ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ನಾಕಾ ಹತ್ತಿರ ಸೋಮವಾರ ನಡೆದ ಮಾರಕಾಸ್ತ್ರ ದಾಳಿಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ತಾಲ್ಲೂಕಿನ ಅವರಗೋಳ ಗ್ರಾಮದ ಮೀರಾಸಾಬ್ ಜಮಖಂಡಿ ಎಂದು ಗುರುತಿಸಲಾಗಿದೆ. ಬಂಧಿತರಾದವರು ಶ್ಯಾನೂಲ್ ಹುಸೇನಸಾಬ ಜಮಖಂಡಿ (24) ಮತ್ತು ಬಶೀರ ಸಿಕಂದರ್ ಕಿಲ್ಲೇದಾರ (38) ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬೈಕ್‌ನಲ್ಲಿ ಬಂದ ಆರೋಪಿಗಳು, ಬೈಕ್‌ನಲ್ಲಿ ತೆರಳುತ್ತಿದ್ದ ಮೀರಾಸಾಬ್ ಮೇಲೆ ಸರ್ಕಲ್ ಬಳಿ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಸೋದರ ಸಂಬಂಧಿಕರ ನಡುವೆ ಉಂಟಾದ ಆಸ್ತಿ ವಿವಾದವೇ ಕೊಲೆಗೆ ಕಾರಣವಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ದೊರೆತಿದ್ದು, ಆರೋಪಿಗಳ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗಿದೆ.