ನುಡಿದಂತೆ ನಡೆಯದ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ನೇತೃತ್ವದಲ್ಲಿ ಆಗಸ್ಟ್. 12 ರಿಂದ 14 ರ ವರೆಗೆ ಆಶಾ ಕಾರ್ಯಕರ್ತರು ರಾಜ್ಯ ವ್ಯಾಪಿ ಮೂರು ದಿನಗಳ ಅಹೋರಾತ್ರಿ ಧರಣಿ ನಡೆಸಲಿದ್ದಾರೆ.
2025 ಫೆಬ್ರವರಿ ತಿಂಗಳಿನಲ್ಲಿ ಆಶಾ ಕಾರ್ಯಕರ್ತರು ಗೌರವಧನ ಹೆಚ್ಚಿಸುವಂತೆ ಆಗ್ರಹಿಸಿ ನಾಲ್ಕು ದಿನಗಳ ಅಹೋರಾತ್ರಿ ಧರಣಿಯನ್ನು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಸಿದ್ದರು. ರಾಜ್ಯ ಸರ್ಕಾರ ಮದ್ಯ ಪ್ರವೇಶಿಸಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸಂಧಾನ ನಡೆಸಿ ₹10000 ರೂಪಾಯಿ ಗೌರವ ಧನ ಹಾಗೂ ಬಜೆಟ್ ಮಂಡನೆ ವೇಳೆ ಒಂದು ಸಾವಿರ ಹೆಚ್ಚಿಸುವುದರ ಜೊತೆಗೆ ಕಳೆದ ಏಪ್ರಿಲ್ ತಿಂಗಳಿಂದಲೇ ಜಾರಿ ಮಾಡುವುದಾಗಿ ಘೋಷಿಸಿದ್ದರು.

ಆದರೇ, ಆಗಿದ್ದೇನು? ಆಶಾ ಕಾರ್ಯಕರ್ತರ ಕೈ ಹಿಡಿದ ಗ್ಯಾರೆಂಟಿ ಸರ್ಕಾರ ಎಂತೇಳಿ ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ಬಿಟ್ಟಿ ಪ್ರಚಾರ ಗಿಟ್ಟಿಸಿ. ನಯವಾಗಿ, ನಾಜೂಕಾಗಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿತು. ಸರ್ಕಾರದ ಮಾತು ನಂಬಿದ ಸರಿ ಸುಮಾರು 42 ಸಾವಿರ ಆಶಾ ಕಾರ್ಯಕರ್ತರ ಬದುಕು ಅಡಕತ್ತರಿಯಲ್ಲಿ ಸಿಲುಕಿದ ಅಡಿಕೆಯಂತಾಗಿದೆ. ಕೆಲಸ ಮಾಡಲು ಆಗುತ್ತಿಲ್ಲ, ಇತ್ತ ಕಡೆ ಕೆಲಸ ಬಿಟ್ಟು ಬೇರೆ ಆಯ್ಕೆ ಮಾಡಲು ಆಗದಂತಹ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ಸರ್ಕಾರದ ಆಟ ಒಂದಾ, ಎರಡ! ಈಗ ಕಳೆದೊಂದು ವಾರದಿಂದ ಹೊಸ ವರಸೆ ಶುರು ಆಗಿದೆ. ಈಗಾಗಲೇ, ಆಶಾ ಕಾರ್ಯಕರ್ತರಿಗೆ 12 ಸಾವಿರಕ್ಕೂ ಹೆಚ್ಚು ಹಣ ಸೇರುತ್ತಿದೆ ಎಂದು. 10 ಸಾವಿರ ಗೌರವಧನಕ್ಕೆ ಹೋರಾಟ ಮಾಡುತ್ತಿರುವಾಗ ಎಲ್ಲಿಂದ 12 ಸಾವಿರಕ್ಕೂ ಅಧಿಕ ಹಣ ಬರುತ್ತಿದೆ. ಹೋರಾಟ ನಡೆಸಿದರಿಂದ ಸಂಸದರು ಧ್ವನಿ ಎತ್ತಿದ ಮೇಲೆ ಕೇಂದ್ರ ಸರ್ಕಾರ ₹1500 ಹೆಚ್ಚಿಸಿದೆ. ಈಗ ಇರುವ ₹7000 ರೂಪಾಯಿ ಜೊತೆಗೆ ಸೇರಿಸಿಕೊಂಡು ಈಗಾಗಲೇ ಕೊಡುತ್ತಿದ್ದೇವೆ ಎನ್ನುವ ನಯವಂಚಕತನ ಸರ್ಕಾರದ್ದಾಗಿದೆ. ಸರ್ಕಾರ ಹೇಳಿದಂತೆ ₹10000 ರೂಪಾಯಿ ಗೌರವಧನ, ಬಜೆಟ್ ನಳ್ಳಿ ₹1000 ರೂಪಾಯಿ ಜೊತೆಗೆ ಕೇಂದ್ರ ಸರ್ಕಾರದ ₹1500 ರೂಪಾಯಿಗಳು ಸೇರಿ ಒಟ್ಟು ₹12500 ರೂಪಾಯಿ ಪಾವತಿಯಾಗಬೇಕಿದೆ.

