ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಂಗವಿಕಲರ ಮಾಸಿಕ ಪಿಂಚಣಿಯನ್ನು ಎರಡೂ ಸರ್ಕಾರ ₹10,000ಕ್ಕೆ ಹೆಚ್ಚಿಸಬೇಕು ಎಂದು ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ಅಧ್ಯಕ್ಷ ಜಿ ಎನ್ ನಾಗರಾಜ್ ಸರ್ಕಾರಗಳನ್ನು ಒತ್ತಾಯಿಸಿದರು.
ಬಳ್ಳಾರಿ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, “ಕಳೆದ ಹಲವು ದಶಕಗಳಿಂದ ಕೇಂದ್ರ ಸರ್ಕಾರ ಇಂದಿರಾಗಾಂಧಿ ಡಿಸಬಿಲಿಟಿ ಪೆನ್ಷನ್ ಸ್ಕೀಮ್ ಅಡಿಯಲ್ಲಿ ಕೇವಲ 30 ರೂಪಾಯಿಗಳಿಂದ ಆರಂಭವಾದ ಯೋಜನೆಯು ಕೇವಲ 100-200 ರೂಪಾಯಿಗಳಷ್ಟು ಮಾತ್ರ ಹೆಚ್ಚಳ ಮಾಡುತ್ತ ಬರುತ್ತಿದೆ” ಎಂದು ಹೇಳಿದರು.
“ದೈಹಿಕವಾಗಿ ದುರ್ಬಲಗೊಂಡಿರುವ ಅಂಗವಿಕಲ ಹಾಗೂ ವಿಶೇಷವಿಕಲಚೇತನರಿಗೆ ಬರುವ ಇಂದಿನ ಪಿಂಚಣಿ ಅವರ ಆರ್ಥಿಕ ಹೊರೆಯನ್ನು ನೀಗಿಸಲಾರದು. ಆದ್ದರಿಂದ, ಕೇಂದ್ರ ಸರ್ಕಾರ 5000ದಂತೆ ಹಾಗೂ ರಾಜ್ಯ ಸರ್ಕಾರ 5000ದಂತೆ ಒಟ್ಟು 10,000 ರೂಪಾಯಿಗಳಿಗೆ ಪಿಂಚಣಿ ಹೆಚ್ಚಿಸಬೇಕು” ಎಂದು ಸರ್ಕಾರಗಳನ್ನು ಒತ್ತಾಯಿಸಿದರು.
“ನೆರೆಯ ಆಂಧ್ರಪ್ರದೇಶದಲ್ಲಿ 6000 ರೂಪಾಯಿಗಳನ್ನು ನೀಡುತ್ತಿದೆ. ಶೇ.80ರಷ್ಟು ವಿಕಲತೆ ಹೊಂದಿರುವವರಿಗೆ ಹತ್ತು ಸಾವಿರ, ನೂರರಷ್ಟು ವಿಕಲತೆ ಹೊಂದಿರುವವರಿಗೆ 15 ಸಾವಿರ ರೂಪಾಯಿಗಳನ್ನು ನೀಡುತ್ತಿದೆ. ಅದೇ ರೀತಿ ರಾಜಸ್ಥಾನದಲ್ಲಿ ಬೆಲೆ ಏರಿಕೆಯ ಸೂಚ್ಯಂಕಕ್ಕೆ ಅನುಗುಣವಾಗಿ ತುಟ್ಟಿ ಭತ್ಯೆಯ ರೂಪದಲ್ಲಿ ವಾರ್ಷಿಕ ಶೇ.15ರಷ್ಟು ಪಿಂಚಣಿಯನ್ನು ಹೆಚ್ಚಳ ಮಾಡಲು ಶಾಸನ ಸಭೆಯಲ್ಲಿ ಅಂಗೀಕರಿಸಲಾಗಿದೆ. ಅದೇ ಪ್ರಕಾರವಾಗಿ ನಮ್ಮ ರಾಜ್ಯದಲ್ಲೂ 10 ಸಾವಿರ ರೂಪಾಯಿಗಳ ಪಿಂಚಣಿಯನ್ನು ನೀಡಬೇಕೆಂದು ಒತ್ತಾಯಿಸಿ ಅಕ್ಟೋಬರ್‌ನಲ್ಲಿ ರಾಜಭವನ ಮತ್ತು ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗುಂಡ್ಲುಪೇಟೆ | ಆನೆ ದಾಳಿಯಿಂದ ಬದುಕಿ ಬಂದವನಿಗೆ ಅರಣ್ಯ ಇಲಾಖೆಯಿಂದ ಭಾರೀ ದಂಡ
ಅಂಗವಿಕಲರ ರೈತ ಸಂಘ ಕಟ್ಟಲು ನಿರ್ಧಾರ
“ವಿಕಲಚೇತನರು ಕೃಷಿ ಕೆಸಲವನ್ನು ಮಾಡಲು ತೊಂದರೆಯಾಗುತ್ತಿದೆ. ತುಂಡು ಭೂಮಿಯಿರುವ ವಿಕಲಚೇತನರಿಗೆ ವಿಶೇಷವಾಗಿ ವಾತವರಣಗಳನ್ನು ಸೃಷ್ಟಿಸುವ ಸಲುವಾಗಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆಗಳು ವಿಕಲಚೇತನ ಸ್ನೇಹಿಯಾದ ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸಬೇಕು ಅಥವಾ ಅವುಗಳನ್ನು ಹೊಂದಲು ಹೆಚ್ಚಿನ ಧನಸಹಾಯವನ್ನು ಒದಗಿಸಬೇಕು” ಎಂದು ಸರ್ಕಾರವನ್ನು ಅಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ, ಆರ್ ಯಶಸ್ವಿ ಗುರುಸಿದ್ಧಮೂರ್ತಿ ಸತ್ಯಬಾಬು ಹಾಗೂ ಇತರರು ಇದ್ದರು.