“ಪರಿಶ್ರಮಿಸಿದವರಿಗೆ ಫಲವಿಲ್ಲವೆಂದೇ ಇಲ್ಲ” ಎಂಬ ನಂಬಿಕೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದಂತಾಯಿತು. ನಗರದ ದಾನಾ ಪ್ಯಾಲೇಸ್‌ನಲ್ಲಿ ಶನಿವಾರ ನಡೆದ ಸ್ಟುಡೆಂಟ್ ಇಸ್ಲಾಮಿಕ್ ಆರ್ಗನೈಜೇಶನ್ (ಎಸ್ಐಒ) ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಮೆರೆದ 150 ಮಂದಿ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಸ್ವೀಕರಿಸಿ, ದೊಡ್ಡ ಕನಸುಗಳತ್ತ ಹೆಜ್ಜೆ ಇಡುವ ಸಂಕಲ್ಪ ವ್ಯಕ್ತಪಡಿಸಿದರು.
ರಾಷ್ಟ್ರಗೀತೆಯಿಂದ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ ತ್ಯಾಗ ಮತ್ತು ಶಿಕ್ಷಕರ ಮಾರ್ಗದರ್ಶನವನ್ನು ಸ್ಮರಿಸಿ ಹಲವರು ಕಣ್ಣೀರಿಟ್ಟರು.
19ನೇ ವಾರ್ಷಿಕ ಶಿಕ್ಷಣ ಪ್ರಶಸ್ತಿ ಸಮಾರಂಭದಲ್ಲಿ, ನಗರ ಹಾಗೂ ಜಿಲ್ಲೆಯ ವಿವಿಧ ಶಾಲೆಗಳು ಮತ್ತು ಕಾಲೇಜುಗಳಿಂದ ಆಯ್ಕೆಯಾದ 150 ಮಂದಿ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಅವರ ಸಾಧನೆಗೆ ಪೋಷಕರು, ಶಿಕ್ಷಕರು ಹಾಗೂ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಧನೆಯ ಹಾದಿಯಲ್ಲಿ ಶಿಸ್ತು, ಜ್ಞಾನ ಮತ್ತು ಮೌಲ್ಯಗಳ ಮಹತ್ವವನ್ನು ಅತಿಥಿಗಳು ತಮ್ಮ ಭಾಷಣದಲ್ಲಿ ಹಂಚಿಕೊಂಡರು. ವೇದಿಕೆಯನ್ನು ಹಂಚಿಕೊಂಡ ಎಸ್ಐಒ ರಾಜ್ಯಾಧ್ಯಕ್ಷ ಅದೀ ಅಲ್ ಹಸನ್, ರಾಜ್ಯ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್, ಜಿಐಓ ಪ್ರತಿನಿಧಿ ಜೈನಾಬ್ ಗಝಲಿ, ಜೆಐಎಚ್ ತುಮಕೂರು ಅಧ್ಯಕ್ಷ ಮೌಲಾನ ಅಸ್ರಾರ್ ಅಹಮದ್, ಗ್ಲೋಬಲ್ ಶಾಹಿನ್ ಕಾಲೇಜಿನ ಅಫ್ಜಲ್ ಶರೀಫ್ ಮತ್ತು ಎಸ್ಐಒ ತುಮಕೂರು ಘಟಕದ ಅಧ್ಯಕ್ಷ ಖಲೀಲ್ ಖಾನ್ ಅವರು, “ಜ್ಞಾನವಂತ ಸಮಾಜ ನಿರ್ಮಾಣ” ಎಂಬ ಗುರಿಯನ್ನು ಹೊಂದಿ ಬದುಕಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿ, ಮುಂದಿನ ಶಿಕ್ಷಣದಲ್ಲಿ ಉನ್ನತ ಗುರಿಗಳನ್ನು ಹೊಂದಿ ಸಮಾಜಕ್ಕೆ ಮಾದರಿಯಾಗುವಂತೆ ಹಾರೈಸಿದರು.