ಆಶಾ ಕಾರ್ಯಕರ್ತರು ಸರ್ಕಾರಕ್ಕೆ ಕೇಳಿದ್ದು ಕೊಟ್ಟ ಮಾತಿನಂತೆ ಗೌರವಧನ ಹೆಚ್ಚಿಸಿ ಎನ್ನುವುದು. ಆದರೇ, ಈಗ ಆಶಾ ಕಾರ್ಯಕರ್ತರಿಗೆ ಅಭದ್ರತೆ ಕಾಡಲು ಶುರುವಾಗಿದೆ. 17 ವರ್ಷಗಳಿಂದ ಕೆಲಸ ಮಾಡುತ್ತಿರುವವರ ಭವಿಷ್ಯ ಡೋಲಾಯಮಾನ. ಒಂದು ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಒಬ್ಬರು ಆಶಾ ಇರುತ್ತಾ ಇದ್ದರು. ಈಗ ಅದನ್ನು ಎರಡು ಸಾವಿರ ಜನಸಂಖ್ಯೆಗೆ ಏರಿಕೆ ಮಾಡಲಾಗಿದೆ. ಅಂದರೇ, ಸಾವಿರ ವ್ಯಾಪ್ತಿಯಲ್ಲಿ ಗ್ರಾಮಗಳು ಇಲ್ಲವಾದಾಗ ಅವರು ಹೇಳುವ ಕಡೆಗೆ ತೆರಳಬೇಕು. ಜೊತೆಗೆ ಪಟ್ಟಣ, ನಗರ ಪ್ರದೇಶಗಳಾದರೂ ಹೋಗಲೇಬೇಕು ಎನ್ನುವಂತೆ ಬಲವಂತ ಹೇರಿಕೆ.
ಹೊಸ ಜಾಗ, ಪ್ರಯಾಣ ಇದೆಲ್ಲಾ ನೋಡಿ ಕೆಲವರು ಕೆಲಸ ಬಿಡಬಹುದು ಇದೇ ಬೇಕಿರುವುದು ಈ ಸರ್ಕಾರಕ್ಕೆ. ಇದರ ಜೊತೆಗೆ ದಿನಕ್ಕೆ ಎರಡು ತಾಸು ಕೆಲಸ, ಯಾವ ವಿದ್ಯಾರ್ಹತೆ ಅಗತ್ಯವಿಲ್ಲ ಕೇವಲ ಬರೆಯಲು, ಓದಲು ಬಂದರೆ ಸಾಕು ಎಂದು ಕೆಲಸಕ್ಕೆ ತೆಗೆದುಕೊಂಡು ಈಗ ವಿದ್ಯಾರ್ಹತೆ ನಿಗದಿ ಮಾಡುವ ಯತ್ನ. ಜೊತೆ ಜೊತೆಗೆ ದಿನವಿಡೀ ದುಡಿಯಬೇಕು. ಆದರೇ, ಗೌರವಯುತವಾಗಿ ನಡೆಸಿಕೊಳ್ಳುವ ಯಾವ ಸವಲತ್ತು ಸಹ ಇಲ್ಲ.

