ಗಣೇಶ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಪಿಒಪಿ ಗಣೇಶ ವಿಗ್ರಹಗಳ ತಪಾಸಣೆಯನ್ನು ತೀವ್ರಗೊಳಿಸಿದ್ದು, ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರಿಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ನಗರದ ಗಾಂಧಿ ಚೌಕ ಪ್ರದೇಶದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಜಗದೀಶ ಐ ಎಚ್ ನೇತೃತ್ವದಲ್ಲಿ ಪಾಲಿಕೆ ಮತ್ತು ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ 10ಕ್ಕೂ ಹೆಚ್ಚು ಅಂಗಡಿಗಳನ್ನು ತಪಾಸಣೆ ಮಾಡಿದ್ದಾರೆ.
ಅಧಿಕಾರಿಗಳ ಅನಿರೀಕ್ಷಿತ ದಾಳಿಯಿಂದಾಗಿ ಗಾಂಧಿ ಚೌಕದಲ್ಲಿರುವ ಸಂತೋಷ ಚವ್ಹಾಣರ ಗಣೇಶ ವಿಗ್ರಹ ಮಾರಾಟ ಅಂಗಡಿಯಲ್ಲಿ 10ಕ್ಕೂ ಹೆಚ್ಚು ಪಿಒಪಿ ಗಣೇಶ ವಿಗ್ರಹಗಳು ಪತ್ತೆಯಾಗಿವೆ. ಇವುಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಮಹಾನಗರ ಪಾಲಿಕೆಯ ಸಿಬ್ಬಂದಿಗಳ ವಶಕ್ಕೆ ನೀಡಿದರು. ಈ ಸಂದರ್ಭದಲ್ಲಿ ತಪಾಸಣೆ ಮಾಡಿದ ವಿವಿಧ ಮಾರಾಟ ಅಂಗಡಿಗಳಿಂದ ಗಣೇಶ ವಿಗ್ರಹಗಳ ಮಾದರಿ(ಶ್ಯಾಂಪಲ್)ಗಳನ್ನು ಪಡೆದು, ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಸಾಧಕರಿಗೆ ಎಸ್ಐಒ ಗೌರವ
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಪರಿಸರ ಅಭಿಯಂತರೆ ಸರೋಜಾ ಪೂಜಾರ, ಹಿರಿಯ ಆರೋಗ್ಯ ನಿರೀಕ್ಷಕ ಶಾಂತಗೌಡ ಬಿರಾದಾರ, ಆರೋಗ್ಯ ನಿರೀಕ್ಷಕ ವಿದ್ಯಾಶ್ರೀ ಬಡಿಗೇರ, ಮುನಾಫ್ ಸೌದಾಗರ್, ಶಶಿಧರ್ ಕೋಡಿಹಳ್ಳಿ ಹಾಗೂ ಇತರ ಅಧಿಕಾರಿಗಳು ಇದ್ದರು.