ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಅವರು ಒಳಮೀಸಲಾತಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಬೀದರ್ ಜಿಲ್ಲಾ ಬಲಗೈ ಒಳ ಮೀಸಲಾತಿ ಹೋರಾಟ ಸಮಿತಿಯಿಂದ (ಹೊಲೆಯ ಸಂಬಂಧಿತ ಜಾತಿಗಳ ಸಮೂಹ) ಆ. 14ರಂದು ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಬೀದರ್ ನಗರದ ಶಹಾಗಂಜ್‌ನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಸಮಿತಿಯ ಸಭೆಯಲ್ಲಿ ಈ ಒಕ್ಕೊರಲಿನ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈ ವರದಿ ಅನುಷ್ಠಾನಗೊಂಡರೆ ನಮ್ಮ ಮುಂದಿನ ಪೀಳಿಗೆಗೆ ಅನ್ಯಾಯವಾಗಲಿದೆ. ಅವೈಜ್ಞಾನಿಕವಾದ ಈ ವರದಿಯನ್ನು ಸಂಪೂರ್ಣ ತಿರಸ್ಕರಿಸಬೇಕು ಎಂದು ಒತ್ತಾಯಿಸುವ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
ಧಮ್ಮ ಆಚಾರ್ಯ ಮಿಲಿಂದ್ ಗುರೂಜಿ ಸಮಿತಿಯ ಪ್ರಮುಖರಾದ ಮಾರುತಿ ಬೌದ್ಧೆ, ಅನಿಲಕುಮಾರ್ ಬೆಲ್ದಾರ್, ರಮೇಶ್ ಡಾಕುಳಗಿ, ಬಾಬುರಾವ್ ಪಾಸ್ವಾನ್, ವಿಠ್ಠಲದಾಸ್ ಪ್ಯಾಗೆ, ಕಾಶಿನಾಥ ಚೆಲ್ವಾ, ಶ್ರೀಪತರಾವ್ ದೀನೆ, ಮಹೇಶ ಗೋರನಾಳಕರ್, ವಿನಯ್ ಕುಮಾರ್ ಮಾಳಗೆ, ವಿನೋದ ಅಪ್ಪೆ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ನೂರಾರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.