇಬರ ಹೊರತೆಗೆದು ಮರುತನಿಖೆ ನಡೆಸಿ’; SITಗೆ ಸಹೋದರಿ ಇಂದ್ರಾವತಿ ದೂರು
ಇನ್ನು ಪೂಜಾರಿ ಹೇಳಿಕೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಉದ್ಯಮಿ ಅಬ್ದುಲ್ಲಾ ಮದುಮೂಲೆ, “ಇಲ್ಲಿ ಜನಾರ್ದನ ಪೂಜಾರಿಯವರು ಅರ್ಧ ಸತ್ಯ, ಅರ್ಧ ಅಸತ್ಯವನ್ನು ಹೇಳಿದ್ದಾರೆ. ದೇಗುಲಗಳ ಬಳಿ ಶವ ಸಂಸ್ಕಾರ ಮಾಡುವುದು ಕೇವಲ ಮುಸಲ್ಮಾನರ ಮತ್ತು ಕ್ರಿಶ್ಚಿಯನ್ಸ್‌ಗಳ ಸಂಸ್ಕೃತಿ. ಕೇರಳ, ಕರಾವಳಿ ಕರ್ನಾಟಕದ ಮುಸಲ್ಮಾನರ ದಫನ ಭೂಮಿಗಳು ಮಸೀದಿಯ ಕಾಂಪೌಂಡಿನ ಒಳಗೆ ಇರುತ್ತವೆ. ಆದರೆ ಹಿಂದೂ ಸಂಸ್ಕೃತಿ ಅದಲ್ಲ. ಕೆಲವರು ತಮ್ಮ ತಮ್ಮ ಜಾಗಗಳಲ್ಲೇ ಸುಡುತ್ತಾರೆ , ಇನ್ನು ಕೆಲವರು ದೂರದಲ್ಲಿ ಊರ ಹೊರಗಿರುವ ಸ್ನಶಾನಗಳಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ. ದೇವಸ್ಥಾನಗಳಲ್ಲಿ ಹೇಗೆ ಸಾಧ್ಯ? ಅಲ್ಲಿಯ ಮಡಿವಂತ ಪೂಜಾರಿಗಳು ಅದಕ್ಕೆ ಬಿಡುತ್ತಾರೆಯೇ? ಅದೂ ಕೂಡಾ ದಲಿತ ಶವಗಳನ್ನು? ಹಿಂದೂಗಳಲ್ಲಿ ಕೇವಲ ಕೆಲವೇ ದಲಿತ ಪಂಗಡಗಳು ಶವವನ್ನು ಹೂಳುತ್ತಾರೆ ಆದರೆ ದೇವಸ್ಥಾನದ ಪಕ್ಕದಲ್ಲೆಲ್ಲೂ ಅಲ್ಲ” ಎಂದು ತಿಳಿಸಿದ್ದಾರೆ.
“ಜನಾರ್ದನ ಪೂಜಾರಿಯವರಿಗೆ ಅಷ್ಟು ನೆನಪಿನ ಶಕ್ತಿ ಇಲ್ಲ. ಹಾಗಾಗಿ ಏನಾದರೂ ಮಾತಾಡಿದರೆ ಬರೆದುಕೊಟ್ಟಿರುವ ಚೀಟಿಯಲ್ಲಿರುವುದಷ್ಟನ್ನೇ… ಹೀಗಿರುವಾಗ ದೇವಕಾರ್ಯದ ವೇದಿಕೆಯಲ್ಲಿ ಬರೆದುಕೊಟ್ಟ ಚೀಟಿಯನ್ನು ಕಿಸೆಯಲ್ಲೇ ಬಿಟ್ಟು ಹೀಗೆಲ್ಲ ಮಾತಾಡಿದರೆಂದರೆ ಇದರ ಹಿಂದೆ ಯಾರೋ ಇದ್ದಾರೆ ಎಂಬ ಗುಮಾನಿ ಎಲ್ಲರಂತೆ ನನಗೂ ಇದೆ” ಎಂದು ಕರಾವಳಿಯ ಸಾಮಾಜಿಕ ಚಿಂತಕಿ ಗುಲಾಬಿ ಬಿಳಿಮಳೆ ತಿಳಿಸಿದ್ದಾರೆ.