ಎಲ್ಲಾ ಆನ್ಲೈನ್ ಮೊಲಕ ನಡೆಯಬೇಕು. ಮೊಬೈಲ್ ಕೊಡಿಸಲ್ಲ, ಡಾಟಾ ಇಲ್ಲ. ಅವರವರೇ ಅವರ ದುಡ್ಡಲ್ಲಿ ಡಾಟಾ ಹಾಕಿಸಿ, ಸ್ವಂತ ಮೊಬೈಲ್ ಬಳಸಬೇಕಾದ ಸಂದರ್ಭ. ಇದಷ್ಟೇ ಅಲ್ಲದೆ ಇತ್ತೀಚಿಗೆ 60 ವರ್ಷ ಮೇಲ್ಪಟ್ಟವರನ್ನು ಕೆಲಸದಿಂದ ಹೊರ ಹಾಕುವ ಪ್ರಕ್ರಿಯೆ ಆರಂಭವಾಗಿದೆ. ಇಷ್ಟು ವರ್ಷಗಳ ಕಾಲ ದುಡಿದು ಗೌರವಯುತವಾಗಿ ನಡೆಸಿಕೊಳ್ಳದೆ ಹೊರಗೆ ಹೋಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಇದೆಲ್ಲವೂ ಸರ್ಕಾರಗಳ ಹೊಣಗೇಡಿತನ.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ಖಜಾಂಚಿ ಪಿ. ಎಸ್. ಸಂಧ್ಯಾ ಈದಿನ.ಕಾಮ್ ಜೊತೆ ಮಾತನಾಡಿ ” ಸರ್ಕಾರದ ಭರವಸೆ ಹುಸಿಯಾಗಿದೆ. ಹೇಳಿದಂತೆ ಇದುವರೆಗೆ ನಡೆದುಕೊಂಡಿಲ್ಲ. ಆಶಾ ಕಾರ್ಯಕರ್ತರ ಬದುಕು ಅತಂತ್ರವಾಗಿದೆ. ಬದುಕಲು ಸರಿಯಾದ ಸಂಬಾವನೆ ಇಲ್ಲ. ಮನೆಯಲ್ಲಿ ಇದ್ದವರನ್ನು ವಾಲೆಂಟಿಯರ್ ಅಂತೇಳಿ ದಿನಕ್ಕೆ ಒಂದೆರೆಡು ಗಂಟೆಗಳ ಕೆಲಸ ಎಂದು ಸೇರಿಸಿಕೊಂಡವರು. ಈಗ ದಿನವಿಡೀ ಕೆಲಸ ಹೇರುತ್ತಾ, ಹಲವಾರು ವರ್ಷಗಳಿಂದ ಕೆಲಸ ಮಾಡಿದರು ಸೂಕ್ತ ರೀತಿಯಲ್ಲಿ ಕಾರ್ಮಿಕ ಹಕ್ಕು ಭಾಧ್ಯತೆ ಅನುಸಾರ ನಡೆಸಿಕೊಳ್ಳುತ್ತಿಲ್ಲ. ಇವತ್ತು ಆಶಾ ಸಮುದಾಯದಿಂದ ಹಿಡಿದು, ಆಸ್ಪತ್ರೆ ಸಂಭಂದಿತಾ
ಕೆಲಸಗಳು, ಸಮೀಕ್ಷೆ, ವರದಿಗಳು, ಮನೆ ಮನೆ ಭೇಟಿ, ಆರೋಗ್ಯ ಯೋಜನೆಗಳ ಜಾರಿ, ಸರ್ಕಾರದ ಭಾಗವಾಗಿ ಹತ್ತಾರು ಕೆಲಸ ಮಾಡುತ್ತಿದ್ದಾರೆ. ಇಂತವರಿಗೆ ಸ್ವತಃ ತಮ್ಮ ಆರೋಗ್ಯದ ಭದ್ರತೆಯೂ ಇಲ್ಲ. ಓಡಾಟಕ್ಕೆ ಯಾವುದೇ ಹಣ ಇಲ್ಲ. ಹೀಗಿರುವಾಗ ಕುಟುಂಬ ನಿರ್ವಹಣೆ ಹೇಗೆ? ಎಂಬುದು ಯಕ್ಷಪ್ರಶ್ನೆ. ಸರ್ಕಾರ ನುಡಿದಂತೆ ನಡೆದುಕೊಳ್ಳಬೇಕು. ನಾಳೆಯಿಂದ ಮೂರು ದಿನಗಳ
ಕಾಲ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಅಹೋರಾತ್ರಿ ಧರಣಿ ನಡೆಯಲಿದೆ. ಸರ್ಕಾರ ಸ್ಪಂದಿಸುವವರೆಗೆ, ಕೊಟ್ಟ ಮಾತು ಜಾರಿ ಮಾಡುವ ತನಕ ನಮ್ಮ ಹೋರಾಟ ಮುಂದುವರೆಯುತ್ತದೆ ” ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಮಾತನಾಡಿ ” ರಾಜ್ಯ ಸರ್ಕಾರ ಫ್ರೀಡಂ ಪಾರ್ಕಿನಲ್ಲಿ ನಡೆದ ಹೋರಾಟದ ವೇಳೆ ಭರವಸೆ ಕೊಟ್ಟು ಗೌರವಧನ ಜಾರಿ ಮಾಡುವುದಾಗಿ ಹೇಳಿತ್ತು. ಆದರೇ. ಜಾರಿ ಮಾಡುವುದು ಇರಲಿ ಈಗ ಸುಳ್ಳು ಹೇಳಲು ಆರಂಭ ಮಾಡಿದೆ. ಇತ್ತೀಚಿಗಿನ ಮಾಧ್ಯಮ ವರದಿಗಳಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಅವರು ಆಶಾ ಕಾರ್ಯಕರ್ತೆಯರಿಗೆ 12 ಸಾವಿರಕ್ಕೂ ಹೆಚ್ಚು ಹಣ ಕೊಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ನಮ್ಮಗಳ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ₹1500 ಕೊಡ ಮಾಡಿರುವುದನ್ನು ಸೇರಿಸಿಕೊಂಡು ಮಾತಾಡುತ್ತಿದ್ದಾರೆ. ಬಜೆಟ್ ನಲ್ಲಿ ಒಂದು ಸಾವಿರ ಏರಿಕೆ ಮಾಡಲಿಲ್ಲ. ಏಪ್ರಿಲ್ ಹೋಗಿ ಆಗಸ್ಟ್ ಬಂದಿದೆ. ಇದುವರೆಗೂ ಚಕಾರ ಇಲ್ಲ. ಈ ರೀತಿ ಆದರೇ ಆಶಾ ಕಾರ್ಯಕರ್ತರ ಕುಟುಂಬಗಳ ಪರಿಸ್ಥಿತಿ ಏನು? ಬೀದಿಗಿಳಿದು ಹೋರಾಟ ಮಾಡಿದರೆ, ಭರವಸೆ ಕೊಟ್ಟು ಮೋಸ ಮಾಡೋದು. ಅದನ್ನು ಸಹ ತಮ್ಮ ಪ್ರಚಾರದ ಗೀಳಿಗೆ ಬಳಸಿಕೊಂಡು ತಮಗೆ ತಾವೇ ಶಬ್ಬಾಶ್ ಗಿರಿ ಪಡೆಯುವುದು ನಾಚಿಕೇಡು. ನಿಜವಾಗಿಯೂ ಗ್ಯಾರಂಟಿ ಸರ್ಕಾರವೇ ಆಗಿದ್ದರೆ ಈ ಕೂಡಲೇ ಆಶಾ ಕಾರ್ಯಕರ್ತರ ಹೋರಾಟಕ್ಕೆ ಸ್ಪಂದಿಸಿ ಗೌರವಧನ ಬಿಡುಗಡೆ ಮಾಡಬೇಕು ” ಎಂದು ಆಗ್ರಹಿಸಿದರು.

ಮೈಸೂರು ಜಿಲ್ಲಾಧ್ಯಕ್ಷೆ ಭಾಗ್ಯ ಮಾತನಾಡಿ ” ಇದುವರೆಗೆ ನಮ್ಮನ್ನು ಕಾರ್ಮಿಕರನ್ನಾಗಿ ಪರಿಗಣಿಸಿಲ್ಲ. ಪ್ರತಿ ಹೋರಾಟದಲ್ಲೂ ಮನವಿ ಮಾಡುತ್ತಾ, ಆಗ್ರಹಿಸುತ್ತ ಬಂದಿದ್ದೇವೆ. ಸರ್ಕಾರ ಗೌರವಧನ ಹೆಚ್ಚಿಸುವುದಾಗಿ ಹೇಳಿ ಅದನ್ನು ಮಾಡಲಿಲ್ಲ. ಬಸರಿ ಹೆಣ್ಣು ಮಗಳನ್ನು 9 ತಿಂಗಳವರೆಗೆ ಪಾಲನೆ ಮಾಡಿದರೆ ₹300 ರೂಪಾಯಿ. ಹೆರಿಗೆ ಮಾಡಿಸಿ ಮನೆಗೆ ಬಿಟ್ಟರೆ ₹ 200 ರೂಪಾಯಿ. ಹುಟ್ಟಿದ ಮಗುವಿಗ ಕಾಲಾನುಸಾರ ತಕ್ಕ ಸಮಯಕ್ಕೆ ಇಂಜಕ್ಷನ್ ಹಾಕಿಸಿದರೆ ₹100 ರೂಪಾಯಿ. ಅಂದರೇ, ಒಟ್ಟು 600 ರೂಪಾಯಿ ಸಿಗುತ್ತೆ ವರ್ಷವಿಡೀ
ಕೆಲಸ ಮಾಡಿದರೆ. ಅದರಲ್ಲೂ, ಈ ಹಣವು ಸರಿಯಾಗಿ ಸಿಗುವುದಿಲ್ಲ, ಬಹುತೇಕ ಸಿಗದಿರುವುದೇ ಹೆಚ್ಚು. ಆಶಾ ಸಾಫ್ಟ್ ಪೋರ್ಟಲ್ ನಲ್ಲಿ ದಾಖಲಿಸಿದರು ಸಿಗದಿರುವ ಪರಿಸ್ಥಿತಿಯಲ್ಲಿ ಇದ್ದೀವಿ ” ಎಂದು ಬೇಸರ ವ್ಯಕ್ತಪಡಿಸಿದರು.

