ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತಂಡದ ತನಿಖೆ ನಡೆಯುತ್ತಿರುವಾಗಲೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರ ತಂಡ ಬೆಳ್ತಂಗಡಿ ಹಾಗೂ ಧರ್ಮಸ್ಥಳ ಗ್ರಾಮಕ್ಕೆ ಆಗಮಿಸಿ ಮಾಹಿತಿಗಳನ್ನು ಪಡೆದಿದೆ.
ಎನ್‌ಎಚ್‌ಆರ್‌ಸಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಎಸ್‌ಎಸ್‌ಪಿ ಯುವರಾಜ್, ಡಿವೈಎಸ್‌ಪಿ ರವಿ ಸಿಂಗ್ ಸೇರಿದಂತೆ ಇತರರನ್ನು ಒಳಗೊಂಡ ಎನ್‌ಎಚ್‌ಆರ್‌ಸಿ ತಂಡವು ಆಗಮಿಸಿದೆ. ಈ ತಂಡವು ಆರಂಭದಲ್ಲಿ ಎಸ್‌ಐಟಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳು ಮತ್ತು ದೂರುದಾರನ ಜತೆಗೆ ಮಾತುಕತೆ ನಡೆಸಿ ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆ ಹಾಗೂ ಧರ್ಮಸ್ಥಳ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ದೂರುದಾರ ತೋರಿಸಿ ಅಗೆಯಲಾಗಿರುವ ಧರ್ಮಸ್ಥಳದ ಬಾಹುಬಲಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಮಾನವ ಹಕ್ಕುಗಳ ಆಯೋಗದ ಸದಸ್ಯರ ಈ ತಂಡ ಇನ್ನೂ 3, 4 ದಿನಗಳ ಕಾಲ ಇಲ್ಲಿಯೇ ಇದ್ದು ಮಾಹಿತಿ ಸಂಗ್ರಹಿಸುವುದಾಗಿ ಅಧಿಕಾರಿಗಳ ಮೂಲಗಳಿಂದ ಮಾಹಿತಿ ದೊರೆತಿದೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಸಾಮಾಜಿಕ ಕಾರ್ಯಕರ್ತರಿಗೆ ಮಾಧ್ಯಮದ ನಿರಂತರ ಸಂಪರ್ಕವಿರಬೇಕು : ಸೈಯದ್ ಯೂಸುಫ್ ಉಲ್ಲಾ
ದಿನವಿಡೀ ಧರ್ಮಸ್ಥಳ ಗ್ರಾಮದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಗ್ರಾಮ ಪಂಚಾಯಿತಿಯಲ್ಲಿ ಪಿಡಿಒಗಳಿಂದ ಕೆಲವು ಮಾಹಿತಿ ಪಡೆದು ಪಂಚಾಯಿತಿಯಲ್ಲಿ ಕೆಲಸ ಮಾಡಿದ ಕೆಲಸಗಾರರ ಮನೆಗಳಿಗೆ ಭೇಟಿ ನೀಡಿ ಅವರಿಂದ ಹಲವು ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಮಾನವ ಹಕ್ಕುಗಳ ಆಯೋಗವು ಸುಮೊಟೊ ಕೇಸ್ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಲಾಗಿದೆ. ಈ ಪ್ರಕರಣದಲ್ಲಿ ಎಲ್ಲ ರೀತಿಯಲ್ಲಿ ನಾವು ತನಿಖೆ ಮಾಡಲಿದ್ದೇವೆ ಎಂದು ಅಧಿಕಾರಿಗಳ ಮೂಲಗಳಿಂದ ಮಾಹಿತಿ ದೊರೆತಿದೆ.