ವಿಲ್ ಫ್ರೆಡ್ ಕೊಕ್ಕಡ ಎಂಬುವವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, “ಜನಾರ್ದನ ಪೂಜಾರಿಗಳು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಿಗೆ ಬೆಂಬಲ ಸೂಚಿಸುವ ಭರದಲ್ಲಿ ಸ್ವಲ್ಪ ಅಧಿಕ ಪ್ರಸಂಗ ಮಾತನಾಡಿದ್ದಾರೆ. ಅದು ಅವರ ಹವ್ಯಾಸ. ಆದುದರಿಂದಲೇ ನಾಲ್ಕೈದು ಬಾರಿ ಸೋತು ಸುಣ್ಣ ಆಗಿದ್ದಾರೆ. ವಯಸ್ಸಾದರೆ ಬುದ್ದಿ ಬರುತ್ತದೆ ಎಂದು ಹೇಳುತ್ತಾರೆ. ಆದರೆ ಇವರಿಗೆ ಅಂದು ಇಲ್ಲ, ಇಂದು ಇಲ್ಲ. ಧರ್ಮಸ್ಥಳದಲ್ಲಿ ಮಾತ್ರ ಅಲ್ಲ ಮಸೀದಿ, ಚರ್ಚ್ ಅಲ್ಲಿ ಕೂಡ ಶವ ಹೂತಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಸಂತ ಶ್ರೇಷ್ಠ ನಾರಾಯಣ ಗುರುಗಳ ಅನುಯಾಯಿ ಆಗಿದ್ದು ಕೂಡ ಇಂಥಾ ಮಾತು ಹೇಳಿದ್ದು ತುಂಬಾ ಖೇದಕರ ಮಾತ್ರ ಅಲ್ಲ ಹಾಸ್ಯಾಸ್ಪದ. ಸಣ್ಣ ಮಕ್ಕಳು ಕೂಡ ಇಂತಹ ಹೇಳಿಕೆ ನೀಡಲಾರರು” ಎಂದು ಬೇಸರಿಸಿದ್ದಾರೆ.
“ಧರ್ಮಸ್ಥಳದಲ್ಲಿ ಶವ ಹೂತದ್ದಕ್ಕೂ, ಮಸೀದಿ ಚರ್ಚ್ ಅಲ್ಲಿ ಹೂತದ್ದಕ್ಕೂ ಏನು ಸಂಬಂಧ. ಮಸೀದಿ, ಚರ್ಚ್ ಅಲ್ಲಿ ಹೂತ ಶವಗಳನ್ನು ರಾಜ ಮರ್ಯಾದೆಯೊಂದಿಗೆ ಸ್ನಾನ ಮಾಡಿಸಿ, ಅಂತ್ಯ ಕ್ರಿಯಾ ಕರ್ಮ ಮಾಡಿ ಹೂತದ್ದು. ಇದು ಹಾಗಲ್ಲ ಎಂಬ ಸಾಮಾನ್ಯ ಜ್ಞಾನ ಇಲ್ಲ. ಸಾಯುವ ಕಾಲಕ್ಕೆ ನರಿ ಪೇಟೆಗೆ ಬಂತು ಎಂಬ ಗಾದೆಯಂತೆ ಆಯಿತು. ನೀವು ಹೆಗ್ಗಡೆ ಯವರ ಬಗ್ಗೆ ಒಳ್ಳೆಯ ಮಾತು ಆಡಿ, ಸಪೋರ್ಟ್ ಮಾಡಿ. ಆದ್ರೆ ಈ ಪ್ರಾಯದಲ್ಲಿ ಇಂತಹ ಕೊಳಕು ನಾಲಗೆ ಹೊರಗೆ ಹಾಕಬಾರದು. ಇದು ಸಮಾಜಕ್ಕೆ ನಾಥ ಹರಡುವುದು. ನಿಮಗೆ ನೆನಪಿರಲಿಕ್ಕಿಲ್ಲ. ಅಂದು ನೀವು, ‘ಬ್ಯಾರಿಲು ಬಜಿಲ್-ಬೆಲ್ಲ ಕೊರುಂಡ ಓಟು ಪಾಡುವೆರ್ ಹೇಳಿದ್ದೀರಿ. ಅಂದಿನಿಂದ ನಿಮ್ಮ ರಾಜಕೀಯ ಅಂತ್ಯವಾಗಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಜನಾರ್ಧನ್ ಪೂಜಾರಿ ಮಾತಿಗೆ ಬೆಲೆ ಕೊಡಬೇಕಿಲ್ಲ. ಏಕೆಂದರೆ ಇ ಅವಿವೇಕಿ ಹಿಂದೆ ವೀರೇಂದ್ರ ಹೆಗಡೆ ದುಡ್ಡಿನಲ್ಲಿ ಲೋನ್ ಮೇಳ ಮಾಡಿ ಸರ್ಕಾರಕ್ಕೆ ಸಾಕಷ್ಟು ನಸ್ಟ ಮಾಡಿದ ಪುಣ್ಯಾತ್ಮ. ಈಗ ಹೆಗಡೆ ಋಣ ತೀರಿಸಲು ಇ ತರ ಹೇಳಿಕೆಗಳನ್ನು ಕೊಡುತ್ತಿದ್ದಾನೆ. ಬಹುಶಃ ಇಂತಹ ಅವಿವೇಕಿ ನಾಯರಿಂದಲೇ ಕಾಂಗ್ರೆಸ್ ಇ ಗತಿ ಬಂದಿದೆ.