ಮಂಡ್ಯ ಜಿಲ್ಲೆ ಮಳವಳ್ಳಿಯಿಂದ ಮಂಜುಳಾ ಮಾತನಾಡಿ ” ಸಾವಿರಕ್ಕೆ ಒಬ್ಬರಿದ್ದ ಆಶಾ ಕಾರ್ಯಕರ್ತರು ಈಗ ಎರಡು ಸಾವಿರ ಜನಸಂಖ್ಯೆ ನೋಡಬೇಕು. ಒಂದೇ ಹಳ್ಳಿಯಾದರೆ ಸರಿ. ಎರಡು, ಮೂರು ಹಳ್ಳಿಯಾದರೆ ಓಡಾಡೋದು ಹೇಗೆ?. ಒಮ್ಮೊಮ್ಮೆ ಹೆರಿಗೆಗೆ ಕರೆದುಕೊಂಡು ಹೋದರೆ ಎರೆಡು, ಮೂರು ದಿನ ತಾಲ್ಲೂಕು, ಜಿಲ್ಲಾಸ್ಪತ್ರೆಯಲ್ಲಿ ಉಳಿಯಬೇಕು. ಅಲ್ಲಿ ಇರಲು ವ್ಯವಸ್ಥೆ ಇರಲ್ಲ. ಇನ್ನ ಗರ್ಭಿಣಿ ಜೊತೆ ಇರಲೇಬೇಕು. ಮನೆ, ಮಕ್ಕಳು, ಕುಟುಂಬ ಬಿಟ್ಟು ಆಚೆ ಇರಬೇಕು. ಇದಕ್ಕೆಲ್ಲ ಓಡಾಟದ ಖರ್ಚು, ಊಟ ಇದ್ಯಾವುದನ್ನು ಭರಿಸುವುದಿಲ್ಲ ” ಎಂದು ಆಗುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿದರು.
ದೇವನಹಳ್ಳಿಯಿಂದ ಅನಿತಾ ಮಾತನಾಡಿ ” ಸರ್ಕಾರ ಗೌರವಧನ ಹೆಚ್ಚಿಸಿಲ್ಲ. ನಾಳೆ ಫ್ರೀಡಂ ಪಾರ್ಕಿನಲ್ಲಿ ಹೋರಾಟಕ್ಕೆ ಮುಂದಾಗುತ್ತಿದ್ದೇವೆ. ಈ ಸರ್ಕಾರ ನಮ್ಮಗಳ ಬೇಡಿಕೆ ಈಡೇರಿಸಬೇಕು. ಇಲ್ಲದೆ ಇದ್ದರೆ ನಮ್ಮ ಹೋರಾಟದ ಮತ್ತೊಂದು ಸ್ವರೂಪ ನೋಡಬೇಕಾಗುತ್ತದೆ. ನಾವು ಕೇಳಬಾರದನ್ನ ಕೇಳಿಲ್ಲ. ಸರ್ಕಾರವೇ ಕೊಟ್ಟ ಭರವಸೆ ₹10000 ರೂಪಾಯಿ ಅದನ್ನ ಕೊಡಿ. ಬಜೆಟ್ ನಲ್ಲಿ ಒಂದು ಸಾವಿರ ಏರಿಸಿ. ಇದನ್ನು ಮಾಡದೆ ಹೀಗೆ ಸತಾಯಿಸುವುದು ಸರಿಯಲ್ಲ ” ಎಂದರು.

