ತುಂಬಿದ ಹಳ್ಳದಲ್ಲಿ ಮೀನು ಹಿಡಿಯಲು ಹೋಗಿದ್ದಾಗ ಇಬ್ಬರು ಯುವಕರು ನೀರಿನಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾದನರಸ ಗ್ರಾಮದಲ್ಲಿ ನಡೆದಿದೆ.
ಕಾಣೆಯಾದವರನ್ನು ಮಾದನಸರ ಗ್ರಾಮದ ಒಂದೇ ಕುಟುಂಬದ ನಿವಾಸಿಗಳಾಗಿರುವ ಮಹ್ಮದ್ ರಫೀಕ್ ಸಾಬ್ ಸೈಯದ್(27) ಮತ್ತು ಮಹ್ಮದ್ ಹನೀಫ್ ಸಾಬ್ ಸೈಯದ್(25) ಎಂದು ಗುರುತಿಸಲಾಗಿದೆ.
ಭಾನುವಾರ ಬೆಳಿಗ್ಗೆ ಸುಮಾರು ಎಂಟು ಜನರು ಒಟ್ಟಾಗಿ ಕವಲಗಿ ಹಳ್ಳ ದಾಟಿ ಬೇಡ್ತಿ ಹಳ್ಳಕ್ಕೆ ಮೀನು ಹಿಡಿಯಲು ಹೋಗಿದ್ದರು. ಸಂಜೆ 5:30ರ ಸುಮಾರಿಗೆ ಮೀನು ಹಿಡಿದು ಹಿಂದಿರುಗಿ ಬರುವಾಗ ಕವಲಗಿ ಹಳ್ಳವನ್ನು ದಾಟುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಈ ಸುದ್ದಿ ಓದಿದ್ದೀರಾ? ಮಳೆ | ಹಾವೇರಿ ಗದಗ ಸೇರಿದಂತೆ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ
ಹಳ್ಳದ ಮಧ್ಯಭಾಗದಲ್ಲಿ ಬರುತ್ತಿದ್ದಾಗ ಇದ್ದಕ್ಕಿದ್ದಂತೆ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಮಹ್ಮದ್ ರಫೀಕ್ ಮತ್ತು ಮಹ್ಮದ್ ಹನೀಫ್ ನೀರಿನ ರಭಸಕ್ಕೆ ಕೊಚ್ಚಿಹೋಗಿರುವುದಾಗಿ ದೂರಿನಲ್ಲಿ ದಾಖಲಾಗಿದೆ.
ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳ ಜತೆ ಸ್ಥಳಕ್ಕೆ ಭೇಟಿ ನೀಡಿ ನಾಪತ್ತೆಯಾದ ಯುವಕರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.