ಸೋಮವಾರ ಕಥುವಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿ (ಐಬಿ)ಯಲ್ಲಿ ಬಿಎಸ್‌ಎಫ್ ಸಿಬ್ಬಂದಿ ಪಾಕಿಸ್ತಾನಿ ನುಸುಳುಕೋರನನ್ನು ಗುಂಡಿಕ್ಕಿ ಕೊಂದಿದ್ದಾರೆ. ಹಾಗೆಯೇ ಭಯೋತ್ಪಾದಕರ ಅಡಗುತಾಣ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಕಥುವಾದ ಹಿರಾನಗರ ಸೆಕ್ಟರ್‌ನಲ್ಲಿರುವ ಚಂದ್ವಾನ್ ಮತ್ತು ಕೊಥೆ ಗಡಿ ಹೊರಠಾಣೆಗಳ ನಡುವೆ ಸಂಜೆ ಒಳನುಸುಳುಕೋರ ಬರುವುದನ್ನು ಗಮನಿಸಿದೆ. ಆತನಿಗೆ ಒಳಬರದಂತೆ ಎಚ್ಚರಿಕೆ ನೀಡಲಾಗಿದೆ. ಆದರೂ ಆತ ಕೇಳದೆ ಒಳನುಗ್ಗಲು ಯತ್ನಿಸಿದ, ಈ ವೇಳೆ ಬಿಎಸ್‌ಎಫ್ ಸಿಬ್ಬಂದಿ ಒಳನುಸುಳುಕೋರನ ಕಾಲುಗಳ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಜಾಗತಿಕವಾಗಿ ಪಾಕಿಸ್ತಾನವನ್ನು ‘ಭಯೋತ್ಪಾದನೆಯ ಕೇಂದ್ರಬಿಂದು’ ಎಂದು ಗುರುತಿಸಲಾಗುತ್ತದೆ: ಭಾರತ
ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಅಲ್ಲಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಸದ್ಯ ಒಳನುಸುಳುಕೋರನ ಗುರುತು ಮತ್ತು ಉದ್ದೇಶವನ್ನು ಪರಿಶೀಲಿಸಲಾಗುತ್ತಿದೆ.
ಈ ನಡುವೆಯೇ ದುಲ್ ಕಿಶ್ತ್ವಾರ್ ಅರಣ್ಯ ಪ್ರದೇಶದಲ್ಲಿ ಜಂಟಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಎರಡನೇ ದಿನವೂ ಮುಂದುವರೆದಿದೆ. ಕಾರ್ಯಾಚರಣೆಯ ಸಮಯದಲ್ಲಿ, ಭದ್ರತಾ ಪಡೆಗಳು ಅರಣ್ಯ ಪ್ರದೇಶದ ಗುಹೆಯಲ್ಲಿ ಭಯೋತ್ಪಾದಕರ ಅಡಗುತಾಣವನ್ನು ಕಂಡುಕೊಂಡಿದೆ.