ಮಡಿಕೇರಿಯಿಂದ ಪೂರ್ಣಿಮ ಮಾತನಾಡಿ ನಾಳೆ ಗಾಂಧಿ ಮೈದಾನದಿಂದ ಬಾಲ ಭವನದವರೆಗೆ ಪಾದಯಾತ್ರೆ ನಡೆಸಿ ಧರಣಿಗೆ ಕೂರುತ್ತೇವೆ. ಕೊಡಗಿನಲ್ಲಿ ವಿಪರೀತ ಮಳೆ. ಕೂರಲು ಸ್ಥಳವಿಲ್ಲ. ಎಲ್ಲಿ ನೋಡಿದರು ಕೆಸರು. ಇಂತಹ ಕಷ್ಟದಲ್ಲಿಯೂ ಹೋರಾಟ ಮಾಡಬೇಕಿದೆ. ಕೊಡಗಿನಲ್ಲಿ ಸಹಜವಾಗಿ ಓಡಾಟ ಮಾಡುವುದೇ ಕಷ್ಟ. ಅಂತಃದರಲ್ಲಿ ಕಷ್ಟಪಟ್ಟು ಮನೆ ಮನೆ ಭೇಟಿ ಮಾಡಿ ಕೆಲಸ ಮಾಡಿದರು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ನಮ್ಮಗಳ ಆರೋಗ್ಯದ ಕಡೆಗೂ ಗಮನವಿಲ್ಲ. ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ನಾವುಗಳು ಕೆಲಸ ಮಾಡುವ ಆಸ್ಪತ್ರೆಯಲ್ಲಿಯೂ ನಮಗೆ ಚಿಕಿತ್ಸೆ ದೊರೆಯುವುದಿಲ್ಲ. ಸರ್ಕಾರ ಆಶಾ ಹೋರಾಟಕ್ಕೆ ಸ್ಪಂದಿಸಬೇಕು ” ಎಂದು ಮನವಿ ಮಾಡಿದರು.

ಬೆಂಗಳೂರಿನಿಂದ ಫರಾನ ಮಾತನಾಡಿ ಹೇಳಿ ಕೇಳಿ ಬೆಂಗಳೂರು ಜನ, ವಾಹನ ದಟ್ಟನೆ ಇರುವ ನಗರ. ಇಲ್ಲಿ ಆಶಾ ಕಾರ್ಯಕರ್ತೆ ಮೂರು ಸಾವಿರ ಜನಸಂಖ್ಯೆಯಷ್ಟು ನೋಡಿಕೊಳ್ಳಬೇಕು. ಇನ್ನ ದೊಡ್ಡಾಸ್ಪತ್ರೆ ದೂರಾದಲ್ಲಿ ಇರುವುದರಿಂದ ಓಡಾಟ ಇರುತ್ತದೆ. ಗರ್ಭಿಣಿಯರನ್ನ ಕರೆದುಕೊಂಡು ಹೋಗಿ ಮಗು ಆದ ಮೇಲೆ ಮನೆವರೆಗೆ ಬಿಡುವ ತನಕ ಕೆಲಸ ಇರುತ್ತದೆ. ಇತ್ತೀಚಿಗೆ ಹುಟ್ಟಿದ ಮಕ್ಕಳು, ತಾಯಿ ಸಾವಿನ ಪ್ರಕರಣ ಇಳಿಮುಖ ಆಗಿದೆ ಎಂದರೆ ಅದಕ್ಕೆ ಆಶಾ ಕಾರಣ. ಇಷ್ಟೆಲ್ಲ ಕೆಲಸ ಮಾಡಿದರು ನಮ್ಮನ್ನ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಬರುವ ಹಣ ಯಾವುದಕ್ಕೂ ಸಾಲೋದಿಲ್ಲ. ಒಂದು ತಿಂಗಳು ಹತ್ತು ಸಾವಿರ, ಇನ್ನೊಂದು ತಿಂಗಳು 20 ಸಾವಿರ ಖರ್ಚು ಆಗಬಹುದು. ನಮ್ಮ ಮಕ್ಕಳ ಆರೋಗ್ಯ ಕೆಟ್ಟರೆ ನಾವು ಖಾಸಗಿ ಆಸ್ಪತ್ರೆಗೆ ತೋರಿಸಿ ಗುಣಪಡಿಸಿಕೊಳ್ಳಬೇಕು. ನಮಗೆ ಇನ್ನ ಬೇರೆ ದಾರಿಯಿಲ್ಲ. ನಮ್ಮನ್ನು ನೋಡುವವರು ಇಲ್ಲ ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿಯಿಂದ ಗೀತಾ ಮಾತನಾಡಿ ” 20 ಜನ ಆಶಾ ಕಾರ್ಯಕರ್ತರಿಗೆ ಒಬ್ಬರು ತಮ್ಮ ಕೆಲಸದ ಜೊತೆಗೆ ತರಭೇತಿ ಪಡೆದು ಮೋಟಿವೇಶನ್, ಕುಂದುಕೊರತೆ ಇನ್ನಿತರ ವಿಚಾರವಾಗಿ ತರಭೇತಿ ಮಾಡುವ ಕೆಲಸ ಮಾಡುತಿದ್ದರು ಅದುವೇ ಕೇವಲ ₹6000 ಸಾವಿರಕ್ಕೆ. ಅದುವೇ, ದಿನ ಕಳೆದಂತೆ 20 ಹೋಗಿ 50 ಜನ ಆಶಾ ಕಾರ್ಯಕರ್ತರ ತರಬೇತಿ ಮಾಡುವ ಹಂತಕ್ಕೆ ಬಂದಿತ್ತು. ಎಷ್ಟೇ ಒತ್ತಡ ಇದ್ದರೂ ಎರಡನ್ನು ತೂಗಿಸಿಕೊಂಡು ಹೋಗುತ್ತಾ ಇದ್ದೆವು. ದಿನಾಂಕ-25-02-2025ರಲ್ಲಿ ಆಶಾ ಸುಗಮಕಾರರನ್ನು ಜವಾಬ್ದಾರಿಗಳಿಂದ ಹಿಂಪಡೆದಿದ್ದಾರೆ. “
” ರಾಜ್ಯದಲ್ಲಿ ಆಶಾ ಸುಗಮಕಾರರ ಜವಾಬ್ದಾರಿಗಳನ್ನು ಹಾಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ನಿರ್ವಹಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ಜವಾಬ್ದಾರಿಗಳ ಜೊತೆಗೆ ಪ್ರತಿ ಮಾಹೆ 20 ದಿನಗಳ ಕಾಲ ಇತರೇ ಆಶಾ ಕಾರ್ಯಕರ್ತೆಯರ ಕಾರ್ಯಕ್ಷೇತ್ರಕ್ಕೆ ತೆರಳಬೇಕಾಗಿದ್ದು, ಇದರಿಂದಾಗಿ, ಹೆಚ್ಚಿನ ಕೆಲಸದ ಒತ್ತಡ ಹಾಗೂ ಸಮಯಾವಕಾಶದ ಅಭಾವ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗದಿರುವ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಆಶಾ ಸುಗಮಕಾರರ ಜವಾಬ್ದಾರಿಗಳನ್ನು ದಿನಾಂಕ-28-02-2025 ಕ್ಕೆ ಅಂತ್ಯಗೊಂಡಂತೆ ಕಾರ್ಯಕರ್ತೆಯರಿಂದ ಹಿಂಪಡೆಯಲು ಸೂಚಿಸಿದೆ ಹಾಗೂ ಆಶಾ ಕಾರ್ಯಕರ್ತೆಯರ ಮೇಲ್ವಿಚಾರಣೆಯನ್ನು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ನಿರ್ವಹಿಸುವುದು ಎಂದು ಆದೇಶ ಮಾಡಿದ್ದಾರೆ ” ಎಂದರು.

ಅಥಣಿಯಿಂದ ಸುಜಾತ ಮಾತನಾಡಿ ” 60 ವರ್ಷ ವಯಸ್ಸನ್ನು ಗುರಿಯಾಗಿಸಿ ಕೆಲಸದಿಂದ ತೆಗೆಯುತ್ತಿದ್ದಾರೆ. ಇಡಿಗಂಟು ಇಲ್ಲ, ಇತ್ತ ಕಡೆ ಗೌರವದಿಂದ ಬೀಳ್ಕೊಡುಗೆಯೂ ಇಲ್ಲ. ಕೆಲಸ ಅಷ್ಟೇ ಮುಖ್ಯ. ಪಶ್ಚಿಮ ಬಂಗಾಳ ರಾಜ್ಯದ ಮಾದರಿಯಲ್ಲಿ 5 ಲಕ್ಷ ನೀಡಬೇಕು. ಓಡಾಟದ ನಡುವೆ ಆರೋಗ್ಯ ಕೆಡುವುದರಿಂದ ಆರೋಗ್ಯ ಭದ್ರತೆ ಒದಗಿಸಬೇಕು ” ಎಂದರು.
ಚಿತ್ರದುರ್ಗದಿಂದ ಲಕ್ಷ್ಮಿ ಮಾತನಾಡಿ ” ನಾವುಗಳು ಬೇರೆಯವರ ಆರೋಗ್ಯ ನೋಡುತ್ತೇವೆ. ನಮ್ಮಗಳ ಆರೋಗ್ಯ ನೋಡುವವರು ಇಲ್ಲ. ಸರ್ಕಾರ ಆಶಾಗಳಿಗೆ ಯಾವುದೇ ಸವಲತ್ತು ನೀಡುತ್ತಿಲ್ಲ. ಗೌರವಧನ ಹೆಚ್ಚಿಸಲಿಲ್ಲ. ಹೀಗಾದರೆ ನಾವುಗಳು ಬದುಕು ಕಟ್ಟುವುದು ಹೇಗೆ? ಮನೆಯಲ್ಲಿ ವಯಸ್ಸಾದವರು, ಮಕ್ಕಳು ಇದ್ದಾರೆ. ಮಕ್ಕಳು ಶಾಲೆಗೆ ಹೋಗಬೇಕು. ಬರುವ ಅಲ್ಪ ಹಣದಲ್ಲಿ ವಿದ್ಯಾಭ್ಯಾಸ ಕೊಡಿಸಲು ಸಾಧ್ಯನ. ನಮಗೂ ಕಾರ್ಮಿಕರಂತೆ ನಡೆಸಿಕೊಳ್ಳಿ ” ಎಂದು ಹೇಳಿದರು.

ಚಿಕ್ಕಬಳ್ಳಾಪುರದಿಂದ ಸರಸ್ವತಿ ಮಾತನಾಡಿ ” ನಾಳೆಯಿಂದ ಅಹೋರಾತ್ರಿ ಧರಣಿ ಆರಂಭವಾಗುತ್ತಿದೆ. ನಮ್ಮ ಬೇಡಿಗಳನ್ನು ಈಡೇರಿಸಿ. ಆಶಾ ಕಾರ್ಯಕರ್ತೆ ಪ್ರತಿದಿನ ಮನೆ ಮನೆ ಬಾಗಿಲಿಗೆ ಹೋಗಬೇಕು. ಮಳೆ, ಚಳಿ, ಗಾಳಿ, ಬಿಸಿಲು ಯಾವುದನ್ನೂ ಲೆಕ್ಕಕ್ಕೆ ಇಡುವಂತಿಲ್ಲ. ಕೆಲಸ ಮಾಡಲೇಬೇಕು. ನಮ್ಮ ಓಡಾಟ ದಿನ ಇರುವುದರಿಂದ ಬರುವ ಕಡಿಮೆ ಸಂಬಳದಲ್ಲಿ ನಿರ್ವಹಣೆ ಮಾಡೋದು ಹೇಗೆ?. ನಾವು ಸಹ ಅಭಿಮಾನದಿಂದ ಕೆಲಸ ಮಾಡುತಿದ್ದೇವೆ. ಜನರ ಸೇವೆ ಮಾಡುತಿದ್ದೇವೆ. ನಮ್ಮಗಳ ಹಿತ ಕೂಡ ಸರ್ಕಾರ ನೋಡಬೇಕು. ನಮ್ಮಗಳ ಕುಟುಂಬ ಉಳಿಸಿಕೊಡಬೇಕು ” ಎಂದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ಹಿರಿಯರ ತ್ಯಾಗದಿಂದ ಬ್ಯಾರಿ ಸಮುದಾಯ ಗೌರವದಿಂದ ಬದುಕುತಿದೆ : ಯು ಟಿ ಖಾದರ್

ನಾಳೆಯಿಂದ ಆರಂಭ ಆಗಲಿರುವ ಆಶಾ ಕಾರ್ಯಕರ್ತರ ಅಹೋರಾತ್ರಿ ಧರಣಿಗೆ ಸರ್ಕಾರ ಸ್ಪಂದಿಸುತ್ತಾ. ಕೊಟ್ಟ ಭರವಸೆಯಂತೆ ನಡೆದುಕೊಳ್ಳುತ್ತದ. ಇಲ್ಲವೇ, ವಚನ ಭ್ರಷ್ಟ ಸರ್ಕಾರ ಎಂದು ಕರೆಯಿಸಿಕೊಳ್ಳುತ್ತದ ಎಂದು ಕಾದು ನೋಡಬೇಕಿದೆ.